ಸೋಮವಾರ, ಆಗಸ್ಟ್ 2, 2021
23 °C
ಸುರಪುರದಲ್ಲೊಂದು

ಟೇಲರ್ ಮನೆ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Deccan Herald

‘ಸರ್, ನೀವು ರಾಜ್ಯ ಅಥವಾ ದೇಶದ ಯಾವ ಮೂಲೆಗಾದರೂ ಹೋಗಿ ಸಂಶೋಧನೆ ನಡೆಸಿ. ಆದರೆ ನಮ್ಮ ಸುರಪುರದ ಟೇಲರ್ ಮಂಜಿಲ್‌ನಂತಹ ಬಂಗಲೆ ಎಲ್ಲಿಯೂ ಸಿಗಲ್ಲ. ಇದಕ್ಕೆ ಒಟ್ಟು 27 ಬಾಗಿಲುಗಳಿವೆ. 1 ಬಾಗಿಲು ತೆರೆದರೆ, 7 ಬಾಗಿಲುಗಳು ಏಕಕಾಲಕ್ಕೆ ತೆರೆದುಕೊಳ್ಳುತ್ತವೆ. ಈ ತಂತ್ರಜ್ಞಾನದ ಹಿಂದಿನ ರಹಸ್ಯ ಈವರೆಗೂ ಪತ್ತೆಯಾಗಿಲ್ಲ. 174 ವರ್ಷಗಳಾದರೂ ಈ ಕಟ್ಟಡ ಇನ್ನೂ ಮಜಬೂತ್ ಇದೆ’.

ಹೀಗೆ ಸವಾಲು ಎಸೆದ ಪ್ರಾಧ್ಯಾಪಕ ರಾಘವೇಂದ್ರ ಹಾರಣಗೇರಾ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಬಂಗಲೆ ಮುಂಭಾಗದಲ್ಲಿ
ನಿಲ್ಲಿಸಿಕೊಂಡು, ‘ನೋಡಿ, ಇದು ಇಂಗ್ಲಿಷ್‌ನ ‘ಟಿ’ ಆಕಾರದಲ್ಲಿ ನಿರ್ಮಾಣಗೊಂಡಿದೆ. ಒಳಗಿರುವ ಪುಟ್ಟ ಮೇಜು ನೋಡಿದರಲ್ಲ, ಅದು ಕೂಡ ‘ಟಿ’ ಆಕಾರದಲ್ಲಿದೆ. ಇಲ್ಲಿನ ವಸ್ತುಗಳು ಹಾಳಾಗಿಲ್ಲ’ ಎನ್ನುತ್ತ ಹಿಂಬದಿ ತಿರುಗಲು ಹೇಳಿದರು. ಅಲ್ಲೇ ಸ್ವಲ್ಪ ದೂರದಲ್ಲಿನ ಎತ್ತರದ ಬಂಡೆಗಲ್ಲುಗಳನ್ನು ತೋರಿಸಿದರು. ಅದರದ್ದು ಮತ್ತೊಂದು ಕತೆಯಿದೆ ಎಂದು ಚುಟುಕಾಗಿ ಹೇಳಿದರು.

10 ವರ್ಷಗಳಿಂದ ಭೇಟಿಯೇ ಆಗಿರದ ಪುರಾತನ ಮಿತ್ರ ದೇವೇಂದ್ರಪ್ಪ ಅವರನ್ನು ನೋಡಲೆಂದೇ ಯಾದಗಿರಿ ಜಿಲ್ಲೆಯ ಶಹಾಪುರಕ್ಕೆ ಹೋದಾಗ, ಮಾತಿಗೆ ಸಿಕ್ಕವರು ರಾಘವೇಂದ್ರ ಹಾರಣಗೇರಾ. ಬಂಗಲೆ ಕಥೆ ಮಾತಿನಲ್ಲಿ ಹೇಳುವುದಕ್ಕಿಂತ ನೋಡುವುದರಲ್ಲಿ ಸೊಗಸು ಇದೆ ಎನ್ನುತ್ತ, ವಾಹನ ವ್ಯವಸ್ಥೆ ಮಾಡಿದರು. 30 ಕಿ.ಮೀ. ದೂರದಲ್ಲಿರುವ ಸುರಪುರಕ್ಕೆ ಕರೆದೊಯ್ದು ಟೇಲರ್ ಬಂಗಲೆ ಎದುರು ನಿಲ್ಲಿಸಿದರು. ‘1844ರಲ್ಲಿ ಬ್ರಿಟಿಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ನಿರ್ಮಿಸಿ, ವಾಸವಿದ್ದ ಬಂಗಲೆ ಇದು’ ಎಂದರು. ತಣ್ಣಗಿದ್ದ ಕುತೂಹಲದ ಮನಸ್ಸನ್ನು ಜಾಗೃತಗೊಳಿಸಿದರು.

ಫಿಲಿಪ್ ಮೆಡೋಸ್ ಟೇಲರ್ ಯಾರು? ಅವರಿಗೂ ಸುರಪುರಕ್ಕೂ ಸಂಪರ್ಕ ಹೇಗೆ? ಗುಡ್ಡಗಾಡು ಪ್ರದೇಶದಲ್ಲಿ ಯಾಕೆ ಬಂಗಲೆ ಕಟ್ಟಿದರು? 27 ಬಾಗಿಲುಗಳ ಹಿಂದಿನ ರಹಸ್ಯವೇನು ಎಂಬ ಪ್ರಶ್ನೆಗಳು ಕಾಡತೊಡಗಿದವು. ಉತ್ತರಗಳಿಗೆ ಬೆನ್ನು ಹತ್ತಿದೆ. ಒಂದೊಂದೇ ಮಾಹಿತಿ ಅಚ್ಚರಿಗೊಳಿಸಿದವು. ಬ್ರಿಟಿಷರ ಪಾಲಿಗೆ ಸಾಮಾನ್ಯ ಅಧಿಕಾರಿಯಾಗಿದ್ದ ಮೆಡೋಸ್, ಸುರಪುರದ ಜನರ ಪಾಲಿಗೆ ‘ಮಹಾದೇವ ಬಾಬಾ’ ಆಗಿದ್ದರು. ಕರುಣಾಮಯಿ, ಅಭಿವೃದ್ಧಿಯ ಹರಿಕಾರರಾಗಿದ್ದರು.

ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ 1808ರ ಸೆಪ್ಟೆಂಬರ್ 25ರಂದು ಜನಿಸಿದ ಟೇಲರ್ 15ನೇ ವಯಸ್ಸಿನಲ್ಲೇ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದರು. ಕೆಲ ದಿನ ಕಾರಕೂನ್ ಕೆಲಸ ಮಾಡಿದ ಅವರು ನಂತರ ಹೈದರಾಬಾದ್ ನಿಜಾಮ್ ಸಂಸ್ಥಾನದಲ್ಲಿ ಕೆಲಸಕ್ಕೆ ಸೇರಿದರು. ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅವರು ಕ್ಯಾಪ್ಟನ್, ಕರ್ನಲ್ ಆಗಿ ಬಡ್ತಿ ಪಡೆದರು. ನಂತರ ಅವರನ್ನು ಸುರಪುರದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ, ಕೆಲವಷ್ಟು ಜವಾಬ್ದಾರಿ ವಹಿಸಲಾಯಿತು.

1842ರ ಡಿಸೆಂಬರ್‌ನಿಂದ 1853ರ ಜೂನ್‌ವರೆಗಿನ ಅಧಿಕಾರ ಕಾಲಾವಧಿಯಲ್ಲಿ ಟೇಲರ್, ಹೈದರಾಬಾದ್ ನಿಜಾಮ್‌ಗೆ ನೀಡಬೇಕಿದ್ದ ಬಾಕಿ ಹಣವನ್ನು ಸುರಪುರದ ನಾಯಕ ಸಂಸ್ಥಾನದಿಂದ ವಸೂಲಿ ಮಾಡಬೇಕಿತ್ತು. ಸಂಸ್ಥಾನದೊಳಗಿನ ಅಂತಃಕಲಹ ನಿವಾರಿಸಿ ಎಲ್ಲವೂ ಸುಗಮಗೊಳಿಸಬೇಕಿತ್ತು. ರಾಜ ಕೃಷ್ಣಪ್ಪನಾಯಕ ಮೃತರಾದ ಹಿನ್ನೆಲೆಯಲ್ಲಿ ರಾಣಿ ಈಶ್ವರಮ್ಮ ಅವರ ಸುಪರ್ಧಿಯಲ್ಲಿ ಪಟ್ಟಕ್ಕೇರಿದ 7 ವರ್ಷದ ರಾಜಾ ವೆಂಕಟಪ್ಪ ನಾಯಕಗೆ ಮಾರ್ಗದರ್ಶನ ನೀಡಬೇಕಿತ್ತು.

ದಿನಗಳು ಕಳೆದಂತೆ ಟೇಲರ್‌, ಸುರಪುರ ನಾಯಕ ಸಂಸ್ಥಾನವನ್ನು ಸಾಲದ ಹೊರೆಯಿಂದ ಮುಕ್ತಗೊಳಿಸಿದರು. ಹೊಸ ಬಗೆಯ ತೆರಿಗೆ ಪದ್ಧತಿ ಮುಖಾಂತರ ತೆರಿಗೆದಾರರ ಸಂಕಷ್ಟ ನಿವಾರಿಸಿದರು. ಹತ್ತಿ ಕೃಷಿಯನ್ನು ಪರಿಚಯಿಸಿ, ಪ್ರೋತ್ಸಾಹಿಸಿದರು. ಸುತ್ತಮುತ್ತಲ ಗ್ರಾಮಗಳಲ್ಲಿ ಕೆರೆ ಮತ್ತು ಹೊಂಡಗಳ ನಿರ್ಮಾಣಕ್ಕೆ ಕಾರಣರಾದರು. ಮಾವು ಮತ್ತು ಹುಣಸೆಮರಗಳನ್ನು ಬೆಳೆಸಿ, ಎಲ್ಲೆಡೆ ಹಸಿರು ಪರಿಸರ ಆವರಿಸಿಕೊಳ್ಳುವಂತೆ ನೋಡಿಕೊಂಡರು. ಆರ್ಥಿಕ ಸಂಕಷ್ಟ ಸೇರಿದಂತೆ ಬೇರೆ ಬೇರೆ ರೀತಿಯ ಸಮಸ್ಯೆ ಎದುರಿಸುತ್ತಿದ್ದ ಜನರ ಬದುಕಿನಲ್ಲಿ ನೆಮ್ಮದಿ ಮೂಡಿತು.

ಟೇಲರ್ ಕಾದಂಬರಿಕಾರ, ಪತ್ರಕರ್ತ, ಚಿತ್ರಕಲಾವಿದ, ಛಾಯಾಗ್ರಾಹಕ, ಎಂಜಿನಿಯರ್, ವಿನ್ಯಾಸಕ, ಪ್ರಾಚ್ಯಶಾಸ್ತ್ರಜ್ಞ ಸಹ ಆಗಿದ್ದರು. ಟಿಪ್ಪು ಸುಲ್ತಾನ್, ತಾರಾ, ರಾಲ್ಫ್ ಡಾರ್ನಲ್, ಸೀತಾ, ಎ ಸ್ಟೂಡೆಂಟ್ಸ್ ಮ್ಯಾನುಯಲ್ ಆಫ್ ದಿ ಹಿಸ್ಟರಿ ಆಫ್ ಇಂಡಿಯಾ, ಎ ನೋಬಲ್ ಕ್ವೀನ್ ಕೃತಿಗಳು ಅಲ್ಲದೇ ‘ದಿ ಸ್ಟೋರಿ ಆಫ್ ಮೈ ಲೈಫ್’ ಎಂಬ ಆತ್ಮಕಥನ ಬರೆದರು.
ಆಡಳಿತ ಕಾರ್ಯವೈಖರಿ ಮೆಚ್ಚಿ ಇಂಗ್ಲೆಂಡ್‌ನ ವಿಕ್ಟೋರಿಯಾ ರಾಣಿಯು ಟೇಲರ್‌ಗೆ ‘ದಿ ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿ ನೀಡಿ ಗೌರವಿಸಿದರು. ವಿಶಿಷ್ಟ ಅಧಿಕಾರಿಯಾಗಿದ್ದ ಅವರು 1876ರ ಮೇ 13ರಂದು ನಿಧನರಾದರು.

ಟೇಲರ್ ಕುರಿತು ಸುದೀರ್ಘ ಕತೆ ಹೇಳಿದ ರಾಘವೇಂದ್ರ ಹಾರಣಗೇರಾ ಅವರು ನನ್ನನ್ನು ಕಲಬುರ್ಗಿಗೆ ಬೀಳ್ಕೊಟ್ಟರು. ಬಸ್ ಹತ್ತಿಸುವ ಮುನ್ನ, ‘ಸುರಪುರದ ಇತಿಹಾಸ ಇನ್ನೂ ಕುತೂಹಲಕಾರಿ, ಆಸಕ್ತಿಕರವಾಗಿದೆ. ಮುಂದೆ, ಯಾವಾಗಲಾದರೂ ಮಾತನಾಡೋಣ’ ಎಂದರು.

ಚಿತ್ರಗಳು: ಲೇಖಕರವು

**

ಪ್ರಾಣರಕ್ಷಣೆಗೆ ಸಕಲ ವ್ಯವಸ್ಥೆ

ಕೃಷ್ಣಪ್ಪನಾಯಕನ ಸಾವಿನ ನಂತರ ತೆರವಾದ ರಾಜನ ಸ್ಥಾನಕ್ಕೆ ಅವರ ಸಹೋದರ ಪಿಡ್ಡಪ್ಪನಾಯಕ ತಮ್ಮ ಪುತ್ರನನ್ನು ತರಲು ಬಯಸಿದ್ದರು. ಆದರೆ ಅದಕ್ಕೆ ಅವಕಾಶ ನೀಡದ ರಾಣಿ ಈಶ್ವರಮ್ಮ ತಮ್ಮ ಪುತ್ರ ರಾಜಾ ವೆಂಕಟಪ್ಪ ನಾಯಕನನ್ನು ಪಟ್ಟಕ್ಕೇರಿಸಿದ್ದರು. ಇದರಲ್ಲಿ ಟೇಲರ್ ಅವರದ್ದು ಪಾತ್ರವಿತ್ತು. ಇದರಿಂದಾಗಿ ಸಂಸ್ಥಾನದೊಳಗಿನ ಕೆಲವರಿಗೆ ಟೇಲರ್ ವಿರುದ್ಧ ವೈಷಮ್ಯ ಮೂಡಿತ್ತು. ಅವರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿತ್ತು.

ಅದಕ್ಕೆಂದೇ ಟೇಲರ್ ತಮ್ಮ ಬಂಗಲೆಗೆ 27 ಬಾಗಿಲು ಅಳವಡಿಸಿದರು. ಒಂದೇ ಬಾಗಿಲಿನಿಂದ ಏಕಕಾಲಕ್ಕೆ ಏಳು ಬಾಗಿಲುಗಳನ್ನು ತೆರೆಯುವಂತಹ ವ್ಯವಸ್ಥೆ ಮಾಡಿಕೊಂಡರು. ಒಂದು ವೇಳೆ ದಾಳಿಯಾದರೆ, ಸುಲಭವಾಗಿ ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿಕೊಂಡರು. ಬಾಗಿಲು ಅಥವಾ ಗೋಡೆ ಬಳಿ ಯಾರೇ ನಿಂತರೂ ಗೊತ್ತಾಗುವಂತಹ ವ್ಯವಸ್ಥೆ ಮಾಡಿಕೊಂಡರು.

ಅಲ್ಪಸ್ವಲ್ಪ ನವೀಕೃತಗೊಂಡ ಈ ಬಂಗಲೆ ಸದ್ಯಕ್ಕೆ ಸರ್ಕಾರಿ ಪ್ರವಾಸಿ ಮಂದಿರ ಆಗಿದೆ. ಸುರಪುರಕ್ಕೆ ಬರುವ ಗಣ್ಯರು ಇಲ್ಲಿಯೇ ಉಳಿದುಕೊಳ್ಳುತ್ತಾರೆ. ಮಲಗುವ ಕೋಣೆ, ಊಟದ ಕೋಣೆ, ಶೌಚಾಲಯ ಎಲ್ಲವನ್ನೂ ಹೊಂದಿರುವ ಈ ಕಟ್ಟಡವು ಈಗಲೂ ಬಳಕೆಯಲ್ಲಿದೆ. ಅದರ ಎದುರು ಪುಟ್ಟ ಉದ್ಯಾನವಿದ್ದರೆ, ಬದಿಯಲ್ಲಿ ಹೆಲಿಪ್ಯಾಡ್ ಇದೆ.

ಇದೆಲ್ಲದರ ಮಧ್ಯೆ ಬಂಗಲೆ ಕುರಿತ ನಿಗೂಢ ಸಂಗತಿಯೊಂದಿದೆ. ನಾಯಕ ಸಂಸ್ಥಾನದವರ ಪ್ರಕಾರ, ಬಂಗಲೆಯು ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿರುವ ಅಥವಾ ಸರ್ಕಾರಕ್ಕೆ ಹಸ್ತಾಂತರ ಆಗಿರುವ ಬಗ್ಗೆ ಯಾವುದೇ ದಾಖಲೆಪತ್ರಗಳಿಲ್ಲ. ಆದರೆ ಅದೇ ಟೇಲರ್ ಇಂಗ್ಲೆಂಡ್‌ಗೆ ಮರಳುವ ಮುನ್ನ ರಾಣಿ ಈಶ್ವರಮ್ಮಗೆ ಬಂಗಲೆಯನ್ನು ₹ 12 ಸಾವಿರಕ್ಕೆ ಮಾರಾಟ ಮಾಡಿದ್ದರಂತೆ.

**

ಬಂಡೆಗಲ್ಲು ಮೇಲೆ ಟೇಲರ್ ಸೀಟು!

ಬಂಗಲೆಯಿಂದ ಸ್ವಲ್ಪ ದೂರದಲ್ಲಿ ಎತ್ತರದ ಬಂಡೆಗಲ್ಲುಗಳಿದ್ದು, ಅವುಗಳನ್ನು ಏರಲು ಮೆಟ್ಟಿಲುಗಳಿವೆ. ಕುದುರೆ ಮುಖ ಹೋಲುವ ಕಾರಣ ಅದನ್ನು ಕೆಲವರು ‘ಕುದುರೆ ಗುಡ್ಡ’ ಎಂದು ಕರೆದರೆ, ಇನ್ನೂ ಕೆಲವರು ‘ಟೇಲರ್ ಸೀಟು’ ಎನ್ನುತ್ತಾರೆ.

ಕೆಲಸದ ಒತ್ತಡದಿಂದ ಬಿಡುವಾದಾಗ ಮತ್ತು ತುರ್ತು ಪರಿಸ್ಥಿತಿ ವೇಳೆ ಟೇಲರ್ ಆ ಬಂಡೆಗಲ್ಲುಗಳನ್ನು ಏರಿ ಇಡೀ 
ಸುರಪುರದತ್ತ ಕಣ್ಣು ಹಾಯಿಸುತ್ತಿದ್ದರು. ದಾಳಿ ಅಥವಾ ಅನಿರೀಕ್ಷಿತ ಬೆಳವಣಿಗೆಗಳು ಕಂಡು ಬಂದರೆ, ತಕ್ಷಣ ಗೊತ್ತಾಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು. ಸುರಪುರದಲ್ಲಿ ಏನೇ ಬದಲಾವಣೆಗಳಾದರೂ ಅವರಿಗೆ ಬೇಗನೇ ಸುಳಿವು ಸಿಗುತಿತ್ತು.

**

ಥಗ್ಸ್ ಆಫ್‌ ಹಿಂದೂಸ್ತಾನ್‌ಗೆ ಪ್ರೇರಣೆ?

ಫಿಲಿಪ್‌ ಮೆಡೋಸ್‌ ಟೇಲರ್‌ ಹೆಸರು ಇತ್ತೀಚೆಗೆ ಹೆಚ್ಚು ಚರ್ಚೆಗೆ ಬಂತು. ಅವರು 1839ರಲ್ಲಿ ರಚಿಸಿದ ‘ಕನ್‌ಫೆಷನ್‌ ಆಫ್‌ ಎ ಥ‌ಗ್’ ಕೃತಿಯು ಕೆಲ ದಿನಗಳ ಹಿಂದೆ ತೆರೆ ಕಂಡ ‘ಥಗ್ಸ್‌ ಆಫ್‌ ಹಿಂದೂಸ್ತಾನ‘ ಚಲನಚಿತ್ರಕ್ಕೆ ಪ್ರೇರಣೆಯಾಯಿತು ಎಂಬ ಮಾತಿದೆ. ಆದರೆ, ಚಿತ್ರದ ನಿರ್ದೇಶಕ ವಿಜಯಕೃಷ್ಣ ಆಚಾರ್ಯ ಈ ಅಂಶವನ್ನು ನಿರಾಕರಿಸಿದರೂ ಪಾತ್ರ ಮತ್ತು ಸನ್ನಿವೇಶಗಳ ಹೋಲಿಕೆಯನ್ನು ಚಿತ್ರದಲ್ಲಿ ಗಮನಿಸಬಹುದು.

**

ಟೇಲರ್ ಬಂಗಲೆಯಷ್ಟೇ ಅಲ್ಲ, ಸುರಪುರದಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ವಿಶಿಷ್ಟ ಮಾದರಿಯ ಬಂಡೆಗಲ್ಲುಗಳಿವೆ. ಸರ್ಕಾರ ಅವುಗಳ ಮೇಲೆ ಬೆಳಕು ಚೆಲ್ಲಿ, ಅಭಿವೃದ್ಧಿಯತ್ತ ಗಮನ ಹರಿಸಬೇಕು.
- ರಾಘವೇಂದ್ರ ಹಾರಣಗೇರಾ, ಪ್ರಾಧ್ಯಾಪಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.