ಶುಕ್ರವಾರ, ಮಾರ್ಚ್ 5, 2021
29 °C
ತಾಲ್ಲೂಕು ಪಂಚಾಯಿತಿ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಭೌತಿಕ, ಆರ್ಥಿಕ ಗುರಿ ಸಾಧಿಸಿ: ಇಒ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ‘ಎಲ್ಲ ಇಲಾಖೆಯ ಅಧಿಕಾರಿಗಳು ಪ್ರಸಕ್ತ ವರ್ಷದ ಭೌತಿಕ, ಆರ್ಥಿಕ ಗುರಿ ಸಾಧಿಸಬೇಕು. ಮುಂದಿನ ಕ್ರಿಯಾಯೋಜನೆ ರೂಪಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ (ಇಒ) ಎಂ.ಎಸ್.ರಮೇಶ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಸದ್ಯ ಮಳೆ ನಿಂತಿದೆ.  ಮುಂದೆ ಬರದ ಸ್ಥಿತಿ ತೀವ್ರವಾಗಬಹುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ಕುಡಿಯುವ ನೀರು ಸಮರ್ಪಕ ನಿರ್ವಹಣೆಗೆ ಮುಂದಾಗಬೇಕು. ಸಭೆಗಳಲ್ಲಿ ಈ ಬಗ್ಗೆ ಚರ್ಚಿಸಬೇಕು. ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳಬೇಕು’ ಎಂದರು.

‘ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಲು ಉತ್ತಮ ಅವಕಾಶವಿದೆ. ರೈತರಿಗೆ ಅನುಕೂಲವಾಗುವಂತಹ ಕೃಷಿಭಾಗ್ಯ, ಸಸ್ಯ ಸಂರಕ್ಷಣೆ ಸೇರಿದಂತೆ ಸರ್ಕಾರದ ಕೃಷಿ ಸಂಬಂಧಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು’ ಎಂದು ಕೃಷಿ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ಸಹಾಯಕ ಕೃಷಿ ನಿರ್ದೇಶಕ ಜಯಶಂಕರ್‌ ಮಾತನಾಡಿ, ‘2018–19ನೇ ಸಾಲಿಗೆ ಕೃಷಿಭಾಗ್ಯ ಯೋಜನೆಯಡಿ ಪ್ಯಾಕೇಜ್‌ ಮಾಡಲಾಗಿದೆ. ಈ ಯೋಜನೆಯಡಿ ಕನಿಷ್ಠ ಒಂದು ಎಕರೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಅನುಕೂಲವಾಗುತ್ತದೆ. ಕೃಷಿ ಹೊಂಡ, ಟಾರ್ಪಲ್‌ ವಿತರಣೆ, ಡೀಸಲ್‌ ಮೋಟಾರ್‌, ಸ್ಪ್ರಿಂಕ್ಲರ್‌ಗಳನ್ನು ವಿತರಿಸಲಾಗುತ್ತದೆ. ಯಾಂತ್ರಿಕರಣ ಯೋಜನೆಯಡಿ ಮಿನಿ ಟ್ರ್ಯಾಕ್ಟರ್‌ ವಿತರಿಸುವ ಯೋಜನೆ ಇದೆ’ ಎಂದು ತಿಳಿಸಿದರು.

ಸ್ವಚ್ಛತೆ ಪರಿಶೀಲಿಸಬೇಕು: ‘ತಾಲ್ಲೂಕು ಅಂಗನವಾಡಿ ಮೇಲ್ವಿಚಾರಕರು ದಿನಕ್ಕೆ 10 ಕೇಂದ್ರಗಳನ್ನು ಪರಿಶೀಲನೆ ಮಾಡುವಂತೆ ಅಧಿಕಾರಿಗಳು ಸೂಚಿಸಬೇಕು. ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಇಲ್ಲ. 6–7 ತಿಂಗಳು ಒಂದು ಕೇಂದ್ರವನ್ನು ಪರಿಶೀಲನೆ ಮಾಡುವುದಿಲ್ಲ. ತಾಲ್ಲೂಕು ವ್ಯಾಪ್ತಿಯ ಕೇಂದ್ರಗಳಿಗೆ ಪ್ರವಾಸ ಹೋಗಬೇಕು. ಕೇಂದ್ರಗಳಿಗೆ ಭೇಟಿ ನೀಡದವರಿಗೆ ನೋಟಿಸ್‌ ಜಾರಿ ಮಾಡಿ’ ಎಂದು ರಮೇಶ್‌ ಅವರು ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣಾ ಅಧಿಕಾರಿ (ಸಿಡಿಪಿಒ) ಜಯಶೀಲ ಅವರಿಗೆ ಸೂಚಿಸಿದರು.

‘ತಾಲ್ಲೂಕು ವ್ಯಾಪ್ತಿ 4 ಅಂಗನವಾಡಿ ಕಟ್ಟಡಗಳ ದುರಸ್ತಿಕಾರ್ಯ ನಡೆಯಬೇಕಿದೆ. ಈ ಪೈಕಿ ಅವಶ್ಯಕ ಹಾಗೂ ಅತಿ ಅವಶ್ಯಕವಾಗಿ ದುರಸ್ತಿ ಆಗಬೇಕಿರುವ ಅಂಗನವಾಡಿ ಕೇಂದ್ರಗಳಿಗೆ ಆದ್ಯತೆ ನೀಡಿ ದುರಸ್ತಿಗೆ ಕ್ರಮವಹಿಸಬೇಕು’ ಎಂದರು.

ಸಿಡಿಪಿಒ ಜಯಶೀಲ ಅವರು ಮಾತನಾಡಿ, ‘ಪರಿಶೀಲನೆ ನಡೆಸದ ಮೇಲ್ವಿಚಾರಕರಿಗೆ ನೋಟಿಸ್‌ ನೀಡಿದ್ದೇನೆ. ಕೆಲವರು ಹೆಚ್ಚುವರಿ ಕೇಂದ್ರಗಳಿಗೆ ನಿಯೋಜನೆಗೊಂಡಿರುವುದರಿಂದ ಪರಿಶೀಲನೆ ತ್ವರಿತವಾಗಿ ನಡೆಯುತ್ತಿಲ್ಲ’ ಎಂದು ಹೇಳಿದರು. 

‘ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸಿರುವವರ ಪಟ್ಟಿ ಪಡೆದು ಸ್ಥಳ ಪರಿಶೀಲನೆ ಮಾಡಿ ಪ್ರಕರಣಗಳನ್ನು ಪಟ್ಟಿ ಮಾಡಬೇಕು. ನಾಲ್ಕು ನಿಗಮಗಳು ಹಾಗೂ ಸೆಸ್ಕ್‌ನವರು ಸಮನ್ವಯದಿಂದ ಕಾರ್ಯನಿರ್ವಹಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ರಮೇಶ್ ಅವರು ಸೆಸ್ಕ್‌ ಅಧಿಕಾರಿಗೆ ಸೂಚಿಸಿದರು.

ನಗರ ಹಸಿರೀಕರಣ ಯೋಜನೆ: ಕಳೆದ ವರ್ಷ ವೈದ್ಯಕೀಯ ಕಾಲೇಜು ಹಿಂಭಾಗ ಹಾಗೂ ಸುತ್ತಮುತ್ತ ನಗರ ಹಸಿರೀಕರಣ ಯೋಜನೆಯಡಿ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಬೇವು, ಹೊಂಗೆ ಗಿಡಗಳನ್ನು ನೆಡಲಾಗಿದೆ. ಸಾಮಾಜಿಕ ಅರಣ್ಯ ಯೋಜನೆಯ ಅಡಿಯಲ್ಲಿ ಉಡಿಗಾಲ–ದೇವಲಾಪುರ ಹಾಗೂ ನಂಜನಗೂಡು–ಬದನಗುಪ್ಪೆ ಮುಖ್ಯರಸ್ತೆ ಬದಿಗಳಲ್ಲಿ ನೆಡುತೋಪು ಗಿಡಗಳನ್ನು ನೆಡಲಾಗುತ್ತಿದೆ. ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವ ಕಾರ್ಯ ಮುಂದುವರಿದಿದೆ’ ಎಂದು ಸಹಾಯಕ ತೋಟಗಾರಿಕೆ ಇಲಾಖೆಯ ಅಧಿಕಾರಿ ಕೆಂಪರಾಜು ತಿಳಿಸಿದರು.

 ಮೀನುಗಾರಿಕೆ, ಅಕ್ಷರ ದಾಸೋಹ, ಪ್ರಾದೇಶಿಕ ವಲಯಾರಣ್ಯ ಸೇರಿದಂತೆ ಒಟ್ಟು 15 ಇಲಾಖೆಗಳಿಂದ ಮಾಹಿತಿ ಪಡೆಯಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು.

22 ಸಾವಿರ ಅನಿಲ ಸಂಪರ್ಕ ಇಲ್ಲ
‘ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ 22 ಸಾವಿರ ಕುಟುಂಬಗಳು ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ಸಂಪರ್ಕ ಪಡೆದಿಲ್ಲ. ಈಗಾಗಲೇ, ಮುಖ್ಯಮಂತ್ರಿ ಅವರ ಅನಿಲಭಾಗ್ಯ ಯೋಜನೆಯಡಿ 809 ಫಲಾನುಭವಿಗಳಿಗೆ ಸಿಲಿಂಡರ್‌ ವಿತರಣೆ ಮಾಡಲಾಗಿದೆ’ ಎಂದು ಆಹಾರ ಇಲಾಖೆ ಅಧಿಕಾರಿ ವಿಶ್ವನಾಥ್‌ ಸಭೆಗೆ ತಿಳಿಸಿದರು.

ಪಡಿತರ ಚೀಟಿ ವಿತರಣೆ: ‘ತಾಲ್ಲೂಕಿನಲ್ಲಿ ಈವರೆಗೆ 2,472 ಪಡಿತರ ಚೀಟಿಗಳನ್ನು ವಿತರಿಸಲಾಗಿದ್ದು, ಪಡಿತರದಾರರು ಸರ್ಕಾರದ ಯೋಜನೆಯಡಿ ಬರುವ ಅಕ್ಕಿ, ಬೇಳೆ, ಪಡಿತರಗಳನ್ನು ಪಡೆದುಕೊಳ್ಳುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಶೇ 90ರಷ್ಟು ‌ಫಲಿತಾಂಶದ ಗುರಿ’
ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ ಮಾತನಾಡಿ, ‘ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ತಾಲ್ಲೂಕಿನಲ್ಲಿ ಶೇ 90ರಷ್ಟು ಫಲಿತಾಂಶ ಸಾಧಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 2018–19 ಸಾಲಿನಲ್ಲಿ ಇಲಾಖೆಯ ಎಲ್ಲ ಶಾಲೆಗಳಿಗೆ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಸೈಕಲ್‌ ಪೂರೈಕೆ ಮಾಡಲಾಗಿದೆ’ ಎಂದು ಹೇಳಿದರು.

8 ಶಾಲೆಗಳ ಮಕ್ಕಳು ಸೈಕಲ್‌ನಿಂದ ವಂಚಿತ: ಈ ಬಾರಿ ಮುಖ್ಯಮಂತ್ರಿ ಅವರು ಸೈಕಲ್‌ ವಿತರಣೆಯನ್ನು ತಡೆಹಿಡಿದಿರುವ ಪರಿಣಾಮ ತಾಲ್ಲೂಕಿನ 8 ಶಾಲೆಗಳ ಮಕ್ಕಳಿಗೆ ಸೈಕಲ್‌ ವಿತರಿಸಲಾಗಿಲ್ಲ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.