ಸೋಮವಾರ, ಮೇ 23, 2022
30 °C

ತಾರ್ಸರ್–ಮಾರ್ಸರ್

ಉಷಾ ಕಟ್ಟೆಮನೆ Updated:

ಅಕ್ಷರ ಗಾತ್ರ : | |

Prajavani

ಗೂಗಲ್‌, ಯೂಟ್ಯೂಬ್‌ನಲ್ಲಿ ಕಾಶ್ಮೀರದ ಕಡುನೀಲ ಸರೋವರಗಳ ಮೋಹಕ ಸೌಂದರ್ಯವನ್ನು ಕಂಡಾಗಲೆಲ್ಲ ಅಲ್ಲಿಗೊಮ್ಮೆ ಹೋಗಬೇಕೆಂದು ಮನಸ್ಸು ಹುಚ್ಚೆದ್ದು ಕುಣಿಯುತ್ತಿತ್ತು. ಆದರೆ  ಕಾಶ್ಮೀರದಲ್ಲಿನ ದೊಂಬಿ, ಗಲಾಟೆ, ಸೈನ್ಯದ ಕಟ್ಟೆಚ್ಚರಗಳ ಬಗ್ಗೆ ಕೇಳಿದ್ದಾಗ, ಮನದಲ್ಲಿ ಸಣ್ಣ ಆತಂಕ ಮೂಡುತ್ತಿತ್ತು. ಆದರೆ ‘ಇಂಡಿಯಾ ಹೈಕ್’ (India hikes) ಎಂಬ ಚಾರಣ ಸಂಸ್ಥೆ ತುಂಬಾ ಕಾಳಜಿ ಎಚ್ಚರಿಕೆಗಳಿಂದ ತನ್ನ ಚಾರಣಿಗರ ಯೋಗ ಕ್ಷೇಮ ನೋಡಿಕೊಳ್ಳುತ್ತದೆ’ ಎಂದು ನನ್ನ ಸಹಚಾರಣಿಗರೊಬ್ಬರು ಹೇಳಿದ ಕಾರಣದಿಂದ ಅವರ ವೆಬ್‌ಸೈಟ್‌ಗೆ ಹೋಗಿ ಹೆಸರು ನೊಂದಾಯಿಸಿಕೊಂಡೆ.

ಚಾರಣದ ಅನುಭವವಿದ್ದ ನಾನು ಆಯ್ದುಕೊಂಡದ್ದು ಮಾಡರೇಟ್ ತಾರ್ಸರ್–ಮಾರ್ಸರ್ ಚಾರಣವನ್ನು. ಈ ಜಾಗ ಜಮ್ಮುಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯಲ್ಲಿದೆ.

ತಾರ್ಸರ್ ಮಾರ್ಸರ್ ಚಾರಣದ ಅವಧಿ 7 ದಿನಗಳು. ಇದು ಹೈ ಅಲ್ಟಿಟ್ಯೂಡ್ ಟ್ರಕ್‌ ತಾಣ. ಅಂದರೆ ‘ಆಮ್ಲಜನಕದ ಪ್ರಮಾಣ ಕಡಿಮೆ ಇರುವ ಎತ್ತರದ ಪ್ರದೇಶಕ್ಕೆ ಚಾರಣ ಹೋಗುವುದು’ ಎಂದರ್ಥ. ಅಲ್ಲಿ ಜನವಸತಿ ಇರುವುದಿಲ್ಲ. ಬೇಸಿಗೆಯ ಒಂದೆರಡು ತಿಂಗಳು ಅಲೆಮಾರಿ ಕುರಿಗಾಹಿಗಳು (ಬಕ್ರೆವಾಲಿಗಳು) ಬಿಟ್ಟರೆ ಮಾನವ ಸಂಚಾರವಿರುವುದಿಲ್ಲ. ಇಂಥ ಪ್ರದೇಶಗಳಿಗೆ ಹೋಗುವಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿಯೇ ಚಾರಣಕ್ಕೆ ಹೆಸರು ನೊಂದಾಯಿಸಿಕೊಂಡ ಮೇಲೆ ಆಯೋಜಕರು ಮೂರು ತಿಂಗಳ ಕಾಲ ಆಗಾಗ ನಮ್ಮ ಫಿಟ್ನೆಸ್ ಬಗ್ಗೆ ಮಾಹಿತಿ ಪಡೆಯುತ್ತಾರೆ.

ಚಾರಣ ಅಂದರೆ ನಡಿಗೆಯ ಪ್ರವಾಸ. ತಂಡದ ಸದಸ್ಯರೆಲ್ಲ ಒಟ್ಟಾಗಲು, ತಮ್ಮ ಸಾಮಾನು ಸರಂಜಾಮುಗಳನ್ನು ಒಂದೆಡೆ ಇಡಲು ಬೇಕಾದ ನಿರ್ದಿಷ್ಟ ಜಾಗವೇ ಬೇಸ್ ಕ್ಯಾಂಪ್. ತಾರ್ಸರ್‌ ಮಾರ್ಸರ್ ಚಾರಣದ ಬೇಸ್ ಕ್ಯಾಂಪ್ ಹೆಸರು ಅರು. ಅದೊಂದು ಪುಟ್ಟ ಕಣಿವೆಯ ಊರು. ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 102 ಕಿಮೀ ದೂರದಲ್ಲಿದೆ. ಇಲ್ಲಿಗೆ ರಸ್ತೆ ಕೊನೆಯಾಗುತ್ತದೆ. ಆಮೇಲೆ ಚಾರಣದ ಏರು ಹಾದಿ ಆರಂಭವಾಗುತ್ತದೆ.

ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಹೈಕ್ ಸಂಸ್ಥೆಯ ಕಾರು ನಮಗಾಗಿ ಕಾಯುತ್ತಿತ್ತು. ಆ ದಿನ ಕಾಶ್ಮೀರ್‌ ಬಂದ್ ಇದ್ದ ಕಾರಣದಿಂದಾಗಿ ನೇರವಾಗಿ ಅವರ ಕಚೇರಿಗೆ ಕರೆದೊಯ್ದು ನಮ್ಮ ಪರಿಚಯ ಪತ್ರ ತೋರಿಸಿ ಹೆಸರು ನೊಂದಾಯಿಸಿಕೊಂಡರು. ಅದೇ ಗಾಡಿಯಲ್ಲಿ ಅರು ವ್ಯಾಲಿಗೆ ನಮ್ಮನ್ನು ಸುರಕ್ಷಿತವಾಗಿ ತಂದು ಬಿಟ್ಟರು. ಆಗಸ್ಟ್ ತಿಂಗಳ ಕೊನೆಯ ವಾರವಾದ್ದರಿಂದ ಶ್ರೀನಗರದಲ್ಲಿ ಸೆಕೆ. ಆದರೆ ಅರುವಿಗೆ ಬಂದಾಗ ತಾಪಮಾನ 7 ಡಿಗ್ರಿ ಸೆ. ಆ ರಾತ್ರಿ ಬಿಸಿ ನೀರಿನ ಸ್ನಾನ. ಒಳ್ಳೆಯ ಊಟ ಮತ್ತು ಬೆಚ್ಚನೆಯ ಹಾಸಿಗೆಯಲ್ಲಿ ಮಲಗಿ ನಿದ್ರಿಸಿದೆವು. ಮುಂದಿನ ಐದು ದಿನಗಳ ಟೆಂಟ್ ವಾಸದಲ್ಲಿ ಇದ್ಯಾವುದೂ ಸಿಗುವುದಿಲ್ಲ ಎಂಬುದು ನಮಗೆ ಗೊತ್ತಿತ್ತು.

ಮರುದಿನ ಬೆಳಿಗ್ಗೆ ಆ ಚಳಿಯಲ್ಲಿ ಸೂರ್ಯೋದಯಕ್ಕೆ ಮುನ್ನವೇ ಎದ್ದು ಬೆಚ್ಚನೆಯ ಉಡುಪುಗಳನ್ನು ಧರಿಸಿ, ಒಂದಿಷ್ಟು ಒಣ ಹಣ್ಣುಗಳನ್ನು ತುಂಬಿಕೊಂಡು ಟ್ರಕ್ಕಿಂಗ್ ಪೋಲ್ ಊರಿಕೊಂಡು ಹೊರಟು ಬಿಟ್ಟೆವು. ಅಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಲಿಡ್ಡರ್ ನದಿಯ ದಂಡೆಯ ಮೇಲೆ ನಮ್ಮ ಎರಡನೆಯ ಕ್ಯಾಂಪ್. ನಮಗೆ ಬುತ್ತಿ ಕಟ್ಟಿಕೊಟ್ಟಿದ್ದರು. ಆ ಹಾದಿಯ ಕಠಿಣತೆಯನ್ನು ಕ್ರಮಿಸುತ್ತಿರು
ವಾಗಲೇ ಯಾಕಾದರೂ ಈ ಟ್ರಕ್ಕಿಂಗ್ ಬಂದೆನಪ್ಪಾ ಅನ್ನಿಸಿತ್ತು.

ನಮ್ಮ ಮೂರನೆಯ ಕ್ಯಾಂಪ್ ಇಲ್ಲಿಂದ ಐದೂವರೆ ಕಿ.ಮೀ ದೂರದಲ್ಲಿನ ಶೇಕ್ವಾಸ್ ಎಂಬಲ್ಲಿತ್ತು. ಬೆಳಿಗ್ಗೆ ಎಳು ಗಂಟೆಗೆ ಲಿಡ್ಡರ್ ನದಿ ದಂಡೆಯಿಂದ ಹೊರಟವರು ಅಲ್ಲಿಗೆ ತಲುಪಿದಾಗ ಮಧ್ಯಾಹ್ನ 2 ಗಂಟೆಯಾಗಿತ್ತು. ನಾಲ್ಕನೆಯ ಕ್ಯಾಂಪ್ ನಮ್ಮೆಲ್ಲರ ಕನಸಿನ ಗುರಿಯಾಗಿದ್ದ ತಾರ್ಸರ್ ಸರೋವರದ ದಂಡೆಯ ಮೇಲಿತ್ತು. 11039 ಅಡಿಯಿಂದ 12449 ಅಡಿ ಎತ್ತರವನ್ನು ನಾವು ಏರಬೇಕಾಗಿತ್ತು. ಐದು ಕಿ.ಮೀ. ಹಾದಿ ಕ್ರಮಿಸಲು ನಾವು ತೆಗೆದುಕೊಂಡ ಸಮಯ ಆರು ಗಂಟೆ. ಸುಮಾರು ಎರಡು ಕಿ.ಮೀ ಸುತ್ತಳತೆಯ ಪುಟ್ಟ ಸರೋವರವದು. ಸಮತಳದಲ್ಲಿ ನಿಂತು ನೋಡಿದರೆ ನಿಶ್ಚಲ ಸಲಿಲ. ಆದರೆ ಅದರಿಂದ ಒಂದು ಸಾವಿರ ಅಡಿ ಎತ್ತರದಿಂದ ನೋಡಿದರೆ ನೀಲ ಆಕಾಶವೇ ಬೋರಲು ಬಿದ್ದಂತೆ ಕಾಣುವ ರಮ್ಯ ನೋಟ. ಹೇಗಪ್ಪಾ ಈ ಪರ್ವತ ಹತ್ತಿ ಆ ಕಡೆಗೆ ಹೋಗುವುದು ಎಂದು ನಾನು ಬೆಚ್ಚಿಬಿದ್ದಿದ್ದೆ. ಏಕೆಂದರೆ ಪರ್ವತದ ಆ ಕಡೆಗಿತ್ತು ಮಾರ್ಸರ್ ಸರೋವರ. ಕೊನೆಗೂ ಟ್ರಕ್ ಲೀಡರ್ ಸಲಹೆಯಂತೆ ಇರುವೆ ಹೆಜ್ಜೆಯನ್ನಿಕ್ಕುತ್ತಾ, ಟ್ರಕ್ಕಿಂಗ್ ಪೋಲ್ ಮೇಲೆ ದೇಹದ ಭಾರ ಹಾಕುತ್ತಾ ಪರ್ವತದ ಶಿಖರವನ್ನು ಹತ್ತಿ ‘ಅಭಿನಂದನೆಗಳು’ ಎಂದು ಪರಸ್ಪರ ಹೇಳಿಕೊಂಡಾಗ ಪಟ್ಟ ಶ್ರಮವೆಲ್ಲಾ ಸಾರ್ಥಕವೆನಿಸಿತ್ತು. ಸುತ್ತ 360 ಡಿಗ್ರಿಯಲ್ಲಿರುವ ಪರ್ವತಗಳೆಲ್ಲಾ ನಮ್ಮ ಕಾಲಬುಡದಲ್ಲಿದ್ದವು!

ಅಲ್ಲಿಂದ ಕಠಿಣವಾದ ಇಳಿಜಾರಿನ ಹಾದಿ. ಮತ್ತೆ ಪುನಃ ಏರು ಹಾದಿ. ಹೀಗೆ ಸಾಗುತ್ತಾ ಬಂದು ನಾವು ಕ್ಯಾಂಪ್ ಹೂಡಿದ್ದು ಸುಂದರ್ಸಾರ್ ಎಂಬ ಇನ್ನೊಂದು ಸರೋವರದ ಪಕ್ಕ. ಈ ಸರೋವರದ ಆಚೆ ಮತ್ತೊಂದು ಸರೋವರವಿತ್ತು. ಅದೇ ನಮ್ಮ ಕನಸಿನ ಮಾರ್ಸರ್ ಸರೋವರ. ನಾವು ಆ ಸರೋವರವನ್ನು ನೋಡಿ ಮತ್ತೆ ಇಲ್ಲಿಗೇ ಬರಬೇಕಾಗಿತ್ತು. ಆಗ ದಣಿದಿದ್ದರೂ, ನಮ್ಮ ಟ್ರಕ್ ಲೀಡರ್ ಯಶ್ ಜ್ಯೂಸ್ ನೀಡಿ ನಮ್ಮನ್ನು ಹೊರಡಿಸಿಕೊಂಡು ಹೊರಟೇ ಬಿಟ್ಟರು. ಮಾರ್ಸರ್ ನದಿ ದಂಡೆಯಲ್ಲಿ ರಾತ್ರಿ ಕಳೆಯುವುದು ಅಪಾಯಕಾರಿ ಎಂಬ ನಂಬುಗೆಯಿಂದ ಈ ಗಡಿಬಿಡಿಯ ತೀರ್ಮಾನ.

ರಾತ್ರಿಯ ನೀರವತೆಯನ್ನು ಅನುಭವಿಸಲು ಇಂಥ ಚಾರಣಗಳಿಗೇ ಬರಬೇಕು. ಶುಭ್ರ ಆಕಾಶ, ಸ್ಪಷ್ಟವಾಗಿ ಆಕಾಶಗಂಗೆಯನ್ನು ನೋಡಬಹುದು. ನಕ್ಷತ್ರಪುಂಜಗಳನ್ನು ಗುರುತಿಸಬಹುದು. ಉಲ್ಕಾಪಾತವನ್ನು ನೋಡಿ ಖುಷಿಯಿಂದ ಚಪ್ಪಾಳೆ ತಟ್ಟಿ ಕುಣಿಯಬಹುದು. ನಮ್ಮಲ್ಲಿ ಉತ್ತಮ ಕ್ಯಾಮೆರಾ ಇದ್ದವರೆಲ್ಲಾ ಆಕಾಶಗಂಗೆಯನ್ನು ಸೆರೆ ಹಿಡಿದರು. ಬೆಳದಿಂಗಳಲ್ಲಿ ಹೊಳೆಯುತ್ತಿದ್ದ ಗಿರಿಶಿಖರಗಳ ಸೌಂದರ್ಯವನ್ನು ಕ್ಯಾಮೆರಾ ಲೆನ್‌ಗಿಳಿಸಿದರು. ರಾತ್ರಿ ಹಿಮಪಾತದ ನಡುವೆಯೂ ಕೆಲವರು ಆ ದಿವ್ಯ ಸೌಂದರ್ಯದ ಅನುಭೂತಿಗಾಗಿ ಬಹಳ ಹೊತ್ತನ್ನು ಟೆಂಟ್‌ನ ಹೊರಗೇ ಕಳೆದಿದ್ದೆವು.

ಈ ಚಾರಣದಲ್ಲಿ ನನಗೆ ತುಂಬಾ ಇಷ್ಟವಾದ ಅಂಶ ಚಾರಣದ ಆಯೋಜಕರು ಚಾರಣಿಗರ ಸುರಕ್ಷತೆಯ ಬಗ್ಗೆ ತೆಗೆದುಕೊಂಡ ಕಾಳಜಿ.  22 ಮಂದಿ ಚಾರಣಿಗರ ವಸತಿ ಮತ್ತು ಊಟದ ವ್ಯವಸ್ಥೆಗಾಗಿ 18 ಕುದುರೆಗಳ ಮೇಲೆ ಸಾಮಾನು ಹೊತ್ತು ತಂದಿದ್ದರು. ಏರು ಹಾದಿಯಾದ ಕಾರಣ ಅವುಗಳ ಬೆನ್ನ ಮೇಲೆ 15ಕೆ.ಜಿಗಿಂತ ಹೆಚ್ಚು ಭಾರ ಹೊರಿಸುತ್ತಿರಲಿಲ್ಲ. ಆರೋಗ್ಯ ತೊಂದರೆಯಾದರೆ ಚಿಕಿತ್ಸೆ ನೀಡಲು ಅಂಬುಲೆನ್ಸ್ ಜತೆಗಿರುತ್ತಿತ್ತು. ಮಧ್ಯದಲ್ಲಿ ಒಬ್ಬ ಆಕ್ಸಿಜನ್ ಸಿಲಿಂಡರ್ ಅನ್ನು ಹೊತ್ತು ಬರುತ್ತಿದ್ದ. ಇದರ ಜವಾಬ್ದಾರಿ ಫಾರೂಕನದು. ಆತ ಕಾಶ್ಮೀರದ ಕಥೆ ಹೇಳುತ್ತಿದ್ದ. ‘ನಿಮ್ಮಂಥವರು ಆಗಾಗ ಇಲ್ಲಿಗೆ ಬರುತ್ತಿದ್ದರೆ ನಮಗೆ ಎರಡು ಹೊತ್ತು ಊಟ ಸಿಗುತ್ತದೆ’ ಎಂದು ಭಾವುಕವಾಗಿ ಹೇಳಿದ್ದ. 

ಹೈ ಅಲ್ಟಿಟ್ಯೂಡ್ ಟ್ರಕ್ಕಿಂಗ್‌ನಲ್ಲಿ ತಲೆನೋವು ಸಾಮಾನ್ಯ. ಇದು ಕಾಣಿಸಿಕೊಂಡರೆ ಬೇಸ್ ಕ್ಯಾಂಪಿನಲ್ಲೇ ಡೈಮೊಕ್ಸ್ ಎಂಬ ಮಾತ್ರೆ ಕೊಡುತ್ತಾರೆ. ಯಥೇಚ್ಚ ನೀರು ಕುಡಿಯಲು ಹೇಳುತ್ತಾರೆ. ಅನಂತರದಲ್ಲಿಯೂ ವಾಂತಿ–ಬೇಧಿ ಶುರುವಾದರೆ ಅಂಬ್ಯು‌ಲೆನ್ಸ್ ಕುದುರೆಯ ಮೇಲೆ ಬೇಸ್ ಕ್ಯಾಂಪಿಗೆ ಕರೆತಂದು ಚಿಕಿತ್ಸೆ ಕೊಡುತ್ತಾರೆ. ಇನ್ನೂ ಹೆಚ್ಚಿನ ಚಿಕಿತ್ಸೆ ಬೇಕಾಗಿದ್ದರೆ ಅಂತವರನ್ನು ಫೆಹೆಲ್ಗಾಂವ್‌ನ ಆಸ್ಪತ್ರೆಗೆ ದಾಖಲಿಸುತ್ತಾರೆ. ನನ್ನ ಜೊತೆಯಲ್ಲಿದ್ದ ನಾಲ್ಕು ಮಂದಿ ಬೇಸ್ ಕ್ಯಾಂಪ್‌ಗೆ ಹಿಂದಿರುಗಿದ್ದರು. ಇವೆಲ್ಲದರ ನಡುವೆಯೂ ನೆನಪಿನಲ್ಲಿ ಉಳಿಯುವ ಚಾರಣವಿದು.

(ಚಿತ್ರಗಳು: ಲೇಖಕರವು)

ಬಾಕ್ಸ್ 

ಸರೋವರಗಳ ಕಥೆ

ತಾರ್ಸರ್ ಸರೋವರ ದೈವಶಕ್ತಿಯುಳ್ಳದ್ದು. ಮಾರ್ಸರ್ ದುಷ್ಟ ಶಕ್ತಿಗಳು ಆವರಿಸಿಕೊಂಡಿರುವ ಸರೋವರ ಎಂದು ಇಲ್ಲಿ ಜನ ಭಾವಿಸುತ್ತಾರೆ. ಹಾಗಾಗಿ ತಾರ್ಸರ್ ದಡದಲ್ಲಿ ಚಾರಣಿಗರು ಟೆಂಟ್ ಹಾಕುತ್ತಾರೆ. ರಾತ್ರಿ ಕಳೆಯುತ್ತಾರೆ. ಇಲ್ಲಿಯ ನೀರನ್ನು ಕುಡಿಯಲು ಉಪಯೋಗಿಸುತ್ತಾರೆ.

ಆದರೆ ಮಾರ್ಸರ್‌ನಲ್ಲಿ ಹಾಗೆ ಮಾಡುವುದಿಲ್ಲ. ಕೇವಲ ನೋಡಿ ಆಸ್ವಾದಿಸಿ ಬರುತ್ತಾರೆ. ಅದರ ನೀರನ್ನು ಕುಡಿಯುವುದಿಲ್ಲ. ಅದು ಅಲ್ಲಿನವರ ನಂಬಿಕೆ.‌

ಬಾಕ್ಸ್ 

ಸರೋವರಗಳ ಕಥೆ

ತಾರ್ಸರ್ ಸರೋವರ ದೈವಶಕ್ತಿಯುಳ್ಳದ್ದು. ಮಾರ್ಸರ್ ದುಷ್ಟ ಶಕ್ತಿಗಳು ಆವರಿಸಿಕೊಂಡಿರುವ ಸರೋವರ ಎಂದು ಇಲ್ಲಿ ಜನ ಭಾವಿಸುತ್ತಾರೆ. ಹಾಗಾಗಿ ತಾರ್ಸರ್ ದಡದಲ್ಲಿ ಚಾರಣಿಗರು ಟೆಂಟ್ ಹಾಕುತ್ತಾರೆ. ರಾತ್ರಿ ಕಳೆಯುತ್ತಾರೆ. ಇಲ್ಲಿಯ ನೀರನ್ನು ಕುಡಿಯಲು ಉಪಯೋಗಿಸುತ್ತಾರೆ.

ಆದರೆ ಮಾರ್ಸರ್‌ನಲ್ಲಿ ಹಾಗೆ ಮಾಡುವುದಿಲ್ಲ. ಕೇವಲ ನೋಡಿ ಆಸ್ವಾದಿಸಿ ಬರುತ್ತಾರೆ. ಅದರ ನೀರನ್ನು ಕುಡಿಯುವುದಿಲ್ಲ. ಅದು ಅಲ್ಲಿನವರ ನಂಬಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು