ತೆರೆದೆದೆಯ ವಾತ್ಸಲ್ಯ

7

ತೆರೆದೆದೆಯ ವಾತ್ಸಲ್ಯ

Published:
Updated:
Deccan Herald

ಮುದ್ದು ಮಗುವನ್ನು ಎದೆಗಪ್ಪಿ ಕೂರುವ ಸುಖದ ಬಗೆಗೆ ವರ್ಣಿಸುವುದು ಅಸಾಧ್ಯ. ಆ ಬೆಚ್ಚನೆಯ ಭಾವ ಸದಾ ಹಸಿರಾಗಿರುತ್ತದೆ. ಇದೀಗ ಈ ಸುಖವನ್ನಲ್ಲದಿದ್ದರೂ ಅನುಭೂತಿಯನ್ನಂತೂ ಶಾಶ್ವತವಾಗಿ ಅನುಭವಿಸಲು ಎದೆಯ ಮೇಲೆ, ಎಳೆಯ ಮಗುವಿನ ಟ್ಯಾಟು ಮಾಡಿಸಿಕೊಳ್ಳುತ್ತಿದ್ದಾರೆ ಅಮ್ಮಂದಿರು.

 ‘ತ್ರೀ ಡಿ ಬೇಬಿ ಟ್ಯಾಟು’ಗಳು. ಫ್ಯಾಷನ್‌ಲೋಕದಲ್ಲಿ ಭಾವಾಭಿವ್ಯಕ್ತಿ ಹಾಗೂ ಮಮತೆಯ ವರತೆ ನಿಲ್ಲದಂತೆ ಎದೆಸಿರಿವಂತಿಕೆಯನ್ನು ಹೆಚ್ಚಿಸುವಂತಿವೆ ಈ ಮಕ್ಕಳ ಪಡಿಯಚ್ಚುಗಳು.

ಇಷ್ಟು ದಿನ ಟ್ಯಾಟುಗಳೆಂದರೆ, ಹೆಸರು, ಕಾರ್ಟೂನ್, ಬೊಂಬೆ, ದೇವರ ಚಿತ್ರ, ಹಕ್ಕಿ, ಚಿಟ್ಟೆ, ಹೂಗಳು ಹೀಗೆ ವಿವಿಧ ರೂಪಗಳಲ್ಲಿ ದೇಹದ ಮೇಲೆ ಮೂಡುತ್ತಿದ್ದವು. ಇದು ಇಷ್ಟಕ್ಕೇ ಸೀಮಿತವಾದರೆ ಹೇಗೆ ಎಂಬ ಭಾವನೆ ಫ್ಯಾಷನ್ ಪ್ರಿಯರಲ್ಲಿ ಮೂಡಿತೋ ಏನೋ, ಇನ್ನೊಂದು ಹೆಜ್ಜೆ ಮುಂದಿಟ್ಟು, ಮಕ್ಕಳ ಮೇಲೆ ತಂದೆ–ತಾಯಿಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸುವ ಹಾಗೆ ಮುದ ನೀಡುವ ಮಕ್ಕಳ ರೂಪವನ್ನು ಅಚ್ಚೊತ್ತುವ ಹಾಗೆ ದೇಹದ ಮೇಲೆ ಕೆತ್ತುತ್ತಿದ್ದಾರೆ. ಅನುಬಂಧಗಳಲ್ಲಿರುವ ಮಾಧುರ್ಯವನ್ನು ಈ ರೂಪದಲ್ಲಿ ಮತ್ತೊಮ್ಮೆ ಸವಿಯುವಂತೆ ಮಾಡುತ್ತಿದ್ದಾರೆ. ಒಂದು ಮಾತಿನಲ್ಲಿ ಹೇಳಬೇಕೆಂದರೆ ಟ್ಯಾಟುಗಳನ್ನು ಭಾವನೆಗಳಿಗೆ ಪ್ರತಿಬಿಂಬವಾಗಿ ಬದಲಾಯಿಸುತ್ತಿದ್ದಾರೆ.

ಅಮ್ಮಂದಿರು ಎದೆಯ ಮೇಲೆ ಚಿತ್ರ ಬರೆಸಿಕೊಂಡರೆ, ಪುರುಷರು ಹೆಗಲ ಮೇಲೆ, ಭುಜದ ಮೇಲೆ, ಬೆನ್ನ ಮೇಲೆ ಮಕ್ಕಳಾಟವನ್ನು ಚಿತ್ರಿಸಿಕೊಳ್ಳುತ್ತಿರುವುದು ಟ್ರೆಂಡ್‌ ಆಗಿದೆ.

ಮಗು ಹಾಯಾಗಿ ನಿದ್ರಿಸುತ್ತಿರುವ ಹಾಗೆ, ಅಟವಾಡುತ್ತಿರುವ ಹಾಗೆ, ಪೋಷಕರು ಅವರನ್ನು ಮುದ್ದಾಡುತ್ತಿರುವ ಹಾಗೆ, ಅವರದೊಂದಿಗೆ ನಲಿಯುತ್ತಿರುವ ಹಾಗೆ 3ಡಿ ರೂಪದಲ್ಲಿ ಚಿತ್ರಿಸುವ ಈ ಟ್ಯಾಟುಗಳು ತಂದೆ– ತಾಯಿ ಅಷ್ಟೇ ಅಲ್ಲದೇ, ಎಲ್ಲರ ಮನಸೂರೆಗೊಳ್ಳುತ್ತಿವೆ. 

ಒಂದು ನಿಮಿಷ ನಿಂತು ಬೆರಗು ಕಣ್ಣುಗಳ ಮೂಲಕ ನೋಡುವ ಹಾಗೆ ಮಾಡುತ್ತಿದೆ. ಒಂದೆಡೆ ಹೊಸ ಟ್ರೆಂಡ್ ಆಗಿ ಮತ್ತೊಂದೆಡೆ ಬಾಂಧವ್ಯ ಬೆಸೆಯುವ ಸೇತುವೆಯಾಗಿ ಬಳಕೆಗೆ ಬಂದಿರುವ ಈ 3ಡಿ ಬೇಬಿ ಟ್ಯಾಟುಗಳ ಆಲೋಚನೆ ಗಮನ ಸೆಳೆಯುತ್ತಿದೆ. ನಿಮಗೂ ಇಷ್ಟವಾದರೆ ನಿಮ್ಮ ಮಗುವಿನ ರೂಪವನ್ನೂ ನಿಮ್ಮ ದೇಹದ ಮೇಲೆ ಚಿತ್ರಿಸಿಕೊಳ್ಳಿ.

**

ಮೊದಲೇ ಇತ್ತು!

3ಡಿ ಟ್ಯಾಟುಗಳು ಎಂಬ ಪರಿಕಲ್ಪನೆ ಹೊಸತೇನಲ್ಲ. ನಾಲ್ಕೈದು ವರ್ಷಗಳ ಹಿಂದೆಯೇ ಇದು ಫ್ಯಾಷನ್ ಲೋಕದಲ್ಲಿ ಜನಪ್ರಿಯವಾಗಿತ್ತು. ಈಗ ಇಂತಹ ಟ್ಯಾಟುಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ. ಆದರೆ ಮಗುವಿನ 3ಡಿ ಟ್ಯಾಟುಗಳು ಹೊಸತು ಎನಿಸುತ್ತಿವೆ. ನಮ್ಮಲ್ಲೂ ಇಂತಹ ಹಚ್ಚೆಗಳನ್ನು ಹಾಕುತ್ತೇವೆ. ಆದರೆ ಪೋರ್ಟ್‌ರೇಟ್‌ ರೀತಿ ಮಾಡಿ ಹಾಕುತ್ತೇವೆ. ಇಂತಹ ಟ್ಯಾಟುಗಳನ್ನು ಹಾಕಿಸಿಕೊಳ್ಳಲು ಇಚ್ಛಿಸುವವರ ಚರ್ಮ ಬೆಳ್ಳಗಿದ್ದರಷ್ಟೇ ಚೆನ್ನಾಗಿ ಕಾಣುತ್ತದೆ. ಕಪ್ಪು ಮೈ ಮೇಲೆ ಚೆನ್ನಾಗಿ ಕಾಣುವುದಿಲ್ಲ.

–ಕಾರ್ತಿಕ್‌ ಬೆಂಗ್ರೆ, ಸ್ಕಲ್ಪ್‌ ಟ್ಯಾಟು ಸ್ಟುಡಿಯೊ

ಸಂಪರ್ಕ: 8197318518

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !