ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಕಥೆಗಳಿಗೆ ಭಾವ ತುಂಬುವ ಬಣ್ಣದ ಅಕ್ಷರ ‘ಚಿಕ್ಕಮಗಳೂರು’

Published 6 ಮಾರ್ಚ್ 2024, 0:25 IST
Last Updated 6 ಮಾರ್ಚ್ 2024, 10:13 IST
ಅಕ್ಷರ ಗಾತ್ರ

ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಗೆ ವರವಾದ ಯುನಿಕೋಡ್‌ನಲ್ಲಿ ಇದ್ದ ಅಕ್ಷರ ವಿನ್ಯಾಸದ ಕೊರತೆ ನೀಗಿಸುವ ಪ್ರಯತ್ನದಲ್ಲಿರುವ ತಿ. ನರಸೀಪುರದ ಅಕ್ಷರ ಟೈಪ್‌ ಸ್ಟುಡಿಯೊ ಈ ಬಾರಿ ಕನ್ನಡದ ಮೊದಲ ಬಣ್ಣದ ಅಕ್ಷರಗಳನ್ನು ಪರಿಚಯಿಸಿದೆ.

ಮಕ್ಕಳ ಕಥೆಗಳಿಗೆ, ಮಕ್ಕಳದ್ದೇ ಮುದ್ದಾದ ಅಕ್ಷರ ಬಳಸಿ, ಅವರ ಮಣ್ಣಿನ ಮನಸ್ಸಿನ ಭಾವನೆಯನ್ನೇ ತುಂಬಬಲ್ಲ ಅಕ್ಷರಗಳು ಇವಾಗಿವೆ. ಇದಕ್ಕೆ ‘ಚಿಕ್ಕಮಗಳೂರು’ ಎಂದು ಹೆಸರಿಟ್ಟಿದ್ದಾರೆ ಅದರ ವಿನ್ಯಾಸಕ ತಿ.ನರಸೀಪುರ ಮೂಲದವರಾದ ಮಂಜುನಾಥ ಆರ್.

ಬ್ಯಾನರ್ ಬರೆಯುವ ಮೂಲಕ ಅಕ್ಷರ ವಿನ್ಯಾಸದ ಮೋಹಿಯಾದ ಮಂಜುನಾಥ್, ಅದೇ ಕ್ಷೇತ್ರದಲ್ಲೇ ಶಿಕ್ಷಣ ಪಡೆದವರು. ಕನ್ನಡಕ್ಕಾಗಿ ಹೊಸತನ್ನು ನೀಡಬೇಕೆಂಬ ಹಂಬಲ ಹೊಂದಿದವರು. ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಬಳಸಿದ ಡಿಜಿಟಲ್ ಬೋರ್ಡ್‌ನಲ್ಲಿ ಕನ್ನಡ ಫಲಕಕ್ಕೆ ಇರುವ ಅಡ್ಡಿ ಆತಂಕಗಳನ್ನು ನಿವಾರಿಸುವ ಪಣತೊಟ್ಟ ಇವರು, ರಚಿಸಿದ್ದೇ ‘ಬೆಂಗಳೂರು’ ಎಂಬ ವಿನ್ಯಾಸದ ಅಕ್ಷರಗಳನ್ನು.

ಇವರ ಪ್ರಯತ್ನದ ಫಲವಾಗಿಯೇ ಕೆಲ ಬಸ್ಸುಗಳಲ್ಲಿ ‘ಬೆಂಗಳೂರು ಎಲ್‌ಇಡಿ’ ಫಾಂಟ್ ಬಳಕೆಯಾಗುತ್ತಿದೆ. ಅಷ್ಟೇ ಏಕೆ, ವನ್ಯಜೀವಿಗಳ ಪರ ಅಪಾರ ಕಾಳಜಿಯುಳ್ಳ ಇವರು, ಆನೆಯನ್ನೇ ಮಾದರಿಯಾಗಿಟ್ಟುಕೊಂಡು ವಿನ್ಯಾಸಗೊಳಿಸಿದ ಫಾಂಟ್‌ಗೆ ‘ಬಂಡೀಪುರ’ ಎಂದು ಹೆಸರಿಟ್ಟಿದ್ದಾರೆ. ಇದರ ಬಳಕೆಯೂ ವ್ಯಾಪಕವಾಗಿದೆ.

‘ವಿವಾಹ, ಪುಸ್ತಕ ಬಿಡುಗಡೆ ಹೀಗೆ ಹಲವು ಸಂದರ್ಭಗಳ ಆಹ್ವಾನ ಪತ್ರಿಕೆಯಲ್ಲಿ ಸಂದರ್ಭಕ್ಕೆ ಅನುಗುಣವಾದ ಅಕ್ಷರ ವಿನ್ಯಾಸವನ್ನೇ ಬಳಸುತ್ತೇವೆ. ಆದರೆ ಕಥೆಗಳಿಗೆ, ಅದರಲ್ಲೂ ವಿಶೇಷವಾಗಿ ಮಕ್ಕಳ ಕಥೆಗಳಿಗೂ ದೊಡ್ಡವರ ಕಥೆಗಳಿಗೆ ಬಳಸುವ ಅಕ್ಷರವನ್ನೇ ಬಳಸುತ್ತಿದ್ದೇವೆ. ಇದು ಮಕ್ಕಳ ಆ ಮುಗ್ಧ ಮನಸ್ಸಿನ ಭಾವವನ್ನು ಅಭಿವ್ಯಕ್ತಪಡಿಸುವಲ್ಲಿ ವಿಫಲವಾಗುತ್ತಿದೆ ಎಂಬ ಕೊರಗು ಸದಾ ನನ್ನನ್ನು ಕಾಡುತ್ತಿತ್ತು. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದಲೇ ಈ ಅಕ್ಷರ ವಿನ್ಯಾಸದ ಅಭಿವೃದ್ಧಿಗೆ ಕೈಹಾಕಿದೆ. ಸುಮಾರು ಒಂದು ವರ್ಷಗಳ ಪ್ರಯತ್ನದ ಫಲವೇ ಈ ಫಾಂಟ್‌’ ಎನ್ನುವುದು ಅವರ ‘ಚಿಕ್ಕಮಗಳೂರು’ ಪಯಣದ ಕಥೆ.

ಮುದ್ರಣವೇ ಆಗಿರಲಿ ಅಥವಾ ಡಿಜಿಟಲ್‌... ಅಕ್ಷರ ಟೈಪ್ ಸ್ಟುಡಿಯೊ ವಿನ್ಯಾಸಗೊಳಿಸಿದ ಫಾಂಟ್‌ಗಳು ಬಳಸಲು ಸಂಪೂರ್ಣವಾಗಿ ಉಚಿತ.  ಸ್ಟುಡಿಯೊದ ಅಧಿಕೃತ ಅಂತರ್ಜಾಲ ಪುಟದಿಂದ (aksharatypestudio.in) ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ ಓಪನ್ ಸೋರ್ಸ್‌ ಅಲ್ಲದ ಈ ಓಪನ್‌ ಟೈಪ್‌ ಫಾಂಟ್‌ಗೆ ಬೇರೆ ವಿನ್ಯಾಸ ಕೊಡಬೇಕೆಂದರೆ, ಅದಕ್ಕಾಗಿ ಇವರ ಸ್ಟುಡಿಯೊಗೆ ಕೋರಿಕೆ ಕಳಿಸುವುದು ಅಗತ್ಯ.

ಅಡೋಬಿ, ಮೈಕ್ರೊಸಾಫ್ಟ್, ಐಒಎಸ್‌ಗಳಲ್ಲಿ ಸುಲಭವಾಗಿ ಅಕ್ಷರ ಟೈಪ್ ಸ್ಟುಡಿಯೊದ ಬೆಂಗಳೂರು, ಬಂಡೀಪುರ ಹಾಗೂ ಚಿಕ್ಕಮಗಳೂರು ಫಾಂಟ್‌ಗಳನ್ನು ಬಳಸಬಹುದು. ಆಫ್ರಿಕಾದ 146, ಅಮೆರಿಕದ 105, ಏಷ್ಯಾದ 72, ಯುರೋಪ್‌ನ 93 ಹಾಗೂ ಓಷಿನಿಯಾದ 25 ಸೇರಿ ಒಟ್ಟು 441 ಫಾಂಟ್‌ಗಳಿಗೂ ‘ಚಿಕ್ಕಮಗಳೂರು’ ಒಳಗೊಂಡಂತೆ ಅಕ್ಷರ ಟೈಪ್ ಸ್ಟುಡಿಯೊದ ಫಾಂಟ್‌ಗಳನ್ನು ಬಳಸಬಹುದು. ಹೀಗಾಗಿ ಕನ್ನಡದ ಮಕ್ಕಳ ಅಕ್ಷರದ ಅಂದ ಜಗತ್ತಿನ ಹಲವು ಭಾಷೆಗಳಿಗೂ ಅನ್ವಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

‘ಚಿಕ್ಕಮಗಳೂರು’ ಫಾಂಟ್ ಅಭಿವೃದ್ಧಿಪಡಿಸಿದ ಕಥೆಯನ್ನು ಬಿಚ್ಚಿಟ್ಟ ವಿನ್ಯಾಸ ಮಂಜುನಾಥ್, ‘ಒಂದರಿಂದ ಮೂರನೇ ತರಗತಿವರೆಗಿನ ಮಕ್ಕಳ ಕೈಬರಹಗಳನ್ನು ಇದಕ್ಕಾಗಿ ಅಭ್ಯಸಿಸಲಾಯಿತು. ಅವರು ಬರೆಯುವ ಶೈಲಿ, ತಪ್ಪಾದರೆ ಗೀಚುವ ವಿನ್ಯಾಸ, ಆ ಏರಿಳಿತ, ಚಿತ್ತಾರಗಳ ವಿನ್ಯಾಸ ತೊದಲುನುಡಿಯಷ್ಟೇ ಚೆನ್ನ. ಅವುಗಳಿಗೆ ಡಿಜಿಟಲ್ ಸ್ಪರ್ಶ ನೀಡುವ ಮೂಲಕ ಒಂದಷ್ಟು ಬದಲಾವಣೆ ಮಾಡಿ ಚಿಕ್ಕಮಗಳೂರು ವಿನ್ಯಾಸಗೊಂಡಿದೆ. ಅದಕ್ಕೊಂದಷ್ಟು ಹಿತ ನೀಡುವ ಬಣ್ಣಗಳನ್ನು ಬಳಸಲಾಗಿದೆ. ಈ ಅಕ್ಷರವನ್ನು ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ಬಳಸಿದರೂ ಅದೇ ಬಣ್ಣ ಹಾಗೂ ವಿನ್ಯಾಸದಲ್ಲೇ ಮೂಡಿಬರಲಿದೆ ಎನ್ನುವದೇ ಇದರ ವಿಶೇಷತೆ’ ಎಂದು ಮಂಜುನಾಥ ಅವರು ವಿವರಿಸಿದರು.

ಅಕ್ಷರ ಟೈಫ್‌ ಸ್ಟುಡಿಯೊದ ಫಾಂಟ್‌ಗಳನ್ನು ತಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ಗೆ ಡೌನ್‌ಲೋಡ್‌ ಮಾಡಿಕೊಂಡಾದರೂ ಬಳಸಬಹುದು. ಇಲ್ಲವೇ ಅಕ್ಷರ ಟೈಪ್ ಸ್ಟುಡಿಯೊದ ಅಂತರ್ಜಾಲಪುಟದಲ್ಲಿ ಇರುವ ಎಡಿಟರ್‌ನಲ್ಲಿ ನೀಡಿರುವ ಕೀಲಿಮಣೆ ಬಳಸಿಯೂ ಟೈಪಿಸಿ, ಅದಕ್ಕೆ ತಮ್ಮಿಷ್ಟದ ಅಕ್ಷರ ವಿನ್ಯಾಸವನ್ನೂ ಬಳಸಲೂ ಅವಕಾಶ ಕಲ್ಪಿಸಲಾಗಿದೆ. ಈ ಕೀಲಿಮಣೆಯಲ್ಲಿ ಕೆಲವೊಂದು ವಿಶೇಷ ಪದಗಳನ್ನು ರಚಿಸುವ ಕುರಿತೂ ಮಾಹಿತಿ ಇದೆ.

‘ಚಿಕ್ಕಮಗಳೂರು’ ಅಕ್ಷರವನ್ನು ಕಂಪ್ಯೂಟರ್‌ನಂತ ಡಿಜಿಟಲ್ ಸಾಧನಗಳಲ್ಲಿ ಬಳಸಲು ಅನುಕೂಲವಾಗುವಂತೆ ಒಟಿಎಫ್ ಹಾಗೂ ಟಿಟಿಎಫ್‌ ಮಾದರಿಗಳಲ್ಲೂ ಲಭ್ಯ. ಜತೆಗೆ ಅಂತರ್ಜಾಲಗಳಲ್ಲಿ ಬಳಸಲು ಅನುಕೂಲವಾಗುವಂತೆ ಡಬ್ಲೂಒಎಫ್‌ಎಫ್‌ ಹಾಗೂ ಡಬ್ಲೂಒಎಫ್‌ಎಫ್‌2 ಮಾದರಿಯಲ್ಲೂ ಲಭ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಚಿಕ್ಕಮಗಳೂರು ಫಾಂಟ್ ಬಳಸುವ ಬಗೆ ಕುರಿತೂ ಅಂತರ್ಜಾಲ ಪುಟದಲ್ಲಿ ವಿವರಣೆ ನೀಡಲಾಗಿದೆ. ಅಡೋಬಿ ಇಲಸ್ಟ್ರೇಟ್‌, ಅಡೋಬಿ ಇನ್‌ಡಿಸೈನ್‌, ಮೈಕ್ರೊಸಾಫ್ಟ್ ವರ್ಡ್‌, ಆ್ಯಪಲ್ ಆ್ಯಪ್‌ಗಳು, ಫಿಗ್ಮಾ, ಸಿಎಸ್‌ಎಸ್‌ನಲ್ಲಿ ಬಳಸುವುದು ಹೇಗೆ ಎಂಬ ವಿವರಣೆಯನ್ನು ನೀಡಲಾಗಿದೆ. 

‘ಹಾಗೆ ನೋಡಿದರೆ, ಇಂಗ್ಲಿಷ್ ಮತ್ತು ಲ್ಯಾಟಿನ್ ಹೊರತುಪಡಿಸಿದರೆ ಬಣ್ಣದ ಫಾಂಟ್‌ಗಳು ದೊರೆಯುವುದು ಕನ್ನಡದಲ್ಲೇ. ಉಚಿತವಾಗಿ ನೀಡಲಾಗುತ್ತಿರುವ ಈ ಫಾಂಟ್‌ಗಳ ಆ ಮೂಲಕ ಕನ್ನಡಕ್ಕಾಗಿ ನನ್ನದೊಂದು ಅಳಿಲು ಸೇವೆಯಷ್ಟೇ’ ಎನ್ನುವುದು ವಿನ್ಯಾಸಕರ ಧನ್ಯತೆಯ ಮಾತು.

ಅಕ್ಷರ ಟೈಫ್‌ ಸ್ಟುಡಿಯೊದ ಚಿಕ್ಕಮಗಳೂರು ಅಕ್ಷರ ವಿನ್ಯಾಸ
ಅಕ್ಷರ ಟೈಫ್‌ ಸ್ಟುಡಿಯೊದ ಚಿಕ್ಕಮಗಳೂರು ಅಕ್ಷರ ವಿನ್ಯಾಸ
ಅಕ್ಷರ ಟೈಫ್‌ ಸ್ಟುಡಿಯೊದ ಚಿಕ್ಕಮಗಳೂರು ಅಕ್ಷರ ವಿನ್ಯಾಸ
ಅಕ್ಷರ ಟೈಫ್‌ ಸ್ಟುಡಿಯೊದ ಚಿಕ್ಕಮಗಳೂರು ಅಕ್ಷರ ವಿನ್ಯಾಸ
ಮಂಜುನಾಥ ಆರ್.
ಮಂಜುನಾಥ ಆರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT