ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Technology: ಇನ್ನು ಸ್ಮಾರ್ಟ್‌ಗ್ಲಾಸ್‌ ಜಮಾನ!

Published : 1 ಅಕ್ಟೋಬರ್ 2024, 23:30 IST
Last Updated : 1 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಈ ಜಗತ್ತನ್ನು ಹೊಸ ಮಜಲಿಗೆ ಕೊಂಡೊಯ್ಯುತ್ತಿದೆ. 'ಸ್ಮಾರ್ಟ್‌’ ತಂತ್ರಜ್ಞಾನಗಳ ಶಕೆ ಆರಂಭಗೊಂಡು ದಶಕಗಳೇ ಉರುಳಿವೆ. ಆದರೆ, ಕೃತಕ ಬುದ್ಧಿಮತ್ತೆ ಪ್ರವರ್ಧಮಾನಕ್ಕೆ ಬಂದ ನಂತರ ಮನುಕುಲವು ಕಲ್ಪನೆಗೂ ನಿಲುಕದ ‘ಸ್ಮಾರ್ಟ್‌ʼ ತಂತ್ರಜ್ಞಾನಗಳಿಗೆ ಸಾಕ್ಷಿಯಾಗುತ್ತಿದೆ. ಸಂವಹನ ಕ್ಷೇತ್ರದಲ್ಲಿ ರೂಪುಗೊಳ್ಳುತ್ತಿರುವ ಎಐ ಆಧಾರಿತ ವಿನೂತನ ಪರಿಕಲ್ಪನೆಗಳು ತಂತ್ರಜ್ಞಾನ ಕಂಪನಿಗಳ ನಡುವೆ ಆವಿಷ್ಕಾರಗಳ ಪೈಪೋಟಿಯನ್ನೂ ಹುಟ್ಟುಹಾಕುತ್ತಿದೆ. 

ಸ್ಮಾರ್ಟ್‌ಫೋನ್‌ ಈಗ ಹಳೆಯದಾಯಿತು. ಸ್ಮಾರ್ಟ್‌ವಾಚ್‌ ಬಳಕೆಯ ಪರಿಕಲ್ಪನೆಯೂ ಹಳೆಯದೇ. ಇಂತಹ ಸನ್ನಿವೇಶದಲ್ಲಿ ‘ಸ್ಮಾರ್ಟ್‌’ ಲೋಕದ ಉತ್ಪನ್ನಗಳ ಪಟ್ಟಿಗೆ ಈಗ ಹೊಸ ವಸ್ತುವೊಂದು ಸೇರ್ಪಡೆಯಾಗಿದೆ. ‘ಸ್ಮಾರ್ಟ್‌ ಕನ್ನಡಕ’ ಅಥವಾ ‘ಸ್ಮಾರ್ಟ್‌ ಗ್ಲಾಸ್‌’. ‘ವರ್ಧಿತ ವಾಸ್ತವʼ ಅಥವಾ ಆಗ್ಯುಮೆಂಟೆಂಟ್‌ ರಿಯಾಲಿಟಿ (ಎಆರ್‌) ಗ್ಲಾಸ್‌ ಎಂದೂ ಕರೆಯಲಾಗುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ‘ಸ್ಮಾರ್ಟ್‌ ಗ್ಲಾಸ್‌’ ಬಗ್ಗೆ ಚರ್ಚೆಗಳು ಆರಂಭವಾಗಿ ದಶಕವೇ ಕಳೆದಿದೆ. ಹಲವು ತಂತ್ರಜ್ಞಾನ ದೈತ್ಯ ಕಂಪನಿಗಳು ಸ್ಮಾರ್ಟ್‌ ಕನ್ನಡಕಗಳ ಅಭಿವೃದ್ಧಿಯಲ್ಲಿ ತೊಡಗಿದ್ದವು. ಕಳೆದ ವರ್ಷದಿಂದ ಒ೦ದೊಂದೇ ಕಂಪನಿಗಳು ಸ್ಮಾರ್ಟ್‌ ಕನ್ನಡಕಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.

ಮಾರ್ಕ್‌ ಜುಕರ್‌ಬರ್ಗ್‌ ಒಡೆತನದ ‘ಮೆಟಾ‘ವು ‘ರೇ-ಬಾನ್‌‘ ಕಂಪನಿ ಜೊತೆಗೂಡಿ ಅಭಿವೃದ್ಧಿ ಪಡಿಸಿರುವ ‘ಸ್ಮಾರ್ಟ್‌ ಗ್ಲಾಸ್‌’ ಸದ್ಯ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಆ್ಯಪಲ್‌ ಸೇರಿದಂತೆ ಹಲವು ಕಂಪನಿಗಳು ಸ್ಮಾರ್ಟ್‌ ಗ್ಲಾಸ್‌ಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ನಮ್ಮ ದೇಶದಲ್ಲೂ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಕಳೆದ ವರ್ಷ ದೆಹಲಿಯಲ್ಲಿ ನಡೆದ ತಂತ್ರಜ್ಞಾನ ಮೇಳದಲ್ಲಿ ರಿಲಯನ್ಸ್‌ ಕಂಪನಿಯು ಹೊರತರಲು ಉದ್ದೇಶಿಸಿರುವ ‘ಜಿಯೊ ಗ್ಲಾಸ್‌’ ಅನ್ನು ಪ್ರದರ್ಶಿಸಿತ್ತು. ನಮ್ಮ ಬೆಂಗಳೂರಿನ ʼಪುಪಿಲ್‌ ಮೆಷ್‌ʼ ಎಂಬ ಸ್ಟಾರ್ಟ್‌ಅಪ್‌ ಕಂಪನಿ ಬಾಂಬೆ ಐಐಟಿ ಸಹಯೋಗದೊಂದಿಗೆ ಸ್ಮಾರ್ಟ್‌ ಗ್ಲಾಸ್‌ ಅಭಿವೃದ್ಧಿ ಪಡಿಸುತ್ತಿದೆ. ಕಳೆದ ವರ್ಷದ ‘ಏರೋ ಇಂಡಿಯಾ’ ಪ್ರದರ್ಶನದಲ್ಲಿ ಕಂಪನಿಯು ಸ್ಮಾರ್ಟ್‌ ಕನ್ನಡಕವನ್ನು ಹೊರ ಜಗತ್ತಿಗೆ ತೋರಿಸಿತ್ತು.

ಗೂಗಲ್‌ ಕಂಪನಿಯು 2010ರಲ್ಲೇ ಸ್ಮಾರ್ಟ್‌ ಗ್ಲಾಸ್‌ ಪರಿಕಲ್ಪನೆಯನ್ನು ಹುಟ್ಟುಹಾಕಿತ್ತು. 2013ರಲ್ಲಿ ತಯಾರಿಸಿತ್ತು. ಮರುವರ್ಷವೇ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಅದು ಹೆಚ್ಚು ಯಶಸ್ವಿಯಾಗದೇ ಇದ್ದುದರಿಂದ 2015ರಲ್ಲಿ ಉತ್ಪಾದನೆ ಸ್ಥಗಿತಗೊಳಿಸಿತ್ತು. 2019ರಲ್ಲಿ ಮತ್ತೆ ಹೊಸ ಸ್ಮಾರ್ಟ್‌ ಕನ್ನಡಕಗಳನ್ನು ಪರಿಚಯಿಸಿತಾದರೂ ಕಳೆದ ವರ್ಷದಿಂದ ಮಾರಾಟ ನಿಲ್ಲಿಸಿದೆ. ಇದು ಯಶಸ್ವಿಯಾಗದಿರಲು ಬೆಲೆ ದುಬಾರಿಯಾಗಿದ್ದುದು ಒಂದು ಕಾರಣವಾದರೆ, ಬಳಕೆದಾರರ ಸುರಕ್ಷತೆ, ಖಾಸಗಿತನದ ರಕ್ಷಣೆಯ ಬಗ್ಗೆ ತೀವ್ರ ಟೀಕೆಗಳೂ ವ್ಯಕ್ತವಾಗಿದ್ದವು.

ಕಣ್ಣರೆಪ್ಪೆ ಮುಂದೆಯೇ ‘ಸ್ಮಾರ್ಟ್‌’ ಪರದೆ

ʼಸ್ಮಾರ್ಟ್‌ ಕನ್ನಡಕʼ ಎಂದರೆ ಕಣ್ಣುಗಳ ಮುಂದಿರುವ ಸ್ಮಾರ್ಟ್‌ ಪರದೆ. ಇದು ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಟಿವಿಗಳ ರೀತಿಯಲ್ಲಿ ಕಾರ್ಯನಿರ್ವಹಿಸಬಲ್ಲುದು. ಒಂದರ್ಥದಲ್ಲಿ ಇದು ತಲೆಗೆ ಧರಿಸುವಂತಹ (ಹೆಡ್‌ ಮೌಂಟೆಡ್‌) ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ಫೋನ್‌.

ಈ ಕನ್ನಡಕ ಧರಿಸಿ ಕಣ್ಣಿನ ರೆಪ್ಪೆಗಳನ್ನು ತೆರೆಯುತ್ತಿದ್ದಂತೆಯೇ ಕನ್ನಡಕದ ಮಸೂರಗಳ ಮೂಲಕ ಸ್ಮಾರ್ಟ್‌ ಜಗತ್ತಿಗೆ ನಾವು ತೆರೆದುಕೊಳ್ಳುತ್ತೇವೆ! ಆಡಿಯೊ-ವಿಡಿಯೊ ಸೌಲಭ್ಯ, ಕರೆ ಮಾಡುವುದು, ಫೋಟೊ, ವಿಡಿಯೊ ಸೆರೆ ಹಿಡಿಯುವುದು, ಧ್ವನಿ ಸಹಾಯಕ ವ್ಯವಸ್ಥೆ, ಕ್ಯೂರ್‌ ಕೋಡ್‌ ಸ್ಕ್ಯಾನಿಂಗ್‌ ಸೇರಿದಂತೆ ನಾವು ಈಗ ಸ್ಮಾರ್ಟ್‌ಫೋನ್‌ಗಳಲ್ಲಿ ಮಾಡಬಹುದಾದ ಕೆಲಸಗಳನ್ನು ಕನ್ನಡಕದ ಮುಖೇನ ಮಾಡಬಹುದು. ಸದ್ಯ ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಲಭ್ಯವಿರುವ ಮೆಟಾ-ರೇ ಬಾನ್‌ ಸ್ಮಾರ್ಟ್‌ ಗ್ಲಾಸ್‌ಗಳಲ್ಲಿ ಈ ಸೌಲಭ್ಯಗಳಿವೆ. ಎಐ ಆಧಾರಿತ ವಿಡಿಯೊ ಸಂಕಲನ, ಹಾಡುಗಳೊಂದಿಗೆ ಸಮನ್ವಯ ಸಾಧಿಸುವಂತಹ ಸೌಲಭ್ಯಗಳನ್ನೊಳಗೊಂಡ ಹೊಸ ಸ್ಮಾರ್ಟ್‌ ಕನ್ನಡಕಗಳನ್ನು ಅದು ಇತ್ತೀಚೆಗೆ ಬಿಡುಗಡೆ ಮಾಡಿದೆ (ಬೆಲೆ ₹ 25 ಸಾವಿರದಿಂದ ಆರಂಭವಾಗುತ್ತದೆ).

ಲಾಭ, ಸವಾಲುಗಳು

ಆರೋಗ್ಯ, ಶಿಕ್ಷಣ ಕ್ಷೇತ್ರ, ಮನೋರಂಜನೆ/ಗೇಮಿಂಗ್‌, ಕೈಗಾರಿಕಾ ಕ್ಷೇತ್ರಗಳಲ್ಲಿ ವಿವಿಧ ಉದ್ದೇಶಗಳಿಗೆ ಸ್ಮಾರ್ಟ್‌ ಕನ್ನಡಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬಹುದು ಎಂಬುದು ತಂತ್ರಜ್ಞರ ಅಭಿಮತ.

ಈ ಸಾಧನದಿಂದಾಗುವ ಪ್ರಯೋಜನದಂತೆ ಅನನುಕೂಲಗಳು, ಸವಾಲುಗಳೂ ಇವೆ. ಬಳಕೆದಾರರ ಖಾಸಗಿತನ ರಕ್ಷಣೆ, ಸುರಕ್ಷತೆ ಕಾಪಾಡುವುದು ದೊಡ್ಡ ಸವಾಲು. ಸ್ಮಾರ್ಟ್‌ ಕನ್ನಡಕಗಳ ದುರ್ಬಳಕೆಯ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಸಮಾಜ ಘಾತುಕ ಶಕ್ತಿಗಳು ವಿದ್ವಂಸಕ ಕೃತ್ಯಗಳಿಗೂ ಬಳಸುವ ಸಾಧ್ಯತೆಯೂ ಇದೆ. ಹಾಗಾಗಿ, ಸೂಕ್ಷ್ಮ ಸ್ಥಳಗಳಲ್ಲಿ ಇವುಗಳ ಬಳಕೆ ಅಪಾಯಕಾರಿಯೂ ಆಗಬಹುದು. ಕಣ್ಣುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನೂ ಬೀರಬಹುದು.

ಸ್ಮಾರ್ಟ್‌ ಕನ್ನಡಕಗಳು ಈಗ ಬಾಲ್ಯಾವಸ್ಥೆಯಲ್ಲಿವೆ. ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ಲಭ್ಯವಿವೆಯಷ್ಟೇ. ಈ ಹೊಸ ಕ್ರಾಂತಿಕಾರಕ ತಂತ್ರಜ್ಞಾನ ಬೆಳೆಯಲು ಹೆಚ್ಚು ಸಮಯ ಬೇಕಾಗಿಲ್ಲ. ಒಂದೆರಡು ವರ್ಷಗಳ ಕಾಯುವಿಕೆ ಸಾಕು. ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ವಾಚ್‌ಗಳ ಮಾದರಿಯಲ್ಲಿ ‘ಸ್ಮಾರ್ಟ್‌ ಕನ್ನಡಕ‘ಗಳು ನಮ್ಮ ಮುಖವನ್ನು ಅಲಂಕರಿಸುವ ಸಮಯ ದೂರವಿಲ್ಲ ಎಂಬುದು ಸತ್ಯ. 

ವಿಆರ್‌ ಹೆಡ್‌ಸೆಟ್‌ಗಳ ಮುಂದುವರಿದ ರೂಪ

ಸ್ಮಾರ್ಟ್‌ ಕನ್ನಡಕಗಳು ತಲೆಗೆ ಧರಿಸಬಹುದಾದ (ಹೆಡ್‌ ಮೌಂಟೆಡ್‌) ವರ್ಚುವಲ್‌ ರಿಯಾಲಿಟಿ (ವಿಆರ್‌) ಸಾಧನಗಳ ಮುಂದುವರಿದ ರೂಪ. ಆ್ಯಪಲ್‌ ಮೆಟಾ ಮೈಕ್ರೊಸಾಫ್ಟ್‌ ಸೇರಿದಂತೆ ಹಲವು ತಂತ್ರಜ್ಞಾನ ಸಂಸ್ಥೆಗಳು ಈಗಾಗಲೇ ವಿಆರ್‌ ಹೆಡ್‌ಸೆಟ್‌ಗಳನ್ನು ಮಾರಾಟ ಮಾಡುತ್ತಿವೆ. ಉದಾಹರಣೆಗೆ ಆ್ಯಪಲ್‌ ಕಂಪನಿಯು ‘ವಿಷನ್‌-ಪ್ರೊ‘ ಎಂಬ ವಿಆರ್‌ ಸಾಧನವನ್ನು ಪರಿಚ‌ಯಿಸಿದೆ. ಮೆಟಾವು ʼಮೆಟಾ ಕ್ವೆಸ್ಟ್‌ʼ ಎಂಬ ಸಲಕರಣೆಯನ್ನು ಅಭಿವೃದ್ಧಿಪಡಿಸಿದೆ.  ಮೈಕ್ರೊಸಾಪ್ಟ್‌ನ ʼಹಾಲೋಲೆನ್ಸ್‌2ʼ ಜನಪ್ರಿಯವಾಗಿದೆ.

ಕಂಪ್ಯೂಟರ್‌ಗಳಲ್ಲಿ ಸೃಷ್ಟಿಸಿದ ವಿಚಾರಗಳನ್ನು ಕಣ್ಣ ಮುಂದೆಯೇ ದೊಡ್ಡ ಪರದೆಯಲ್ಲಿ 3ಡಿ ಆಯಾಮದಲ್ಲಿ ಪ್ರದರ್ಶಿಸಿ ಎಲ್ಲವೂ ನಮ್ಮ ಕಣ್ಣಳತೆ ದೂರದಲ್ಲೇ ನಡೆಯುತ್ತಿದೆಯೇನೋ ಎಂಬ ಮಿಥ್ಯಾವಾಸ್ತವ ಭಾವನೆಯನ್ನು ಜನರಲ್ಲಿ ಬಿತ್ತುವ ಮತ್ತು ಡಿಜಿಟಲ್‌ ಸಾಧನಗಳೊಂದಿಗೆ ಸಂವಾದ ಸಾಧ್ಯವಾಗಿಸುವ ಈ ಸಾಧನಗಳು ಮನೋರಂಜನೆ ಶಿಕ್ಷಣ ಉದ್ದಿಮೆ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT