ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Tech Summit | ಮುಖ ನೋಡಿ ದೇಹಾರೋಗ್ಯ ತಪಾಸಣೆ ಮಾಡುವ ತಂತ್ರಾಂಶ

ಕೃತಿಕ ಬುದ್ದಿಮತ್ತೆ ತಂತ್ರಜ್ಞಾನದ ಚಮತ್ಕಾರ
Published 30 ನವೆಂಬರ್ 2023, 19:30 IST
Last Updated 30 ನವೆಂಬರ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ ಮನಸ್ಸಿನ ಕನ್ನಡಿ ಎಂಬಂತೆ, ಮುಖ ದೇಹದ ಆರೋಗ್ಯದ ಕನ್ನಡಿಯೂ ಹೌದು ಎಂಬುದನ್ನು ಪುಣೆ ಮೂಲದ ನುವರ್ಸ್ ಹೆಲ್ತ್ ಸೊಲೂಷನ್ಸ್‌ ಕಂಪನಿಯ ತಂತ್ರಾಂಶ ಸಾಬೀತು ಮಾಡಿದೆ.

ಇಲ್ಲಿನ ಅರಮನೆ ಆವರಣದಲ್ಲಿ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿರುವ ನವೋದಯ ಆವರಣದಲ್ಲಿ ಈ ತಂತ್ರಾಂಶವನ್ನು ಕಂಪನಿ ಪ್ರದರ್ಶನಕ್ಕಿಟ್ಟಿದೆ. ಮೇಳಕ್ಕೆ ಬಂದವರು ಮಳಿಗೆಯಲ್ಲಿರುವ ಮೊಬೈಲ್‌ಗಳಿಗೆ ಮುಖ ತೋರಿಸಿ ತಮ್ಮ ದೇಹದ ಸಾಮರ್ಥ್ಯವನ್ನು ಅರಿತು ಬೆರಗಾಗುತ್ತಿದ್ದಾರೆ.

ಆರೋಗ್ಯ ಕ್ಷೇತ್ರದ ತಂತ್ರಾಂಶ ಅಭಿವೃದ್ಧಿಪಡಿಸುತ್ತಿರುವ ನುವರ್ಸ್‌ ಕಂಪನಿಯು ನುಎಐ ಎಂಬ ತಂತ್ರಾಂಶ ಅಭಿವೃದ್ಧಿ ಕಿಟ್ ಪರಿಚಯಿಸಿದೆ. ಮೊಬೈಲ್‌ನ ಫ್ರಂಟ್‌ ಕ್ಯಾಮೆರಾ ಮೂಲಕ ಮುಖವನ್ನು ಒಂದು ನಿಮಿಷ ತದೇಕಚಿತ್ತದಿಂದ ನೋಡುವ ಈ ತಂತ್ರಾಂಶ, ವ್ಯಕ್ತಿಯ ರಕ್ತದೊತ್ತಡ, ಆಮ್ಲಜನಕ ಹೀರುವಿಕೆ ಪ್ರಮಾಣ, ರಕ್ತದಲ್ಲಿನ ಸಕ್ಕರೆ ಅಂಶ, ಹಿಮೊಗ್ಲೋಬಿನ್‌ ಪ್ರಮಾಣ, ಹೃದಯ ಬಡಿತ, ಶ್ವಾಸಕೋಶದ ಸಾಮರ್ಥ್ಯ, ಉಸಿರಾಟ ಕ್ರಿಯೆಯನ್ನು ಗ್ರಹಿಸಿ ಅದರ ಮೌಲ್ಯವನ್ನು ಪರದೆ ಮೇಲೆ ಮೂಡಿಸುವ ಸಾಮರ್ಥ್ಯ ಹೊಂದಿದೆ.

ಈ ತಂತ್ರಾಂಶ ಕುರಿತು ಮಾಹಿತಿ ನೀಡಿದ ಪೀಯೂಷ್ ಪಾಟೀಲ್, ‘ಕೋವಿಡ್ ಸಂದರ್ಭದಲ್ಲಿ ಬೆರಳಿನ ತುದಿಗಿಡುತ್ತಿದ್ದ ಆಕ್ಸಿಮೀಟರ್‌ನಂತೆ ಅಥವಾ ಕೈಗೆ ಕಟ್ಟುವ ಸ್ಮಾರ್ಟ್‌ ವಾಚ್‌ನಂತೆಯೇ ಈ ತಂತ್ರಾಂಶವು ಕ್ಯಾಮೆರಾ ಮೂಲಕ ಕೆನ್ನೆ ಮೇಲೆ ರಕ್ತ ಪರಿಚಲನೆಯನ್ನು ಗಮನಿಸಿ ಮಾಹಿತಿ ನೀಡುತ್ತದೆ. ಕಂಪನಿಯ ಸಂಶೋಧಕರ ತಂಡದ ಸತತ ಪ್ರಯತ್ನದ ಫಲವಾಗಿ ’ನೂಎಐ‘ ಅಭಿವೃದ್ಧಿಪಡಿಸಲಾಗಿದೆ. ಇದರ ನಿಖರತೆ ಶೇ 95ರಷ್ಟು ಎಂಬುದು ಸಾಬೀತಾಗಿದೆ’ ಎಂದರು.

‘ಕಂಪನಿಗಳು, ಆಸ್ಪತ್ರೆಗಳು ತಮ್ಮ ನೌಕರರ ಸರಳ ಹಾಗೂ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಲು ಇದನ್ನು ಬಳಸಬಹುದು. ನೂವರ್ಸ್‌ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್ ಕಿಟ್‌ ಅನ್ನು ಬಳಸಿಕೊಂಡು ಯಾವುದೇ ಕಂಪನಿ ತಮ್ಮದೇ ಆದ ತಂತ್ರಾಂಶ ಅಭಿವೃದ್ಧಿಪಡಿಸಬಹುದು. ತಪಾಸಣೆಯಿಂದ ಲಭ್ಯವಾಗುವ ಆರೋಗ್ಯ ಮಾಹಿತಿ ಗಂಭೀರ ಸ್ವರೂಪದ್ದಾಗಿದ್ದರೆ, ಮುಂದೆ ಹೆಚ್ಚಿನ ಪರೀಕ್ಷೆಗೆ ಒಳಗಾಗಬಹುದು. ಹೀಗಾಗಿ ಪ್ರಾಥಮಿಕ ತಪಾಸಣೆಗೆ ನುಎಐ ಅತ್ಯಂತ ಪರಿಣಾಮಕಾರಿ’ ಎಂದು ಪೀಯೂಷ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT