ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಆ್ಯಪ್– ಮಾತು ಕೇಳಿಸಿಕೊಳ್ಳಿ , ನಿಮ್ಮದೂ ಹೇಳಿಕೊಳ್ಳಿ

Last Updated 20 ಜೂನ್ 2018, 20:12 IST
ಅಕ್ಷರ ಗಾತ್ರ

ವ್ಯಕ್ತಿಗಿಂತ ವಿಷಯ ಮುಖ್ಯ ಎನಿಸಿದಾಗ ನಿಮ್ಮ ನೆರವಿಗೆ ಬರುವ ಒಂದೇ ಒಂದು ಆ್ಯಪ್‌ - NammApp. ಇಲ್ಲಿ ಅಡ್ಡ ಹೆಸರಿನಲ್ಲಿ ಮನಸ್ಸು ಬಿಚ್ಚಿ ಮಾತನಾಡಬಹುದು. ಎಲ್ಲರನ್ನೂ ತಲುಪಬಹುದು. ಬೇರೆಯವರ ಮನದಾಳದ ಮಾತುಗಳನ್ನು ಕೇಳಿಸಿಕೊಳ್ಳಬಹುದು, ನಿಮ್ಮ ಮಾತುಗಳನ್ನೂ ಹೇಳಿಕೊಳ್ಳಬಹುದು. NammApp ಸದ್ಯಕ್ಕೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಸಿಗುತ್ತೆ, ಡೌನ್ ಲೋಡ್ ಮಾಡಿ, ಮೊಬೈಲ್‌ಗೆ ಹಾಕಿಕೊಳ್ಳಿ!

ಮೈಸೂರಿನ ಎಂಜಿನಿಯರ್‌ಗಳಾದ ಬಿ.ಆರ್.ಕಿರಣ್‌ ಹಾಗೂ ವೈ.ಎಸ್.ಅಲಕನಂದಾ ಸಿದ್ಧಪಡಿಸಿರುವ ‘ನಮ್ಮ ಆ್ಯಪ್’ ಎಂಬ ಕನ್ನಡದ ಹೊಸ ಮೊಬೈಲ್ ಅಪ್ಲಿಕೇಷನ್ ಬಳಕೆಗೆ ಬಳಕೆದಾರರನ್ನು ಹೀಗೆ ಸ್ವಾಗತಿಸಲಾಗುತ್ತಿದೆ. ಗೂಗಲ್‌ನಲ್ಲಿ namma app.com ಮೇಲೆ ಕ್ಲಿಕ್ ಮಾಡಿದರೆ ಇಂಥ ಅನೇಕ ಸಾಲುಗಳು ನಮ್ಮನ್ನು ಸ್ವಾಗತಿಸುತ್ತವೆ.

ಹೆಸರೇ ಹೇಳುವಂತೆ ಇದು ಜಾಲತಾಣವಲ್ಲ, ಸಾಮಾಜಿಕ ಪ್ರಕಾಶನ. ಅಂದರೆ, ಬಳಕೆದಾರರು ತಮಗೆ ಅನ್ನಿಸಿದ್ದನ್ನು ಇಲ್ಲಿ ಬರೆದು ಪ್ರಕಟಿಸಬಹುದು. ಜನಸಾಮಾನ್ಯರಿಗೆ ಆಪ್ತವಾದ, ಕನ್ನಡದಲ್ಲೇ ಬರೆಯಲು ಅವಕಾಶ ಕಲ್ಪಿಸಲಾಗಿದೆ. ವಿಷಯಾಧಾರಿತ ಚರ್ಚೆಗಳು ನಡೆಯುತ್ತವೆ. ಮಾಹಿತಿ ಪೋಸ್ಟ್ ಮಾಡುವವರೇ ಸಂಪಾದಕರು. ವೋಟ್ ಮಾಡುವ ಮೂಲಕ ಜನರೇ ಪೋಸ್ಟ್ ಹಾಗೂ ಕಾಮೆಂಟುಗಳ ಗುಣಮಟ್ಟ ತೀರ್ಮಾನಿಸುತ್ತಾರೆ. ಅಡ್ಡಹೆಸರು ಬಳಸಿ, ಹಿಂಜರಿಕೆಯಿಲ್ಲದೆ ಮಾತಾಡಬಹುದು. ಸ್ಥಾನಮಾನ ಗಳಿಸಿಕೊಳ್ಳಬಹುದು..!

ಅರೆ, ಹೀಗೆ ಸಾರ್ವಜನಿಕವಾಗಿ ಬರೆದುಕೊಳ್ಳಲು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್‌ಗಳು ಇವೆಯಲ್ಲಾ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಬಹುದು. ನಿಜ, ಅವೆರಡೂ ಇವೆ. ಆದರೆ, ಆ ಸಾಮಾಜಿಕ ಜಾಲತಾಣಗಳಲ್ಲಿ ಅವುಗಳದ್ದೇ ಆದ ಮಿತಿಗಳಿವೆ. ಫೇಸ್‌ಬುಕ್ ಸ್ನೇಹಿತರಿಗೆ ಮಾತ್ರ. ಫೇಸ್‌ಬುಕ್‌ ಖಾತೆಯಲ್ಲಿ ಸ್ನೇಹಿತರ ಸಂಪರ್ಕಗಳಿರಬೇಕು. ಅದರಲ್ಲಿ ಪ್ರಕಟಿಸುವ ಪೋಸ್ಟ್‌ಗಳನ್ನು ಸ್ನೇಹಿತರು ಮಾತ್ರ ನೋಡಬಲ್ಲರು. ಆದರೆ, ಎಲ್ಲ ಸ್ನೇಹಿತರಿಗೂ ಈ ಪೋಸ್ಟ್‌ಗಳು ಕಾಣಿಸಿಕೊಳ್ಳುವುದಿಲ್ಲ.

ಟ್ವಿಟರ್‌ನಿಂದ ನಿಜವಾದ ಲಾಭ ಪಡೆದುಕೊಳ್ಳುತ್ತಿರುವವರು ರಾಜಕಾರಣಿಗಳು, ತಾರೆಯರು ಹಾಗೂ ಪತ್ರಕರ್ತರು ಮಾತ್ರ. ಜನಸಾಮಾನ್ಯರು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದರೆ ನೋಡಲು ಯಾರೂ ಇರುವುದಿ‌ಲ್ಲ! ಹಾಗಾಗಿ, ಇಲ್ಲಿ ಜನಸಾಮಾನ್ಯರ ಕೆಲಸ ಜನಪ್ರಿಯರ ಟ್ವೀಟ್‌ಗಳನ್ನು ನೋಡಿಕೊಂಡು ಚಪ್ಪಾಳೆ ಹೊಡೆಯುವುದೇ ಆಗಿದೆ.

ಈ ಎರಡೂ ಸಾಮಾಜಿಕ ಜಾಲತಾಣಗಳ ಮಿತಿಗಳನ್ನು ಗಮನಿಸಿದ ಮೈಸೂರಿನ ಎಂಜಿನಿಯರ್‌ಗಳು ‘ನಮ್ಮ ಆ್ಯಪ್’ ಅಭಿವೃದ್ಧಿಪಡಿಸಿ­ದ್ದಾರೆ. ಈ ಅಪ್ಲಿಕೇಷನ್‌ನಲ್ಲಿ ಬಳಕೆದಾರರು ಫೇಸ್‌ಬುಕ್‌ ಅಥವಾ ಟ್ವಿಟರ್‌ನಂತೆ ಇಲ್ಲಿ ನಿಜವಾದ ಹೆಸರುಗಳನ್ನು ಬಳಸಲೇಬೇಕು ಎಂದೇನೂ ಇಲ್ಲ. ಬದಲಿಗೆ, ಅಡ್ಡ ಹೆಸರನ್ನು ಇಟ್ಟುಕೊಂಡರೂ ಆಯಿತು. ಹಾಗಾಗಿ, ಈ ಅಪ್ಲಿಕೇಷನ್‌ನ ಮೂಲಕ ಬಳಕೆದಾರ ತನಗೆ ಅನ್ನಿಸಿದ್ದನ್ನು ಬರೆಯುವ ಸ್ವಾತಂತ್ರ್ಯದ ಜತೆಗೆ ತನ್ನ ಅಸ್ತಿತ್ವವನ್ನು ಗೌಪ್ಯವಾಗಿ ಇಟ್ಟುಕೊಳ್ಳುವ ಅವಕಾಶವೂ ಇದೆ. ಹಾಗಾಗಿ ‘ನಮ್ಮ ಆ್ಯಪ್’, ಫೇಸ್‌ಬುಕ್, ಟ್ವಿಟರ್‌ಗೆ ಪರ್ಯಾಯದಂತೆ ಕಾಣುತ್ತಿದೆ.

ಎಲ್ಲರಿಗೂ ತಲುಪುವ ಮಾಧ್ಯಮ:
ಫೇಸ್‌ಬುಕ್‌ನಲ್ಲಿ ಪ್ರತಿಯೊಬ್ಬ ಬಳಕೆದಾರರರಿಗೂ ನ್ಯೂಸ್ ಫೀಡ್ ಅವರವರ ಆಯ್ಕೆಯಾಗಿರುತ್ತದೆ. ಬಳಕೆಯ ವಿಧಾನ, ಇಷ್ಟಗಳಿಗೆ ತಕ್ಕಂತೆ ಪ್ರತ್ಯೇಕವಾಗಿರುತ್ತದೆ. ಆದರೆ, ‘ನಮ್ಮ ಆ್ಯಪ್‌’ ಹಾಗಲ್ಲ. ಇದು ವೃತ್ತಪತ್ರಿಕೆಯಿದ್ದಂತೆ. ಏನೇ ಬರೆದರೂ ಅದು ಎಲ್ಲರಿಗೂ ಕಾಣಿಸುತ್ತದೆ. ಯಾರೇ ಏನೇ ಪೋಸ್ಟ್‌ ಮಾಡಿದರೂ ಅದು ಅಪ್ಲಿಕೇಷನ್‌ ಬಳಸುತ್ತಿರುವ ಪ್ರತಿಯೊಬ್ಬರಿಗೂ ಸಿಗುತ್ತದೆ. ಹಾಗಾಗಿ, ಫೇಸ್‌ಬುಕ್‌ ಹಾಗೂ ಟ್ವಿಟರ್‌ಗಳ ಮಿತಿಯನ್ನು ಮೀರಿ ಹೊಸ ಸ್ವರೂಪ, ಗುಣಲಕ್ಷಣಗಳನ್ನು ಇದು ಹೊಂದುವುದು ಸಾಧ್ಯವಾಗಿದೆ. ಇಲ್ಲಿ ಫಾಲೋವರ್ಸ್ ಅಥವಾ ಫ್ರೆಂಡ್ಸ್ ಎನ್ನುವ ಪರಿಕಲ್ಪನೆಯೇ ಇಲ್ಲದಿರುವುದರಿಂದ ‘ನಮ್ಮ ಆ್ಯಪ್‌’ ಒಂದು ಸಾಮಾಜಿಕ ಜಾಲತಾಣ ಅಲ್ಲ; ಇದೊಂದು ಸಾಮಾಜಿಕ ಪ್ರಕಾಶನ.

ಗುಂಪುಗಾರಿಕೆಗೆ ಕಡಿವಾಣ:
‘ನಮ್ಮ ಆ್ಯಪ್‌’ನಲ್ಲಿ ವ್ಯಕ್ತಿ ಮುಖ್ಯವಲ್ಲ, ವಿಷಯ ಮುಖ್ಯ. ಆ ವಿಷಯದ ಬಗ್ಗೆ ನಡೆಯುವ ಚರ್ಚೆ ಮುಖ್ಯ. ಎಲ್ಲರೂ ಅಡ್ಡಹೆಸರಿನಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳುವುದರಿಂದ ಫೇಸ್‌ಬುಕ್ ಹಾಗೂ ಟ್ವಿಟರ್‌ಗಳಲ್ಲಿ ನಡೆಯುವಂತೆ ‘ನಮ್ಮ ಆ್ಯಪ್‌’ನಲ್ಲಿ ಗುಂಪುಗಾರಿಕೆ ನಡೆಯುವುದಿಲ್ಲ. ಎಲ್ಲ ಅಭಿಪ್ರಾಯದವರೂ ತಮ್ಮ ದೃಷ್ಟಿಕೋನವನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು ಮತ್ತು ತಮ್ಮ ನಿಲುವುಗಳನ್ನು ಬದಲಿಸಿಕೊಳ್ಳಲೂಬಹುದು. ನಿಜಕ್ಕೂ ಎಲ್ಲರೂ ಕೂಡಿ ಚರ್ಚಿಸಬಹುದು. ಈ ಲಾಭಗಳು ಫೇಸ್‌ಬುಕ್, ಟ್ವಿಟರ್ ಮುಂತಾದ ಜಾಲತಾಣಗಳಲ್ಲಿ ಸಿಗುವುದಿಲ್ಲ.

ಬಳಕೆದಾರರ ‘ಸ್ಥಾನಮಾನ’:
ಈ ಅಪ್ಲಿಕೇಷನ್‌ನ ವಿಶೇಷತೆಯೆಂದರೆ ಇಲ್ಲಿ ಬಳಕೆದಾರರು ಪೋಸ್ಟ್ ಮಾಡುವ ಹಾಗೂ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ‘ಸ್ಥಾನಮಾನ’ವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು. ಬಳಕೆದಾರ ಪ್ರಕಟಿಸಿದ್ದನ್ನು ಇತರೆ ಬಳಕೆದಾರರು ಓದಿ ‘ಅಪ್ ವೋಟ್’ ಮಾಡಿದರೆ ಆ ಪೋಸ್ಟ್‌ ಅಪ್ಲಿಕೇಷನ್‌ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದುಕೊಳ್ಳುತ್ತದೆ. ಇಷ್ಟಪಡದೇ ‘ಡೌನ್ ವೋಟ್’ ಮಾಡಿದರೆ ಕೆಳಗೆ ಹೋಗುತ್ತದೆ. ಅನಿಸಿಕೆಗಳೂ ಹೀಗೆಯೇ. ಪೋಸ್ಟ್ ಹಾಗೂ ಅನಿಸಿಕೆಗಳಿಗೆ ಬಿದ್ದ ವೋಟುಗಳ ಆಧಾರದ ಮೇಲೆ ಬಳಕೆದಾರನ ಸ್ಥಾನಮಾನ ನಿರ್ಧಾರವಾಗುತ್ತದೆ. ಫೇಸ್‌ಬುಕ್ ಹಾಗೂ ಟ್ವಿಟರ್‌ಗಳಲ್ಲಿ ಬರುವ ಪೋಸ್ಟುಗಳು ಗುಣಮಟ್ಟದ ಕ್ರಮದಲ್ಲಿರುವುದಿಲ್ಲ. ಆದರೆ ‘ನಮ್ಮ ಆ್ಯಪ್‌’ನಲ್ಲಿ ಇರುತ್ತದೆ. ಈಗಾಗಲೇ ಹೇಳಿದಂತೆ ವೋಟ್ ಆಧಾರದ ಮೇಲೆ ಪೋಸ್ಟ್‌ಗಳ ಗುಣಮಟ್ಟ ನಿರ್ಧಾರವಾಗುತ್ತದೆ. ಹೊಸ ಬಳಕೆದಾರರ ಸ್ಥಾನಮಾನ 100 ಪಾಯಿಂಟ್ ತಲುಪಿದಾಗ ಅಪ್ಲಿಕೇಷನ್‌ ಕಡೆಯಿಂದ ಒಂದು ಟಿ–ಶರ್ಟ್‌ ಉಚಿತವಾಗಿ ಸಿಗುತ್ತದೆ (ಗಮನಿಸಿ, ಇದು ಟಿ-ಶರ್ಟುಗಳು ಇರುವವರೆಗೆ ಮಾತ್ರ).

ವಿಷಯ ಕೇಂದ್ರಿತ ಮಾಹಿತಿ :
ನಮ್ಮ ಆ್ಯಪ್‌ನಲ್ಲಿ ವಿಷಯ ಕೇಂದ್ರಿತವಾದ ಪೋಸ್ಟ್‌ಗಳು ಮಾತ್ರ ಇರುತ್ತವೆ, ವ್ಯಕ್ತಿಕೇಂದ್ರಿತ ಪೋಸ್ಟ್‌ಗಳು ಇರುವುದಿಲ್ಲ. ಅಂದರೆ ಬಳಕೆದಾರ ತನ್ನ ಫೋಟೊ, ಸಂಪರ್ಕ ಮಾಹಿತಿ ಮುಂತಾದವುಗಳನ್ನು ಇಲ್ಲಿ ಪ್ರಕಟಿಸುವಂತಿಲ್ಲ. ಪೋಸ್ಟ್‌ಗಳು ಕೇವಲ ಬರಹ, ಫೋಟೊ ಅಥವಾ ವಿಡಿಯೊ ಸಹ ಆಗಿರಬಹುದು. ಪೋಸ್ಟ್‌ ಯಾರು ಹಾಕಿದರು ಅನ್ನುವುದು ಮುಖ್ಯವಲ್ಲ, ಅದರಲ್ಲಿ ಏನಿದೆ ಅನ್ನುವುದು ಮುಖ್ಯ. ಹಾಗಾಗಿ, ಇಲ್ಲಿ ಚರ್ಚೆಗೆ ಸಾಕಷ್ಟು ಅವಕಾಶವಿದೆ. ಪೋಸ್ಟ್ ಮಾಡುವಾಗಲೇ ಲಭ್ಯವಿರುವ ಬೇಕಾದ ವಿಷಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪ್ರಕಾಶಿಸಿದರೆ ಆಯಿತು. ಅಂತೆಯೇ, ಪೋಸ್ಟನ್ನು ನೋಡುವಾಗಲೂ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಉದಾಹರಣೆಗೆ ಆರೋಗ್ಯ, ತಮಾಷೆ, ಪ್ರೀತಿ– ಪ್ರೇಮ, ಸಂಬಂಧಗಳು ಇತ್ಯಾದಿ. ಈ ಪೋಸ್ಟ್‌ಗಳು ಜನಪ್ರಿಯತೆ ಮೇಲೆ ಸ್ಥಾನಮಾನದಲ್ಲಿ ಏರಿಳಿಯುತ್ತಿರುತ್ತವೆ.‌

ವಿವಿಧ ವಿಭಾಗಗಳಲ್ಲಿ ಮಾಹಿತಿ :
‘ನಮ್ಮ ಆ್ಯಪ್’ನಲ್ಲಿ ಹಲವು ವಿಭಾಗಗಳ ಮೂಲಕ ಮಾಹಿತಿ ಹಂಚಿಕೊಳ್ಳಲು ಅವಕಾಶವಿದೆ. ಅದರಲ್ಲಿ ಆರೋಗ್ಯ, ತಮಾಷೆ, ಪ್ರೀತಿ-ಪ್ರೇಮ, ಅಧ್ಯಾತ್ಮ, ಸಂಬಂಧ, ಊಟ-ತಿಂಡಿ, ಕಷ್ಟ-ಸುಖ, ಸಿನಿಮಾ-ಟಿವಿ-ವಿಡಿಯೊ, ವಿಚಿತ್ರ, ಅಂದ-ಚಂದ, ಪ್ರಕೃತಿ-ಕೃಷಿ, ನಾಡು-ನುಡಿ, ಉಪಯುಕ್ತ ಮಾಹಿತಿ, ಪ್ರಾಣಿ-ಪಕ್ಷಿ, ಸಮಾಜ ಸೇವೆ, ಆಟ, ಗೆಳೆತನ, ಮಕ್ಕಳು, ಹೀಗೆ ಎಲ್ಲ ವರ್ಗ, ವಯೋಮಾನಕ್ಕೂ ಅನುಕೂಲವಾಗುವಂತೆ ವಿಭಾಗಗಳಿವೆ. ಆಸಕ್ತಿಯುಳ್ಳವರು ತಮ್ಮ ತಮ್ಮ ವಿಭಾಗಗಳಲ್ಲಿ ಬರೆದುಕೊಳ್ಳಬಹುದು. ಬರೆದಿದ್ದನ್ನು ಓದಿಕೊಂಡು ಪ್ರತಿಕ್ರಿಯಿಸಬಹುದು.

**
ಗೂಗಲ್ ಪ್ಲೇ ಸ್ಟೋರ್‌ನಲ್ಲಿ:ಈ ಅಪ್ಲಿಕೇಷನ್‌ ಅನ್ನು ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಲು ಪ್ಲೇ ಸ್ಟೋರ್‌ಗೆ ಭೇಟಿ ಮಾಡಿ ‘ನಮ್ಮ ಆ್ಯಪ್‌’ ಅಥವಾ ‘NammApp’ ಎಂದು ಹುಡುಕಬೇಕು. ಮೇಲಿನ ಎರಡು ವಿಧಾನಗಳು ಕಷ್ಟವೆನಿಸಿದರೆ ನಂಬರ್‌ 1800–123–5906ಗೆ ‘ಮಿಸ್ಡ್ ಕಾಲ್’ ಮಾಡಿದರೆ ಆಯಿತು, ಡೌನ್‌ಲೋಡ್ ಕೊಂಡಿ ಇರುವ ಎಸ್‌ಎಂಎಸ್ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT