ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶದಿಂದ ಸೂಪರ್ ಮಾರ್ಕೆಟ್‌ಗೆ ಬರಲಿದೆ ಕೃತಕ ಮೀನು ಮಾಂಸ!

Last Updated 11 ಅಕ್ಟೋಬರ್ 2019, 7:00 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಕೇವಲ ಜೀವಕೋಶಗಳನ್ನು ಬಳಸಿ ಮಾಂಸ ಉತ್ಪಾದಿಸುವುದು ಈಗ ಬರೇ ವೈಜ್ಞಾನಿಕ ಪರಿಕಲ್ಪನೆಯಾಗಿ ಉಳಿದಿಲ್ಲ ಮತ್ತು ಗಾಳಿಯಲ್ಲಿ ಕೈಯಾಡಿಸಿ ಮಾಂಸವನ್ನು ಕೈಯಲ್ಲಿ ಬರುವಂತೆ ಮಾಡುವುದು ಯಕ್ಷಿಣೀ ವಿದ್ಯೆಯಾಗಿ ಉಳಿದಿಲ್ಲ. ರಷ್ಯಾದ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರದಿಂದ ಇದನ್ನು ಸಾಧ್ಯವಾಗಿಸಿದ್ದಾರೆ ಎಂದರೆ ನೀವು ನಂಬಲೇಬೇಕು. ಬಾಹ್ಯಾಕಾಶದಲ್ಲಿ ಉತ್ಪಾದನೆಯಾದ ಮಾಂಸಾಹಾರ ಉತ್ಪನ್ನಗಳು ಇನ್ನು ಸೂಪರ್‌ಮಾರ್ಕೆಟ್‌ಗಳಲ್ಲಿ ಲಭ್ಯವಾಗುವ ದಿನಗಳು ದೂರವಿಲ್ಲ.

ಸೆಪ್ಟೆಂಬರ್ ತಿಂಗಳಲ್ಲಿ ಅಂತರಿಕ್ಷ ಕೇಂದ್ರದಲ್ಲಿ ನಡೆದ ಪರೀಕ್ಷಾರ್ಥ ಪ್ರಯೋಗಗಳ ಮೂಲಕ 3ಡಿ ಪ್ರಿಂಟರ್ ಬಳಸಿ, ದನ, ಮೊಲ ಮತ್ತು ಮೀನಿನ ಅಂಗಾಂಶಗಳನ್ನು ರಚಿಸಲಾಗಿದೆ.

ಈ ಹೊಸ ತಂತ್ರಜ್ಞಾನದ ಅನ್ವೇಷಣೆಯ ಮೂಲಕ, ಬಾಹ್ಯಾಕಾಶಕ್ಕೆ ದೀರ್ಘಕಾಲ ಪ್ರವಾಸ ಕೈಗೊಂಡು ಅಲ್ಲಿ ಅಧ್ಯಯನ ನಡೆಸಲು ಹೆಚ್ಚು ಕಾಲಾವಕಾಶ ದೊರೆಯುವಲ್ಲಿ ನೆರವಾಗಲಿದೆ ಎಂದು ಇಸ್ರೇಲ್‌ನ ನವ್ಯೋದ್ಯಮ 'ಆಲೆಫ್ ಫಾರ್ಮ್ಸ್'ನ ಮುಖ್ಯಸ್ಥ ಡಿಡೈರ್ ಟೌಬಿಯಾ ಹೇಳಿದ್ದಾರೆ. ಈ ಪರೀಕ್ಷಾರ್ಥ ಪ್ರಯೋಗಕ್ಕೆ ಜೀವಕೋಶಗಳನ್ನು ಒದಗಿಸಿದ್ದೇ ಈ ಸಂಸ್ಥೆ.

ಆದರೆ, ಈ ರೀತಿ ಅಂತರಿಕ್ಷದಲ್ಲಿ ಉತ್ಪಾದಿಸಿದ ಉತ್ಪನ್ನಗಳನ್ನು ಭೂಮಿಯಲ್ಲಿ ಮಾರಾಟ ಮಾಡುವುದೂ ನಮ್ಮ ಗುರಿ ಎಂದಿದ್ದಾರೆ ಡಿಡೈರ್.

ಸಾಂಪ್ರದಾಯಿಕ ಕೃಷಿ ಅಥವಾ ಹೈನುಗಾರಿಕೆಯ ಬದಲಾಗಿ ಈ ವಿಧಾನ ಬಳಸುವುದು ನಮ್ಮ ಉದ್ದೇಶವಲ್ಲ. ಹೈನುಗಾರಿಕೆಗೆ ಉತ್ತಮ ಪರ್ಯಾಯ ವಿಧಾನವೊಂದಿದೆ ಎಂಬುದನ್ನು ಪ್ರಚುರಪಡಿಸುವುದು ನಮ್ಮ ಉದ್ದೇಶ ಎಂದವರು ಹೇಳಿದ್ದಾರೆ.

ಹಸುವಿನ ಸ್ಟೆಮ್ ಸೆಲ್ಸ್ ಬಳಸಿ ಮೊದಲ ಬಾರಿಗೆ 2013ರಲ್ಲಿ ಬರ್ಗರ್ ಒಂದನ್ನು ರೂಪಿಸಲಾಗಿತ್ತು. ಇದನ್ನು ಮಾಡಿದವರು ಮಾಸ್ಟ್ರಿಚ್ ವಿವಿಯ ಡಚ್ ವಿಜ್ಞಾನಿ ಮಾರ್ಕ್ ಪೋಸ್ಟ್. ಆ ಬಳಿಕ ಈ ನಿಟ್ಟಿನಲ್ಲಿ ಹಲವಾರು ನವ್ಯೋದ್ಯಮ (ಸ್ಟಾರ್ಟಪ್) ಸಂಸ್ಥೆಗಳು ಈ ರೀತಿಯ ಮಾರುಕಟ್ಟೆಯ ಸುಧಾರಣೆಗೆ ಪ್ರಯತ್ನ ಪಟ್ಟಿದ್ದವು. ಆದರೆ, ಉತ್ಪಾದನಾ ವೆಚ್ಚ ಅತ್ಯಧಿಕವಾಗಿರುವುದರಿಂದಾಗಿ ಯಾವುದೇ ಉತ್ಪನ್ನಗಳು ಮಾರುಕಟ್ಟೆಗೆ ಬಂದಿಲ್ಲ.

ಈ ರೀತಿ ಕೃತಕವಾಗಿ ಉತ್ಪಾದಿಸಿದ ಮಾಂಸಕ್ಕೆ ಯಾವ ಹೆಸರಿಡುವುದು ಎಂಬುದು ಕೂಡ ಚರ್ಚೆಯ ವಿಷಯವಾಗಿದೆ. ಪ್ರಯೋಗಾಲಯ, ಕೃತಕ, ಜೀವಕೋಶಾಧಾರಿತ, ಸಂವರ್ಧಿತ ಮಾಂಸ... ಹೀಗೆ ಹಲವು ಹೆಸರುಗಳ ಬಗ್ಗೆ ಚರ್ಚೆಯಾಗುತ್ತಿದೆ.

ಆದರೆ, ಈ ಮಾಂಸದ ರುಚಿ ಹೇಗಿರುತ್ತದೆ ಎಂಬುದನ್ನು ಈಗಾಗಲೇ ಸವಿಯಲಾಗಿದೆ. ಬಹುಶಃ ಈ ವರ್ಷವೇ ಈ ಉತ್ಪನ್ನದ ವಾಣಿಜ್ಯೀಕರಣ ಪ್ರಾರಂಭವಾಗಲಿದೆ ಎಂದು ಕ್ಯಾಲಿಫೋರ್ನಿಯಾದ ಜಸ್ಟ್ ಕಂಪನಿಯ ಮುಖ್ಯಸ್ಥ ಜೋಷ್ ಟೆಟ್ರಿಕ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಜಸ್ಟ್ ಕಂಪನಿಯು ಜೀವಕೋಶದಿಂದ ಮಾಂಸ ಉತ್ಪಾದಿಸುವ ಕಾಯಕದಲ್ಲಿ ತೊಡಗಿಕೊಂಡಿದೆ.

ಪ್ರಯೋಗಾಲಯದಲ್ಲಿ ಬೆಳೆಸಿದ ಮಾಂಸವು ಕೈಗೆಟಕುವ ದರದಲ್ಲಿ ಸೂಪರ್ ಮಾರ್ಕೆಟ್‌ನಲ್ಲಿ ದೊರೆಯುವ ಪ್ರಕ್ರಿಯೆಗೆ 5ರಿಂದ 20 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಜತೆಗೆ ಇದರ ಉತ್ಪಾದನೆ, ಮಾರಾಟಕ್ಕೆ ನೀತಿ ನಿಯಮಾವಳಿಯೂ ರೂಪುಗೊಳ್ಳಬೇಕಿದೆ.

ಒಟ್ಟಿನಲ್ಲಿ ಇಂಥದ್ದೊಂದು ವಿಧಾನವು ಮಾಂಸಾಹಾರಿಗಳ ಬಯಕೆ ಈಡೇರಿಸುವಲ್ಲಿ ಶಕ್ತವಾದರೆ, ಪ್ರಾಣಿ ಹತ್ಯೆ ಕಡಿಮೆಯಾಗಬಹುದೆಂಬುದು ಪ್ರಾಣಿಪ್ರಿಯರ ಆಶಾವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT