ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 19: ಗೊಂದಲದಲ್ಲಿ ವೈದ್ಯವಿಜ್ಞಾನ

Last Updated 18 ಏಪ್ರಿಲ್ 2020, 11:57 IST
ಅಕ್ಷರ ಗಾತ್ರ

ಇನ್ನೇನು ಸಾವನ್ನೇ ಗೆಲ್ಲುವ ತವಕದಲ್ಲಿದ್ದ ಆಧುನಿಕ ವೈದ್ಯವಿಜ್ಞಾನಕ್ಕೆ ದಿಢೀರ್ ಸವಾಲಂತೆ ಬಂದೆರಗಿದ್ದು ಕೋವಿಡ್ 19. ಮಿಂಚಿನ ವೇಗದಲ್ಲಿ ಹರಡಬಲ್ಲ ಸಾಂಕ್ರಾಮಿಕತೆ ಒಂದೆಡೆಯಾದರೆ, ತೀವ್ರ ಸೋಂಕಿನ ರೋಗಲಕ್ಷಣಗಳು ವೈದ್ಯಕೀಯ ಸಮುದಾಯವನ್ನೇ ಗಲಿಬಿಲಿಗೊಳಿಸಿವೆ. ಈಗಾಗಲೇ ನಿಮಗೆ ಮಾಹಿತಿ ಇರುವಂತೆ, ಕೊರೊನಾ ಸೋಂಕು ತಗುಲಿದಾಗ ನೂರರಲ್ಲಿ ಸುಮಾರು ಎಂಭತ್ತು ಜನರಿಗೆ, ಸಾಮಾನ್ಯವಾದ ರೋಗಲಕ್ಷಣಗಳು ಮಾತ್ರವೇ ಉಂಟಾಗಿ ಸರಿಹೋಗುತ್ತವೆ. ಶೇ 20 ಜನರಲ್ಲಿ ಇದು ತೀವ್ರವಾದ ಕಾಯಿಲೆಯಾಗಿ ಉಲ್ಬಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ಕಂಡುಬರುತ್ತಿರುವ ರೋಗಲಕ್ಷಣಗಳಾಗಲಿ, ಉಪಚಾರಕ್ಕೆ ರೋಗಿಗಳು ಸ್ಪಂದಿಸುತ್ತಿರುವ ರೀತಿಯಾಗಲಿ ಇಂದಿನ ವೈದ್ಯಕೀಯ ಕ್ಷೇತ್ರವನ್ನು ಅಕ್ಷರಶಃ ಕಂಗಾಲಾಗಿಸಿವೆ.

ಮೊಟ್ಟಮೊದಲು ಪತ್ತೆಯಾದಾಗ ಕೋವಿಡ್ 19 ಮುಖ್ಯವಾಗಿ ಶ್ವಾಸಕೋಶದ ರೋಗವೆಂದೇ ನಂಬಲಾಗಿತ್ತು. ಆದರೆ ಇದನ್ನು ಇತರೆ ತೀವ್ರ ಶ್ವಾಸ–ಸಂಕಷ್ಟ ರೋಗಪುಂಜದ (ಎಆರ್‌ಡಿಎಸ್) ತರದಲ್ಲೇ ನಿಭಾಯಿಸುವ ಪ್ರಯತ್ನ ನಡೆಯಿತು. ಫಲಿತಾಂಶ ನಿಮಗೆ ಗೊತ್ತೇ ಇದೆ. ಸರ್ವೇಪರಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನೊಳಗೊಂಡ ಯುರೋಪು, ಅಮೇರಿಕದಲ್ಲಿ ಕೂಡ ಇದು ಯಶಸ್ವಿಯಾಗಲೇ ಇಲ್ಲ. ವೆಂಟಿಲೇಟರಿನಿಂದ ಕೃತಕ ಉಸಿರಾಟ ಕೊಟ್ಟರೂ, ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಏರದೇ ಜನ ಸಾವಿಗೀಡಾಗುತ್ತಿದ್ದುದು ಯೋಚನೆಗೀಡುಮಾಡಿತು. ಶ್ವಾಸಕೋಶದ ಜತೆಯಲ್ಲಿ, ಹೃದಯಕ್ಕೂ ಧಕ್ಕೆಯಾಗುತ್ತಿರುವ ಅಂಶವನ್ನೂ ಸಾಕಷ್ಟು ಮೊದಲೇ ಪರಿಗಣಿಸಲಾಗಿತ್ತು ಕೂಡ.

ನಂತರ ಪರಿಶೀಲಿಸಲಾಗಿ ಕಂಡುಬಂದಿದ್ದೇನೆಂದರೆ, ನೇರವಾಗಿ ಶ್ವಾಸಕೋಶಕ್ಕೆ ಹಾನಿಮಾಡುವುದಕ್ಕಿಂತ ಹೆಚ್ಚಾಗಿ ವೈರಸ್ಸು ಶ್ವಾಸಕೋಶದ (ಮತ್ತು ಇನ್ನಿತರ ಅಂಗಗಳ) ರಕ್ತನಾಳಗಳಿಗೆ ದಾಳಿಮಾಡುತ್ತಿದೆ ಎಂದು. ಅಲ್ಲಿನ ರಕ್ತವನ್ನು ಹೆಪ್ಪುಗಟ್ಟಿಸಿ ರಕ್ತಸಂಚಾರ ಮತ್ತು ಪ್ರಾಣವಾಯುವಿನ ವಿನಿಮಯಕ್ಕೆ ಅಡ್ಡಬರುತ್ತಿದೆ ಎಂದೂ, ಅದರಿಂದಾಗಿಯೇ ಶ್ವಾಸಕೋಶದ ತೊಂದರೆ ಕಾಣಬರುತ್ತಿದೆಯೆಂದೂ ಸ್ವಲ್ಪ ಸಮಯ ಭಾವಿಸಲಾಯಿತು.

ಇತ್ತೀಚೆಗೆ ವಿಶ್ವದ ವಿವಿಧೆಡೆಯಿಂದ ಕೇಳಿಬರುತ್ತಿರುವ ಅಭಿಪ್ರಾಯವೇನೆಂದರೆ, ಕೊರೊನಾ ವೈರಸ್ಸು, ಇನ್ನೂ
ಒಂದು ಹೆಜ್ಜೆ ಹಿಂದಕ್ಕೆ, ಅಂದರೆ ರಕ್ತಕಣಗಳಲ್ಲೇ ಮೂಲಭೂತವಾಗಿ ತೊಂದರೆ ಉಂಟುಮಾಡುತ್ತಿದೆಯೆಂಬುದು! ಕೆಂಪುರಕ್ತಕಣದೊಳಕ್ಕೆ ಹೊಕ್ಕು, ಅಲ್ಲಿನ ಹಿಮೊಗ್ಲೋಬಿನ್ನಿನ ಆಕೃತಿಯನ್ನು ಕೆಡಿಸಿ, ಅದರೊಳಗಿಂದ ಕಬ್ಬಿಣಾಂಶವನ್ನು ಬಿಡುಗಡೆಗೊಳಿಸುತ್ತಿರಬಹುದೇ ಎಂದು ಸದ್ಯಕ್ಕೆ ಸಂಶಯಿಸಲಾಗುತ್ತಿದೆ. ಅದಕೆಂದೇ ಕೃತಕ ಉಸಿರಾಟವು ಇತರ ಎಆರ್‌ಡಿಎಸ್‌ನಂತೆ ಇಲ್ಲಿ ಪರಿಣಾಮಕಾರಿಯಾಗದೇ ಹೋದದ್ದು ಮತ್ತು ಇನ್ನಿತರ ಪರೀಕ್ಷೆಗಳು ಈ ಮೊದಲು ಕಂಡರಿಯದಂತೆ ಇರುವುದು ಎಂದು ಮೇಲ್ನೋಟಕ್ಕೆ ತೋರುತ್ತಿದೆ.

ಸದ್ಯದ ಕೊರೊನಾ ಒಂದು ನವೀನವಾದ ವೈರಾಣುವಾಗಿದೆ. ಆದ್ದರಿಂದ ಅದರ ರೋಗಲಕ್ಷಣಗಳು ಸ್ವಲ್ಪಮಟ್ಟಿಗೆ ವ್ಯತ್ಯಾಸವಾಗಿರುವುದು ಸಹಜವಾಗಿತ್ತು. ಆದರೆ, ಇಷ್ಟೊಂದು ಅನಿರೀಕ್ಷಿತ ಅಂಶಗಳು, ತೀವ್ರರೋಗವನ್ನು ನಿಯಂತ್ರಿಸುವಲ್ಲಿನ ವೈಫಲ್ಯ, ಮತ್ತು ದಿನದಿಂದ ದಿನಕ್ಕೆ ವೈರಸ್ಸು ಮುಂದಿಡುತ್ತಿರುವ ಸವಾಲುಗಳು ವೈದ್ಯಲೋಕವನ್ನು ಬೇಸ್ತುಬೀಳಿಸುತ್ತಿವೆ. ಇದರ ಬಗ್ಗೆ ಈ ಮೊದಲಿನ ಅನುಭವ ಇಲ್ಲದ್ದು ಒಂದು ಕಡೆಯಾದರೆ, ಕೂಲಂಕಷವಾಗಿ ಅಭ್ಯಾಸಮಾಡಿ ಉತ್ತರ ಹುಡುಕಲು ಸಮಯವೇ ಕೊಡದೇ ಮಿಂಚಿನಂತೆ ಮೇಲೆರಗಿದ್ದು ಕೂಡ ಭಾರೀ ತೊಂದರೆಯಾಗಿದೆ.

ರೋಗ ಅರ್ಥವಾಗುವಲ್ಲೇ ಇಷ್ಟೊಂದು ಅಡೆತಡೆಗಳಿರುವಾಗ, ಅದರ ಚಿಕಿತ್ಸೆಯಲ್ಲಿ ಇನ್ನೆಷ್ಟು ಗೊಂದಲಗಳಿರಬೇಕು? ರೋಗ ತಡೆಗಟ್ಟಲಿಕ್ಕೆ ಲಸಿಕೆಯಂತೂ ಮೊದಲೇ ಇಲ್ಲ. ಚಿಕಿತ್ಸೆಗಂತ ನಿರ್ದಿಷ್ಟ ಔಷಧಿಯೂ ಇಲ್ಲ. ಮೇಲಾಗಿ, ರೋಗಿಯ ಶ್ವಾಸದ ತೊಂದರೆಯನ್ನು ನೀಗಿಸಿ ಬದುಕಿಸಬಲ್ಲ ವೆಂಟಿಲೇಟರು ಕೂಡ ಸಂಪೂರ್ಣ ಯಶಸ್ಸು ಕಾಣದಾಗಿದೆ. ಇಂತಹ ಸಂದರ್ಭದಲ್ಲಿ ವೈದ್ಯವಿಜ್ಞಾನ, ಹತ್ತು ಹಲವು ಚಿಕಿತ್ಸಾವಿಧಾನಗಳನ್ನು ಪ್ರಯತ್ನಿಸಿ ನೋಡುತ್ತಿದೆ; ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯಂತೆ.

ಚೀನಾದ ಅನುಭವದಿಂದ ಮೂಡಿದ ಅಭಿಪ್ರಾಯದಂತೆ, ಏಡ್ಸ್ ವೈರಸ್ಸಿಗೆ ಉಪಯೋಗಿಸುವ ಔಷಧಿಗಳನ್ನು ತೀವ್ರವಾದ ಕೊರೊನಾ ವೈರಸ್ಸಿನ ಸೋಂಕಿನಲ್ಲೂ ಉಪಯೋಗಿಸಲಾಗುತ್ತಿದೆ. ಅದರ ಪರಿಣಾಮ ಮಾತ್ರ ಅಷ್ಟಕ್ಕಷ್ಟೇ. ಕೆಂಪುರಕ್ತಕಣದೊಳಕ್ಕೆ ಹೊಕ್ಕು, ಮಲೇರಿಯಾ ರೋಗಾಣುವಿನೊಂದಿಗೆ ಹೋರಾಡುವ ಕ್ಲೊರೊಕ್ವಿನ್ ಮತ್ತು ಹೈಡ್ರಾಕ್ಸಿ-ಕ್ಲೊರೊಕ್ವಿನ್ ಚೀನಾದಲ್ಲಿ ಆಗಲೇ ತಕ್ಕಮಟ್ಟಿಗೆ ಪರಿಣಾಮಕಾರಿಯೆಂದು ಅಂದುಕೊಳ್ಳಲಾಗಿತ್ತು. ಸಾಕಷ್ಟು ಪುರಾವೆಗಳಿಲ್ಲದೇ ಹೋದರೂ, ಅಡ್ಡಪರಿಣಾಮಗಳನ್ನೂ ಲೆಕ್ಕಿಸದೇ ತೀವ್ರರೋಗಿಗಳಲ್ಲಿ ಅದನ್ನು ಪ್ರಾಯೋಗಿಕವಾಗಿ ಉಪಯೋಗಿಸಲಾಗುತ್ತಿದೆ. ವಿಶ್ವದ ವಿವಿಧೆಡೆ, ಜಿಂಕ್ ಪೋಷಕಾಂಶದ ಜೊತೆಗೂ ಮತ್ತು ಆ್ಯಂಟಿಬಯೋಟಿಕ್ ಒಂದರ ಜೊತೆಗೂ ಸೇರಿಸಿ ರೋಗದ ತೀವ್ರತೆ ತಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಸೋಂಕು ತಗಲುವ ಅಪಾಯ ಹೆಚ್ಚು ಇರುವವರಲ್ಲಿ ಮುಂಜಾಗ್ರತೆಯಾಗಿಯೂ ಉಪಯೋಗಿಸಲಾಗುತ್ತಿದೆ. ದಿನ ಬಿಟ್ಟು ದಿನ ಹೊರಬರುತ್ತಿರುವ ಪ್ರಕಟಿತ ಮತ್ತು ಅಪ್ರಕಟಿತ ವರದಿಗಳು ಮಿಶ್ರ ಫಲಿತಾಂಶಗಳನ್ನು ತೋರಿಸುತ್ತಿವೆ. ತರಾತುರಿಯಲ್ಲಿ ನಡೆಸಲಾಗುವ ಸಂಶೋಧನೆಗಳನ್ನು ನಂಬಲೂ ಆಗದ ಸುಮ್ಮನಿರಲೂ ಆಗದ ವಿರೋಧಾಭಾಸದಲ್ಲಿ ವೈದ್ಯವೃಂದ ಚಡಪಡಿಸುತ್ತಿದೆ. ಗುಣಮುಖರಾದ ರೋಗಿಗಳಿಂದ ರಕ್ತದಾನ ಮಾಡಿಸಿ, ಅದರಲ್ಲಿನ ರೋಗನಿರೋಧಕ ಕಣಗಳನ್ನು ತೀವ್ರರೋಗಿಯ ರಕ್ತದಲ್ಲಿ ಸೇರಿಸುವ ಪ್ಲಾಸ್ಮಾಥೆರಪಿ ಕೂಡ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದೆ ಹೋದರೂ, ಆಸೆ ಕೊನರಿಸುತ್ತಿದೆ. ಇಷ್ಟಾದರೂ ಕೊರೊನಾ ವೈರಸ್ಸು, ತನ್ನ ರಹಸ್ಯಗಳ ಬಿಗಿಮುಷ್ಟಿಯನ್ನು ಸಡಿಲಿಸುತ್ತಿಲ್ಲ. ಈ ನಡುವೆ, ನಾವೆಲ್ಲ ಚಿಕ್ಕಂದಿನಲ್ಲಿ ಚುಚ್ಚಿಸಿಕೊಂಡ ಕ್ಷಯರೋಗದ ಲಸಿಕೆ-ಬಿಸಿಜಿ, ಅದರಿಂದ ವೃದ್ಧಿಸಿದ ನಮ್ಮ ರೋಗನಿರೋಧಕ ಶಕ್ತಿ, ಕೊರೊನಾ ವೈರಸ್ಸಿನ ವಿರುದ್ಧ ಕೆಲಸ ಮಾಡುವುದೋ ಎಂದು ಕಾದು ನೋಡಬೇಕಾಗಿದೆ.

ಅದಕ್ಕಾಗಿಯೇ, ಇದುವರೆಗೆ ಯಾವುದೇ ಚಿಕಿತ್ಸೆ ಪರಿಣಾಮಕಾರಿಯಾಗಿರದೇ ಹೋಗಿರುವುದಕ್ಕಾಗಿಯೇ, ಸದ್ಯದ ಸ್ಥಿತಿಯಲ್ಲಿ ಸೋಂಕಿನಿಂದ ತಪ್ಪಿಸಿಕೊಂಡಿರುವುದೊಂದೇ ದಾರಿ. ಹಾಗೆಂದೇ, ಅಂತರವನ್ನು ಕಾಯ್ದುಕೊಳ್ಳೋಣ; ಮನೆಯಲ್ಲಿದ್ದು ಮತ್ತೆ ಒಳ್ಳೆ ದಿನಗಳಿಗಾಗಿ ಕಾಯೋಣ.

(ಲೇಖಕರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನ್ಸಲ್‌ಟೆಂಟ್ ಪ್ಲಾಸ್ಟಿಕ್ ಸರ್ಜನ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT