ಮಂಗಳವಾರ, ಆಗಸ್ಟ್ 11, 2020
27 °C

ಅಪಾಯಕಾರಿ ಪರಭಕ್ಷಕ ಪ್ಹಿರಾನಾ ಮೀನು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವದ ದೊಡ್ಡ ನದಿಗಳಲ್ಲಿ ಒಂದಾಗಿರುವ ದಕ್ಷಿಣ ಅಮೆರಿಕದ ಅಮೆಜಾನ್ ನದಿ, ದೈತ್ಯ ಮೊಸಳೆಗಳು, ಅನಕೊಂಡಾದಂತಹ ದೈತ್ಯ ಹಾವುಗಳು ಸೇರಿದಂತೆ ಹಲವು ವಿಶಿಷ್ಟ ಪ್ರಭೇದದ ಜೀವಿಗಳಿಗೆ ವಾಸಸ್ಥಾನವಾಗಿದೆ. ಈ ನದಿಯಲ್ಲಿ ಕಾಣಸಿಗುವ ಅಪರೂಪದ ಮತ್ತು ಅಪಾಯಕಾರಿ ಮತ್ಸ್ಯ ಪ್ಹಿರಾನಾ ಮೀನು.

ಇದರ ವೈಜ್ಞಾನಿಕ ಹೆಸರು ಪೈಗೋಸೆಂಟ್ರಸ್ ನಟ್ಟೆರರಿ (Pygocentrus nattereri). ಸ್ಥಳೀಯ ಭಾಷೆಯಲ್ಲಿ ಪ್ಹಿರಾನಾ ಎಂದರೆ ಪರಭಕ್ಷಕ ಎಂದು ಅರ್ಥ‍. ಇಂದಿನ ಮತ್ಸ್ಯ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ಈ ಮೀನಿನ ನೋಡುವುದಕ್ಕೆ ಭಯಂಕರ ಮತ್ತು ವಿಕಾರ ಎನಿಸುವಂತಹ ರೂಪವನ್ನು ಹೊಂದಿಲ್ಲ. ಇದರ ದೇಹವು ಕೆಂಪು, ಹಳದಿ, ನೀಲಿ ಮತ್ತು ಬೂದು ಬಣ್ಣಗಳ ತುಪ್ಪಳದಿಂದ ಆವರಿಸಿರುತ್ತದೆ. ವಿವಿಧ ಬಣ್ಣಗಳಲ್ಲಿ ಕಂಗೊಳಿಸುವುದರಿಂದ ಹಲವರು ಇದನ್ನು ಮನೆಯ ಅಲಂಕಾರ ಹೆಚ್ಚಿಸಲು ಅಕ್ವೇರಿಯಂಗಳಲ್ಲಿ ಇಟ್ಟು ಸಾಕುತ್ತಾರೆ. ಇದು ನೋಡುವುದಕ್ಕೆ ಏಂಜಲ್ ಮೀನಿನ ತದ್ರೂಪದಂತೆಯೇ ಕಾಣುತ್ತದೆ.

ಚಪ್ಪಟೆಯಾಕಾರದ ದೇಹ ಹೊಂದಿದ್ದು, ನೀರನ್ನು ಸೀಳಿಕೊಂಡು ನುಗ್ಗಲು ನೆರವಾಗುತ್ತದೆ. ತಲೆಬುರುಡೆಯೇ ದೇಹದ ಅರ್ಧದಷ್ಟು ಇದ್ದು, ಕಬ್ಬಿಣದಷ್ಟು ಗಟ್ಟಿಯಾಗಿರುತ್ತದೆ. ಕಣ್ಣುಗಳು ಕೆಂಪು ಬಣ್ಣದಲ್ಲಿ ಇರುತ್ತವೆ. ಮಾಂಸ ಭಕ್ಷಿಸಲು ನೆರವಾಗುವಂತೆ ಬಾಯಲ್ಲಿ ಎರಡು ಸಾಲು ಚೂಪಾದ ಹಲ್ಲುಗಳು ಇರುತ್ತವೆ. ಇದರ ಈಜುವ ವೇಗ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ, ಬರಿಗಣ್ಣಿಗೆ ಗುರುತಿಸಲು ಸಾಧ್ಯವಾಗುವುದಿಲ್ಲ. ಅಸ್ಪಷ್ಟ ರೇಖೆಯಂತೆ ಮಾತ್ರ ಕಾಣುತ್ತದೆ.

ಎಲ್ಲೆಲ್ಲಿವೆ?

ವೇಗವಾಗಿ ಹರಿಯುವ ನದಿಗಳು ಮತ್ತು ಹೊಳೆಗಳಲ್ಲಿ ವಾಸಿಸಲು ಇಷ್ಟಪಡುತ್ತದೆ. ದಕ್ಷಿಣ ಅಮೆರಿಕದ ಸಿಹಿ ನೀರಿನ ನದಿಗಳು, ಸರೋವರಗಳಲ್ಲಿ ಇದರ ಸಂತತಿ ಹೆಚ್ಚಾಗಿ ವಿಸ್ತರಿಸಿದೆ. ಅಮೆಜಾನ್ ನದಿಯಲ್ಲೇ ಸುಮಾರು 20 ವಿಧದ ತಳಿಗಳನ್ನು ಗುರುತಿಸಲಾಗಿದೆ. ಅಮೆರಿಕದ ಓರಿನಾಕೋ ನದಿ, ಬ್ರೆಜಿಲ್, ಹವಾಯಿ ಹಾಗೂ ಉತ್ತರ ಅಮೆರಿಕದ ಹಲವು ನದಿ ಮತ್ತು ಸರೋವರಗಳಲ್ಲಿ ಇವು ಕಂಡುಬರುತ್ತವೆ.

ವರ್ತನೆ ಮತ್ತು ಜೀವನ ಕ್ರಮ

ಇದರ ಬಣ್ಣ ಬಣ್ಣಗಳಲ್ಲಿ ಕಂಗೊಳಿಸುವ ದೇಹದ ಆಕಾರ ಎಂತಹವರನ್ನು ಸೆಳೆಯುತ್ತದೆ ಆದರೆ,  ಇದರ ಆಕ್ರಮಣಕಾರಿ ಸ್ವಭಾವ ಮತ್ತು ಕ್ರೂರತೆಯ ಅನುಭವ ಉಳ್ಳವರು ಮುಟ್ಟುವುದಕ್ಕೂ ಹಿಂಜರಿಯುತ್ತಾರೆ. ಇದರ ಚೂಪಾದ ಹಲ್ಲುಗಳ ನೆರವಿನಿಂದ ಯಾವುದಾದರೂ ಜಲಚರ ಸಿಕ್ಕರೆ ಒಂದೇ ಬಾರಿಗೆ ಕತ್ತರಿಸಿ ತುಂಡಾಗಿಸುತ್ತದೆ.

ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸಲು ಇಷ್ಟಪಡುತ್ತದೆ. ಇತರೆ ಜಲಚರಗಳ ಮೇಲೆ ಘೋರ ದಾಳಿ ಮಾಡುತ್ತದೆ. ಆಕ್ರಮಣ ವೇಗವಂತೂ ಊಹಿಸಲಸಾಧ್ಯ. ಕಡಿಮೆ ಆಳದ ನೀರಿನಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿಯಾಗಿ ವರ್ತಿಸುತ್ತದೆ. ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಾದಾಗ, ಕಣ್ಣಿಗೆ ಯಾವ ಜಲಚರ ಕಂಡರೂ ದಾಳಿ ಮಾಡುತ್ತದೆ.

ಜಲಚರ ಅಥವಾ ಪ್ರಾಣಿ ಗಾತ್ರದಲ್ಲಿ ಇದಕ್ಕಿಂತ ದೊಡ್ಡದಾಗಿದ್ದರೂ, ಚಿಕ್ಕದಾಗಿದ್ದರೂ ಯಾವುದೇ ಅಳುಕಿಲ್ಲದೇ ದಾಳಿ ಮಾಡುತ್ತದೆ. ಕೆಲವೇ ಕ್ಷಣಗಳಲ್ಲಿ ಜೀವ ತೆಗೆಯುತ್ತದೆ. ಕೆಲವೇ ಕ್ಷಣಗಳಲ್ಲಿ ಬೇಟೆಯಾಡಿದ ಪ್ರಾಣಿಯ ಸಂಪೂರ್ಣ ಮಾಂಸ ಭಕ್ಷಿಸಿ, ಅಸ್ಥಿಪಂಜರವನ್ನಷ್ಟೇ ಉಳಿಸುತ್ತದೆ.

ಆಹಾರ

ಇದು ಮಿಶ್ರಾಹಾರಿ ಜಲಚರ. ಆದರೆ ಮಾಂಸವನ್ನೇ ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತದೆ. ಸಮುದ್ರದಲ್ಲಿರುವ ಪಾಚಿ, ಸಣ್ಣ ಗಾತ್ರದ ಮೀನುಗಳು, ಕೀಟಗಳು, ಹುಳುಗಳು, ವಿವಿಧ ಬಗೆಯ ಸಸ್ತನಿಗಳನ್ನು ತಿನ್ನುತ್ತದೆ. ಪಕ್ಷಿಗಳನ್ನು ಇಷ್ಟಪಟ್ಟು ಭಕ್ಷಿಸುತ್ತದೆ.

ಸಂತಾನೋತ್ಪತ್ತಿ

ಏಪ್ರಿಲ್‌ನಿಂದ ಮೇ ತಿಂಗಳ ನಡುವಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಹೆಣ್ಣು ಪ್ಹಿರಾನಾ ಮೀನು ಒಂದು ಬಾರಿಗೆ 5 ಸಾವಿರ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟಗಳು ಪರಭಕ್ಷಕ ಜಲಚರಗಳಿಗೆ ಸಿಗದಂತೆ ನೀರಿನ ಆಳದ ಮಣ್ಣಿನ ಅಡಿಯಲ್ಲಿ, ಸಸ್ಯಗಳ ಪೊದೆಗಳಲ್ಲಿ ಗೂಡು ಕಟ್ಟಿ ಎಚ್ಚರಿಕೆಯಿಂದ ನೋಡಿಕೊಳ್ಳುತ್ತದೆ. ಎರಡು ಮೂರು ದಿನಗಳ ನಂತರ ಕಾವು ಕೊಡುತ್ತದೆ. ಮರಿಗಳು 12 ರಿಂದ 14 ತಿಂಗಳ ಕಳೆದ ಮೇಲೆ ನಂತರ ವಯಸ್ಕ ಹಂತಕ್ಕೆ ತಲುಪುತ್ತವೆ.

**

ಜೀವಿತಾವಧಿ ಮತ್ತು ತೂಕ

20–50 ಮೀ: ದೇಹದ ಉದ್ದ

01–04 ಕೆ.ಜಿ.: ತೂಕ

20–25 ವರ್ಷ: ಜೀವಿತಾವಧಿ

**

ವಿಶೇಷ

* ರಕ್ತದ ವಾಸನೆಯನ್ನು ದೂರದಿಂದಲೇ ಗ್ರಹಿಸುವ ಸಾಮರ್ಥ್ಯವಿದ್ದು, ನೀರಿನ ಕಂಪನಗಳನ್ನು ಗ್ರಹಿಸುವ ಅದ್ಭುತವಾದ ಶ್ರವಣ ಶಕ್ತಿ ಹೊಂದಿದೆ. 

* ಇದರ ಚೂಪಾದ ಹಲ್ಲುಗಲು ತುಂಡಾದರೂ, ಪುನಃ ಬೆಳೆಯುತ್ತವೆ.

* ಬ್ರೆಜಿಲ್ ದೇಶದಲ್ಲಿ ಇದರಿಂದ ತಯಾರಿಸದ ವಿಶೇಷ ಖಾದ್ಯಗಳು ಮತ್ತು ಸೂಪ್‌ಗಳು ಹೆಚ್ಚು ಜನಪ್ರಿಯವಾಗಿವೆ.

* ದಕ್ಷಿಣ ಅಮೆರಿಕದಲ್ಲಿ ಸ್ಥಳೀಯರು ಇದರ ಹಲ್ಲುಗಳನ್ನು ಚೂಪಾದ ಆಯುಧಗಳ ತಯಾರಿಕೆಯಲ್ಲಿ ಬಳಸುತ್ತಾರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.