ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯನೋಸ್ಪಿಯರ್‌ನಲ್ಲಿ ರಂಧ್ರ ಮಾಡಿದ ಇಲಾನ್‌ ಮಸ್ಕ್‌ನ ಸ್ಪೇಸ್‌ಎಕ್ಸ್ ರಾಕೇಟ್‌

Published 24 ಜುಲೈ 2023, 11:01 IST
Last Updated 24 ಜುಲೈ 2023, 11:01 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾ: ಇಲಾನ್‌ ಮಸ್ಕ್ ಅವರ ಸ್ಪೇಸ್‌ ಎಕ್ಸ್‌ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಹಾರಿಸಿದ ಫಾಲ್ಕನ್ 9 ರಾಕೇಟ್‌, ಭೂಮಿ ಸುತ್ತುವರಿದಿರುವ ಅಯನೋಸ್ಪಿಯರ್‌ ಅನ್ನು ಚುಂಬಿಸಿ ಭೂಮಿಗೆ ಮರಳಿದೆ.

ಇಲ್ಲಿನ ವ್ಯಾಂಡೆನ್‌ಬರ್ಗ್ ಸ್ಪೇಸ್ ಫೋರ್ಸ್‌ ನೆಲೆಯಿಂದ ಜುಲೈ 19ರಂದು ನಭಕ್ಕೆ ಚಿಮ್ಮಿದ ಎರಡು ಹಂತದ ರಾಕೇಟ್, ಸುರಕ್ಷಿತವಾಗಿ ಮರಳಿ ಲ್ಯಾಂಡ್ ಆಗಿದೆ. ಹೀಗಾಗಿ ಫಾಲ್ಕನ್ 9 ರಾಕೇಟ್‌ ಈವರೆಗೂ 240 ಬಾರಿ ಉಡ್ಡಯನಗೊಂಡು 198 ಬಾರಿ ಲ್ಯಾಂಡ್‌ ಮಾಡಿದೆ ಎಂದು ಸ್ಪೇಸ್‌ ಎಕ್ಸ್ ತನ್ನ ಜಾಲತಾಣದಲ್ಲಿ ಹೇಳಿಕೊಂಡಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ರಾಕೇಟ್ ಸಿದ್ಧತೆಯೇ ಅತಿ ಹೆಚ್ಚಿನ ಖರ್ಚಿನ ವಿಭಾಗ. ಆದರೆ ಪುನರ್‌ಬಳಕೆಯ ರಾಕೇಟ್‌ನಿಂದಾಗಿ ಈ ಖರ್ಚು ಗಣನೀಯವಾಗಿ ತಗ್ಗಲಿದೆ ಎಂದು ಹೇಳಿದೆ.

ಸ್ಪೇಸ್‌ ಎಕ್ಸ್‌ನ ಈ ಪ್ರಯೋಗ ಕುರಿತು ಬೋಸ್ಟನ್‌ ವಿಶ್ವವಿದ್ಯಾಲಯದ ಭೌತವಿಜ್ಞಾನಿ ಜೆಫ್‌ ಬೌಮ್‌ಗಾರ್ಡನೆರ್‌ ಅವರು ಪ್ರತಿಕ್ರಿಯಿಸಿ, ‘ಜುಲೈ 19ರಂದು ನಡೆದ ಉಡ್ಡಯನದಿಂದ ಕೆಂಪು ಬಣ್ಣದ ಕಲೆಯು ಗೋಚರಿಸುತ್ತಿದೆ. ಇದು ಅಯನೋಸ್ಪಿಯರ್‌ನಲ್ಲಿ ಆಗಿರುವ ರಂಧ್ರವನ್ನು ಸೂಚಿಸುತ್ತದೆ’ ಎಂದಿದ್ದಾರೆ. 

‘ಭೂಮಿಯಿಂದ ಸುಮಾರು 200ರಿಂದ 300 ಕಿ.ಮೀ. ದೂರದಲ್ಲಿ ರಾಕೇಟ್‌ ತನ್ನ ಎಂಜಿನ್‌ ಸುಡುತ್ತಿರುತ್ತದೆ. ಎರಡನೇ ಹಂತದ ಎಂಜಿನ್‌ ಸುಡುತ್ತಿರುವಾಗ ರಾಕೇಟ್ 286 ಕಿ.ಮೀ. ದೂರದಲ್ಲಿತ್ತು. ಹೀಗಾಗಿ ಅಯನೋಸ್ಪಿಯರ್‌ನಲ್ಲಿ ರಂಧ್ರವಾಗಿರುವ ಸಾಧ್ಯತೆ ಹೆಚ್ಚು’ ಎಂದಿದ್ದಾರೆ.

ಬಾಹ್ಯಾಕಾಶದ ಅಂಚಿನಲ್ಲಿ ವಿದ್ಯುದಾವೇಶ ಪೂರಿತ ಅಯಾನ್‌ ಕಣಗಳಿಂದ ತುಂಬಿರುವ ಅಂಚು ಅಯನೋಸ್ಪಿಯರ್. ಇದರಿಂದಾಗಿ ಸೂರ್ಯನ ಕಿರಣಗಳೊಂದಿಗಿನ ರಾಸಾಯನಿಕ ಕ್ರಿಯೆಯಿಂದ ಭೂಕಾಂತೀಯ ಬಿರುಗಾಳಿ ಉಂಟಾಗಿ ಆಗಸದಲ್ಲಿ ಕೆಲವೊಮ್ಮೆ ಹಲವು ಬಣ್ಣಗಳು ಗೋಚರಿಸುವುದನ್ನು ಕಾಣಬಹುದು.

ಇದೇ ರೀತಿಯ ಪ್ರಯೋಗ 2017ರ ಆ. 24ರಂದೂ ನಡೆದಿತ್ತು. ರಾಕೇಟ್‌ನ ತೂಕ ಕಡಿಮೆ ಇದ್ದ ಕಾರಣ ಮತ್ತು ಲಂಬವಾಗಿ ಹಾರಿದ ಕಾರಣ ಅಯನೋಸ್ಪಿಯರ್‌ನಲ್ಲಿನ ಪ್ಲಾಸ್ಮಾದಲ್ಲಿ ಇಂಥ ರಂಧ್ರವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT