ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈವಿಕ ವಿಜ್ಞಾನದ ಇಂದು ನಾಳೆಗಳು

Published 31 ಮೇ 2023, 0:13 IST
Last Updated 31 ಮೇ 2023, 0:13 IST
ಅಕ್ಷರ ಗಾತ್ರ

ಜೈವಿಕ ತಂತ್ರಜ್ಞಾನದ ಅನ್ವಯ ಗಳಲ್ಲಿ, ಈಗ ಸುದ್ದಿಯಲ್ಲಿರುವುದು ಸಂಶ್ಲೇಷಿತ ಜೀವವಿಜ್ಞಾನ, ಹೊಸ ಬಗೆಯ ಕೋಶೀಯ ಹಾಗೂ ವಂಶವಾಹಿ ಚಿಕಿತ್ಸೆಗಳು, ಇತರ ಪ್ರಾಣಿಗಳಿಂದ ತೆಗೆದ ಅಂಗಾಂಗಗಳನ್ನು, ಯಾವುದೇ ಸಮಸ್ಯೆಯಾಗದಂತೆ ಮಾನವನೊಳಗೆ ಕಸಿಮಾಡಲು ಬೇಕಾದ ತಂತ್ರಜ್ಞಾನದ ತಯಾರಿ ಇವೇ ಮೊದಲಾದವು.

ಪ್ರಕೃತಿಯಿಂದ ಕಲಿಯಬೇಕಾದ ಪಾಠಗಳಿಗೆಂದಾದರೂ ಕೊನೆ ಉಂಟೆ? ಅದರಲ್ಲೂ, ಈಗಿನ ದಿನಮಾನದಲ್ಲಿ ಎಲ್ಲವೂ ದ್ವಿಮಾನವೇ ಆಗಿರಬೇಕು ಎಂಬಂತಹ ಮನಃಸ್ಥಿತಿ. ಸರಿ ಅಥವಾ ತಪ್ಪು, ಎಡ ಅಥವಾ ಬಲ ಹೀಗೆ. ಆದರೆ, ನಿಸರ್ಗವು ಮನುಷ್ಯ ಉತ್ಪಾದಿತ ದ್ವಿಮಾನ ಪದ್ಧತಿಯಂತೆ 1 ಅಥವಾ 0 ಎಂಬಂತಹ ಸಿದ್ಧಾಂತಕ್ಕೆ ಬದ್ಧವಾಗಿಲ್ಲ. ನೈಸರ್ಗಿಕವಾಗಿಯೇ ಹೆಣ್ಣು, ಗಂಡು ಮತ್ತು ತೃತೀಯ ಲಿಂಗಿಯ ಸೃಷ್ಟಿ ಸಾಧ್ಯ, ಹಳದಿಹೂವು, ಕೆಂಪುಹೂವು ಬಿಡುವ ಜಾತಿಯ ಸಸ್ಯದಲ್ಲಿ ಹಳದಿ-ಕೆಂಪು ಮಿಶ್ರಿತ ಹೂವುಗಳು ಬಿಡುವುದೂ ಸಾಧ್ಯ. ಇದು ಮಾತ್ರ ಸರಿ, ಅದು ತಪ್ಪೇ ತಪ್ಪು ಎಂದು ಭೇದ ಮಾಡುತ್ತಾ ಕೂಡುವ ಜಾಯಮಾನವಲ್ಲ ಪ್ರಕೃತಿಮಾತೆಯದ್ದು.

ಪ್ರತಿನಿತ್ಯದ ಜೀವನದಲ್ಲೂ ಸಮಸ್ಯೆಗಳನ್ನು ಪರಿಹರಿಸಲು ಒಂದೇ ನಿಟ್ಟಿನಲ್ಲಿ ಯೋಚಿಸಿದರೆ ಸಾಧ್ಯವಾಗದಿರಬಹುದು. ಹಲವು ಬಗೆಯ ಯೋಚನೆ-ಯೋಜನೆಗಳು ಒಟ್ಟಾಗಿ ಕಾರ್ಯನಿರ್ವಹಿಸಿದಾಗ, ಪರಿಹಾರ ಸಾಧ್ಯ. ವಿಜ್ಞಾನ-ತಂತ್ರಜ್ಞಾನದ ಕ್ಷೇತ್ರಗಳಲ್ಲೂ, ಒಂದೇ ಶಾಖೆಯ ಜ್ಞಾನವನ್ನು ಅನ್ವಯಿಸುವುದರಿಂದ ಸಾಧ್ಯವಾಗದ ನೂರಾರು ಸಂಗತಿಗಳು, ಅಂತರಶಾಖೀಯ ಜ್ಞಾನದ ಅನ್ವಯಿಕೆಯಿಂದ ಸಾಧ್ಯವಾದದ್ದು ನಮ್ಮ ಕಣ್ಣ ಮುಂದಿದೆ. ಜೀವವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಮೇಳೈಕೆಯಾದ ‘ಬಯೋಟೆಕ್ನಾಲಜಿ’, ಅಂದರೆ ಜೈವಿಕ ತಂತ್ರಜ್ಞಾನವು ಈಗೊಂದು ಶತಮಾನದಿಂದಲೂ ಅಪಾರ ಪ್ರಗತಿಯನ್ನು ಕಂಡಿದೆ. 

ಸರ್ಕಾರಗಳ ಐಟಿ-ಬಿಟಿ ಇಲಾಖೆಯ ಸುದ್ದಿಯ ರೂಪದಲ್ಲೋ, ಕೋವಿಡ್‌ ವೈರಾಣುವನ್ನು ತಯಾರಿಸಿದ್ದು ಒಂದು ದೇಶದ ಜೈವಿಕತಂತ್ರಜ್ಞಾನ ಪ್ರಯೋಗಾಲಯವೆಂದೋ, ಕೋವಿಡ್‌ ವಿರುದ್ಧ ತಯಾರಿಸಿದ ಲಸಿಕೆಗಳ ಹಿಂದೆ ಜೈವಿಕತಂತ್ರಜ್ಞಾನಿಗಳ ಅಪಾರ ಪರಿಶ್ರಮವಿದೆ ಎಂದೋ ವಿಜ್ಞಾನದ ಈ ಶಾಖೆಯ ಹೆಸರನ್ನು ಕೇಳಿರಬಹುದು.1919ರಲ್ಲಿ ಮೊದಲ ಬಾರಿಗೆ ತಂತ್ರಜ್ಞಾನ ಮತ್ತು ಜೀವವಿಜ್ಞಾನದ ಸಮ್ಮಿಲನಕ್ಕೆ ‘ಬಯೋಟೆಕ್ನಾಲಜಿ’ ಎಂಬ ಹೆಸರು ನೀಡಿದ್ದು ಕರೋಲಿ ಎರಿಕಿ ಎಂಬ ಹಂಗೇರಿ ದೇಶದ ಕೃಷಿಇಂಜಿನಿಯರ್‌. ಎರಡು ಪ್ರಬಲ ಶಾಖೆಗಳ ಒಟ್ಟಂದವಾದ ಈ ಅಂತರ್‌ಶಾಖೆಗೆ ಇರುವ ಶಕ್ತಿ ಊಹಿಸಲೂ ಸಾಧ್ಯವಿಲ್ಲದಷ್ಟು. ಆದರೆ, ಅದನ್ನು ಪ್ರತಿ ಜೈವಿಕತಂತ್ರಜ್ಞಾನಿಯೂ ಅಷ್ಟೇ ಜವಾಬ್ದಾರಿಯಿಂದ ನಿರ್ವಹಿಸಬೇಕು.

ಇಲ್ಲದಿದ್ದರೆ, ಒಂದು ಸಣ್ಣ ತಪ್ಪು ಕೂಡ, ಭವಿಷ್ಯದ ತಲೆಮಾರುಗಳು ಕ್ಷಮಿಸದಂತಹ ಪ್ರಮಾದವಾಗಿ ಮಾರ್ಪಾಡಾಗಬಹುದು. ಆಹಾರಬೆಳೆಗಳಲ್ಲಿ ಬೇಡದ ಗುಣಗಳನ್ನು ತೆಗೆದು ಬೇಕಾದದ್ದನ್ನೇ ಉಳಿಸಿ ಹೊಸ ತಳಿ ಸೃಷ್ಟಿಸುವುದು, ಜಾನುವಾರುಗಳ ಮಾರಣಹೋಮಕ್ಕೆ ಕಾರಣವಾಗುತ್ತಿದ್ದ ಇನ್ಸುಲಿನ್‌ನಂತಹ ಹಾರ್ಮೋನುಗಳ ಉತ್ಪಾದನೆಯನ್ನು, ಅಂತಹ ಅನೇಕ ಹಾರ್ಮೋನುಗಳ ಹಾಗೂ ಕಿಣ್ವಗಳ ಉತ್ಪಾದನೆಯನ್ನು ಸೂಕ್ಷ್ಮಾಣುಗಳಿಂದ ಸಾಧ್ಯವಾಗಿಸಿದ್ದು, ಉತ್ತಮ ಗುಣಮಟ್ಟದ ಜೈವಿಕಗೊಬ್ಬರಗಳ ತಯಾರಿ, ಸಾಮಾನ್ಯವಾಗಿ ಜನರನ್ನು ಕಂಗೆಡಿಸುವ ಎಲ್ಲಾ ಆರೋಗ್ಯಸಮಸ್ಯೆಗಳಿಗೂ ಒಂದಿಲ್ಲೊಂದು ಲಸಿಕೆ, ಚುಚ್ಚುಮದ್ದುಗಳ ತ್ವರಿತ ತಯಾರಿ – ಇವೆಲ್ಲಾ ಜೈವಿಕತಂತ್ರಜ್ಞಾನದ ಕೆಲವು ಸಾಧನೆಗಳಷ್ಟೇ.

ಈಗಂತೂ, ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌ನ ಬಳಕೆಯನ್ನೂ ಜೊತೆಗೂಡಿಸಿಕೊಂಡು ಜೈವಿಕತಂತ್ರಜ್ಞಾನವು ಮತ್ತಷ್ಟು ಬಲಪಡೆದುಕೊಂಡಿದೆ. ಕಳೆದ ಒಂದು ದಶಕದಲ್ಲಂತೂ ಹೊಸ ಔಷಧಗಳ, ಹೊಸ ಔಷಧ-ವಿಲೇವಾರಿ-ವ್ಯವಸ್ಥೆಗಳ, ಹೊಸ ಔಷಧ ಸಂಬಂಧೀ ಯಾಂತ್ರಿಕ ವ್ಯವಸ್ಥೆಗಳ ಸೃಷ್ಠಿ, ಸುಧಾರಣೆ ಮತ್ತು ವಿನ್ಯಾಸ ಸಾಧ್ಯವಾಗಿದೆ. CRISPR ತಂತ್ರಜ್ಞಾನದ ಉಗಮವಾದಾಗಿನಿಂದಲೂ ಜೈವಿಕತಂತ್ರಜ್ಞಾನಕ್ಕೆ ಮಜಬೂತಾದ ಸಾಧನವೊಂದು ಸಿಕ್ಕಂತಾಗಿ, ಸಮಸ್ಯೆಗಳನ್ನು ಹೊಸಬಗೆಯಲ್ಲಿ, ಸುಲಭವಾಗಿ ಪರಿಹರಿಸುತ್ತದೆ. ಇಷ್ಟೆಲ್ಲಾ ಅನನ್ಯತೆಗಳ ಮೊತ್ತವಾದ ಜೈವಿಕತಂತ್ರಜ್ಞಾನದ ಅನ್ವಯಗಳಲ್ಲಿ, ಈಗ ಸುದ್ದಿಯಲ್ಲಿರುವುದು ಯಾವುವು ಗೊತ್ತೇ?

ಸಂಶ್ಲೇಷಿತ ಜೀವವಿಜ್ಞಾನ, ಹೊಸ ಬಗೆಯ ಕೋಶೀಯ ಹಾಗೂ ವಂಶವಾಹಿ ಚಿಕಿತ್ಸೆಗಳು, ಹವಾಗುಣ ಬದಲಾವಣೆಯನ್ನು ಸರಿದೂಗಿಸಿಕೊಂಡು, ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯಬಲ್ಲ ಕೃಷಿವ್ಯವಸ್ಥೆ, ಮಾನವನಲ್ಲದ ಇತರ ಪ್ರಾಣಿಗಳಿಂದ ತೆಗೆದ ಅಂಗಾಂಗಗಳನ್ನು, ಯಾವುದೇ ಸಮಸ್ಯೆಯಾಗದಂತೆ ಮಾನವನೊಳಗೆ ಕಸಿಮಾಡಲು ಬೇಕಾದ ತಂತ್ರಜ್ಞಾನದ ತಯಾರಿ, ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌ನ ಸಹಾಯ ಪಡೆದು ನಿಖರವಾದ ಕೋಶಕ್ಕೇ ನಿಖರವಾದ ಔಷಧಿಯ ವಿಲೇವಾರಿ – ಇವೇ ಆ ಕೆಲವು ಅತ್ಯಂತ ಉಪಯುಕ್ತ ಅನ್ವಯಿಕೆಗಳು.


ಸಂಶ್ಲೇಷಿತ ಜೀವವಿಜ್ಞಾನದಲ್ಲಿ, ಜೀವಿಗಳನ್ನು, ಭೂಮಿಯ ಪರಿಸ್ಥಿತಿ ಹಾಗೂ ಮನುಷ್ಯನ ಜೀವನವನ್ನು ಮತ್ತಷ್ಟು ಉತ್ತಮಗೊಳಿಸಲು, ಸಂಪೂರ್ಣವಾಗಿ ಬದಲಾಯಿಸಲಾಗುತ್ತದೆ. ಇದನ್ನು ಇಲ್ಲಿಯವರೆಗೂ ಸೂಕ್ಷ್ಮಾಣುಗಳ ವಿಷಯದಲ್ಲಿ ಮಾತ್ರ ಸಾಧ್ಯಮಾಡಿದ್ದು, ಅನೇಕ ಕೋಶಗಳಿರುವ ದೊಡ್ಡ ಪ್ರಾಣಿಗಳಿಗೂ, ಸಸ್ಯಗಳಿಗೂ ಮುಂದಿನ ದಿನಗಳಲ್ಲಿ ಅನ್ವಯಿಸಲಾಗುತ್ತದೆ. ಇನ್ಸುಲಿನ್‌ ತಯಾರಿಸಿ ಕೊಡುವ ಹೊಸ ಬಗೆಯ ಇ-ಕೊಲೈ ಬ್ಯಾಕ್ಟೀರಿಯ ಇಂತಹ ಸಂಶ್ಲೇಷಿತ ಜೀವವಿಜ್ಞಾನದ ಕೊಡುಗೆಯೇ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿವಿಧ ಕ್ಯಾನ್ಸರ್‌ಗಳೂ ಸೇರಿದಂತೆ ಅನೇಕ ಆರೋಗ್ಯಸಮಸ್ಯೆಗಳಿಗೆ ಪರಿಹಾರವನ್ನು ‘ಕೋಶೀಯ ಚಿಕಿತ್ಸೆ’ಯಲ್ಲಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ, ವಂಶವಾಹಿಗಳಲ್ಲಿ, ಜೀವಕೋಶಗಳಲ್ಲಿ ಸಣ್ಣ ಬದಲಾಣೆಗಳನ್ನು ಮಾಡುವ ಮೂಲಕ ಆರೋಗ್ಯದ ದೊಡ್ಡ ಸಮಸ್ಯೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದು ಇಲ್ಲಿ ಸಾಧ್ಯ. ೭-೮ ವರ್ಷಗಳಿಂದಲೂ ಇಂತಹ ಪ್ರಯೋಗಗಳು ಯಶಸ್ವಿಯಾಗಲು ಪ್ರಾರಂಭವಾಗಿವೆ.

ಬರ, ಅತಿವೃಷ್ಟಿ, ಮಣ್ಣಿನ ಸವಕಳಿ, ಸದಾ ಕಾಡುವ ಬ್ಯಾಕ್ಟೀರಿಯಾ/ವೈರಸ್‌/ಶಿಲೀಂಧ್ರ ರೋಗಗಳನ್ನು ಎದುರಿಸಲು ವಂಶವಾಹಿಗಳಲ್ಲಿ ಬದಲಾವಣೆ ಮಾಡಿ, ಹೊಸ ತಳಿಯ ತರಕಾರಿ-ಹಣ್ಣುಗಳ ಬೆಳೆಗಳೂ ಈಗಾಗಲೇ ರೈತರನ್ನು ತಲುಪಿವೆ. ಅವುಗಳ ಅನಾನುಕೂಲಗಳು ಒಂದೊಂದಾಗಿ ಅರಿವಾಗುತ್ತಾ, ಹೊಸ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ ಕೃಷಿತಜ್ಞರು. ಇವರೊಂದಿಗೆ ಕೈಜೋಡಿಸಿರುವ ಜೈವಿಕತಂತ್ರಜ್ಞಾನ ತಜ್ಞರು, ತಳೀಯ ಸುಧಾರಣೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ ಕೂಡ.

ಇನ್ನು, ಅಂಗಾಂಗ ದಾನದ ಶ್ರೇಷ್ಠತೆಯ ಬಗ್ಗೆ ಅದೆಷ್ಟೇ ತಿಳಿಸಿ ಹೇಳಿದರೂ, ಪ್ರತಿದಿನವೂ ಅನೇಕ ಮೃತದೇಹಗಳ ಜೊತೆಗೆ ಅತ್ಯಮೂಲ್ಯ ಅಂಗಾಂಗಗಳೂ ಮಣ್ಣಾಗುತ್ತವೆ, ಸುಟ್ಟು ಬೂದಿಯಾಗುತ್ತವೆ. ಅಂಗಾಂಗ ಕಸಿಗಾಗಿ ಸೂಕ್ತ ದಾನಿಯನ್ನು ಎದುರು ನೋಡುತ್ತಿರುವವರ ಪಟ್ಟಿ, ನಮ್ಮ ಎಣಿಕೆಗಿಂತಲೂ ಉದ್ದವಿದೆ. ಇಂತಹ ಸಮಸ್ಯೆಯನ್ನು ಇಲ್ಲವಾಗಿಸುವುದು ಹಂದಿ, ಇಲಿಗಳಂತಹ ಸಸ್ತನಿಗಳಲ್ಲಿ ಮಾನವನಿಗೆ ಸೂಕ್ತವೆನಿಸುವ, ಮಾನವನ ದೇಹವು ಕೋಶೀಯವಾಗಿ ವಿರೋಧ ವ್ಯಕ್ತಪಡಿಸದೇ ತನ್ನದಾಗಿಸಿಕೊಳ್ಳುವ ಅಂಗಾಂಗಗಳನ್ನು ಜೈವಿಕತಂತ್ರಜ್ಞಾನವು ಬೆಳೆಸುತ್ತಿದೆ. ಇಂತಹ ಅನೇಕ ಅನ್ವಯಗಳ ಮೂಲಕ ಜಗತ್ತನ್ನು, ಜನರ ಜೀವಿತಗಳನ್ನು ಉತ್ತಮವಾಗಿಸುವ ನಿಟ್ಟಿನಲ್ಲಿ ಜೈವಿಕ ತಂತ್ರಜ್ಞಾನವು ಮುನ್ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT