ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ಕ್ಷೇತ್ರದ ಮಾರುಕಟ್ಟೆ ವಿಸ್ತರಿಸುವ ಹುರುಪಿನಲ್ಲಿ ಭಾರತೀಯ ಸ್ಟಾರ್ಟ್‌ಅಪ್‌ಗಳು

Published 10 ಜುಲೈ 2023, 6:47 IST
Last Updated 10 ಜುಲೈ 2023, 6:47 IST
ಅಕ್ಷರ ಗಾತ್ರ

ನವದೆಹಲಿ: ಬಾಹ್ಯಾಕಾಶ ರಂಗದಲ್ಲಿ ಜಾಗತಿಕ ಸಹಯೋಗದಲ್ಲಿ ಮುಕ್ತ ಅವಕಾಶಗಳು ತೆರೆದುಕೊಳ್ಳುತ್ತಿರುವುದರ ಲಾಭ ಪಡೆಯುತ್ತಿರುವ ಭಾರತ ಮೂಲದ ಸ್ಟಾರ್ಟ್‌ಅಪ್‌ಗಳು ಈ ಕ್ಷೇತ್ರದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಹುರುಪಿನಲ್ಲಿವೆ.  

ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ತಂತ್ರಜ್ಞಾನದ ಕೊಡುಕೊಳ್ಳುವಿಕೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ತಮ್ಮ ಅಮೆರಿಕ ಪ್ರವಾಸದ ವೇಳೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದ್ದರು. ಇದು ಖಾಸಗಿ ರಂಗದ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ಬಾಹ್ಯಾಕಾಶ ಕ್ಷೇತ್ರದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.   

2020ರಲ್ಲಿ ಭಾರತವು ತನ್ನ ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸುವ ನಿರ್ಧಾರ ಕೈಗೊಂಡಿತ್ತು. ಅಂದಿನಿಂದ ಈ ವರೆಗೆ ಈ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ 150ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಸ್ಥಾಪನೆಗೊಂಡಿವೆ. 

‘ಇದು ಆಶಾದಾಯಕ ಬೆಳವಣಿಗೆ. ದಶಕಗಳ ಹಿಂದೆ ಅಮೆರಿಕಕ್ಕೆ ಸಂಶೋಧನೆ ಮತ್ತು ಭದ್ರತೆಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಪೂರೈಸುವುದು ಸಾಧ್ಯವೇ ಇರಲಿಲ್ಲ. ಒಂದರ್ಥದಲ್ಲಿ ಅದು ನಿಷೇಧವೆಂಬ ಪರಿಸ್ಥಿತಿ ಇತ್ತು. ಆದರೆ, ಈಗ ನಾವು ಬಾಹ್ಯಾಕಾಶ ರಂಗಕ್ಕೆ ಸಂಬಂಧಿಸಿದಂತೆ ಪರಸ್ಪರ ಕೆಲಸ ಮಾಡುವಂಥ ಸನ್ನಿವೇಶ ಸೃಷ್ಟಿಯಾಗಿದೆ’ ಎಂದು ‘ಮನಸ್ತು’ ಎಂಬ ಬಾಹ್ಯಾಕಾಶ ಸಂಸ್ಥೆಯ ಸಹ ಸಂಸ್ಥಾಪಕ ತುಷಾರ್‌ ಜಾಧವ್‌ ಅಭಿಪ್ರಾಯಪಟ್ಟಿದ್ದಾರೆ.  

ಮುಂಬೈ ಮೂಲದ ‘ಮನಸ್ತು’ ಸಂಸ್ಥೆಯು ಉಪಗ್ರಹಗಳಿಗೆ ಪರಿಸರ ಸ್ನೇಹಿ ಚಾಲನಾಶಕ್ತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಸಂಬಂಧ ತಂತ್ರಜ್ಞಾನವನ್ನು ಮುಂಬರುವ ದಿನಗಳಲ್ಲಿ ಪರೀಕ್ಷಿಸುವ ಉಮೇದಿನಲ್ಲಿದೆ. ಜತೆಗೆ ಉಪಗ್ರಹಳಿಗೆ ಅಗತ್ಯವಿರುವ ಇಂಧನ ಪೂರೈಕೆಗಾಗಿ ಬಾಹ್ಯಾಕಾಶದಲ್ಲಿ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಕಾರ್ಯನಿರತವಾಗಿದೆ.  

ಕಳೆದ ವರ್ಷ ಸ್ಕೈರೂಟ್‌ ಏರೋಸ್ಪೇಸ್‌ ಎಂಬ ಹೈದರಬಾದ್‌ ಸಂಸ್ಥೆ ‘ವಿಕ್ರಮ್‌–ಎಸ್‌’ ಎಂಬ ರಾಕೆಟ್‌ ಉಡಾವಣೆ ಮಾಡಿ ಗಮನ ಸೆಳೆದಿತ್ತು. ಇದು ಭಾರತ ಮೊದಲ ಖಾಸಗಿ ರಾಕೆಟ್‌ ಎನಿಸಿಕೊಂಡಿತ್ತು. ಇಸ್ರೊದ ಮಾಜಿ ಎಂಜಿನಿಯರ್‌ ಈ ಸಂಸ್ಥೆಯ ಸ್ಪಾಪಕರು.

ತಮಿಳುನಾಡಿನ ‘ಅಗ್ನಿಕುಲ’ ಎಂಬ ಸಂಸ್ಥೆಯು ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಉಡ್ಡಯನ ನೆಲೆಯನ್ನು ಸ್ಥಾಪಿಸಿ ಗಮನ ಸೆಳೆದಿದೆ.   

‘ಖಾಸಗಿ ವಲಯದ ಸಂಸ್ಥೆಗಳ ಸಾಧನೆ ಭಿನ್ನವಾಗಿವೆ. ಇಸ್ರೊದ ಕೆಲಸಗಳನ್ನು ಅವು ಪುನರಾವರ್ತನೆ ಮಾಡಲು ಹೋಗುತ್ತಿಲ್ಲ. ಸ್ಕೈರೂಟ್ ಮತ್ತು ಅಗ್ನಿಕುಲ ಅಭಿವೃದ್ಧಿಪಡಿಸಿದ ರಾಕೆಟ್‌ಗಳು ವಿಭಿನ್ನವಾಗಿವೆ. ಉಪಗ್ರಹ ಅಪ್ಲಿಕೇಶನ್‌ಗಳು ತಂತ್ರಜ್ಞಾನದ ವಿಷಯದಲ್ಲಿ ಅತ್ಯಾಧುನಿಕವಾಗಿವೆ’ ಎಂದು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ದೃಢೀಕರಣ ಕೇಂದ್ರದ (ಐಎನ್-ಸ್ಪೇಸ್) ಅಧ್ಯಕ್ಷ ಪವನ್ ಗೋಯೆಂಕಾ ತಿಳಿಸಿದ್ದಾರೆ.

ಭಾರತದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ದತ್ತಾಂಶಗಳಿಗೆ ಬೇಡಿಕೆ ಕಡಿಮೆ ಇರುವುದರಿಂದ, ಭಾರತದಲ್ಲಿನ ಉದ್ಯಮಗಳು ವಿದೇಶದಲ್ಲಿ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕಳ್ಳುವ ಅನ್ವೇಷಣೆಯಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT