ಸೋಮವಾರ, ಸೆಪ್ಟೆಂಬರ್ 23, 2019
28 °C

ಚಂದ್ರಯಾನ 2 | ಸಂದೇಶ ಕಳಿಸದ ‘ವಿಕ್ರಮ್‌’ ಬಿಟ್ಟು ಆರ್ಬಿಟರ್‌ನತ್ತ ಇಸ್ರೊ ಚಿತ್ತ

Published:
Updated:

ಬೆಂಗಳೂರು: ಚಂದ್ರನ ನೆಲದ ಮೇಲಿರುವ ಲ್ಯಾಂಡರ್‌ ‘ವಿಕ್ರಮ್‌’ ಜತೆ ಸಂಪರ್ಕ ಬೆಳೆಸಲು ನಿರಂತರ ಪ್ರಯತ್ನ ಮುಂದುವರಿಸಿರುವ ಇಸ್ರೊ, ಆರ್ಬಿಟರ್‌ನ ದತ್ತಾಂಶಗಳನ್ನು ಸ್ವೀಕರಿಸಿ ವಿಶ್ಲೇಷಣೆಗೊಳಪಡಿಸುವ ಕಾರ್ಯದತ್ತ ಗಮನಹರಿಸಿದೆ.

‘ವಿಕ್ರಮ್‌ ಲ್ಯಾಂಡರ್‌ ಚಂದ್ರನ ನೆಲದ ಮೇಲೆ ಇರುವುದನ್ನು ಆರ್ಬಿಟರ್‌ ಪತ್ತೆ ಮಾಡಿದೆ. ಆದರೆ, ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಸಂಪರ್ಕವನ್ನು ಸಾಧಿಸಲು ಎಲ್ಲ ಪ್ರಯತ್ನ ನಡೆಸಿದ್ದೇವೆ’ ಎಂದು ಇಸ್ರೊ ಮಂಗಳವಾರ ಅಧಿಕೃತವಾಗಿ ಟ್ವೀಟ್‌ ಮಾಡಿದೆ.

ಇಸ್ರೊ ಸಂಪರ್ಕ ಸಾಧಿಸಲು ನೀಡಿದ್ದ ಗಡುವಿನಲ್ಲಿ 3 ದಿನಗಳು ಮುಗಿದಿದ್ದು, ಇನ್ನು 11 ದಿನಗಳು ಮಾತ್ರ ಬಾಕಿ ಉಳಿದಿವೆ. ಹಿರಿಯ ವಿಜ್ಞಾನಿಗಳು ಸಂಪರ್ಕ ಸಾಧಿಸುವುದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

‘ವಿಕ್ರಮ್‌’ ಮತ್ತು ‘ಪ್ರಜ್ಞಾನ್‌’ಗಳ ಆಸೆ ಕೈಬಿಟ್ಟು, ಆರ್ಬಿಟರ್‌ ಕಳುಹಿಸುತ್ತಿರುವ ಮಾಹಿತಿ ಮತ್ತು ದತ್ತಾಂಶಗಳತ್ತ ಗಮನಹರಿಸಲು ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರ್ಬಿಟರ್‌ ವಿವಿಧ ಉದ್ದೇಶಗಳ ಒಟ್ಟು ಎಂಟು ಪೇಲೋಡ್‌ಗಳನ್ನು ಹೊಂದಿದೆ. ಚಂದ್ರನ ಮೇಲ್ಮೈ ಮ್ಯಾಪಿಂಗ್‌ ಮಾಡುವ ಕ್ಯಾಮೆರಾ(ಟಿಎಂಸಿ–2), ಒಟ್ಟು ಎರಡು ಕ್ಯಾಮೆರಾಗಳು ಮೂರು ಆಯಾಮಗಳ ಮೇಲ್ಮೈ ಚಿತ್ರವನ್ನು ಸೆರೆ ಹಿಡಿಯುತ್ತವೆ. ಚಂದ್ರನಲ್ಲಿ ಹೇರಳವಾಗಿರುವ ಖನಿಜವನ್ನು ಪತ್ತೆ ಮಾಡಿ, ಎಲ್ಲೆಲ್ಲಿ ಅದರ ನಿಕ್ಷೇಪವಿದೆ ಎಂಬುದನ್ನು ‘ಕೊಲಿಮೇಟೆಡ್‌ ಲಾರ್ಜ್‌ ಅರೇ ಸಾಫ್ಟ್‌ ಎಕ್ಸ್‌–ರೇ ಸ್ಪೆಕ್ಟೋಮೀಟರ್‌’(CLASS) ನಕಾಶೆ ತಯಾರಿಸಿ ಭೂಮಿಗೆ ಕಳಿಸುತ್ತದೆ.

ಸೂರ್ಯನಿಂದ ಹೊರ ಹೊಮ್ಮುವ ಸೌರ ಕ್ಷ–ಕಿರಣಗಳನ್ನು ವಿಶ್ಲೇಷಿಸುವ ಕಾರ್ಯವನ್ನು ಸೋಲಾರ್‌ ಎಕ್ಸ್‌–ರೇ ಮಾನಿಟರ್‌ (XSM) ನಿರ್ವಹಿಸುತ್ತದೆ. ಚಂದ್ರನ ವಾತಾವರಣದ ಸಂಯೋಜನೆಯನ್ನು ಅಧ್ಯಯನ ಮಾಡಿ ವಿವರದ ದತ್ತಾಂಶವನ್ನು ಸಿಎಚ್‌ಎಸಿಇ–3  ದಾಖಲಿಸಿಕೊಳ್ಳುತ್ತದೆ. ಸಿಂಥೆಟಿಕ್‌ ಅಪರ್ಚರ್‌ ರಡಾರ್‌ ರೇಡಿಯೋ ತರಂಗಾಂತರಗಳ ಮೂಲಕ ಮೇಲ್ಮೈ ನಕಾಶೆಯನ್ನು ಸಿದ್ಧಪಡಿಸುತ್ತದೆ. ಚಂದ್ರಯಾನ–1 ರಲ್ಲಿ ಈ ಕಾರ್ಯಕ್ಕೆ ಇಮೇಜಿಂಗ್‌ ಇನ್‌ಫ್ರಾ–ರೆಡ್‌ ಸ್ಪೆಕ್ಟೊಮೀಟರ್‌ ಬಳಸಲಾಗಿತ್ತು. ಇದರಿಂದ ನೀರು ಮತ್ತು ಹೈಡ್ರಾಕ್ಸಿಲ್ (ಆಮ್ಲ ಜನಕವನ್ನು ಒಳಗೊಂಡ ಜಲಜನಕ) ಅನ್ವೇಷಣೆ ಸಾಧ್ಯ.

ಭೂಕಂಪದ ಮಾದರಿಯಲ್ಲಿ ಚಂದ್ರ ಕಂಪನದ ಚಟುವಟಿಕೆಯನ್ನು ಲೂನಾರ್‌ ಸೆಸಿಮಿಕ್ ಆಕ್ಟಿವಿಟಿ ಕಂಪನದ ಮಾಪನ ಮಾಡುತ್ತದೆ. ಪ್ಲಾಸ್ಮಾ ಸಾಂದ್ರತೆಯನ್ನು ಅಳೆಯಲು ರೇಡಿಯೋ ಅನಾಟಮಿ ಆಫ್‌ ಮೂನ್‌ ಬೌಂಡ್‌ ಹೈಪರ್‌ ಸೆನ್ಸಿಟಿವ್‌ ಅಯಾನೊಸ್ಪಿಯರ್‌ ಅಂಡ್‌ ಅಟ್ಮಾಸ್ಪಿಯರ್‌ ಬಳಸಲಾಗುತ್ತದೆ. ಅಲ್ಲದೆ, ಅತ್ಯಧಿಕ ರೆಸಲ್ಯೂಷನ್‌ ಚಿತ್ರಗಳನ್ನು ಸೆರೆ ಹಿಡಿಯುವ ಕ್ಯಾಮೆರಾವನ್ನೂ ಹೊಂದಿದೆ.

 

Post Comments (+)