ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊದಿಂದ ಚಂದ್ರಯಾನ-2 ಮಿಷನ್ ದತ್ತಾಂಶ ಸಾರ್ವಜನಿಕರಿಗೆ ಬಿಡುಗಡೆ

Last Updated 25 ಡಿಸೆಂಬರ್ 2020, 5:33 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ದೇಶದ ಎರಡನೇ ಮಹತ್ವಾಕಾಂಕ್ಷೆಯ ಮಿಷನ್, ಚಂದ್ರಯಾನ-2ರ ಮೊದಲ ಹಂತದ ದತ್ತಾಂಶ ವರದಿಯನ್ನು ಸಾರ್ವಜನಿಕರಿಗಾಗಿ ಬಿಡುಗಡೆಗೊಳಿಸಿದೆ.

ಚಂದ್ರಯಾನ-2 ಬಾಹ್ಯಾಕಾಶ ನೌಕಾ ಯಾನ 2019 ಜುಲೈ 22ರಂದು ಆರಂಭವಾಗಿತ್ತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆರ್ಬಿಟರ್, ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಒಳಗೊಂಡ 'ಚಂದ್ರಯಾನ-2' ಉಪಕರಣಗಳನ್ನು ಹೊತ್ತ ಜಿಎಸ್ಎಲ್‌ವಿ ಮಾರ್ಕ್ 3 ರಾಕೆಟ್ ಉಡಾವಣೆಗೊಂಡಿತ್ತು.

ಆದರೆ ಸೆಪ್ಟೆಂಬರ್‌ನಲ್ಲಿ ಚಂದ್ರನಲ್ಲಿ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಯತ್ನ ವಿಫಲಗೊಂಡಿತ್ತು. ಆದಾಗ್ಯೂ ಎಂಟು ವೈಜ್ಞಾನಿಕ ಸಾಧನಗಳನ್ನು ಹೊಂದಿರುವ ಆರ್ಬಿಟರ್ ಕಕ್ಷೆ ಸೇರಿತ್ತು.

ಎಲ್ಲ ಪ್ರಯೋಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಲಭ್ಯವಿರುವ ದತ್ತಾಂಶದಿಂದ ಉಡಾವಣೆ ಪೂರ್ವದಲ್ಲಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಮರ್ಥವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಇಸ್ರೊ ತಿಳಿಸಿದೆ.

ಬೆಂಗಳೂರು ಸಮೀಪದಲ್ಲಿರುವ ಇಂಡಿಯನ್ ಸ್ಪೇಸ್ ಸೈನ್ಸ್ ಡೇಟಾ ಸೆಂಟರ್‌ನಲ್ಲಿ (ಐಎಸ್‌ಎಸ್‌ಡಿಸಿ), ಚಂದ್ರಯಾನ-2 ಮಿಷನ್ ದತ್ತಾಂಶ ಸಂಗ್ರಹಿಸಲಾಗಿದೆ.

ಚಂದ್ರಯಾನ-2 ದತ್ತಾಂಶವು ಪ್ಲಾನೆಟರಿ ಡೇಟಾ ಸಿಸ್ಟಂ-4 (ಪಿಡಿಎಸ್4) ಮಾನದಂಡದಲ್ಲಿರಬೇಕು. ಅದನ್ನು ವೈಜ್ಞಾನಿಕವಾಗಿ ಮತ್ತುತಾಂತ್ರಿಕವಾಗಿ ರಿವ್ಯೂ ಮಾಡಬೇಕಾಗುತ್ತದೆ. ಬಳಿಕ ಜಾಗತಿಕ ವೈಜ್ಞಾನಿಕ ಸಮುದಾಯ ಹಾಗೂ ಸಾರ್ವಜನಿಕರಿಗೆ ಹಂಚಿಕೊಳ್ಳಬಹುದಾಗಿದೆ ಎಂದು ಇಸ್ರೊ ತಿಳಿಸಿದೆ.

ಈ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆದ್ದರಿಂದ ಐಎಸ್‌ಎಸ್‌ಡಿಸಿ ಆತಿಥ್ಯದ ಪ್ರಧಾನ್ (PRADAN) ಪೋರ್ಟಲ್‌ನಲ್ಲಿ ಚಂದ್ರಯಾನ-2 ದತ್ತಾಂಶವನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT