ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಿಯ ಮೆದುಳಲ್ಲಿ ‘ಮಾನವ’

Last Updated 25 ಅಕ್ಟೋಬರ್ 2022, 19:45 IST
ಅಕ್ಷರ ಗಾತ್ರ

ಚಿಕ್ಕವನಾಗಿದ್ದಾಗ ‘ಹೊಯ್ಟಿ, ಟೊಯ್ಟಿ’ ಎನ್ನುವ ಕಥೆಯನ್ನು ಓದಿದ್ದೆ. ಅದೊಂದು ಆನೆಯ ಕಥೆ. ಆಫ್ರಿಕಾದ ಆನೆಯೊಂದಕ್ಕೆ ಹೃದಯ ನಿಂತಾಗ, ನಿಧನನಾಗಿದ್ದ ಜರ್ಮನ್‌ ವಿಜ್ಞಾನಿಯೊಬ್ಬನ ಮೆದುಳನ್ನು ಜೋಡಿಸಲಾಗಿರುತ್ತದೆ. ಗುಪ್ತವಾಗಿ ನಡೆದ ಈ ಪ್ರಯೋಗದ ಫಲ ಅನಂತರ ಸರ್ಕಸ್ಸಿನಲ್ಲಿ ನೋಡುಗರನ್ನು ತನ್ನ ಬುದ್ಧಿವಂತಿಕೆಯಿಂದ ರಂಜಿಸುತ್ತದೆ. ಒಮ್ಮೆ ಏತಕ್ಕೋ ಸಿಟ್ಟಾಗಿ ಸರ್ಕಸ್ಸಿನಿಂದ ತಪ್ಪಿಸಿಕೊಂಡು ಹೋದ ಆನೆ ಊರೆಲ್ಲಾ ದಾಂಧಲೆ ಮಾಡುತ್ತದೆ. ತನ್ನನ್ನು ಸೃಷ್ಟಿಸಿದ ವಿಜ್ಞಾನಿಯ ಭೇಟಿ ಆಗುತ್ತದೆ. ಶಾಂತವಾಗುತ್ತದೆ. ಎಲ್ಲರಿಗೂ ಈ ಗುಪ್ತವಿಚಾರ ಗೊತ್ತಾಗುತ್ತದೆ. ಇದು ಕಥೆ. ರಷ್ಯನ್‌ ಭಾಷೆಯಲ್ಲಿ ಮೊದಲಿಗೆ ಎ. ಬೆಲ್ಯೋವ್‌ ಎಂಬಾತ ಬರೆದಿದ್ದ ಈ ವೈಜ್ಞಾನಿಕ ಕಥೆಯ ಕನ್ನಡಾನುವಾದ ‘ಮಯೂರ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮಕ್ಕಳಲ್ಲಿ ಬೆರಗು ಮೂಡಿಸಿತ್ತು.

ಕನ್ನಡಕ್ಕೆ ಈ ಕಥೆಯನ್ನು ಅನುವಾದಿಸಿದವರು ಯಾರೆಂಬುದು ನೆನಪಿಲ್ಲದಿದ್ದರೂ, ಕಥೆಯ ಹೂರಣ ಮಾತ್ರ ಮರೆಯಲಾಗಿಲ್ಲ. ಹೌದೇ? ಮೆದುಳನ್ನು ಕಸಿ ಮಾಡಿದರೆ ವ್ಯಕ್ತಿತ್ವ ಬದಲಾಗುತ್ತದೆಯೇ? ಆನೆಯು ಮನುಷ್ಯನಂತೆ ನಡೆದುಕೊಳ್ಳಬಹುದೇ? ಹೀಗೆಲ್ಲ ಆಗ ಪ್ರಶ್ನೆಗಳು ಎದ್ದಿದ್ದುವು. ತದನಂತರ ವಿಜ್ಞಾನವನ್ನು ಅಧ್ಯಯನ ಮಾಡುತ್ತ ಹೋದ ಹಾಗೆ, ಈ ಬಗೆಯ ಮೆದುಳಿನ ಕಸಿ ಕಷ್ಟಕರ ಎಂದು ತಿಳಿದಾಗ, ಹೊಯ್ಟಿ-ಟೊಯ್ಟಿಯ ಅದ್ಭುತವೆನ್ನಿಸಿತು. ಮೊನ್ನೆ ‘ನೇಚರ್‌’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನೆಯೊಂದು ಇದೇ ಬಗೆಯಲ್ಲಿ ಇಲಿಯ ಮೆದುಳಿನೊಳಗೆ ಮನುಷ್ಯನ ಇಡೀ ಮೆದುಳಲ್ಲದಿದ್ದರೂ ಕೆಲವು ನರಕೋಶಗಳನ್ನು ಕಸಿ ಮಾಡಿರುವ ಬಗ್ಗೆ ವರದಿ ಮಾಡಿದೆ.

ಅಮೆರಿಕೆಯ ಸ್ಟಾನ್‌ಫರ್ಡ್‌ ವಿಶ್ವವಿದ್ಯಾನಿಲಯದ ನರವಿಜ್ಞಾನಿ ಸರ್ಜೂ ಪ್ಯಾಶ್ಕ ಮತ್ತು ಸಂಗಡಿಗರು ಪ್ರನಾಳಗಳಲ್ಲಿ ಬೆಳೆಸಿದ ಮಾನವ ನರಕೋಶಗಳ ಮುದ್ದೆಯನ್ನು ಇಲಿಮರಿಗಳ ಮೆದುಳಿನಲ್ಲಿ ಕಸಿ ಮಾಡಿ, ಅವು ಅಲ್ಲಿ ಉಳಿದು, ಬೆಳೆದು, ಕೆಲಸ ಮಾಡುತ್ತವೆಯೋ ಎಂದು ಪರೀಕ್ಷಿಸಿದ್ದಾರೆ. ಮನುಷ್ಯರ ನರಕೋಶಗಳನ್ನು ಕೃಷಿ ಮಾಡಿದರೆ, ಅವು ಸಣ್ಣ ಮುದ್ದೆಯಾಗಿ ಬೆಳೆಯುತ್ತವೆಯೇ ಹೊರತು ಮೆದುಳಿನಂತೆ ವ್ಯವಸ್ಥಿತವಾಗಿ ಹೆಣೆದ ನರಗಳ ಜಾಲವಾಗುವುದಿಲ್ಲ. ಮೆದುಳಿನ ಚಟುವಟಿಕೆಗೆ ಇಂತಹ ಜಾಲಗಳೇ ಕಾರಣ. ಹೀಗಾಗಿ ಕೋಶಗಳ ಮುದ್ದೆಯನ್ನು ಇಲಿಗಳ ಮೆದುಳಿನಲ್ಲಿ ಬೆಳೆಸಿ, ಅವು ಜಾಲದೊಳಗೆ ಬೆಸೆದುಕೊಳ್ಳಬಹುದೇ ಎಂದು ಪ್ಯಾಶ್ಕ ಮತ್ತು ಸಂಗಡಿಗರು ಪರೀಕ್ಷಿಸಿದ್ದಾರೆ.

ಇನ್ನೂ ಮೆದುಳು ಚೆನ್ನಾಗಿ ಬೆಳೆಯದ ಇಲಿಮರಿಗಳ ಶಿರದಲ್ಲಿ ಒಂದಿಷ್ಟು ಮಾನವಕೋಶಗಳನ್ನು ಕಸಿ ಮಾಡಿದ್ದಾರೆ. ಮೀಸೆಗಳನ್ನು ನಿಯಂತ್ರಿಸುವ ಇಲಿಗಳ ಮೆದುಳಿನ ಭಾಗದಲ್ಲಿ ಇವನ್ನು ಇರಿಸಿ, ಎಂಆರ್‌ಐ ತಂತ್ರದ ಮೂಲಕ ಬೆಳೆವಣಿಗೆಯನ್ನು ಗಮನಿಸಿದ್ದಾರೆ. ಇಲಿಗಳ ಮೆದುಳಿನಲ್ಲಿ ಹೀಗೆ ನೆಟ್ಟ ಕೋಶಗಳು ಕ್ರಮೇಣ ಬೆಳೆದು ಒಂಬತ್ತು ಪಾಲು ದೊಡ್ಡದಾದುವಂತೆ. ಅಷ್ಟೇ ಅಲ್ಲ. ಇಲಿಗಳದ್ದೇ ನರಕೋಶಗಳ ಜೊತೆಗೆ ಬೆಸೆದುಕೊಂಡು, ಜಾಲದೊಳಗೆ ಒಂದಾದುವು ಎನ್ನುತ್ತಾರೆ ಪ್ಯಾಶ್ಕ.

ಅವು ಅಲ್ಲಿ ಸುಮ್ಮನೇ ಬೆಳೆದವೋ, ಇಲ್ಲ ಇಲಿಯ ಮೆದುಳಿನ ಅಂಗವಾಗಿ ಕೆಲಸ ಮಾಡುತ್ತಿದ್ದುವೋ ಗಮನಿಸಲು ಮೀಸೆಗಳಿಗೆ ಚುರುಕು ಮುಟ್ಟಿಸಿ ಗಮನಿಸಿದರು. ಮೀಸೆಗಳು ಅಲ್ಲಾಡಿದಾಗೆಲ್ಲ, ಈ ಮಾನವ ನರಕೋಶಗಳು ಚುರುಕಾಗಿ ವಿದ್ಯುತ್‌ ಹರಿಸುತ್ತಿದ್ದುವು. ಅರ್ಥಾತ್‌, ಅವು ಕಾರ್ಯಪ್ರವೃತ್ತವಾಗಿದ್ದುವು ಎನ್ನುತ್ತಾರೆ ಪ್ಯಾಶ್ಕ.

ಆದರೆ ಇವು ನಿಜವಾಗಿಯೂ ಮನುಷ್ಯನ ನರಕೋಶಗಳಾಗಿಯೇ ಉಳಿದಿವೆಯೇ ಅಥವಾ ಇಲಿಗಳದ್ದೋ ಎಂದು ತಿಳಿಯಬೇಕಲ್ಲ! ಇದಕ್ಕಾಗಿ ಪ್ಯಾಶ್ಕ ತಂಡ ಕಸಿ ಮಾಡುವ ಮೊದಲು ಜೀವಕೋಶಗಳನ್ನು ಗುರುತಿಸಲಾಗುವಂತೆ ಮಾರ್ಪಡಿಸಿತ್ತು. ಬೆಳಕು ಬಿದ್ದಾಗ ವಿದ್ಯುತ್‌ ಹೊಮ್ಮಿಸುವ ಪ್ರೊಟೀನು ತಯಾರಿಸುವಂತೆ ಅವುಗಳನ್ನು ತಿದ್ದಿತ್ತು. ಇಂತಹ ಕೋಶಗಳನ್ನು ಕಸಿ ಮಾಡಿದ ಇಲಿಗಳ ಮೆದುಳಿನ ಭಾಗಗಳ ಮೇಲೆ ಬೆಳಕು ಚೆಲ್ಲಿದಾಗ ಅವು ವಿದ್ಯುತ್‌ ಸಂಕೇತಗಳನ್ನು ಸೃಷ್ಟಿಸಿದುವು. ಅರ್ಥಾತ್‌, ಇಲಿಗಳ ಮೆದುಳಿನಲ್ಲಿ ಇದ್ದಾಗಲೂ ಇವು ತಮ್ಮತನವನ್ನು ತೋರ್ಪಡಿಸಬಲ್ಲುವು ಎಂದಾಯಿತು.

ಹಾಗಿದ್ದರೆ ಇಲಿಗಳು ಮನುಷ್ಯನಂತೆ ಚಿಂತಿಸಬಲ್ಲುವೇ? ನಡೆದುಕೊಳ್ಳಬಲ್ಲುವೇ? ಅಥವಾ ಮನುಷ್ಯನ ಕೋಶಗಳು ಇಲಿಗಳದ್ದರಂತೆ ಆಗಿಬಿಡಬಹುದೇ? ಈ ಪ್ರಶ್ನೆಗಳಿಗೆ ಉತ್ತರಿಸಲು ಇನ್ನೂ ಸಾಕಷ್ಟು ಕಾಲ ಬೇಕು ಎನ್ನುತ್ತಾರೆ ಪ್ಯಾಶ್ಕ. ಏಕೆಂದರೆ ಕಸಿ ಮಾಡಿದ ಮೇಲೆ ಒಂಬತ್ತು ಪಟ್ಟು ದೊಡ್ಡದಾದ ಮನುಷ್ಯ ಕೋಶಗಳು ಇಲಿಗಳ ಮೆದುಳಿನಲ್ಲಿರುವ ಎರಡು ಕೋಟಿ ನರಕೋಶಗಳಲ್ಲಿ ಕೇವಲ ಒಂದು ಶತಾಂಶಕ್ಕೂ ಕಡಿಮೆಯಷ್ಟೆ ಇವೆ. ಮನುಷ್ಯನ ಮೆದುಳಿನಲ್ಲಿ ಇದರ ಹತ್ತು ಪಟ್ಟು ಹೆಚ್ಚು ಕೋಶಗಳಿವೆ. ಅವೆಲ್ಲವೂ ಸೇರಿ ಮಾಡುವ ಕೆಲಸವನ್ನು ಈ ಪುಟಾಣಿ ನರಗಳ ಗುಂಪು ಮಾಡುತ್ತದೆನ್ನುವುದು ಊಹೆಗೂ ನಿಲುಕದ ವಿಷಯ.

ಹಾಗಿದ್ದರೆ ಹೊಯ್ಟಿ ಟೊಯ್ಟಿ ಕಥೆ ನಿಜವಾಗುವುದಿಲ್ಲವೇ? ಕನಿಷ್ಠ ಇಲಿಗಳಲ್ಲಿಯಂತೂ ಆಗುವುದಿಲ್ಲ. ಏಕೆಂದರೆ ಮನುಷ್ಯನ ಮೆದುಳು ಐದು ತಿಂಗಳು ಬೆಳೆದಲ್ಲದೆ ಪೂರ್ಣ ಪ್ರಮಾಣದ ಸಾಮರ್ಥ್ಯವನ್ನು ಪಡೆಯಲಾರದು. ಇಷ್ಟು ಅವಧಿಯಲ್ಲಿ ಇಲಿ ತನ್ನ ಜೀವನದ ಕಾಲು ಭಾಗವನ್ನೇ ಕಳೆದು ಬಿಟ್ಟಿರುತ್ತದೆ. ಅಂದರೆ ಇಲಿಯ ಮೆದುಳಿನ ಬೆಳೆವಣಿಗೆಯಷ್ಟು ವೇಗವಾಗಿ ಮನುಷ್ಯನ ನರಕೋಶಗಳೂ ಬೆಳೆಯಬೇಕಷ್ಟೆ. ಇದು ಸಾಧ್ಯವೋ ತಿಳಿದಿಲ್ಲ.

ಹಾಗಿದ್ದರೆ ಇಂತಹ ಪ್ರಯೋಗಗಳ ಪ್ರಯೋಜನವೇನು? ಇದಕ್ಕೂ ಪ್ಯಾಶ್ಕ ತಂಡ ಉತ್ತರಿಸಿದೆ. ಮನುಷ್ಯರಲ್ಲಿ ಅತಿ ಅಪರೂಪವೆನ್ನಿಸುವ ಕೆಲವು ನರರೋಗಗಳ ಮೆದುಳಿನಿಂದ ತೆಗೆದ ನರಕೋಶಗಳನ್ನು ಈ ಇಲಿಗಳಲ್ಲಿ ಬೆಳೆಸಿ ಗಮನಿಸಿದೆ. ಸಾಮಾನ್ಯ ಮೆದುಳಿನ ಕೋಶಗಳಲ್ಲಿ ಇಲ್ಲದ ಕೆಲವು ದೋಷಗಳು ಈ ಕೋಶಗಳಲ್ಲಿ ಕಂಡು ಬಂದಿವೆ. ಇಲಿಗಳಲ್ಲಿ ಅವುಗಳ ಚಟುವಟಿಕೆ ಕುಂದಿದೆ. ಹೀಗಾಗಿ ಏನಿಲ್ಲವೆಂದರೂ ಮನುಷ್ಯರ ಮೆದುಳಿನ ಕೆಲವು ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳಲು ಇಂಥ ಕಸಿಪ್ರಯೋಗಗಳು ನೆರವಾಗಬಹುದು ಎನ್ನುವುದು ಪ್ಯಾಶ್ಕ ಅವರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT