ನರ ಮಂಡಲವನ್ನೇ ನಾಶ ಮಾಡುವ ಬ್ಯಾಕ್ಟೀರಿಯಾದ ವಿಷ!

ಬೆಂಗಳೂರು: ಪ್ರಾಪ್ತ ವಯಸ್ಸಿಗೆ ಬಂದ ಯುವಕ ಅಥವಾ ಯುವತಿಯರು ಪರಸ್ಪರ ಮನಸ್ಸಿಗೆ ‘ಕನ್ನ’ ಹಾಕಿದಾಗ ಆಗುವ ಅಲ್ಲೋಲ ಕಲ್ಲೋಲ ಅನುಭವಿಸಿದವರಿಗೆ ಗೊತ್ತೇ ಇದೆ. ಆದರೆ, ಬ್ಯಾಕ್ಟೀರಿಯಾಗಳು ದೇಹದೊಳಗೆ ‘ಕನ್ನ’ ಹಾಕಿ ಉಗುಳುವ ವಿಷವು ವ್ಯಕ್ತಿಗಳ ಬದುಕನ್ನೇ ನಾಶ ಮಾಡುತ್ತದೆ.
ಕೆಲವು ಬಗೆಯ ಬ್ಯಾಕ್ಟೀರಿಯಾಗಳು ದೇಹದೊಳಗೆ ವಿಷ ಹೊರ ಹಾಕುತ್ತವೆ. ಈ ವಿಷವು ಕೋಶಗಳನ್ನು ರಂಧ್ರ ಮಾಡಿ ಸಂಪೂರ್ಣ ಶಿಥಿಲಗೊಳಿಸುತ್ತವೆ. ಬ್ಯಾಕ್ಟೀರಿಯಾ ಪ್ರತ್ಯಕ್ಷವಾಗಿ ಯಾವುದೇ ಹಾನಿ ಮಾಡುವುದಿಲ್ಲ. ಆದರೆ, ಅದು ಹೊರಹಾಕುವ ವಿಷ ಮಾತ್ರ ಗಂಡಾಂತರಕಾರಿ. ಇದರಿಂದ ವ್ಯಕ್ತಿಯ ದೇಹದೊಳಗಿನ ಕೋಶ ವ್ಯವಸ್ಥೆಯೇ ಕೆಟ್ಟು ಹೋಗಿ ಕಾಯಿಲೆ ಬೀಳಬೇಕಾಗುತ್ತದೆ.
ಇದು ಒಂದು ರೀತಿಯಲ್ಲಿ ವಿಜ್ಞಾನಿಗಳಿಗೆ ವರವಾಗಿದೆ. ಅದು ಹೇಗೆಂದರೆ; ವಿಷದ ಸೃಷ್ಟಿ, ಅದು ಕೋಶಗಳನ್ನು ಶಿಥಿಲಗೊಳಿಸುವ ಪ್ರಕ್ರಿಯೆ ಹಲವು ನರ ಸಂಬಂಧಿ ರೋಗಗಳ ಬಗ್ಗೆ ಆಳವಾದ ಅಧ್ಯಯನ ನಡೆಸಲು ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಡಿಎನ್‌ಎ ಅನುಕ್ರಮಣಿಕೆ ರೂಪಿಸಲು ವಿಜ್ಞಾನಿಗಳಿಗೆ ಸಹಾಯಕವಾಗಿದೆ.
ಬ್ಯಾಕ್ಟೀರಿಯಾದ ವಿಷವು ಕೋಶಗಳಲ್ಲಿ ಮಾಡುವ ಅನಾಹುತಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅನಾವರಣಗೊಳಿಸಿದ್ದಾರೆ. ಮುಖ್ಯವಾಗಿ, ಈ ಬಗೆಯ ಚಟುವಟಿಕೆಯಿಂದ ನರಮಂಡಲವು ಶಿಥಿಲಗೊಳ್ಳುತ್ತದೆ. ಆಲ್‌ಝೈಮರ್ ಮತ್ತು ಪಾರ್ಕಿನ್ಸನ್‌ನಂತಹ ಗಂಭೀರ ಸ್ವರೂಪದ ನರ ರೋಗಗಳಿಗೆ ಇಂತಹ ವಿಷ ಕಾರಣ ಎಂಬ ಅಭಿಪ್ರಾಯಕ್ಕೆ ವಿಜ್ಞಾನಿಗಳು ಬಂದಿದ್ದಾರೆ.
ಬ್ಯಾಕ್ಟೀರಿಯಾ ಹೊರಸೂಸುವ ವಿಷವು ಪ್ರಾಣಿಗಳು ಮತ್ತು ಮನುಷ್ಯರೊಳಗಿನ ಕೋಶದೊಳಗೆ ಅತಿ ಸೂಕ್ಷ್ಮ ರಂಧ್ರಗಳನ್ನು ಕೊರೆಯುತ್ತಾ ಹೋಗುತ್ತದೆ. ಇದರಿಂದ ಕೋಶಗಳು ನಿಧಾನವಾಗಿ ಸಾವನ್ನಪ್ಪುತ್ತವೆ. ‘ಕೋಶಗಳ ಸಾವಿಗೆ ಈ ವಿಷ ಕಾರಣವಾಗಿದ್ದರೂ ಇಲ್ಲಿಯವರೆಗೆ ಬ್ಯಾಕ್ಟೀರಿಯಾವೇ ಕಾರಣವಾಗಿದೆ ಎಂಬುದು ಸಾಮಾನ್ಯ ನಂಬಿಕೆಯಾಗಿತ್ತು’ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ರಾಹುಲ್ ರಾಯ್.
ಈ ಕುರಿತ ಅಧ್ಯಯನದ ವರದಿಯೊಂದನ್ನು ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಪ್ರಕಟಿಸಿದೆ.
ವಿಷ ಕಕ್ಕಿದ ನಂತರ ಏನಾಗುತ್ತದೆ?: ಪ್ರಾಣಿ ಮತ್ತು ಮಾನವನ ಒಳಪೊರೆಯ (membrane) ಕೋಶಗಳಲ್ಲಿ ಕೊಬ್ಬು ಸಂಗ್ರಹವಾಗಿರುತ್ತದೆ. ವಿಷವು ರಂಧ್ರ ಕೊರೆಯುವುದಕ್ಕೆ ಮೊದಲು ಕೋಶಗಳಲ್ಲಿ ಅಚ್ಚರಿ ಹುಟ್ಟಿಸುವ ವಿವಿಧ ಹಂತಗಳ ಚಟುವಟಿಕೆ ನಡೆಸುತ್ತದೆ. ಇದನ್ನು ವಿಜ್ಞಾನಿಗಳು ಹತ್ತಿರದಿಂದ ಗಮನಿಸಿದ್ದಾರೆ.
ಮೊದಲಿಗೆ ಏಕ ಅಣುಗಳು ಒಳ ಪೊರೆಗೆ ವಿಷವನ್ನು ಮೆತ್ತಿಕೊಳ್ಳುವಂತೆ ಮಾಡುತ್ತವೆ. ಇತರ ವಿಷಯುಕ್ತ ಅಣುಗಳು ಒಳ ಚರ್ಮದ ಸುತ್ತ ಗಿರಕಿ ಹೊಡೆಯಲಾರಂಭಿಸುತ್ತವೆ. ಆ ಬಳಿಕ ಅವು ಪರಸ್ಪರ ವರ್ತುಲ ಆಕಾರದ ರಚನೆಯನ್ನು ಸೃಷ್ಟಿಸಲಾರಂಭಿಸುತ್ತವೆ. ಅವು ಪರಸ್ಪರ ಸಂವಾದಿಸುತಲೇ ವರ್ತುಲ ರಚನೆ ಮಾಡುತ್ತವೆ. ಅಂತಿಮವಾಗಿ ಕೋಶದ ಒಳಪೊರೆಯಲ್ಲಿ ತೂತುಗಳನ್ನು ಮಾಡುತ್ತವೆ.
ಐಐಎಸ್‌ಸಿ ವಿಜ್ಞಾನಿಗಳ ತಂಡ ಇ.ಕೋಲಿ (E.Coli.) ಬ್ಯಾಕ್ಟಿರಿಯಾ ಹೊರ ಸೂಸುವ ವಿಷವು ರಂಧ್ರ ಕೊರೆಯುವ ಸಮಸ್ಯೆ ಬಗ್ಗೆ ಉತ್ತರ ಕಂಡುಕೊಳ್ಳಲು ಹೊರಟಾಗ ಈ ವಿಚಿತ್ರ ವರ್ತನೆಯನ್ನು ಪತ್ತೆ ಮಾಡಿತು. ಹನ್ನೆರಡು ಪ್ರೋಟೀನ್ ಅಣುಗಳು ವೃತ್ತಾಕಾರದಲ್ಲಿ ತೂತುಗಳನ್ನು ಕೊರೆಯುತ್ತವೆ. ಇದನ್ನು ಸಿಟೊಲಿಸಿನ್ (Cytolysin ) ವೃತ್ತಾಕಾರ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ.
ಕೋಶದ ಒಳಪೊರೆಯಲ್ಲಿರುವ ಯಾವ ಅಂಶ ರಂಧ್ರ ಕೊರೆಯಲು ವಿಷವನ್ನು ಪ್ರೇರೇಪಿಸುತ್ತದೆ ಎಂಬುದನ್ನು ಪತ್ತೆ ಹಚ್ಚುವುದು ವಿಜ್ಞಾನಿಗಳ ಉದ್ದೇಶವಾಗಿತ್ತು. ನಿರ್ದಿಷ್ಟ ಕೋಶದ ಕೊಬ್ಬಿನ ಒಳಪೊರೆಯಲ್ಲಿ ರಂಧ್ರ ಉಂಟಾದ ಕಾರಣ ಸಿಟೊಲಿಸಿನ್‌ಗೆ ಕಾರ್ಯನಿರ್ವಹಿಸುವುದಕ್ಕೇ ಅಡ್ಡಿ ಆಗಿದ್ದನ್ನು ವಿಜ್ಞಾನಿಗಳು ಸೂಕ್ಷ್ಮದರ್ಶಕದ ಮೂಲಕ ಗಮನಿಸಿದರು. ಈ ಪ್ರಯೋಗದಿಂದ ಪ್ರಥಮ ಬಾರಿಗೆ ಗೊತ್ತಾದ ಸಂಗತಿಯೆಂದರೆ, ಒಳಪೊರೆಯಲ್ಲಿನ ಕೊಬ್ಬಿನಂಶದಲ್ಲಿ ರಂಧ್ರವನ್ನು ಕೊರೆಯಲು ಪ್ರೊಟೀನ್‌ಗೆ ನೆರವಾಗುತ್ತದೆ.
ಏಕ ಅಣುಗಳ ಸಂಚಾರವನ್ನು ಗಮನಿಸಲು ಐಐಎಸ್‌ಸಿಯ ಸೂಪರ್ ಕಂಪ್ಯೂಟಿಂಗ್ ವ್ಯವಸ್ಥೆಯಲ್ಲಿ ಕಂಪ್ಯೂಟರ್ ಸಿಮ್ಯುಲೇಷನ್ ಬಳಸಲಾಯಿತು. ಏಕ ಅಣುಗಳ ಸಂಚಾರ ಮಾತ್ರವಲ್ಲದೆ, ಪ್ರೊಟೀನ್‌ಗಳು ಪರಸ್ಪರ ಅವುಗಳ ಸಂವಾದ– ಸಂವಹನದ ಮೇಲೂ ಗಮನಹರಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಸತ್ಯಘೋಷ್ ಮೌರ್ಯ, ಪ್ರದೀಪ್ ಸತ್ಯನಾರಾಯಣ, ಪ್ರೊ.ಸಂಧ್ಯಾ ವಿಶ್ವೇಶ್ವರಯ್ಯ, ಡಾ.ರಾಹುಲ್ ರಾಯ್, ಪ್ರೊ.ಗಣಪತಿ ಅಯ್ಯಪ್ಪ ಮತ್ತು ಅಮಿತ್ ಬೆಹ್ರಾ ತಂಡದ ಒಟ್ಟು ಪ್ರಯತ್ನದಿಂದ ಈ ಅಂಶ ಬೆಳಕಿಗೆ ಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.