ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿಲ್ಲದವರಿಗೆ ಕಣ್ಣು ಈ ಕನ್ನಡಕ

Last Updated 26 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನವು ಏನನ್ನೆಲ್ಲಾ ಮಾಡಬಲ್ಲದು ಎಂಬುದರ ಪಟ್ಟಿ ದೊಡ್ಡದು; ‘ಕಣ್ಣಿಲ್ಲದವರಿಗೆ ಕಣ್ಣಾಗಬಲ್ಲದು’ ಎಂಬ ನಮೂದು ಕೂಡ ಆ ಪಟ್ಟಿಗೆ ಸೇರಿದೆ ಎಂದರೆ ಹಲವರಿಗೆ ಆಶ್ಚರ್ಯವಾದೀತು.

ಕಾರ್ತಿಕ್ ಮಹಾದೇವನ್ ಎಂಬುವರು ಐದು ವರ್ಷಗಳ ಹುಟ್ಟುಹಾಕಿದ ‘Envision Glasses’ ಎಂಬ ಸಂಸ್ಥೆಯ ಕನ್ನಡಕ ಅದನ್ನೇ ಮಾಡಹೊರಟಿದೆ. ‘Qualcomm’ನವರ ‘ಕ್ವಾಡ್ ಕೋರ್ ಪ್ರೊಸೆಸರ್‌’ನ ಮೇಲೆ ಒಂದು ತಂತ್ರಾಂಶವನ್ನು ಅಳವಡಿಸಿ ಇದನ್ನು ರಚಿಸಲಾಗಿದೆ. ಗೂಗಲ್ಲಿನವರು ಹಿಂದೆ ಮಾರುಕಟ್ಟೆಗೆ ತಂದಿದ್ದ ಗೂಗಲ್ ಗ್ಲಾಸುಗಳ ಮುಂದುವರೆದ ಅಧ್ಯಾಯ ಅಥವಾ ಪರಿಷ್ಕೃತ ಆವೃತ್ತಿ ಇದು ಅನ್ನಬಹುದೇನೋ. ಸ್ಮಾರ್ಟ್ ವಾಚುಗಳು ಅಷ್ಟೊಂದು ಜನಪ್ರಿಯ ಆಗಬಹುದಾದರೆ, ಸ್ಮಾರ್ಟ್ ಗ್ಲಾಸುಗಳು ಯಾಕೆ ಬರಬಾರದು ಎಂಬ ಯೋಚನೆಯೇ ಅದರ ಹಿಂದೆ ಇದ್ದದ್ದು, ಇದ್ದಬದ್ದ ತಂತ್ರಜ್ಞಾನಗಳನ್ನೆಲ್ಲ ಬಳಸಿ, ಕನ್ನಡಕಗಳೂ ಒಂದು ಮಟ್ಟಕ್ಕೆ ಮೊಬೈಲು, ಕಂಪ್ಯೂಟರುಗಳಂತೆ ಕೆಲಸ ಮಾಡುವಂತೆ ಅದರಲ್ಲಿ ಮಾಡಲಾಗಿತ್ತು. ಆದರೇಕೋ ಗೂಗಲ್ಲಿನ ಗ್ಲಾಸು ಅಷ್ಟು ಜನಪ್ರಿಯವಾಗಿರಲಿಲ್ಲ. ಅದೇ ವಿಚಾರಗಳನ್ನು ಇನ್ನೊಂದು ದಿಕ್ಕಿನಲ್ಲಿ ತಿರುಗಿಸಿದರೆ ಹೇಗೆ ಎಂಬ ಯೋಜನೆಯ ಫಲವೇ ಈ ‘ಎನ್ವಿಷನ್ ಗ್ಲಾಸ್‌’ಗಳ ಹುಟ್ಟಿಗೆ ಕಾರಣವಾಯಿತು.

ಅಂಧರ ಪಾಲಿಗೆ ಇದು ಒಂದು ಬುದ್ಧಿವಂತ ಊರುಗೋಲಾಗುವ ತಯಾರಿಯಲ್ಲಿದೆ. ಇದು ಒಂದು ಪಟ್ಟಿಯ ಹಾಗಿರುತ್ತದೆ. ಮಾಮೂಲಿ ಕನ್ನಡಕವನ್ನು ಧರಿಸುವ ಹಾಗೆ ಚೌಕಟ್ಟನ್ನು ಕಿವಿಗಳ ಮೇಲೆ ಇಡಬೇಕು, ಹಣೆಯ ಮೂಲಕ ಒಂದು ಪಟ್ಟಿ ಹಾದುಹೋಗುತ್ತದೆ, ಕಣ್ಣಿನ ಮೇಲಿನ ಭಾಗದಲ್ಲಿ ಬರುವ ಪುಟ್ಟ ಛಾಯಾಚಿತ್ರಗ್ರಾಹಿಯು ಎದುರುಗಡೆ ಇರುವ ವಸ್ತುಗಳ ಮೇಲೆ ಸ್ಥೂಲವಾಗಿ ಕಣ್ಣೋಡಿಸಿ, ಕೃತಕ ಬುದ್ಧಿಮತ್ತೆಯನ್ನು ಬಳಸಿ, ಸಮಕ್ಷದಲ್ಲಿ ಏನೇನಿದೆ ಅಂತ ತಿಳಿದುಕೊಳ್ಳುತ್ತದೆ. ಗಳಿಸಿದ ಜ್ಞಾನವನ್ನು ಧ್ವನಿಯಾಗಿ ಪರಿವರ್ತಿಸಿ, ಕನ್ನಡಕ ಹಾಕಿದವರ ಕಿವಿಗೆ ಬೀಳುವ ಹಾಗೆ ಉಸುರಿ ತನ್ನ ಕೆಲಸವನ್ನು ಈ ಚಷ್ಮಾ ಮಾಡುತ್ತದೆ.

ಅದು ಎದುರಿಗಿರುವ ವಸ್ತುಗಳನ್ನು ಗುರುತಿಸಬಲ್ಲದು, ವ್ಯಕ್ತಿಗಳಿದ್ದರೆ ಹೇಳಬಲ್ಲದು. ಅಕ್ಷರಗಳನ್ನು ಓದಿ, ಬಣ್ಣಗಳನ್ನು ಪತ್ತೆ ಹಚ್ಚಿ, ಮುಂದಿರುವುದು ಕಾರೋ ಬೈಕೋ ಉದ್ಯಾನವನವೋ ಬೆಂಚೋ ಎಂದು ಗ್ರಹಿಸಬಿಡುತ್ತದೆ. ಹೀಗೆ ನೋಡಿ, ಓದಿ, ಕಣ್ಣಾಡಿಸಿ, ವಿಶ್ಲೇಷಿಸಿ, ರೂಪ–ಆಕಾರಗಳ ಬಗ್ಗೆ ತಿಳಿದದ್ದನ್ನು ಸ್ಪೀಕರಿನ ಮೂಲಕ ಕಿವಿಮಾತಾಗಿ ಅರುಹಿ ಅಂಧರಿಗೆ ‘ತಮ್ಮ ಮುಂದೇನಿದೆ’ ಎಂಬ ಅರಿವನ್ನು ಮೂಡಿಸಬಲ್ಲದು. ಗೆಳೆಯರದ್ದೋ ಕುಟುಂಬದವರದ್ದೋ ಫೋಟೊಗಳನ್ನು ಅದರಲ್ಲಿ ಸ್ಟೋರ್ ಮಾಡಿ ಇಟ್ಟಿದ್ದರೆ, ಅವರು ಎದುರಿಗೆ ಬಂದಾಗ, ‘ಮನೆಯವರು ಬಂದರೆಂದೋ, ಇಂಥವರು ಬಂದರೆಂದೋ’ ಗೊತ್ತುಮಾಡಿ ಕೂಗಿ ಹೇಳುವ ಕೆಲಸವನ್ನೂ ಅದು ಮಾಡುತ್ತದೆ. ಹೀಗಾಗಿ, ಒಂದು ವಸ್ತುವನ್ನು ಎಲ್ಲಿಟ್ಟಿದ್ದೇವೆಂದು ಮರೆತವರೂ ಈ ಕನ್ನಡಕವನ್ನು ಹಿಡಿದುಕೊಂಡು ಮನೆಯಿಡೀ ತಿರುಗಿದರೆ, ಅದು ಎಲ್ಲಿ ಯಾವ ವಸ್ತು ಇದೆ ಅಂತ ಕೂಗಿ ಹೇಳುವಾಗ, ಕಾಣದಂತೆ ಮಾಯವಾದ ವಸ್ತು ಕೈಗೆಟಕುವಂತೆ ಮಾಡಲು ಇದನ್ನು ಬಳಸುವ ಸಾಧ್ಯತೆಯೂ ಇಲ್ಲದಿಲ್ಲ!

ಅಷ್ಟೇ ಅಲ್ಲ, ಮನೆಯವರೋ ಗೆಳೆಯರೋ ಕರೆ ಮಾಡಿದರೆ, ಕನ್ನಡಕದಲ್ಲಿ ಕಾಣುತ್ತಿರುವುದನ್ನು ಅವರಿಗೂ ತೋರಿಸಿ ಅವರಿಂದ ಮಾರ್ಗದರ್ಶನ ಪಡೆಯಲಿಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆಯೂ ಇದರಲ್ಲಿದೆ. ಮೊಬೈಲು ಜಗತ್ತಿನ ಯಾವ ಮೂಲೆ–ಮುಡುಕುಗಳಿಗೂ ಮುಟ್ಟುತ್ತದೆ ಎಂದು ನಮಗೆ ಗೊತ್ತೇ ಇದೆ. ಅಂತಿದ್ದ ಮೇಲೆ ಯಾವ ಓಣಿಯ ಯಾವ ಗಲ್ಲಿಯಲ್ಲಿ ಬೇಕಾದರೂ ಕುಳಿತು ದೂರದಲ್ಲಿರುವ ಸುಲೋಚನಧಾರಿಗೆ ದಾರಿ ತೋರಿಸುವ ಸಲಹಾಕಾರರಾಗಿ ಆತ್ಮೀಯರು ಕಾರ್ಯ ನಿರ್ವಹಿಸಬಹುದು.

ಕಾರ್ತಿಕ್ ಮಹಾದೇವನ್ ಅವರು ನೆದರ್ಲೆಂಡ್ಸ್‌ನಲ್ಲಿ ಓದುವಾಗ ಮಾಡುತ್ತಿದ್ದ ಪ್ರಾಜೆಕ್ಟ್ ಒಂದರಲ್ಲಿ ಅಂಧರ ಸಮಸ್ಯೆಗಳ ಅಧ್ಯಯನ ಮಾಡುತ್ತಿದ್ದರಂತೆ. ಆಗ ಅಂಧರಿಗೆ ಸಹಾಯವಾಗುವಂಥ ಆ್ಯಪ್‌ ಒಂದನ್ನು ತಯಾರಿಸುವ ವಿಚಾರವು ತಲೆಗೆ ಬಂದದ್ದೇ ಈ ಯೋಜನೆಗೆ ಬೀಜಾವಾಪವಾಯಿತು. ಆ್ಯಪ್‌ ಆದರೆ ಅದನ್ನು ಕೈಯಲ್ಲಿ ಮೊಬೈಲು ಹಿಡಿದು ಬಳಸಬೇಕು, ಕನ್ನಡಕವಾದರೆ ಕೈಯಲ್ಲಿ ಹಿಡಿಯಬೇಕಾದ್ದಿಲ್ಲ, ಕೈಯಲ್ಲಿ ಊರುಗೋಲನ್ನೋ ಇನ್ನೇನನ್ನೋ ಹಿಡಿಯಬಹುದು ಎಂಬ ಆಲೋಚನೆ ಬಂತಂತೆ. ಟಚ್ ಫೋನ್‌ಗಳಲ್ಲಿ ಮಾಡುವಂತೆ ಕನ್ನಡಕವನ್ನು ಮುಟ್ಟಿ, ಸ್ವೈಪ್‌ ಮಾಡಿ ಅದಕ್ಕೆ ಆದೇಶಗಳನ್ನು ಕೊಡುವ ವಿಧಾನವನ್ನೂ ರೂಪಿಸಲಾಯಿತು. ಏನು ಬೇಕು, ಏನು ಮಾಡಬೇಕು – ಎಂಬ ಆದೇಶ ಸಿಕ್ಕಿದಮೇಲೆ ಉಳಿದ ಕೆಲಸವನ್ನು ತಂತ್ರಾಂಶಗಳು ಮತ್ತು ಕೃತಕ ಬುದ್ಧಿಮತ್ತೆಗಳು ಸೇರಿ ಲೀಲಾಜಾಲವಾಗಿ ನಿರ್ವಹಿಸಿಬಿಡುವಂತೆ ಮಾಡಲಾಯಿತು.

ಸೂಚನಾ ಫಲಕಗಳನ್ನು ಓದುವುದರಿಂದ ಅಂಗಡಿಗಳ ಫಲಕಗಳನ್ನು ಓದುವವರೆಗೆ, ದಾರಿಗಡ್ಡ ಬಂದ ಪ್ರಾಣಿಯಿಂದ ಹಿಡಿದು ಮರದವರೆಗೆ ಏನನ್ನು ಬೇಕಾದರೂ ಗುರುತಿಸಲು ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಈಗಾಗಲೇ ಆಗಿರುವ ಸಂಶೋಧನೆಗಳನ್ನು ಬಳಸಿದರೆ ಸಾಕು. ಒಂದು ಸ್ಮಾರ್ಟ್ ಗ್ಲಾಸು ಏನನ್ನೆಲ್ಲಾ ಮಾಡಲು ಸಾಧ್ಯ, ಅದರಲ್ಲಿ ಏನೆಲ್ಲ ಲಕ್ಷಣ, ವೈಶಿಷ್ಟ್ಯಗಳು ಇರಲು ಸಾಧ್ಯ ಅನ್ನುವುದನ್ನು ಗೂಗಲ್ಲಿನವರು ಈಗಾಗಲೇ ತೋರಿಸಿ ಆಗಿತ್ತು. ಹೀಗೆ, ಇರುವುದನ್ನೇ ಮುರಿದು ಜೋಡಿಸಿ ಮತ್ತೆ ಹೊಸ ರೀತಿಯಲ್ಲಿ ಕಟ್ಟುವ ಕ್ರಿಯೆಯನ್ನು ಆ್ಯಪಲ್‌ನಿಂದ ಹಿಡಿದು ಮೈಕ್ರೋಸಾಫ್ಟ್‌ನವರೆಗೆ ತಂತ್ರಜ್ಞಾನದ ಕಂಪನಿಗಳು ಮೊದಲಿನಿಂದಲೇ ಮಾಡಿಕೊಂಡು ಬಂದಿದ್ದವು. ಅದೇ ವಿಧಾನವನ್ನು ಇಲ್ಲಿಯೂ ಅನುಸರಿಸಲಾಯಿತು ಅಷ್ಟೇ. Kindness is the language which the deaf can hear and the blind can see (ಕರುಣೆ ಎಂಬುದು ಅಂಧರು ನೋಡಬಹುದಾದ ಮತ್ತು ಕಿವುಡರು ಕೇಳಬಹುದಾದ ಭಾಷೆ) ಎಂಬ ಮಾತನ್ನು ಸ್ವಲ್ಪ ಬದಲಾಯಿಸಿ, ‘ಕರುಣೆ ಮಾಡುವ ಕೆಲಸವನ್ನು ತಂತ್ರಜ್ಞಾನವೂ ಮಾಡೀತು’ ಎನ್ನಬಹುದೇನೋ!

ಸದ್ಯಕ್ಕೆ ದುಬಾರಿಯೇ ಆಗಿರುವ, ವಿದೇಶಗಳಲ್ಲಿ ಮಾತ್ರ ಹೊರಬಂದಿರುವ ಈ ಗ್ಲಾಸುಗಳು ಇಲ್ಲಿಯೂ ಬಂದು ಅಂಧರ ಕಣ್ಣಾಗಿ, ಬೆಳಕಾಗಿ ಕೆಲಸ ಮಾಡಲಿ ಎಂದು ಹಾರೈಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT