ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫುಡ್ಡಿ’ ವಾಸಿಂ ಈಗ ಟಿಕ್‌ಟಾಕ್‌ ಶೆಫ್‌

Last Updated 3 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಈ ಸ್ಮಾರ್ಟ್‌ಫೋನ್‌ ಕಾಲದಲ್ಲಿ ಶೆಫ್‌ಗಳ ಅಡುಗೆ ಪ್ರಯೋಗ ಟಿಕ್‌ಟಾಕ್‌ಗೂ ಕಾಲಿಟ್ಟಿದೆ. ಫುಡ್‌ ರಿವ್ಯೂ ಹಾಗೂ ಹೊಸ ಅಡುಗೆ ಪ್ರಯೋಗಗಳ ಮೂಲಕ ಟಿಕ್‌ಟಾಕ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ ನಗರದ ಶೆಫ್‌, ಆಹಾರ ಉದ್ಯಮಿ ವಾಸಿಂ ಅಹಮದ್‌.

ಎಚ್‌ಬಿಆರ್‌ ಲೇಔಟಿನ ವಾಸಿಂ ಅವರ ಆಹಾರ ಕುರಿತಾದ ಆಸಕ್ತಿ ಸ್ವಾರಸ್ಯಕರವಾಗಿದೆ. ಫುಡ್ಡಿ ಎಂದೇ ಗುರುತಿಸಿಕೊಂಡಿರುವ ವಾಸಿಂ ಅವರಿಗೆ ಸ್ಟ್ರೀಟ್‌ ಫುಡ್‌, ಹೋಟೆಲ್‌ ಊಟ ಅಂದರೆ ಇಷ್ಟ. ‌ಓದಿದ್ದು ಮಾರ್ಕೆಟಿಂಗ್‌. ವಿಪ್ರೊದ ಐಟಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸವೂ ಸಿಕ್ಕಿತ್ತು. ಆದರೆ ಅಲ್ಲಿ ಸೇರಿದ ಕೆಲ ತಿಂಗಳಿಗೆ ಕೆಲಸ ಬೋರು ಹೊಡೆಯಲಾರಂಭಿಸಿತು. ಹಾಗಾಗಿ ತಮ್ಮಿಷ್ಟದ ಆಹಾರ ಉದ್ದಿಮೆ ಕಡೆ ಹೊರಳಿದರು. ಈಗ ಸೆಲೆಬ್ರಿಟಿ ಶೆಫ್‌ ಎಂದು ಗುರುತಿಸಿಕೊಂಡಿರುವುದರ ಜೊತೆಗೆ ‘ಟೆಕ್‌ಫೊರ್ಕ್‌’ ಎಂಬ ಕೇಟರಿಂಗ್ ಕಂಪನಿ ನಡೆಸುತ್ತಿದ್ದಾರೆ.

2013ರಲ್ಲಿ ಕೋರಮಂಗಲದಲ್ಲಿ ಸಣ್ಣ ಅಂಗಡಿ ಬಾಡಿಗೆ ಪಡೆದು, ಅದರಲ್ಲಿ ಮನೆಯಲ್ಲೇ ಮಾಡಿಕೊಂಡು ಬಂದ ಅಡುಗೆಗಳನ್ನು ಮಾರಾಟ ಮಾಡಲು ಆರಂಭಿಸಿದರು. ‘ಕಾಲೇಜು ವಿದ್ಯಾರ್ಥಿಗಳು, ಸಮೀಪದ ಕಂಪನಿ ಸಿಬ್ಬಂದಿಗಳಿಗೆ ಅಡುಗೆ ರುಚಿ ಇಷ್ಟವಾಯಿತು. ಬಾಯಿಂದ ಬಾಯಿಗೆ ರುಚಿ ಹಬ್ಬಿತು. ಕಂಪನಿಗಳಿಂದ ಆರ್ಡರ್‌ ಬರಲು ಆರಂಭವಾಯಿತು. ಹೀಗೆ ಬ್ಯುಸಿನೆಸ್‌ ಏರುತ್ತಾ ಹೋಯಿತು’ ಎಂದು ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ವಾಸಿಂ.

‘ಆರಂಭದಲ್ಲಿ ಬರಿ ಉತ್ತರ ಭಾರತದ ಅಡುಗೆ ಕಡೆಗೆ ಗಮನ ನೀಡಿದ್ದೆವು. ಆದರೆ ಬರುಬರುತ್ತ ಉತ್ತರ ಮತ್ತು ದಕ್ಷಿಣ ಭಾರತದ ಆಹಾರಗಳನ್ನು ಆರಂಭಿಸಿದೆವು. ಉತ್ತರ ಭಾರತದವರಿಗೆ ದಕ್ಷಿಣ ಭಾರತದ ಸಾಂಬಾರ್,ರಸಂ, ಚಟ್ನಿ, ಪೊಂಗಲ್‌, ದೋಸೆಯಂತಹ ಕೆಲ ವಿಶೇಷ ಅಡುಗೆಗಳನ್ನು ಆಗಾಗ ಪರಿಚಯ ಮಾಡುವುದು, ಉತ್ತರ ಭಾರತದ ರಸಮಲೈ, ರಸಗುಲ್ಲಾ, ಕಲಾಕಂದ್‌ ಸಿಹಿತಿಂಡಿಗಳನ್ನು ದಕ್ಷಿಣದವರಿಗೆ ನೀಡುವುದು... ಇಂತಹ ಪ್ರಯೋಗ ಮಾಡುತ್ತಾ ಬಂದೆವು. ಇಂತಹ ತಂತ್ರಗಳಿಂದ ‘ಟೆಕ್‌ಫೊರ್ಕ್‌’ ಕಂಪನಿ ಬೇಗ ಯಶಸ್ಸು ಗಳಿಸಿತು’ ಎಂದು ತಮ್ಮ ತಂತ್ರಗಳನ್ನು ಹಂಚಿಕೊಂಡರು.

ಟಿಕ್‌ಟಾಕ್‌ ಸೆಲೆಬ್ರಿಟಿ ಶೆಫ್‌

ವಾಸಿಂ ಅವರು ಉದ್ಯಮದ ಜೊತೆಗೆ ಸೆಲೆಬ್ರಿಟಿ ಶೆಫ್‌ ಆಗಿಯೂ ಗುರುತಿಸಿಕೊಂಡಿದ್ದಾರೆ. ಹೊಸ ಹೊಸ ಅಡುಗೆಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು, ಬೇರೆ ಬೇರೆ ಭಾಗಕ್ಕೆ ಹೋಗಿ ಅಲ್ಲಿನ ವಿಶೇಷ, ಸಾಂಪ್ರದಾಯಿಕ ಅಡುಗೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ಈಗ ಟಿಕ್‌ಟಾಕ್‌ನಲ್ಲಿ 40 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೆಲೆಬ್ರಿಟಿ ಶೆಫ್‌ ಅವರು. ಬೆಂಗಳೂರಿನ ಕೆಲ ಅಪರೂಪದ ಹೋಟೆಲ್‌ ಮಾಹಿತಿ ಇವರ ಟಿಕ್‌ಟಾಕ್‌ ವಿಡಿಯೋದಲ್ಲಿದೆ.

ವಿಡಿಯೊ ಸವಾಲು

ಟಿಕ್‌ಟಾಕ್‌ನಲ್ಲಿ ಗಂಟೆಗಟ್ಟಲೇ ಫುಡ್‌ ರಿವ್ಯೂ ಮಾಡಲಾಗುವುದಿಲ್ಲ. ಗರಿಷ್ಠ ಒಂದು ನಿಮಿಷದಲ್ಲಿ ಆಹಾರದ ಬಗ್ಗೆ ಮನಮುಟ್ಟುವಂತೆ ಹೇಳಿಬಿಡಬೇಕು. ಹಾಗಾಗಿ ವಾಸಿಂ ಯಾವುದಾದರೂ ಹೋಟೆಲ್‌ಗೆ ಭೇಟಿ ಕೊಟ್ಟಾಗ ಅಲ್ಲಿ ಒಂದು ವಿಶೇಷ ಅಡುಗೆಯ ಬಗ್ಗೆ ಮಾತನಾಡುತ್ತಾರೆ. ವಾಸಿಂ ಮಾಡಿರುವ ಸ್ಟ್ರೀಟ್‌ಫುಡ್‌ ವಿಡಿಯೊ ಸರಣಿಗೆ ಹೆಚ್ಚು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ತಮ್ಮ ವೃತ್ತಿ, ಪ್ರವೃತ್ತಿಗೆ ಟಿಕ್‌ಟಾಕ್‌ ಅನ್ನೇ ವಾಸಿಂ ವೇದಿಕೆ ಮಾಡಿಕೊಂಡಿದ್ದಾರೆ. ಟಿಕ್‌ಟಾಕ್‌ ಅಗಾಗ ಶೆಫ್‌, ಆಹಾರಪ್ರಿಯರಿಗಾಗಿ ಕೆಲ ಸವಾಲು, ಸ್ಪರ್ಧೆಗಳನ್ನು ನಡೆಸುತ್ತದೆ. ಮೂರೇ ಮೂರು ಸಾಮಗ್ರಿ ಬಳಸಿ ಮಾಡುವ ಅಡುಗೆ ಸ್ಪರ್ಧೆಯಲ್ಲಿ ವಾಸಿಂ ಅವರು ಖೋವಾ, ಹಾಲು, ಸಕ್ಕರೆ ಬಳಸಿ ಮಾಡಿದ ಕಲಾಕಂದ್‌ಗೆ ಬಹುಮಾನ ಬಂದಿತ್ತು. ಹಾಗೇ ದಕ್ಷಿಣ ಭಾರತದ ಅಡುಗೆ ಸ್ಪರ್ಧೆಯಲ್ಲಿ ರವಾ ಇಡ್ಲಿ, ಕಾಫಿಗೂ ಮೊದಲ ಬಹುಮಾನ ಸಿಕ್ಕಿತ್ತು.

ಡಯೆಟ್‌ ಕಾಳಜಿ

ವಾಸಿಂ ತಮ್ಮ ಹೊಸ ಪ್ರಯೋಗಗಳಲ್ಲಿ ಡಯೆಟ್‌ ಆಹಾರದ ಬಗ್ಗೆಯೂ ತಿಳಿಸುತ್ತಾರೆ. ಕಿಟೋ ಡಯೆಟ್‌ ರೆಸಿಪಿ ಮಾಹಿತಿ ಅವರ ಟಿಕ್‌ಟಾಕ್‌ನಲ್ಲಿದೆ.

ವಾಸಿಂ ವಿಡಿಯೊ ನೋಡಲು– https://vm.tiktok.com/VSGDno/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT