ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ ಖರೀದಿಸಿದ ಎಲಾನ್ ಮಸ್ಕ್: ಟ್ರೆಂಡ್ ಆದ #LeaveTwitter ಹ್ಯಾಷ್ ಟ್ಯಾಗ್

Last Updated 26 ಏಪ್ರಿಲ್ 2022, 14:36 IST
ಅಕ್ಷರ ಗಾತ್ರ

ನವದೆಹಲಿ: ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್, ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಖರೀದಿಸುತ್ತಿದ್ದಂತೆ ಅದೇ ಟ್ವಿಟರ್‌ನಲ್ಲಿ #LeaveTwitter ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆ ಮತ್ತೆ ಕ್ರಿಯಾಶೀಲಗೊಳ್ಳಲಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದರೆ, ಅಷ್ಟು ದೊಡ್ಡ ಮೊತ್ತದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸದೆ ಟ್ವಿಟರ್ ಮೇಲೆ ಸುರಿದಿದ್ದು ಸರಿಯಲ್ಲ ಎಂದು ಆಕ್ಷೇಪ ಎತ್ತಿದ್ದಾರೆ.

ಇನ್ನೂ ಕೆಲವರು ಟ್ವಿಟರ್‌ನ ಹೊಸ ಮಾಲೀಕ ಎಲಾನ್ ಮಸ್ಕ್‌ಗೆ ಶುಭಾಶಯ. ಇದು ಟ್ವಿಟರ್ ತೊರೆಯಲು ಸಕಾಲ ಎಂದು ವ್ಯಂಗ್ಯ ಮಾಡಿದ್ದಾರೆ.

ಮತ್ತೆ ಕೆಲವರು ಟ್ವಿಟರ್ ಕಚೇರಿ ಮುಂದೆ ಬೆಂಕಿ ಬಿದ್ದಿರುವ ಮತ್ತು ನಾವು ಸಾಧಿಸಿಯೇ ಬಿಟ್ಟೆವು ಟ್ರಂಪ್ ಎಂದು ಎಲಾನ್ ಮಸ್ಕ್ ಹೇಳುವ ಮೀಮ್ಸ್‌ಗಳನ್ನು ಹರಿಬಿಟ್ಟಿದ್ದಾರೆ. ತಪ್ಪು ಮಾಹಿತಿ ಹರಡುವಿಕೆ ಆಧಾರದ ಮೇಲೆ ಅಮಾನತಾಗಿರುವ ಟ್ವಿಟರ್ ಖಾತೆಗಳು ಮರುಪ್ರಾರಂಭವಾಗುವ ಆತಂಕವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

44 ಬಿಲಿಯನ್ ಡಾಲರ್ (ಸುಮಾರು ₹3.36 ಲಕ್ಷ ಕೋಟಿ)ಗೆ ಎಲಾನ್ ಮಸ್ಕ್ ಅವರು ಟ್ವಿಟರ್ ಕಂಪನಿಯ ಪೂರ್ತಿ ಷೇರು ತನ್ನದಾಗಿಸಿಕೊಂಡಿದ್ದಾರೆ.

ಟ್ವಿಟರ್‌ನ ಪ್ರತಿ ಷೇರಿಗೆ 54.20 ಡಾಲರ್ ನೀಡಿ ಪೂರ್ತಿ ಷೇರು ಖರೀದಿಸುವ ಎಲಾನ್ ಮಸ್ಕ್ ಪ್ರಸ್ತಾಪವನ್ನು ಟ್ವಿಟರ್ ಆಡಳಿತ ಮಂಡಳಿ ಒಪ್ಪಿದ್ದು, ಅದರಂತೆ ಹಲವು ದಿನಗಳಿಂದ ನಡೆಯುತ್ತಿದ್ದ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿದೆ.

ಎಲಾನ್ ಮಸ್ಕ್ ಅವರು ಟ್ವಿಟರ್‌ನಲ್ಲಿ ಶೇ 9.2ರಷ್ಟು ಷೇರು ಪಾಲು ಹೊಂದಿದ್ದರು. ನಂತರದಲ್ಲಿ ಪ್ರತಿ ಷೇರಿಗೆ 54.20 ಡಾಲರ್‌(₹4149) ನಂತೆ ಪಾವತಿಸಿ, ಪೂರ್ತಿ ಪಾಲು ಖರೀದಿಗೆ ಇಂಗಿತ ವ್ಯಕ್ತಪಡಿಸಿದ್ದರು.

ಈ ಪ್ರಸ್ತಾಪಕ್ಕೆ ಟ್ವಿಟರ್ ಮಂಡಳಿ ಸಮ್ಮತಿ ಸೂಚಿಸುವುದರೊಂದಿಗೆ, ಕಂಪನಿ ಪೂರ್ತಿಯಾಗಿ ಎಲಾನ್ ಮಸ್ಕ್ ಪಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT