ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣ ಸಾಂತ್ವನ ಕೇಂದ್ರವೇ?

Last Updated 6 ಡಿಸೆಂಬರ್ 2020, 16:22 IST
ಅಕ್ಷರ ಗಾತ್ರ

ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡುವ 26ರ ಹರೆಯದ ಪ್ರತಿಮಾ (ಹೆಸರು ಬದಲಿಸಲಾಗಿದೆ)ಗೆ ಮದುವೆಯಾಗಿ 8 ತಿಂಗಳಾಗಿತ್ತಷ್ಟೆ. ಪತಿ ಅಪಘಾತದಲ್ಲಿ ಮೃತಪಟ್ಟಾಗ ಮಾನಸಿಕ ಆಘಾತದಿಂದ ಹೊರಬರಲು ಸಾಕಷ್ಟು ಹೆಣಗಾಡಬೇಕಾಯಿತು. ಏಕೈಕ ಮಗನನ್ನು ಕಳೆದುಕೊಂಡ ಅತ್ತೆ– ಮಾವಂದಿರ ನೋವು ನೋಡಿ ತನ್ನ ದುಃಖ ಅದುಮಿಟ್ಟುಕೊಂಡ ಪ್ರತಿಮಾಗೆ ಅದನ್ನು ಯಾರ ಬಳಿಯಲ್ಲಾದರೂ ಹೇಳಿಕೊಂಡು ನಿರಾಳವಾಗುವ ತವಕ. ತೀರಾ ಆಪ್ತ ಸ್ನೇಹಿತೆಯರಿಲ್ಲದ ಆಕೆ ಕೊನೆಗೆ ಮೊರೆ ಹೋಗಿದ್ದು ಸಾಮಾಜಿಕ ಜಾಲತಾಣಕ್ಕೆ. ಫೇಸ್‌ಬುಕ್‌ನಲ್ಲಿ ಪತಿಯ ಸಾವಿನ ಬಗ್ಗೆ ಭಾವನಾತ್ಮಕವಾಗಿ ಒಂದೆರಡು ವಾಕ್ಯಗಳನ್ನಷ್ಟೇ ಹಾಕಿದರೂ ತಕ್ಷಣವೇ ಸಾಂತ್ವನದ ಮಹಾಪೂರವೇ ಹರಿದು ಬಂತು. ಕೆಲವರು ವಾಟ್ಸ್‌ಆ್ಯಪ್‌ ಸಂಖ್ಯೆಗಳನ್ನೂ ಹಂಚಿಕೊಂಡರು. ಆದರೆ ‘ನಾವು ನಿಮ್ಮ ಜೊತೆಗಿದ್ದೇವೆ’ ಎಂಬ ಫೇಸ್‌ಬುಕ್‌ ಸ್ನೇಹಿತ/ ಸ್ನೇಹಿತೆಯರ ದುಃಖಕ್ಕೆ ಹೆಗಲು ಕೊಡುವ ನಡವಳಿಕೆಯೇ ಪ್ರತಿಮಾಳ ನೋವನ್ನು ಸಾಕಷ್ಟು ಕಡಿಮೆ ಮಾಡಿಬಿಟ್ಟಿತು.

ಸಾಮಾಜಿಕ ಜಾಲತಾಣದಿಂದಾಗುವ ಕೆಡುಕುಗಳ ಬಗ್ಗೆ ಚರ್ಚೆಗಳು ಸಾಕಷ್ಟು ನಡೆಯುತ್ತಿವೆ. ಆದರೆ ಅದರ ಇನ್ನೊಂದು ಮುಖಕ್ಕೆ ಉದಾಹರಣೆ ಪ್ರತಿಮಾಳಂತಹ ನೊಂದ ಜೀವ ಚೇತರಿಸಿಕೊಳ್ಳಲು ಆರಂಭಿಸಿದ್ದು. ‘ವೈವಾಹಿಕ ಜೀವನದ ಸವಿಯನ್ನು ಅನುಭವಿಸುತ್ತಿರುವಾಗಲೇ ನಡೆದ ಇಂತಹದೊಂದು ದುರ್ಘಟನೆ ಸಂಪೂರ್ಣ ಕುಸಿಯುವಂತೆ ಮಾಡಿಬಿಟ್ಟಿತ್ತು. ದೂರದ ಊರಲ್ಲಿರುವ ತಂದೆ– ತಾಯಿ ಎಷ್ಟು ದಿನ ನನ್ನ ಜೊತೆ ಇರುತ್ತಾರೆ ಹೇಳಿ? ಜೊತೆಗೆ ಅತ್ತೆ– ಮಾವಂದಿರ ಹೊಣೆಯಿಂದ ತಪ್ಪಿಸಿಕೊಳ್ಳುವುದು ಮಾನವೀಯತೆ ಅಲ್ಲ’ ಎನ್ನುವ ಪ್ರತಿಮಾ, ಒಳಗಿನ ನೋವನ್ನು ಬಹಿರಂಗಪಡಿಸಲು, ಆ ನೋವಿಗೆ ಕಿವಿಯಾಗಲು ಬಹಳಷ್ಟು ಜನರಿದ್ದಾರೆ ಎಂಬುದನ್ನು ಫೇಸ್‌ಬುಕ್‌ ತೋರಿಸಿಕೊಟ್ಟಿದೆ ಎನ್ನುತ್ತಾರೆ.

ಆಪ್ತ ಸಮಾಲೋಚಕರಾಗುವ ಅಪರಿಚಿತರು

ಸಾಮಾಜಿಕ ಜಾಲತಾಣದಲ್ಲಿ ಇಂತಹ ನೋವಿಗೆ ಸ್ಪಂದಿಸುವವರಲ್ಲಿ ಬಹುತೇಕ ಮಂದಿ ಅಪರಿಚಿತರೂ ಇರುತ್ತಾರೆ. ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡು ದುಃಖ ಕಡಿಮೆ ಮಾಡಲು ಯತ್ನಿಸುವವರಿರುತ್ತಾರೆ. ಭಾವನಾತ್ಮಕವಾಗಿ ಹತ್ತಿರವಾಗಿ ಆಪ್ತ ಸಮಾಲೋಚಕರ ಪಾತ್ರವನ್ನೂ ನಿಭಾಯಿಸುವವರಿರುತ್ತಾರೆ. ನೀವು ಒಂಟಿ ಎಂಬ ಭಾವನೆಯನ್ನು ಹೊಡೆದೋಡಿಸುವುದು ಇಂತಹ ಸಾಂತ್ವನವೇ.

ಇದಕ್ಕೆ ಕಾರಣವೇನಿರಬಹುದು? ‘ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ವೈಯಕ್ತಿಕ ವಿವರ ಈ ಸಂದರ್ಭದಲ್ಲಿ ನಗಣ್ಯವಾಗಿಬಿಡುತ್ತದೆ. ಬಹುತೇಕರು ಗಮನಿಸಿರಬಹುದು, ಯಾರೋ ಒಬ್ಬರು ತಮ್ಮ ಆಪ್ತರ ಸಾವಿನ ಬಗ್ಗೆ ಪೋಸ್ಟ್‌ ಮಾಡಿದಾಗ, ಹೇಗಾಯಿತು, ಅವರ ಹಿನ್ನೆಲೆಯೇನು ಎಂಬ ಪ್ರಶ್ನೆಗಳು ಅಲ್ಲಿ ಬರುವುದು ಕಡಿಮೆ. ತಕ್ಷಣಕ್ಕೆ ‘ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಕಮೆಂಟ್ಸ್‌ನಲ್ಲಿ ಹಾಕುವವರೇ ಹೆಚ್ಚು’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಪ್ರಮೀಳಾ ಎಸ್‌.

ಇನ್ನೊಂದು ಅಂಶವೆಂದರೆ ಸಾಮಾಜಿಕ ಜಾಲತಾಣದಲ್ಲಿ ನೀವು ನೆರವನ್ನು ಕೇಳಬೇಕಾದ ಅಗತ್ಯವಿರುವುದಿಲ್ಲ. ಉದಾಹರಣೆಗೆ ಒಂದು ಘಟನೆಯ ಬಗ್ಗೆ ಒಂದು ವಾಕ್ಯವನ್ನು ಬರೆದು ಪೋಸ್ಟ್‌ ಮಾಡಿದರೂ ಸಾಕು, ಕಮೆಂಟ್ಸ್‌ ಹಾಕಿದ 10 ಮಂದಿಯಲ್ಲಿ ಕನಿಷ್ಠ ಇಬ್ಬರಾದರೂ ತಾವಾಗೇ ನೆರವಿನ ಹಸ್ತ ಚಾಚಿರುತ್ತಾರೆ, ಸಲಹೆಯನ್ನು ಕೊಡುತ್ತಾರೆ.

ಮಹಿಳೆಯರೇ ಅಧಿಕ

ವಿಶೇಷವೆಂದರೆ ಟ್ವಿಟರ್‌ನಲ್ಲಾಗಲಿ ಅಥವಾ ಫೇಸ್‌ಬುಕ್‌ನಲ್ಲಾಗಲಿ ತಮ್ಮೊಳಗಿರುವ ನೋವನ್ನು, ಆದ ಅನ್ಯಾಯವನ್ನು ಬಹಿರಂಗವಾಗಿ ಹೇಳಿಕೊಳ್ಳುವವರಲ್ಲಿ ಮಹಿಳೆಯರೇ ಹೆಚ್ಚು ಎನ್ನುತ್ತದೆ ಅಧ್ಯಯನವೊಂದು. ಸಾಮಾಜಿಕ ಜಾಲತಾಣವನ್ನು ಪಕ್ಕಕ್ಕಿಟ್ಟರೂ ತಮ್ಮ ವೇದನೆಯನ್ನು ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುವವರಲ್ಲಿ ಮಹಿಳೆಯರೇ ಜಾಸ್ತಿಯಂತೆ. ಪುರುಷರು ಮನಸ್ಸಿನಲ್ಲೇ ಇಟ್ಟುಕೊಂಡು ತಳಮಳ ಅನುಭವಿಸುತ್ತಾರಂತೆ.

ಹಾಗೆಯೇ ಎಷ್ಟೋ ಜನರಿಗೆ ತಮ್ಮ ಮಾನಸಿಕ ಅಸ್ವಾಸ್ಥ್ಯದ ಬಗ್ಗೆ ಅರಿವಿರುವುದಿಲ್ಲ. ಆದರೆ ತಮಗಾಗುತ್ತಿರುವ ಅನುಭವಗಳನ್ನು, ಲಕ್ಷಣಗಳನ್ನು ಹೇಳಿಕೊಳ್ಳುವವರೂ ಇದ್ದಾರೆ. ಆಗ ಯಾರೋ ಅಪರಿಚಿತರಿಂದಲೂ ಉಪಯುಕ್ತ ಸಲಹೆ, ನೆರವು ಸಿಗಲು ಸಾಧ್ಯ. ಈ ಕುರಿತ ಫೇಸ್‌ಬುಕ್‌ ಗ್ರೂಪ್‌ಗಳಲ್ಲಿ ಇದ್ದವರಿಗಂತೂ ಇದರಿಂದ ಹೆಚ್ಚಿನ ಅನುಕೂಲ ಆಗುವುದಂತೂ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT