ಗುರುವಾರ , ಜನವರಿ 28, 2021
15 °C

ವಾಟ್ಸ್‌ಆ್ಯಪ್‌ ಹೊಸ ನಿಯಮ: ಒಪ್ಪದೇ ವಿಧಿಯಿಲ್ಲ!

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಮೆಸೇಜಿಂಗ್‌ ಪ್ಲಾಟ್‌ಫಾರಂ ಆಗಿ ಬಳಕೆಗೆ ಬಂದ ವಾಟ್ಸ್‌ಆ್ಯಪ್‌ ಇದೀಗ ನಮ್ಮ ಅವಿಭಾಜ್ಯ ಅಂಗ ಎನ್ನುವಂತಾಗಿದೆ. ವಾಯ್ಸ್‌ ಕಾಲ್‌, ವಿಡಿಯೊ ಕಾಲ್, ವಾಟ್ಸ್‌ಆ್ಯಪ್‌ ಪೇ ಹೀಗೆ ಹಲವು ರೀತಿಯಲ್ಲಿ ನಿತ್ಯವೂ ಬಳಸುತ್ತೇವೆ. ಸ್ಮಾರ್ಟ್‌ಫೋನ್‌ ಬಿಟ್ಟಿರುವುದಕ್ಕಿಂತ ವಾಟ್ಸ್‌ಆ್ಯಪ್‌ ನೋಡದೇ ಇರುವುದೇ ಹೆಚ್ಚು ಕಷ್ಟ. ಈಗ ವಾಟ್ಸ್‌ಆ್ಯಪ್‌ ತನ್ನ ಖಾಸಗಿ ನೀತಿಯಲ್ಲಿ ಬದಲಾವಣೆ ತಂದಿದೆ. ಅದು ಫೆ. 8ರಿಂದ ಜಾರಿಗೆ ಬರಲಿದ್ದು, ಅಷ್ಟರ ಒಳಗಾಗಿ ಅದಕ್ಕೆ ನಾವು ಒಪ್ಪಿಗೆ ನೀಡಲೇಬೇಕು. ಇಲ್ಲವಾದರೆ ವಾಟ್ಸ್‌ಆ್ಯಪ್‌ ಬಳಸಲು ಆಗುವುದಿಲ್ಲ.

ವಾಟ್ಸ್‌ಆ್ಯಪ್‌ ಮತ್ತು ಇನ್‌ಸ್ಟಾಗ್ರಾಂ ಸೇವೆಗಳು ಫೇಸ್‌ಬುಕ್‌ ಇಂಕ್‌ ಎಂಬ ಕಂಪನಿಗೆ ಸೇರಿದ್ದಾಗಿವೆ ಎನ್ನುವುದನ್ನು ಬಳಕೆದಾರರಿಗೆ ಮನದಟ್ಟು ಮಾಡುವ ಕೆಲಸವನ್ನು ಈಗಾಗಲೇ ಆರಂಭಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಫೇಸ್‌ಬುಕ್‌ ಕಂಪನಿಯ ಅಂಗಸಂಸ್ಥೆಗಳೊಂದಿಗೆ ವಾಟ್ಸ್‌ಆ್ಯಪ್‌ ಅನ್ನು ಸಂಯೋಜಿಸುವ ನಿರ್ಧಾರ ಮಾಡಿದೆ.

ಫೇಸ್‌ಬುಕ್‌ ಸಮೂಹದ ಇತರೆ ಸಾಮಾಜಿಕ ಜಾಲತಾಣಗಳೊಂದಿಗೆ ಸಂಯೋಜಿಸಲು ಖಾಸಗಿ ನೀತಿ ಮತ್ತು ಸೇವೆಗಳ ನಿಯಮದಲ್ಲಿ ಬದಲಾವಣೆ ಮಾಡಿರುವುದಾಗಿ ವಾಟ್ಸ್‌ಆ್ಯಪ್‌ ಬುಧವಾರ ಹೇಳಿಕೊಂಡಿದೆ. ವಾಟ್ಸ್‌ಆ್ಯಪ್‌ ಕಳುಹಿಸಿರುವ ಸೂಚನೆಯಲ್ಲಿ ಪ್ರಮುಖ ಮೂರು ಅಂಶಗಳನ್ನು ಹೇಳಲಾಗಿದೆ.

1 ವಾಟ್ಸ್‌ಆ್ಯಪ್ ಬಳಕೆದಾರರ ಡೇಟಾವನ್ನು ಹೇಗೆ ಸಂಗ್ರಹಿಸಲಾಗುವುದು

2 ಉದ್ದಿಮೆಗಳು ತಮ್ಮ ವಾಟ್ಸ್‌ಆ್ಯಪ್‌ ಚಾಟ್‌ಗಳ ಸಂಗ್ರಹ ಮತ್ತು ನಿರ್ವಹಣೆಗೆ ಫೇಸ್‌ಬುಕ್‌ನ ಇತರೆ ಸೇವೆಗಳನ್ನು ಹೇಗೆ ಬಳಸಿಕೊಳ್ಳಬಹುದು

3 ಫೇಸ್‌ಬುಕ್‌ ಸಮೂಹದ ಉತ್ಪನ್ನಗಳೊಂದಿಗೆ ಸಂಯೋಜಿಸಲು ಯಾವ ರೀತಿಯಲ್ಲಿ ಪಾಲುದಾರಿಕೆ ಮಾಡಿಕೊಳ್ಳಬಹುದು

ನಮ್ಮ ಚಟುವಟಿಕೆಗಳ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಸ್ವಯಂಚಾಲಿತವಾಗಿ ಸಂಗ್ರಹಿಸುತ್ತದೆ. ಅಂದರೆ ವಾಟ್ಸ್‌ಆ್ಯಪ್‌ ಅನ್ನು ನಾವು ಹೇಗೆ ಬಳಸುತ್ತಿದ್ದೇವೆ. ಸೆಟ್ಟಿಂಗ್ಸ್‌ನಲ್ಲಿ ಏನೆಲ್ಲಾ ಬದಲಾವಣೆ ಮಾಡಿದ್ದೇವೆ, ಯಾರ ಜತೆಗೆಲ್ಲ ಸಂವಹನ ನಡೆಸುತ್ತಿದ್ದೇವೆ, ಎಷ್ಟು ಸಮಯ ಸಕ್ರಿಯವಾಗಿದ್ದೆವು... ಹೀಗೆ ಇನ್ನೂ ಹಲವು ಮಾಹಿತಿಗಳನ್ನು ಪಡೆಯುತ್ತದೆ.

ಇಷ್ಟೇ ಅಲ್ಲದೆ, ಆ್ಯಪ್‌ ಇನ್‌ಸ್ಟಾಲ್ ಆಗಿರುವ ಸಾಧನ ಮತ್ತು ಅದರಲ್ಲಿ ಸಕ್ರಿಯವಾಗಿರುವ ಇಂಟರ್‌ನೆಟ್‌ ಸಂಪರ್ಕದ ಮಾಹಿತಿಗಳನ್ನೂ ಪಡೆಯುತ್ತದೆ. ಮೊಬೈಲ್‌ ಆಗಿದ್ದರೆ ಯಾವ ಮಾಡೆಲ್‌, ಕಾರ್ಯಾಚರಣಾ ವ್ಯವಸ್ಥೆ (ಒಎಸ್‌) ಯಾವುದು, ಭಾಷೆ, ಟೈಮ್‌ ಝೋನ್‌, ಐಪಿ ಅಡ್ರೆಸ್‌ ಇತ್ಯಾದಿ.

ಬಳಕೆದಾರ ಮೀಡಿಯಾವನ್ನು (ಆಡಿಯೊ/ವಿಡಿಯೊ) ಇನ್ನೊಬ್ಬರಿಗೆ ಕಳುಹಿಸಿದಾಗ, ತಾತ್ಕಾಲಿಕವಾಗಿ ಅವುಗಳನ್ನು ಎನ್‌ಕ್ರಿಪ್ಟೆಡ್‌ ರೂಪದಲ್ಲಿ ನಮ್ಮ ಸರ್ವರ್‌ನಲ್ಲಿ ಸಂಗ್ರಹಿಸಲಾಗುವುದು. ಇನ್ನೂ ಹಲವರಿಗೆ ಅದನ್ನು ಫಾರ್ವರ್ಡ್‌ ಮಾಡಲು ಅನುಕೂಲ ಮಾಡಿಕೊಡಲು ಈ ರೀತಿ ಸಂಗ್ರಹಿಸುವುದು ನಮ್ಮ ಉದ್ದೇಶ ಎಂದು ಹೇಳಿದೆ.

ವಾಟ್ಸ್‌ಆ್ಯಪ್‌ ಮೂಲಕ ವಹಿವಾಟು ನಡೆಸುವವವರು ಗ್ರಾಹಕರ ಜೊತೆಗಿನ ಚಾಟ್‌ಗಳನ್ನು ವಾಟ್ಸ್‌ಆ್ಯಪ್‌ನೊಂದಿಗೆ ಹಂಚಿಕೊಳ್ಳಬಹುದಾಗಿದೆ. ಇಷ್ಟೇ ಅಲ್ಲ, ಫೇಸ್‌ಬುಕ್‌ ಅಲ್ಲದೆ ಇನ್ನಿತರ ಥರ್ಡ್‌ ಪಾರ್ಟಿ ಸೇವೆಗಳನ್ನು ಒದಗಿಸುವವರು ಸಹ ಅವರಿಂದ ಮಾಹಿತಿ ಪಡೆಯುವ, ಸಂಗ್ರಹಿಸುವ, ನಿರ್ವಹಿಸುವ ಮತ್ತು ವಹಿವಾಟಿಗೆ ಬಳಸಿಕೊಳ್ಳುವ ಅವಕಾಶ ಇದೆ. ಇದರಿಂದಾಗಿ ಗ್ರಾಹಕರ ಅಭಿರುಚಿ, ಆಯ್ಕೆಗಳ ಮಾಹಿತಿ ಬೇರೆ ಕಂಪನಿಗಳಿಗೂ ಸಿಗುತ್ತವೆ. ಆಗ ಆ ಕಂಪನಿಗಳು ನಮಗೆ ಆ ಬಗ್ಗೆ ಜಾಹೀರಾತು ಕಳುಹಿಸುವ ಅಥವಾ ಪದೇ ಪದೇ ಕರೆ ಮಾಡಿ ರಗಳೆ ಮಾಡುವ ಸಾಧ್ಯತೆ ಇದೆ. 

ಯಕ್ಷಗಾನಕ್ಕೆ ಸಂಬಂಧಿಸಿದ ಒಂದು ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ನೋಡಿದಿರಿ ಎಂದುಕೊಳ್ಳಿ. ಆಗ ಅದನ್ನು ನಮ್ಮ ಆಸಕ್ತಿಯ ವಿಷಯ ಎಂದು ಪರಿಗಣಿಸುವ ಫೇಸ್‌ಬುಕ್‌ ಅದಕ್ಕೆ ಸಂಬಂಧಿಸಿದ ಇನ್ನಷ್ಟು ವಿಡಿಯೊಗಳು ಕಾಣಿಸಿಕೊಳ್ಳುವಂತೆ ಮಾಡುತ್ತದೆ. ನಮ್ಮ ಪ್ರತಿ ಚಲನವಲನವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ ಎಂಬುದು ಇದರ ಅರ್ಥ. ಹೀಗಿರುವಾಗ ಫೇಸ್‌ಬುಕ್‌ ಸಮೂಹ ಕಂಪನಿಗಳು ಪರಸ್ಪರ ಸಂಯೋಜಿಸಲ್ಪಟ್ಟರೆ, ನಾವು ಒಂದು ಆ್ಯಪ್‌ ಇನ್‌ಸ್ಟಾಲ್‌ ಮಾಡಿದ್ದರೆ ಸಾಕು ಉಳಿದ ಕಂಪನಿಗಳಿಗೆ ನಮ್ಮ ಮಾಹಿತಿ ತನ್ನಷ್ಟಕ್ಕೇ ಸಿಕ್ಕಿಬಿಡುತ್ತದೆ.

ಫೇಸ್‌ಬುಕ್‌ ಮತ್ತು ವಾಟ್ಸ್ಆ್ಯಪ್‌ ಬಳಕೆದಾರರ ಖಾಸಗಿತನದ ರಕ್ಷಣೆಯ ಕುರಿತು ಪ್ರಶ್ನೆಗಳು ಏಳುತ್ತಲೇ ಇವೆ. ಪೆಗಾಸಸ್‌ ಕುತಂತ್ರಾಂಶ ಬಳಸಿ ವಾಟ್ಸ್ಆ್ಯಪ್‌ ಮೂಲಕ ಗೂಢಚರ್ಯೆ ನಡೆಸಿದ್ದು ಕಳೆದ ವರ್ಷ ಭಾರಿ ಸದ್ದು ಮಾಡಿತ್ತು. ಹೀಗಿರುವಾಗ ಈ ಹೊಸ ನಿಯಮವು ಬಳಕೆದಾರರ ಖಾಸಗಿತನಕ್ಕೆ ಎಷ್ಟರ ಮಟ್ಟಿಗೆ ರಕ್ಷಣೆ ಒದಗಿಸಲಿದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು