ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಗಳ ಕೃತಿಸ್ವಾಮ್ಯ ರಕ್ಷಣೆಗೆ ಡಿಜಿಟಲ್ ಸಹಿ

ಚಿತ್ರಗಳನ್ನು ತಿರುಚುವವರ ಕೈಚಳಕಕ್ಕೆ ಕಡಿವಾಣ
Published 16 ಏಪ್ರಿಲ್ 2024, 21:28 IST
Last Updated 16 ಏಪ್ರಿಲ್ 2024, 21:28 IST
ಅಕ್ಷರ ಗಾತ್ರ

ಈಗ ಚುನಾವಣಾ ಪರ್ವ. ಸಂದರ್ಭ ಯಾವುದೇ ಆಗೀದ್ದರೂ ಈಗಷ್ಟೇ ಹೊಸ ಕ್ರೇಜ್ ಸೃಷ್ಟಿಸಿರುವ ಕೃತಕ ಬುದ್ಧಿಮತ್ತೆಯನ್ನು ಬಳಸಿ ಫೊಟೋಗಳನ್ನು ತಿರುಚುವ ಕಲೆಯಲ್ಲಿ ಈಗಾಗಲೇ ಬಹುತೇಕರು ನಿಷ್ಣಾತರಾಗಿಬಿಟ್ಟಿದ್ದಾರೆ. ಇದಕ್ಕೆ ತಂತ್ರಜ್ಞಾನದ ಅಭಿವೃದ್ಧಿಯ ವೇಗವೂ, ಮತ್ತದು ಸುಲಭವಾಗಿ ಕೈಗೆ ಸಿಗುವಂತಾಗಿರುವುದೂ ಕಾರಣ. ಇಂಥ ಹಂತದಲ್ಲಿ, ನಿಜವಾಗಿಯೂ ಕ್ಯಾಮೆರಾ ಮೂಲಕ ತೆಗೆದ ಚಿತ್ರ, ತಿರುಚಿದ ಚಿತ್ರ, ತಿದ್ದುಪಡಿ ಮಾಡಿದ ಚಿತ್ರ, ಎಐ ಮೂಲಕ ಜನರೇಟ್ ಮಾಡಲಾದ ನಕಲಿ ಚಿತ್ರ - ಇವುಗಳ ನಡುವೆ ಅಸಲಿ ಚಿತ್ರ ಎಲ್ಲಿದೆ, ಇದ್ದರೆ ಅದರ ಮೂಲ ಹೇಗಿತ್ತು ಎಂಬುದನ್ನೆಲ್ಲ ತಿಳಿದುಕೊಳ್ಳುವುದು ಹೇಗೆ?

ತಂತ್ರಜ್ಞಾನದ ಯುಗದಲ್ಲಿ ಅಸಲಿಗಳನ್ನು ನಕಲಿಗಳಿಗಿಂತ ಬೇರ್ಪಡಿಸಿ ತಿಳಿದುಕೊಳ್ಳಲು, ತನಿಖಾ ಏಜೆನ್ಸಿಗಳಿಗೆ ಮಾತ್ರವಲ್ಲದೆ ಜನ ಸಾಮಾನ್ಯರಿಗೂ ಅನುವು ಮಾಡಿಕೊಡುವ ನಿಟ್ಟಿನಲ್ಲಿ, ಚಿತ್ರವನ್ನು ಸೆರೆಹಿಡಿಯುವ ಮೂಲದಲ್ಲೇ ಮದ್ದು ಅರೆದರೆ ಹೇಗೆ? ಈ ಕುರಿತು ಚಿಂತನೆ ಬಲವಾಗಿ ನಡೆದ ಪರಿಣಾಮವಾಗಿ ಇದೋ ಬಂದಿದೆ ‘ಲೈಕಾ ಎಂ 11–ಪಿ’ (Leica M11-P) ಎಂಬ, ಫೊಟೋಗೆ ಕಂಟೆಂಟ್ ಕ್ರೆಡೆನ್ಷಿಯಲ್ಸ್ ಅಡಕಗೊಳಿಸಬಹುದಾದ ಜಗತ್ತಿನ ಮೊದಲ ಕ್ಯಾಮೆರಾ. ಚಿತ್ರವೊಂದನ್ನು ತಿರುಚಿ ಅಂತರ್ಜಾಲದಲ್ಲಿ ಹರಿಯಬಿಟ್ಟು ಮನೋರಂಜನೆ ಮಾತ್ರವೇ ಅಲ್ಲದೆ, ಸಾಮಾಜಿಕ ಸ್ವಾಸ್ಥ್ಯವನ್ನೂ ಹಾಳುಗೆಡಹುವ ಪಿಡುಗಿನ ತಡೆಗೆ ಕ್ಯಾಮೆರಾ ತಯಾರಕರೂ ಕೊನೆಗೂ ಮುಂದಾಗಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಜರ್ಮನಿಯ ಕ್ಯಾಮೆರಾ ತಯಾರಕ ಸಂಸ್ಥೆ ‘ಲೈಕಾ’ ಈ ವಿನೂತನ ಕ್ಯಾಮೆರಾವನ್ನು ಪರಿಚಯಿಸಿತ್ತು.

ಏನಿದು ಕಂಟೆಂಟ್ ಕ್ರೆಡೆನ್ಷಿಯಲ್ಸ್?
ಅಂತರ್ಜಾಲ ಜಗತ್ತಿನಲ್ಲಿ ಯಾವುದೇ ಕಂಟೆಂಟ್‌ಗೆ (ಫೊಟೊ, ವಿಡಿಯೊ, ಪಠ್ಯ ಮುಂತಾದ ಫೈಲ್‌ಗಳಿಗೆ) ಅತ್ಯಂತ ಮುಖ್ಯವಾಗಿರುವುದು ‘ಮೆಟಾಡೇಟಾ’ ಎಂದು ಕರೆಯಲಾಗುವ, ಅದರ ‘ಜಾತಕ’ ಅಥವಾ ಮಾಹಿತಿ. ಪ್ರಸ್ತುತ ನಮ್ಮ ಚಿತ್ರಗಳ ಒಡೆತನವನ್ನು ತೋರ್ಪಡಿಸಿಕೊಳ್ಳಲು ‘ವಾಟರ್ ಮಾರ್ಕ್’ ಅನ್ನು ಅಳವಡಿಸುವ ಕಾರ್ಯ ಚಾಲ್ತಿಯಲ್ಲಿದೆ. ಹೊಸ ತಂತ್ರಜ್ಞಾನವು ಇದರ ಮುಂದುವರಿದ ಭಾಗ. ಮೆಟಾಡೇಟಾದಲ್ಲಿ ಅದು ಯಾವ ವಿಧದ ಫೈಲ್, ಮೂಲ ಎಲ್ಲಿ, ಯಾವಾಗ ಸೃಷ್ಟಿಯಾದದ್ದು, ಅದರ ಗುಣಮಟ್ಟ ಏನು, ಇತರ ಡೇಟಾಗಳಿಗೂ ಇದಕ್ಕೂ ಏನು ಸಂಬಂಧ - ಇತ್ಯಾದಿಯಾಗಿ ಪರಿಪೂರ್ಣವಾದ ಮಾಹಿತಿ ಇರುತ್ತದೆ. ಉದಾಹರಣೆಗೆ, ಪಠ್ಯಫೈಲ್ ಒಂದರ ಬಗ್ಗೆ ಹೇಳುವುದಾದರೆ, ಅದರ ಶೀರ್ಷಿಕೆ ಏನು, ಬರೆದವರು ಯಾರು, ಅದರಲ್ಲಿರುವ ಪ್ರಮುಖ ಕೀವರ್ಡ್ ಯಾವುದು... ಇತ್ಯಾದಿ. ಇಮೇಜ್ ಫೈಲ್ ಆದರೆ, ಇದನ್ನು ಯಾವ (ಕಂಪನಿಯ) ಕ್ಯಾಮೆರಾದಲ್ಲಿ, ಯಾವಾಗ, ಯಾವ ಸ್ಥಳದಲ್ಲಿ, ಎಷ್ಟು ಝೂಮ್ ಮಾಡಿ ಮತ್ತು ಯಾವ ಗುಣಮಟ್ಟದಲ್ಲಿ ಸೆರೆಹಿಡಿಯಲಾಗಿದೆ, ಅದು ಯಾವ ಫೈಲ್ ವಿಧದಲ್ಲಿ (ಜೆಪಿಇಜಿ, ಜೆಪಿಜಿ, ಪಿಎನ್‌ಜಿ, ಜಿಫ್ ಇತ್ಯಾದಿ) ಸೇವ್ ಆಗಿದೆ ಎಂಬ ಮಾಹಿತಿಯೆಲ್ಲ ಅದರಲ್ಲಿ ಅಡಕವಾಗಿರುತ್ತದೆ. ಜೊತೆಗೆ, ಛಾಯಾಗ್ರಾಹಕರು ತಮ್ಮ ಹೆಸರನ್ನೂ ಸೇರಿಸಬಹುದಾಗಿದೆ.

ಸೆರೆಹಿಡಿದ ಚಿತ್ರಗಳಿಗೆ ಎನ್‌ಕ್ರಿಪ್ಷನ್ ತಂತ್ರಜ್ಞಾನದ ಮೂಲಕ ಕ್ಯಾಮೆರಾದಲ್ಲಿರುವ ಸುರಕ್ಷತಾ ಚಿಪ್ ತನ್ನದೇ ರೀತಿಯ ಡಿಜಿಟಲ್ ಸಹಿಯನ್ನು ಮುದ್ರಿಸುತ್ತದೆ. ಇದು ಬಾಹ್ಯಗೋಚರವಾಗಿರುವುದಿಲ್ಲ. ಕಂಟೆಂಟ್ ಕ್ರೆಡೆನ್ಷಿಯಲ್ಸ್ (contentcredentials.org/verify) ಎಂಬ ಜಾಲತಾಣದಲ್ಲಿ ಅಥವಾ ಲೈಕಾ ಅಭಿವೃದ್ಧಿಪಡಿಸಿರುವ ‘FOTOS’ ಆ್ಯಪ್‌ನಲ್ಲಿ ಹೋಗಿ ಈ ಚಿತ್ರವನ್ನು ಅಪ್‌ಲೋಡ್ ಮಾಡಿದರೆ, ಆ ಚಿತ್ರದಲ್ಲಿ ಅಡಕವಾಗಿರುವ ಮೆಟಾಡೇಟಾ ಎಲ್ಲವೂ ಕಾಣಿಸುತ್ತದೆ. ಅದೇ ರೀತಿ, ಇದನ್ನು ತಿದ್ದಲಾಗಿದೆಯೋ ಎಂಬ ಮಾಹಿತಿಯೂ ಸಿಗುತ್ತದೆ.

ಈ ವ್ಯವಸ್ಥೆಯು ಛಾಯಾಗ್ರಾಹಕರಿಗೆ ತಾವು ಸೆರೆಹಿಡಿದ ಚಿತ್ರಗಳ ಕೃತಿಸ್ವಾಮ್ಯ ಕಾಪಾಡಿಕೊಳ್ಳುವುದಕ್ಕೆ ನೆರವಾಗಲಿದೆ. ತಾವು ಕಷ್ಟಪಟ್ಟು ಸೆರೆಹಿಡಿದ ಚಿತ್ರಗಳನ್ನು ಅನ್ಯರು ತಮ್ಮದೆಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಪರಿಪಾಠಕ್ಕೂ ಕಡಿವಾಣ ಬೀಳುವ ನಿರೀಕ್ಷೆಯಿದೆ.

ಫೊಟೋಶಾಪ್ ಖ್ಯಾತಿಯ ‘ಅಡೋಬಿ’ (Adobe) ಮುಂದಾಳುತ್ವದಲ್ಲಿ ಈಗಾಗಲೇ ಜಾಗತಿಕ ಮಟ್ಟದಲ್ಲಿ ನಕಲಿಚಿತ್ರಗಳ ಹಾವಳಿ ತಡೆಗೆ ‘ಕಂಟೆಂಟ್ ಆಥೆಂಟಿಸಿಟಿ ಇನಿಷಿಯೇಟಿವ್’ (ಸಿಎಐ) ಎಂಬ ಹೆಸರಿನಲ್ಲಿ ಹಲವಾರು ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳು ಒಗ್ಗೂಡಿವೆ. ಮುಖ್ಯವಾಗಿ ಮೈಕ್ರೋಸಾಫ್ಟ್, ಬಿಬಿಸಿ ಮುಂತಾದವುಗಳು ಕೈಜೋಡಿಸಿವೆ. ಇದರ ಫಲವೇ ಕಂಟೆಂಟ್ ಕ್ರೆಡೆನ್ಷಿಯಲ್ಸ್ ಎಂಬ ವ್ಯವಸ್ಥೆ. ಇದರಲ್ಲಿ ಯಾರು, ಎಲ್ಲಿ, ಯಾವಾಗ ಚಿತ್ರ ತೆಗೆದರು ಎಂಬ ಮಾಹಿತಿಯು ಅಗೋಚರವಾಗಿ ಅಡಕವಾಗಿದ್ದು, ತಿದ್ದುಪಡಿ ಮಾಡಲು ಕಷ್ಟ. ಚಿತ್ರವನ್ನು ಬೇರೆ (ವಾಟ್ಸ್ಆ್ಯಪ್, ಟೆಲಿಗ್ರಾಂ, ಫೇಸ್‌ಬುಕ್, ಎಕ್ಸ್ ಮುಂತಾದ) ವೇದಿಕೆಗಳ ಮೂಲಕ ಹಂಚಿಕೊಂಡರೂ, ಅದರಲ್ಲಿ ಅಡಕವಾಗಿರುವ ಈ ಮೆಟಾಡೇಟಾ ಅಳಿಸಿಹೋಗದು (ಪ್ರಸ್ತುತ ವ್ಯವಸ್ಥೆಯಲ್ಲಿ, ಬೇರೆ ಆ್ಯಪ್ ಮೂಲಕ ಹಂಚಿಕೊಂಡಾಗ ಈ ಮೆಟಾಡೇಟಾ ಅಳಿಸಿಹೋಗುತ್ತದೆ). ಹೀಗಾಗಿ, ಮೂಲ ಕಂಟೆಂಟ್ ಕ್ರಿಯೇಟರ್‌ಗಳಿಗೆ ತಮ್ಮ ಕಂಟೆಂಟ್‌ನ ಕೃತಿಸ್ವಾಮ್ಯ ಖಚಿತವಾಗಿರುತ್ತದೆ. ಜೊತೆಗೆ, ನಕಲಿ/ತಿರುಚಿದ ಚಿತ್ರಗಳನ್ನು ಹಂಚಿಕೊಂಡರೂ ಪತ್ತೆ ಮಾಡುವುದು ಸುಲಭವಾಗುತ್ತದೆ. ಅಡೋಬಿ ತನ್ನ ‘ಫೈರ್‌ಫ್ಲೈ’ ಎಂಬ ‘ಜನರೇಟಿವ್ ಚಿತ್ರ ತಯಾರಕ’ ತಂತ್ರಾಂಶದ ಮೂಲಕ ರಚಿಸಲಾದ ಎಐ ಚಿತ್ರಗಳಿಗೆ, ಇದು ಎಐ ಬಳಸಿ ರೂಪಿಸಿದ ಚಿತ್ರ ಎಂಬ ಗುರುತನ್ನೂ ಅಳವಡಿಸಿಕೊಳ್ಳಲಿದೆ.

ಈಗಾಗಲೇ ಬಹುತೇಕ ಕ್ಯಾಮೆರಾಗಳಲ್ಲಿ, ವಿಶೇಷತಃ ಸ್ಮಾರ್ಟ್ ಫೋನ್ ಕ್ಯಾಮೆರಾಗಳಲ್ಲಿ ಮೆಟಾಡೇಟಾ ದಾಖಲಾಗುತ್ತದೆ. ಆದರೆ, ಲೈಕಾ ಹೆಚ್ಚುವರಿ ಮಾಹಿತಿಯೊಂದಿಗೆ ಡಿಜಿಟಲ್ ಸಹಿ ಇರುವ ಈ ವ್ಯವಸ್ಥೆಯನ್ನು ಕ್ಯಾಮೆರಾಕ್ಕೆ ಮೊದಲ ಬಾರಿಗೆ ತಂದಿದೆ. ಇಂಥ ವ್ಯವಸ್ಥೆಯು ನಕಲಿಯನ್ನು ಪತ್ತೆ ಮಾಡುವುದಕ್ಕಿಂತಲೂ ಅಸಲಿ ಚಿತ್ರ ಯಾವುದು ಎಂಬುದನ್ನು ದೃಢೀಕರಿಸುವ ವ್ಯವಸ್ಥೆ. ಇದೇ ರೀತಿಯ ಉಪಕ್ರಮಗಳನ್ನು ಎಲ್ಲ ಕ್ಯಾಮೆರಾ ಹಾಗೂ ಚಿತ್ರೀಕರಣಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ಕೈಗೊಂಡರೆ, ನಕಲಿ ಚಿತ್ರಗಳ ಮೂಲಕ ದಾರಿತಪ್ಪಿಸುವ ಮತ್ತು ಸುಳ್ಳುಸುದ್ದಿಗಳನ್ನು ಹರಡುವ ಆನ್‌ಲೈನ್ ಕಿಡಿಗೇಡಿಗಳ ಕಾಟಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣ ಬೀಳುವ ಆಶಯವಿದೆ.

ಲೈಕಾ ಕ್ಯಾಮೆರಾದಿಂದ ಸೆರೆಹಿಡಿಯಲಾದ ಫೋಟೊಗೆ ಹಿನ್ನೆಲೆಯನ್ನು ಸೇರಿಸಲಾಗಿದ್ದು
ಲೈಕಾ ಕ್ಯಾಮೆರಾದಿಂದ ಸೆರೆಹಿಡಿಯಲಾದ ಫೋಟೊಗೆ ಹಿನ್ನೆಲೆಯನ್ನು ಸೇರಿಸಲಾಗಿದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT