ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಡ್ರಾಯ್ಡ್ ಫೋನ್‌ನಿಂದ ಐಫೋನ್‌ಗೆ ಬದಲಾಗುವುದು ಹೇಗೆ?

Published : 5 ಜುಲೈ 2023, 0:33 IST
Last Updated : 5 ಜುಲೈ 2023, 0:33 IST
ಫಾಲೋ ಮಾಡಿ
Comments

ಭಾರತದಲ್ಲಿ ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯಿರುವ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಜನಪ್ರಿಯ. ಇದಕ್ಕೆ ಕಾರಣವೆಂದರೆ, ನಮಗೆ ಬೇಕಾದ ಆ್ಯಪ್‌ಗಳನ್ನು ಅಳವಡಿಸಿಕೊಳ್ಳಬಹುದು ಮತ್ತು ಅದರ ಬಳಕೆಯೂ ಸುಲಭ ಎಂಬುದು. ಜೊತೆಗೆ, ನಮ್ಮ ಅಕ್ಕಪಕ್ಕದವರೂ ಅದನ್ನೇ ಬಳಸುತ್ತಿದ್ದಾರೆ ಎಂಬ ಧೈರ್ಯ ಕೂಡ. ಅದೇ ಹೊತ್ತಿಗೆ, ಆಂಡ್ರಾಯ್ಡ್ ಹೊರತಾಗಿ ವಿಂಡೋಸ್‌, ಬ್ಲ್ಯಾಕ್‌ಬೆರಿ ಮುಂತಾದ ಕಾರ್ಯಾಚರಣೆ ವ್ಯವಸ್ಥೆಗಳು ಬಂದವಾದರೂ ಅವುಗಳು ಹೆಚ್ಚು ಕಾಲ ಉಳಿಯದೇ ಹೋದವು. ಆದರೆ, ಅಮೆರಿಕ ಮತ್ತಿತರ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಆ್ಯಪಲ್‌ನ ಐಒಎಸ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ನಡೆಯುವ ಐಫೋನ್, ಐಪ್ಯಾಡ್ ಮುಂತಾದ ಗ್ಯಾಜೆಟ್‌ಗಳು.

ಹೊರಗಿನದನ್ನು ನಮ್ಮದನ್ನಾಗಿಸಿಕೊಳ್ಳುವಲ್ಲಿ ಭಾರತೀಯರು ಯಾವತ್ತೂ ಹಿಂದೆ ಬಿದ್ದಿಲ್ಲ. ಹೀಗಾಗಿ, ಆ್ಯಪಲ್ ಐಫೋನ್‌ಗಳು ದುಬಾರಿಯಾದರೂ, ಹಳೆಯ ಆವೃತ್ತಿಯ ಫೋನ್‌ಗಳು ಕಡಿಮೆ ಬೆಲೆಗೆ ಸಿಗುತ್ತಿರುವುದು ಮತ್ತು ಐಫೋನ್ ಎಂಬುದು ಐಷಾರಾಮದ, ಪ್ರತಿಷ್ಠೆಯ ಸಂಕೇತ ಎಂಬ ಭ್ರಮೆಯೂ ಇದೀಗ ಹೆಚ್ಚಿನವರು ಐಫೋನ್ ಬಳಕೆಗೆ ಮುಂದಾಗಿರುವುದಕ್ಕೆ ಪ್ರಧಾನ ಕಾರಣಗಳು. ಈಗೀಗ ನಗರ ಪ್ರದೇಶಗಳ ಕಾಲೇಜು ವಿದ್ಯಾರ್ಥಿಗಳ ಕೈಯಲ್ಲೂ ಐಫೋನ್‌ಗಳು ರಾರಾಜಿಸುತ್ತಿವೆ.

ಆಂಡ್ರಾಯ್ಡ್ ಹಾಗೂ ಐಒಎಸ್ ಸಾಧನಗಳ ಬಳಕೆಯಲ್ಲಿ ಒಂದಷ್ಟು ವ್ಯತ್ಯಾಸ ಇದೆ. ಅದಕ್ಕೆ ಹೊಂದಿಕೊಂಡರೆ ಐಫೋನ್‌ ಬಳಕೆ ಕಷ್ಟವೇನಲ್ಲ. ಇತ್ತೀಚೆಗೆ ಕನ್ನಡ ಟೈಪಿಂಗ್‌ ಕೂಡ ಹಿಂದಿನಷ್ಟು ಕಷ್ಟವಿಲ್ಲ. ಅದಕ್ಕಾಗಿ ಸಾಕಷ್ಟು ಆ್ಯಪ್‌ಗಳು ಬಂದಿದ್ದು, ಕನ್ನಡದಲ್ಲಿ ಸಂವಹನ ಸುಲಭವಾಗಿದೆ. ಐಫೋನ್ ಹೆಚ್ಚು ಸುರಕ್ಷಿತ ಮತ್ತು ಉತ್ತಮ ಗುಣಮಟ್ಟ ಹೊಂದಿದೆ, ಬಹುಕಾಲ ಬಾಳಿಕೆ ಬರುತ್ತದೆ ಎಂಬೆಲ್ಲ ಕಾರಣಕ್ಕೆ ಜನರಿಗೆ ಇಷ್ಟವಾಗಿದೆ.

ಹೀಗಾಗಿ, ಆಂಡ್ರಾಯ್ಡ್‌ ಫೋನ್‌ಗಳಿಂದ ಐಫೋನ್‌ಗೆ ಬದಲಾಗುವ ಸಂದರ್ಭದಲ್ಲಿ, ಹಳೆಯ ಫೋನ್‌ನ ಕಂಟೆಂಟ್ (ಚಿತ್ರ, ಹಾಡುಗಳು, ವಿಡಿಯೊ, ಡಾಕ್ಯುಮೆಂಟ್‌ಗಳು, ಸಂದೇಶಗಳು ಮುಂತಾದವನ್ನು) ಐಫೋನ್‌ಗೆ ವರ್ಗಾಯಿಸುವುದಕ್ಕಾಗಿ, ಆ್ಯಪಲ್ ಕಂಪನಿಯೇ Move to iOS ಎಂಬ ಆ್ಯಪ್ ಒಂದನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನೀಡಿದೆ. ಅದರ ಮೂಲಕ ಎಲ್ಲ ಕಂಟೆಂಟನ್ನು ಐಫೋನ್‌ಗೆ ವರ್ಗಾಯಿಸುವುದು ಸುಲಭ.

ವರ್ಗಾವಣೆ ಹೇಗೆ?

ಮೊದಲು ಆಂಡ್ರಾಯ್ಡ್ ಫೋನ್‌ನ ಎಲ್ಲ ಆ್ಯಪ್‌ಗಳನ್ನು ಅಪ್‌ಡೇಟ್‌ ಮಾಡಿಕೊಳ್ಳಿ. ನಂತರ Move to iOS ಎಂಬ ಆ್ಯಪ್ ಅಳವಡಿಸಿಕೊಳ್ಳಿ. ವೈಫೈ ಆನ್‌ ಆಗಿರಲಿ. ಹಾಗೂ ಆ್ಯಪಲ್‌ಗೆ ಯಾವೆಲ್ಲ ಕಂಟೆಂಟ್‌ ಹೋಗಬೇಕೆಂಬುದನ್ನು ನಿರ್ಧರಿಸಿಕೊಂಡು, ಉಳಿದವನ್ನು ಡಿಲೀಟ್‌ ಮಾಡಿಟ್ಟುಕೊಳ್ಳಿ.

ಆ್ಯಪಲ್ ಫೋನ್‌ ಹೊಸದಾದರೆ ಪರವಾಗಿಲ್ಲ, ಹಳೆಯದಾಗಿದ್ದರೆ ಅದನ್ನು ಬೇಕಿದ್ದರೆ ಫ್ಯಾಕ್ಟರಿ ರೀಸೆಟ್ ಮಾಡಿಕೊಳ್ಳಬಹುದು. ಎರಡೂ ಸಾಧನಗಳನ್ನು ಅಕ್ಕಪಕ್ಕದಲ್ಲೇ ಇರಿಸಿ. ಪೂರ್ತಿ ಚಾರ್ಜ್‌ ಆಗಿರಲಿ. ಆ್ಯಪಲ್ ಸಾಧನದಲ್ಲಿ ಸ್ಕ್ರೀನ್‌ ಮೇಲೆ ಬರುವ ಸೂಚನೆಗಳನ್ನು ಅನುಸರಿಸುತ್ತಾ ಹೋಗಿ. ನಂತರ ‘ಕ್ವಿಕ್ ಸ್ಟಾರ್ಟ್ ಸ್ಕ್ರೀನ್‌’ನಲ್ಲಿ, ‘ಸೆಟಪ್‌ ಮ್ಯಾನ್ಯುವಲಿ’ ಎಂಬುದನ್ನು ಒತ್ತಿ. ಆಂಡ್ರಾಯ್ಡ್ ಸಾಧನಕ್ಕೆ ಗೂಗಲ್ ಐಡಿ ಇರುವಂತೆಯೇ, ಆ್ಯಪಲ್ ಸಾಧನಕ್ಕೆ ಆ್ಯಪಲ್ ಐಡಿ ರಚಿಸಬೇಕಾಗುತ್ತದೆ ಎಂಬುದು ನೆನಪಿರಲಿ. ಮುಂದೆ, ‘ಆ್ಯಪ್ಸ್ ಆ್ಯಂಡ್ ಡೇಟಾ’ ಸ್ಕ್ರೀನ್‌ನಲ್ಲಿ, ‘ಮೂವ್ ಡೇಟಾ ಫ್ರಂ ಆಂಡ್ರಾಯ್ಡ್’ ಎಂಬುದನ್ನು ಒತ್ತಿ.

ನಂತರ, ಆಂಡ್ರಾಯ್ಡ್ ಫೋನ್‌ನಲ್ಲಿ, ‘ಮೂವ್ ಟು ಐಒಎಸ್ ಆ್ಯಪ್’ ತೆರೆಯಿರಿ. ಆ್ಯಪಲ್ ಸಾಧನದ ಸ್ಕ್ರೀನ್‌ನಲ್ಲಿ ಕಾಣಿಸುವ ಕೋಡ್ ನಂಬರನ್ನು ಆಂಡ್ರಾಯ್ಡ್ ಫೋನ್‌ನಲ್ಲಿ ನಮೂದಿಸಿ. ಆ್ಯಪಲ್ ಸಾಧನವು ತಾತ್ಕಾಲಿಕ ವೈಫೈ ಸಂಪರ್ಕ ಜಾಲವೊಂದನ್ನು ರಚಿಸುತ್ತದೆ. ಆಂಡ್ರಾಯ್ಡ್ ಫೋನ್‌ನಲ್ಲಿ ಆ ವೈಫೈಗೆ ಸಂಪರ್ಕಿಸಲು ‘ಕನೆಕ್ಟ್’ ಒತ್ತಿ. ನಂತರ ಡೇಟಾ ವರ್ಗಾವಣೆಯ ಸ್ಕ್ರೀನ್ ಕಾಣಿಸುತ್ತದೆ.

ಆಗ, ಯಾವೆಲ್ಲ ಕಂಟೆಂಟ್ ಅನ್ನು ಆ್ಯಪಲ್ ಸಾಧನಕ್ಕೆ ವರ್ಗಾಯಿಸಬೇಕೋ, ಅವನ್ನು ಮಾತ್ರ ಒಂದೊಂದಾಗಿ ಆಯ್ಕೆ ಮಾಡಿಕೊಳ್ಳಿ. ಎರಡೂ ಸಾಧನಗಳು ಸಮೀಪದಲ್ಲೇ ಇರಲಿ ಮತ್ತು ಚಾರ್ಜ್ ಆಗುತ್ತಿರಲಿ. ಆಂಡ್ರಾಯ್ಡ್ ಸಾಧನದಲ್ಲಿ ವರ್ಗಾವಣೆ ಪೂರ್ಣವಾಗಿದೆ ಎಂಬ ಸಂದೇಶ ಕಾಣಿಸಿಕೊಂಡರೂ, ಆ್ಯಪಲ್ ಸಾಧನದಲ್ಲಿ ಅದರ ಬಗ್ಗೆ ಸಂದೇಶ ಬರುವವರೆಗೂ ಕಾಯುತ್ತಿರಿ. ವರ್ಗಾವಣೆಗೆ ಬೇಕಾಗುವ ಸಮಯವು ಎಷ್ಟು ದತ್ತಾಂಶ ಇದೆ ಎಂಬುದನ್ನು ಅವಲಂಬಿಸಿದೆ. ವರ್ಗಾವಣೆಯಾದ ಮೇಲೆ ಆಂಡ್ರಾಯ್ಡ್ ಸಾಧನದಲ್ಲಿ 'ಡನ್' ಬಟನ್ ಒತ್ತಿ, ಐಒಎಸ್ ಸಾಧನದಲ್ಲಿ, ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸುತ್ತಾ ಹೋದರೆ, ವರ್ಗಾವಣೆ ಪೂರ್ಣವಾಗುತ್ತದೆ.

ಸಂಪರ್ಕ ಸಂಖ್ಯೆ, ಸಂದೇಶ, ಫೋಟೊ, ವಿಡಿಯೊ, ಆಡಿಯೊ, ಬುಕ್‌ಮಾರ್ಕ್ಸ್, ಇಮೇಲ್‌ ಖಾತೆಗಳು, ವಾಟ್ಸ್ಆ್ಯಪ್, ಕ್ಯಾಲೆಂಡರ್ ಮುಂತಾದವೆಲ್ಲವೂ ವರ್ಗಾವಣೆಯಾಗುತ್ತವೆ. ಆದರೆ, ಸಂಬಂಧಿಸಿದ ಆ್ಯಪ್‌ಗಳನ್ನು ಆ್ಯಪಲ್‌ನ ಆ್ಯಪ್ ಸ್ಟೋರ್‌ನಿಂದಲೇ ಅಳವಡಿಸಿಕೊಳ್ಳಬೇಕಾಗುತ್ತದೆ. ಮತ್ತು ಆಂಡ್ರಾಯ್ಡ್‌ನಿಂದ ಬಂದಿರುವುದರಿಂದ ಆ್ಯಪಲ್ ಸಾಧನದ ಕಾರ್ಯಾಚರಣೆಗೆ ಹೊಂದಿಕೊಳ್ಳಲು, ಅಭ್ಯಾಸವಾಗಲು ಸ್ವಲ್ಪ ಸಮಯ ಬೇಕಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT