ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧವಾಗಿದೆ ಹುವಾವೆ 5ಜಿ: ಅವಕಾಶವೇ, ಅಪಾಯವೇ?

ಆಕ್ಷೇಪದ ನಡುವೆಯೂ ಪ್ರಾಯೋಗಿಕ ಪರೀಕ್ಷೆ ನಡೆಸಲು ಭಾರತ ಅನುಮತಿ l ಅಮೆರಿಕ, ಐರೋಪ್ಯ ಒಕ್ಕೂಟದ ವಿರೋಧ
Last Updated 4 ಜನವರಿ 2020, 19:30 IST
ಅಕ್ಷರ ಗಾತ್ರ

ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಮತ್ತೊಂದು ಮಜಲಿಗೆ ಒಯ್ಯುವ 5ಜಿ ತಂತ್ರಜ್ಞಾನ ಸಿದ್ಧವಾಗಿದೆ. ಈ ತಂತ್ರಜ್ಞಾನ ಹೊಂದಿರುವ ಎಲ್ಲ ಕಂಪನಿಗಳಿಗೆ ಭಾರತದಲ್ಲಿ ತಂತ್ರಜ್ಞಾನ ಪರೀಕ್ಷೆಗೆ ಅವಕಾಶ ಕೊಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಚೀನಾದ ಹುವಾವೆ ಕಂಪೆನಿಗೂ ಈ ಅವಕಾಶ ದಕ್ಕಿದೆ. ಆದರೆ, ಹುವಾವೆಯ 5ಜಿ ತಂತ್ರಜ್ಞಾನ ಅನುಷ್ಠಾನಕ್ಕೆ ಅಮೆರಿಕ, ಐರೋಪ್ಯ ದೇಶಗಳು ನಿರ್ಬಂಧ ವಿಧಿಸಿವೆ. ‘ಸೈಬರ್‌ ಅಭದ್ರತೆ’ಗೆ ಇದು ಕಾರಣವಾಗಬಹುದು ಎಂಬುದು ಇದರ ಹಿಂದಿನ ಆತಂಕ. ಹಾಗಿದ್ದರೂ, ಹುವಾವೆಗೆ ಭಾರತ ಅನುಮತಿ ಕೊಟ್ಟಿರುವುದನ್ನು ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್‌ ಕೂಡ ವಿರೋಧಿಸಿದೆ

ಹುವಾವೆ ಹಿಗ್ಗು:ಅತಿದೊಡ್ಡ ಮಾರುಕಟ್ಟೆ ಎನಿಸಿರುವ ಭಾರತದಲ್ಲಿ 5ಜಿ ಪರೀಕ್ಷೆಗೆ ಅನುಮತಿ ಸಿಕ್ಕಿರುವುದು ಹುವಾವೆ ಸಂಸ್ಥೆಗೆ ಹಿಗ್ಗು ತಂದಿದೆ. ಕೇಂದ್ರ ಸರ್ಕಾರವನ್ನು ಸಂಸ್ಥೆ ಅಭಿನಂದಿಸಿದೆ.

ಆತಂಕ ಏನು?

5ಜಿ ಉಪಕರಣಗಳನ್ನು ತಯಾರಿಸುವ ಹುವಾವೆ ಸಂಸ್ಥೆಯು ಚೀನಾ ಸರ್ಕಾರದ ಜತೆ ನಿಕಟ ಸಂಪರ್ಕ ಹೊಂದಿದೆ ಎಂಬುದು ಹಲವು ದೇಶಗಳ ಆರೋಪ. ಒಂದು ವೇಳೆ ತಂತ್ರಜ್ಞಾನ ಅಭಿವೃದ್ಧಿಗೆ ಹುವಾವೆ ಸಂಸ್ಥೆಗೆ ಅನುಮತಿ ನೀಡಿದರೆ, ಮಾಹಿತಿಯು ಚೀನಾ ಸರ್ಕಾರಕ್ಕೆ ರವಾನೆಯಾಗುತ್ತದೆ ಎಂಬುದು ಆತಂಕಕ್ಕೆ ಮೂಲ ಕಾರಣ.ಹುವಾವೆ ಕಂಪನಿಯ ಸ್ಥಾಪಕ ರೆನ್ ಝೇಂಗ್‌ಪೇ ಅವರು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿ, 9 ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ.

ಅಮೆರಿಕ ಎಚ್ಚರಿಕೆ, ಚೀನಾ ಒತ್ತಡ

ಹುವಾವೆ ಸಂಸ್ಥೆಗೆ ಅನುಮತಿ ನೀಡಬೇಡಿ ಎಂದು ಭಾರತಕ್ಕೆಅಮೆರಿಕ ಎಚ್ಚರಿಕೆ ನೀಡಿತ್ತು. ಅದರೆ ಅನುಮತಿ ನೀಡುವಂತೆ ಭಾರತದ ಮೇಲೆ ಚೀನಾ ಒತ್ತಡಹೇರಿತ್ತು. ಹಿಂದೆ ಸರಿದಲ್ಲಿ, ಭಾರತವು ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿತ್ತು.ಹುವಾವೆಗೆ ಅವಕಾಶ ನೀಡುವ ಸಂಬಂಧ ವಸ್ತುನಿಷ್ಠವಾಗಿ ಹಾಗೂ ಸ್ವತಂತ್ರ ನಿರ್ಧಾರ ತಳೆಯುವಂತೆ ಭಾರತಕ್ಕೆ ಮನವಿಯನ್ನೂ ಮಾಡಿತ್ತು.

ಸಮಸ್ಯೆಯ ಮೂಲ

ಇತ್ತೀಚೆಗೆ ಚೀನಾ ಸರ್ಕಾರ ಹೊಸ ಭದ್ರತಾ ಕಾನೂನು ಜಾರಿಗೆ ತಂದಿದೆ. ಇದರನ್ವಯ ವ್ಯಕ್ತಿಗಳು ಅಥವಾ ಸಂಸ್ಥೆಗಳು ದೇಶದ ಗುಪ್ತಚರ ವಿಭಾಗಕ್ಕೆ ಸಹಾಯ ಹಾಗೂ ಸಹಕಾರ ನೀಡಬೇಕಿದೆ. ಹುವಾವೆ ಸೇರಿದಂತೆ ಎಲ್ಲ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತಿದ್ದು, ಗುಪ್ತಚರ ಇಲಾಖೆಯ ಜತೆ ಮಾಹಿತಿ ಹಂಚಿಕೊಳ್ಳುವ ಸಂದರ್ಭ ಬರಬಹುದು ಎಂಬ ಕಾರಣಕ್ಕೆ ಜಾಗತಿಕವಾಗಿ ವಿರೋಧ ವ್ಯಕ್ತವಾಗುತ್ತಿದೆ.

ಚೀನಾ–ಅಮೆರಿಕ ಜಟಾಪಟಿ

ಮೊಬೈಲ್ ಮೊದಲಾದ ಉಪಕರಣಗಳ ಮೂಲಕ ಹುವಾವೆ ಸಂಸ್ಥೆ ಗೂಢಚರ್ಯೆ ನಡೆಸುತ್ತಿದೆ ಎಂಬ ಆರೋಪವಿದೆ. 2012ರಲ್ಲೇ ಭದ್ರತಾ ಬೆದರಿಕೆ ಬಗ್ಗೆ ಅಮೆರಿಕ ಎಚ್ಚರಿಸಿತ್ತು. ಈ ಸಂಬಂಧ ಸಂಸ್ಥೆಯ ವಿರುದ್ಧ ಅಮೆರಿಕವು ನ್ಯಾಯಾಲಯದಲ್ಲಿ ದಾವೆ ಹೂಡಿದೆ.ಬ್ಯಾಂಕ್ ವಂಚನೆ, ನ್ಯಾಯಾಂಗ ನಿಂದನೆ ಹಾಗೂ ‘ಟಿ–ಮೊಬೈಲ್‌’ ಸಂಸ್ಥೆಯ ತಂತ್ರಜ್ಞಾನ ಕಳ್ಳತನದ ಆರೋಪವೂ ಸಂಸ್ಥೆಯ ಮೇಲಿದೆ.

ಇರಾನ್‌ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ಉಲ್ಲಂಘಿಸಿದ ಆರೋಪದ ಮೇಲೆ ಹುವಾವೆ ಸಂಸ್ಥಾಪಕ ರೆನ್ ಅವರ ಪುತ್ರಿ ಹಾಗೂ ಸಂಸ್ಥೆಯ ಸಿಎಫ್‌ಒ ಮೆಂಗ್ ವಾಂಗ್‌ಝೌ ಅವರನ್ನು ಬಂಧಿಸಲಾಗಿತ್ತು. ಅಮೆರಿಕದ ಈ ನಡೆ ಚೀನಾವನ್ನು ಕೆರಳಿಸಿತ್ತು. ಭದ್ರತಾ ಅಪಾಯದ ಕಾರಣವೊಡ್ಡಿಹುವಾವೆ ಉತ್ಪನ್ನಗಳನ್ನು ಬಳಸದಂತೆ ಅಮೆರಿಕ ತನ್ನ ನಾಗರಿಕರಿಗೆ ಸೂಚನೆ ನೀಡಿತ್ತು.ಈ ಬೆಳವಣಿಗೆಗಳು ಎರಡೂ ದೇಶಗಳ ನಡುವೆ ಜಟಾಪಟಿಗೆ ಕಾರಣವಾಗಿವೆ.

ಬ್ರಿಟನ್ ಅನುಮತಿ

5–ಜಿ ಡೇಟ ನೆಟ್‌ವರ್ಕ್‌ಗೆ ಸಂಬಂಧಿಸಿದ ಉಪಕರಣಗಳ ಪೂರೈಕೆಗೆ ಇಂಗ್ಲೆಂಡ್ ಹಸಿರು ನಿಶಾನೆ ತೋರಿಸಿದೆ. ಆದರೆ ಅತಿಮುಖ್ಯ ಭಾಗಗಳನ್ನು ತಯಾರಿಸದಂತೆ ನಿರ್ಬಂಧ ವಿಧಿಸಿದೆ. ಆಂಟೆನಾ ಸೇರಿದಂತೆ ಇತರ ಪರಿಕರಗಳನ್ನು ಹುವಾವೆ ತಯಾರಿಸಬಹುದು.

ಬೆಂಗಳೂರಿನಲ್ಲಿ ಅತಿ ದೊಡ್ಡ ಘಟಕ

ಹುವಾವೆ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವೊಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿದೆ. ಇದು ಆ ಸಂಸ್ಥೆಯು ವಿದೇಶದಲ್ಲಿ ಆರಂಭಿಸಿದ ಮೊದಲ ಕೇಂದ್ರ. 20 ಎಕರೆ ವಿಸ್ತೀರ್ಣದ ಈ ಕ್ಯಾಂಪಸ್‌ ಅನ್ನು ಸುಮಾರು ₹1,051 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ 3,000ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಶೇ 98ರಷ್ಟು ಮಂದಿ ಸ್ಥಳೀಯರೇ ಇದ್ದಾರೆ ಎಂದು ಸಂಸ್ಥೆ ಹೇಳಿದೆ.

ಐಪಿ ಆಧರಿತ ದತ್ತಾಂಶ ವರ್ಗಾವಣೆ, ಬಿಎಸ್‌ಎಸ್‌, ಒಎಸ್‌ಎಸ್‌, ಟರ್ಮಿನಲ್‌ ಡಿವೈಸ್‌ ಮುಂತಾಗಿ ಅತ್ಯಾಧುನಿಕ ತಂತ್ರಜ್ಞಾನದ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿ ಜಾಗತಿಕ ಮಾರುಕಟ್ಟೆಗೆ ಒದಗಿಸುವ ನಿಟ್ಟಿನಲ್ಲಿ ಹುವಾವೆ ಸಂಸ್ಥೆಯ ಬೆಂಗಳೂರು ಘಟಕವು ಮಹತ್ವದ ಪಾತ್ರ ವಹಿಸುತ್ತದೆ.

ಭಾರತದಲ್ಲಿ ಪ್ರತಿಭಾವಂತ ಸಾಫ್ಟ್‌ವೇರ್‌ ತಜ್ಞರು ಇರುವುದನ್ನು ಮನಗಂಡ ಹುವಾವೆ ಸಂಸ್ಥೆಯು 1999ರಲ್ಲಿ ಇಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಘಟಕವನ್ನು ಆರಂಭಿಸಿತ್ತು. ಪ್ರಸಕ್ತ ವಿವಿಧ ರಾಷ್ಟ್ರಗಳಲ್ಲಿ ಸಂಸ್ಥೆಯು ಇಂಥ 16 ಘಟಕಗಳನ್ನು ಹೊಂದಿದೆ. ಅವೆಲ್ಲವುಗಳಲ್ಲಿ ಬೆಂಗಳೂರಿನ ಘಟಕ ಅತಿ ದೊಡ್ಡದಾಗಿದೆ.

‘ಸೈಬರ್ ಅಭದ್ರತೆ ಬರೇ ಸುಳ್ಳು’

ಸಂಸ್ಥೆ ಜತೆ ಕೆಲಸ ಮಾಡುತ್ತಿರುವ ಜಗತ್ತಿನ ಯಾವ ಟೆಲಿಕಾಂ ಕಂಪನಿಗಳೂ ಸೈಬರ್ ಭದ್ರತೆ ಬಗ್ಗೆ ಆಕ್ಷೇಪ ಎತ್ತಿಲ್ಲ ಎಂದು ಹುವಾವೆ ಸ್ಪಷ್ಟಪಡಿಸಿದೆ. ಬ್ರಿಟನ್, ಬ್ರಸೆಲ್ಸ್ ಹಾಗೂ ಕೆನಾಡದಲ್ಲಿ ಸಂಸ್ಥೆಯ ಟೆಸ್ಟಿಂಗ್ ಕಚೇರಿಗಳಿದ್ದು ಯಾರು ಬೇಕಾದರೂ ಭದ್ರತಾ ಬೆದರಿಕೆಯ ಬಗ್ಗೆ ಅಲ್ಲಿ ಪರಿಶೀಲನೆ ನಡೆಸಬಹುದು ಎಂದು ಸಂಸ್ಥೆ ಸವಾಲು ಹಾಕಿದೆ.

ಸರ್ಕಾರದ ಸಮರ್ಥನೆ

ಭದ್ರತಾ ಕಾರಣಗಳಿಗೆ ಹುವಾವೆಗೆ ಅವಕಾಶ ಕೊಡಬಾರದು ಎಂಬ ಕೂಗು ಜಾಗತಿಕವಾಗಿ ಎದ್ದಿದ್ದರೂ ಭಾರತ ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಒಂದು ವೇಳೆ 5–ಜಿ ಪರೀಕ್ಷೆ ನಡೆಸಲು ಹುವಾವೆಗೆ ಅನುಮತಿ ನೀಡದಿದ್ದರೆ, ದೇಶದಲ್ಲಿ ಈ ತಂತ್ರಜ್ಞಾನ ಜಾರಿ ಇನ್ನೂ ಎರಡು ವರ್ಷ ವಿಳಂಬವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ 22ನೇ ವಿಶೇಷ ಪ್ರತಿನಿಧಿ ಮಟ್ಟದ ಮಾತುಕತೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಿದು ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಭಾರತ–ಅಮೆರಿಕ ನಡುವಿನ 2+2 ಸಭೆಯಲ್ಲೂ ಈ ವಿಚಾರ ಚರ್ಚೆಗೆ ಬಂದಿತ್ತು.

ಗಮನಾರ್ಹ ಅಂಶಗಳು

*ಪರೀಕ್ಷೆಗೆ ಅನುಮತಿ ಸಿಕ್ಕ ಮಾತ್ರಕ್ಕೆ, ಹುವಾವೆ ಉಪಕರಣಗಳ ವಾಣಿಜ್ಯ ಮಾರಾಟಕ್ಕೆ ಅನುಮೋದನೆ ಸಿಕ್ಕಿದೆ ಎಂದರ್ಥವಲ್ಲ

*2020ರ ಮೊದಲ ತ್ರೈ ಮಾಸಿಕದಲ್ಲಿ ಭಾರತದಲ್ಲಿ 5ಜಿ ಪ್ರಾಯೋಗಿಕ ಪರೀಕ್ಷೆ ಆರಂಭ ಸಾಧ್ಯತೆ

*ಏರ್‌ಟೆಲ್ ಹಾಗೂ ವೊಡಾಫೋನ್ ಮೂಲಕ 4ಜಿ ನೆಟ್‌ವರ್ಕ್‌ಗಾಗಿ ಹುವಾವೆ ಕೆಲಸ ಮಾಡಿದೆ

*ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಚೀನಾ ಕಂಪನಿಗಳೇ ಪ್ರಾಬಲ್ಯ ಸಾಧಿಸಿವೆ

ನಿರ್ಬಂಧ ಎಲ್ಲೆಲ್ಲಿ?

*ಅಮೆರಿಕ

*ಆಸ್ಟ್ರೇಲಿಯಾ

*ನ್ಯೂಜಿಲೆಂಡ್

ಇನ್ನೂ ನಿರ್ಧಾರ ಇಲ್ಲ

*ಜರ್ಮನಿ

*ಕೆನಡಾ

ಅನುಮತಿ ಎಲ್ಲೆಲ್ಲಿ?

*ಭಾರತ

*ಇಂಗ್ಲೆಂಡ್

*ರಷ್ಯಾ

*ಫ್ರಾನ್ಸ್

*ದಕ್ಷಿಣ ಕೊರಿಯಾ

ವೇಗದ ಕುದುರೆ ‘5–ಜಿ’

*ಮುಂದಿನ ತಲೆಮಾರಿನ ಸೆಲ್ಯುಲಾರ್ ತಂತ್ರಜ್ಞಾನವೇ 5–ಜಿ

*4–ಜಿಗೆ ಹೋಲಿಸಿದರೆ, ಡೌನ್‌ಲೋಡ್ ವೇಗ 10ರಿಂದ 100 ಪಟ್ಟು ಹೆಚ್ಚು

*ಚಾಲಕ ರಹಿತ ಕಾರು ಹಾಗೂ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಕಾರ್ಯಾಚರಣೆ ಮಾಡುವ ಗ್ಯಾಜೆಟ್‌ಗಳಿಗೆ 5–ಜಿ ತಂತ್ರಜ್ಞಾನ ಬಳಕೆ

ಹೀಗಿದೆ ಹುವಾವೆ...

*ದೂರಸಂಪರ್ಕ ಉಪಕರಣ ತಯಾರಿಕೆಯಲ್ಲಿ ಮುಂಚೂಣಿ (ಆ್ಯಪಲ್‌ಗೆ ಮೊದಲ ಸ್ಥಾನ)

*ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಜಾಗತಿಕವಾಗಿ 2ನೇ ಸ್ಥಾನ

*ಚೀನಾದ ನಂತರ ಭಾರತವೇ ಅತಿದೊಡ್ಡ ದೂರಸಂಪರ್ಕ ಮಾರುಕಟ್ಟೆ

*ಭಾರತದ ದೂರಸಂಪರ್ಕ ಸಂಸ್ಥೆಗಳಿಗೆ 4–ಜಿ ತಂತ್ರಜ್ಞಾನ ಪೂರೈಸುತ್ತಿದೆ

*ಹ್ಯಾಂಡ್‌ಸೆಟ್, ವೈಫೈ ನೆಟ್‌ವರ್ಕ್‌ ತಯಾರಿಕಾ ಸಂಸ್ಥೆಗಳಿಗೆ ಹುವಾವೆ ತಂತ್ರಜ್ಞಾನ ಪೂರೈಕೆ

*ಗೂಗಲ್‌ ಆ್ಯಪ್‌ಗಳಿಗೆ ಪರ್ಯಾಯವಾಗಿ ತನ್ನ ಸ್ವಂತ ಆ್ಯಪ್ ಅಭಿವೃದ್ಧಿ ಪಥದಲ್ಲಿ ಹುವಾವೆ

*ಮುಂಬರುವ ಪಿ40 ಮೊಬೈಲ್‌ನಲ್ಲಿ ಗೂಗಲ್‌ ತಂತ್ರಾಂಶ ಇರುವುದಿಲ್ಲ ಎನ್ನಲಾಗಿದೆ

(ಆಧಾರ: ಹುವಾವೆ ಜಾಲತಾಣಹಾಗೂ ಇತರ ಮೂಲಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT