ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳ ಗ್ರಹದಲ್ಲಿ ಬಂಡೆಕಲ್ಲಿನ ಮಾದರಿ ಸಂಗ್ರಹಿಸಲು ನಾಸಾದ ರೋವರ್ ಸಜ್ಜು

Last Updated 22 ಜುಲೈ 2021, 6:02 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಮಂಗಳ ಗ್ರಹಕ್ಕೆ ಕಳುಹಿಸಿದ್ದ ಪರ್ಸಿವಿಯರೆನ್ಸ್ ರೋವರ್‌ ನೌಕೆಯು, ಮಂಗಳ ಗ್ರಹದಲ್ಲಿ ಮೊದಲ ಬಾರಿಗೆ ಬಂಡೆಕಲ್ಲಿನ ಮಾದರಿ ಸಂಗ್ರಹಿಸಲು ಸಕಲ ಸಿದ್ಧತೆಯನ್ನು ನಡೆಸಿದೆ.

ಮಂಗಳ ಗ್ರಹದಲ್ಲಿ ಜೀವಿಗಳು, ಸೂಕ್ಷ್ಮಾಣು ಜೀವಿಗಳ ಕುರುಹಗಳ ಬಗ್ಗೆ ಪರಿಶೀಲಿಸಲು ಮತ್ತು ಅಲ್ಲಿನ ಮಣ್ಣು-ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲು ನಾಸಾ ಐತಿಹಾಸಿಕ ಪರ್ಸಿವಿಯರೆನ್ಸ್ ರೋವರ್ ನೌಕೆಯನ್ನು ರವಾನಿಸಿತ್ತು.

ನಾಸಾ ತನ್ನ ಮಹತ್ತರ ಯೋಜನೆಯಲ್ಲಿ ಮಗದೊಂದು ಮೈಲಿಗಲ್ಲು ಸಾಧಿಸುವುದರತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಮುಂದಿನ ಎರಡು ವಾರಗಳಲ್ಲಿ ವೈಜ್ಞಾನಿಕವಾಗಿ ಕುತೂಹಲ ಕೆರಳಿಸಿರುವ ಜೆಝಿರೊ ಕುಳಿಗಳಿಂದ ಮಾದರಿಯನ್ನು ಸಂಗ್ರಹಿಸಲಿದೆ.

52 ವರ್ಷಗಳ ಹಿಂದೆ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿರಿಸಿದಾಗ ಚಂದ್ರನ ಬಗ್ಗೆ ಮನಕುಲಕ್ಕೆ ತಿಳಿದಿರುವ ಹಲವು ಅಂಶಗಳನ್ನು ತಿದ್ದಲು ನೆರವಾಗಿತ್ತು. ಅದೇ ರೀತಿ ಪರ್ಸಿವಿಯರೆನ್ಸ್ ರೋವರ್‌ ನೌಕೆಯು ಸತತ ಪರಿಶ್ರಮದ ಬಳಿಕ ಸಂಗ್ರಹಿಸಲಿರುವ ಬಂಡೆಕಲ್ಲಿನ ಮಾದರಿಯು ಮಂಗಳ ಗ್ರಹದ ಇತಿಹಾಸದ ಬಗ್ಗೆ ಅಧ್ಯಯನಕ್ಕೆ ನೆರವಾಗಲಿದೆ ಎಂದು ನಾನು ನಿರೀಕ್ಷೆ ಮಾಡುತ್ತಿದ್ದೇನೆ ಎಂದು ನಾಸಾದ ವಿಜ್ಞಾನಿ ಥಾಮಸ್ ಜುರ್ಬುಚೆನ್ ತಿಳಿಸಿದ್ದಾರೆ.

ಪರ್ಸಿವಿಯರೆನ್ಸ್ ರೋವರ್ ಅನ್ನು ಹೊತ್ತಿದ್ದ ನೌಕೆಯನ್ನು 2020 ಜುಲೈ 30ರಂದು ಫ್ಲಾರಿಡಾದಿಂದ ಉಡ್ಡಯನ ಮಾಡಲಾಗಿತ್ತು. ಬರೋಬ್ಬರಿ 203 ದಿನಗಳ ಪ್ರಯಾಣದ ಬಳಿಕ 2021 ಫೆಬ್ರುವರಿ 18ರಂದು ಮಂಗಳನ ಅಂಗಳಕ್ಕೆ ತಲುಪಿತ್ತು. ಬಳಿಕ ಸಣ್ಣ ಹೆಲಿಕಾಪ್ಟರ್‌ನ ಹಾರಾಟವನ್ನು ಯಶಸ್ವಿಯಾಗಿ ನಡೆಸಿತ್ತು.

ನಾವು ಮಂಗಳ ಗ್ರಹದಲ್ಲಿ ಶತಕೋಟಿ ವರ್ಷಗಳಿಗೂ ಹಿಂದಿನ ಅಧ್ಯಯನವನ್ನು ಎದುರು ನೋಡುತ್ತಿದ್ದೇವೆ. ಈ ಕುಳಿ ಒಂದು ಕಾಲದಲ್ಲಿ ಸರೋವರವಾಗಿ ನೆಲೆಗೊಂಡಿತ್ತು ಎಂದು ನಮ್ಮ ತಂಡದ ನಂಬಿಕೆಯಾಗಿದೆ. ಇಲ್ಲಿ ವಾಸಯೋಗ್ಯ ಪರಿಸ್ಥಿತಿಯಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT