ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ: ಕೃಷಿಯಲ್ಲಿ ಪಂಚ‘ತಂತ್ರ’

Last Updated 14 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಕೃಷಿ ಚಟುವಟಿಕೆಗಳ ನಿರ್ವಹಣೆಗೆ ವಿವಿಧ ಬಗೆಯ ತಂತ್ರಜ್ಞಾನಗಳು ನೆರವಾಗುತ್ತಿವೆ. ಬೆಳೆ ಸಂರಕ್ಷಣೆ, ಕೃಷಿಭೂಮಿ, ವಾತಾವರಣ ಬದಲಾವಣೆಯ ಅಧ್ಯಯನ – ಹೀಗೆ ಹಲವು ವಿಷಯಗಳನ್ನು ತಂತ್ರಜ್ಞಾನದ ಮೂಲಕ ತಿಳಿಯಲು ಸಾಧ್ಯವಾಗುತ್ತಿದೆ. ಸಮಯ, ಹಣ, ಶ್ರಮ ಉಳಿತಾಯದ ಜತೆಗೆ ಆದಾಯದ ಹೆಚ್ಚುವಿಕೆಯಲ್ಲೂ ತಂತ್ರಜ್ಞಾನ ನೆರವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕೃಷಿಕ್ಷೇತ್ರಕ್ಕೆ ಒಗ್ಗಿಕೊಳ್ಳುತ್ತಾ, ರೈತರಿಗೆ ಸಹಕಾರಿಯಾಗುತ್ತಿರುವ ಐದು ಪ್ರಮುಖ ತಂತ್ರಜ್ಞಾನಗಳನ್ನು ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ರೋಬೊ ತಂತ್ರಜ್ಞಾನ

ರೈತರು ಮಾಡಬಹುದಾದ ಹಾಗೂ ರೈತರೂ ಮಾಡಲು ಸಾಧ್ಯವಿಲ್ಲದ ಹಲವು ಕೃಷಿ ಚಟುವಟಿಕೆಗಳನ್ನು ರೋಬೊಗಳ ನೆರವಿನಿಂದ ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತಿದೆ. ಕಳೆಯ ನಿರ್ವಹಣೆಗೆ ತಯಾರಿಸಿರುವ ರೋಬೊಗಳನ್ನು ಕೃಷಿಭೂಮಿಯಲ್ಲಿ ಬಿಟ್ಟರೆ ಸಾಕು, ಬೇರು ಸಮೇತ ಕಳೆಯನ್ನು ಕಿತ್ತೊಗೆಯುತ್ತವೆ. ಕೀಟಗಳನ್ನೂ ಹುಡುಕಿ ಕೊಲ್ಲುವಂತೆಯೂ ಅವನ್ನು ತಯಾರಿಸಲಾಗುತ್ತಿದೆ. ಹೀಗೆ ಕೃಷಿಗೆಂದೇ ಅಭಿವೃದ್ಧಿಗೊಳ್ಳುತ್ತಿರುವ ರೋಬೊಗಳು ನಿತ್ಯವೂ ಹೊಸ ರೂಪದಲ್ಲಿ ನಿರ್ಮಾಣಗೊಳ್ಳುತ್ತ ರೈತರಿಗೆ ನೆರವಾಗುತ್ತಿವೆ. ಬೆಳೆಯ ಕಟಾವಿಗೂ ರೋಬೊಗಳನ್ನು ಬಳಸಿಕೊಳ್ಳಲಾಗುತ್ತಿದೆ. ರೋಬೊಗಳಲ್ಲಿ ಅಳವಡಿಸುತ್ತಿರುವ ಅತ್ಯಾಧುನಿಕ ಸೆನ್ಸರ್‌ಗಳು, ಕ್ಯಾಮೆಗಳು ಕೃಷಿ ಚಟುವಟಿಕೆಗಳ ಸೂಕ್ಷ್ಮ ನಿರ್ವಹಣೆಯಲ್ಲಿ ನೆರವಾಗುತ್ತಿವೆ.

ಇಒಎಸ್‌ ನಿಗಾ

ಬೆಳೆಗಳ ಸಂರಕ್ಷಣೆ ಹಾಗೂ ಉತ್ತಮ ಇಳುವರಿಗಾಗಿ ಬೆಳೆಗಳ ಮೇಲೆ ಸದಾ ನಿಗಾ ಇಡಬೇಕು. ಎಲೆಕ್ಟ್ರೊ ಆಪ್ಟಿಕಲ್‌ ಸಿಸ್ಟಂ (ಇಒಎಸ್‌) ತಂತ್ರಜ್ಞಾನ ಬೆಳೆಗಳ ಮೇಲೆ ಹೀಗೆ ಸದಾ ನಿಗಾ ವಹಿಸಲು ನೆರವಾಗುತ್ತದೆ. ಎನ್‌ಡಿವಿಐ ವ್ಯವಸ್ಥೆ ಗಿಡಗಳ ಆರೋಗ್ಯ ಮೇಲೆ ಸದಾ ನಿಗಾ ವಹಿಸುತ್ತದೆ. ಮುಖ್ಯವಾಗಿ ಗಿಡಗಳಲ್ಲಿನ ಕ್ಲೋರೊಫಿಲ್‌ ಪ್ರಮಾಣವನ್ನು ತಿಳಿದುಕೊಳ್ಳಲು ಈ ತಂತ್ರಜ್ಞಾನದಿಂದ ಸಾಧ್ಯವಾಗುತ್ತದೆ. ಇದೇ ತಂತ್ರಜ್ಞಾನ ಆಧಾರಿತ ಸ್ಕೌಟಿಂಗ್‌ ತಂತ್ರಾಂಶದ ಮೂಲಕ ರಾಸಾಯನಿಕಗಳ ಸಿಂಪಡಣೆ, ಕಳೆಯ ನಿರ್ವಹಣೆಯನ್ನು ಮಾಡಬಹುದು. ಈ ತಂತ್ರಜ್ಞಾನದ ಬಳಕೆಯಿಂದ ಸಮಯಕ್ಕೆ ಸರಿಯಾಗಿ ರಾಸಾಯನಿಕಗಳ ಸಿಂಪಡಣೆ, ಗೊಬ್ಬರ ಮತ್ತು ನೀರನ್ನು ಪೂರೈಸಲು ಸಾಧ್ಯವಾಗುತ್ತದೆ.

ಬಹು ಉಪಕಾರಿ ಡ್ರೋನ್

ಪ್ರಸ್ತುತ ಕೃಷಿ ಚಟುವಟಿಕೆಗಳಿಗಾಗಿ ಡ್ರೋನ್‌ಗಳ ಬಳಕೆ ಹೆಚ್ಚಾಗುತ್ತಿದೆ. ಸಾಮಾನ್ಯ ರೈತರೂ ಡ್ರೋನ್‌ಗಳ ನೆರವು ಪಡೆದು ಕೃಷಿಭೂಮಿಯ ಸ್ಥಿತಿಗತಿಯನ್ನು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತಿದೆ. ಗಿಡಗಳ ಎತ್ತರ, ಬೆಳೆಗೆ ಬಾಧಿಸುತ್ತಿರುವ ಕೀಟಗಳು, ಮಣ್ಣಿನ ತೇವಾಂಶ… ಹೀಗೆ ಹೊಲದ ಸಂಪೂರ್ಣ ಮಾಹಿತಿ ಪಡೆದು ಕೃಷಿ ಚಟುವಟಿಕೆ ನಡೆಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಕಳೆಗಿಡಗಳನ್ನು ಪತ್ತೆಹಚ್ಚಿ ನಿರ್ಮೂಲಿಸಲು ಡ್ರೋನ್‌ಗಳು ಸಹಕಾರಿ. ಕಡಿಮೆ ಸಮಯದಲ್ಲಿ ಹೆಚ್ಚು ನಿಖರವಾಗಿ ಹೊಲದ ಸಂಪೂರ್ಣ ಮಾಹಿತಿ ಕಲೆಹಾಕುವುದಕ್ಕೂ ಡ್ರೋನ್‌ಗಳು ಬೇಕಾಗುತ್ತಿವೆ.

ಉಪಗ್ರಹದಿಂದ ದತ್ತಾಂಶ

ವಾತಾವರಣದಲ್ಲಾಗುವ ಬದಲಾವಣೆಗಳನ್ನು ಕಾಲಕಾಲಕ್ಕೆ ತಿಳಿದುಕೊಳ್ಳಲು ಉಪಗ್ರಹ ಆಧಾರಿತ ತಂತ್ರಜ್ಞಾನ ವ್ಯವಸ್ಥೆ ಕೃಷಿಗೆ ನೆರವಾಗುತ್ತಿದೆ. ಎಲ್ಲರಿಗೂ ಸ್ಯಾಟಲೈಟ್‌ ವ್ಯವಸ್ಥೆ ಸೌಲಭ್ಯ ಪಡೆಯುವುದು ಸಾಧ್ಯವಿಲ್ಲದಿದ್ದರೂ ಉಪಗ್ರಹ ಆಧಾರಿತ ಸೇವೆ ನೀಡುವ ಕಿರು ತಂತ್ರಾಂಶಗಳ ದತ್ತಾಂಶಗಳ ಮೂಲಕ ಈಗ ಸಾಮಾನ್ಯ ರೈತರೂ ಕಾಲಕಾಲಕ್ಕೆ ವಾತಾವರಣದ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿದೆ. ಕೃಷಿಭೂಮಿಯ ಮಣ್ಣಿನ ಲಕ್ಷಣ, ವಾತಾವರಣದಲ್ಲಿನ ಸಾರಜನಕ ಪ್ರಮಾಣ, ಬೆಳೆಗಳ ಸ್ಥಿತಿಗತಿ ಮುಂತಾದ ಹಲವು ವಿಧದ ಮಾಹಿತಿಗಳ ಸಂಗ್ರಹಕ್ಕೆಈ ತಂತ್ರಜ್ಞಾನ ನೆರವಾಗುತ್ತದೆ. ಈ ತಂತ್ರಜ್ಞಾನಕ್ಕಾಗಿಯೇ ಅಭಿವೃದ್ಧಿಪಡಿಸಿರುವ ಎನ್‌ಡಿವಿಐ, ಸಿಸಿಸಿಐ, ಎನ್‌ಡಿಆರ್‌ಇ, ಎಂಎಸ್‌ಎವಿಐನಂತಹ ಸೂಚ್ಯಂಕ ಆಧಾರಿತ ವ್ಯವಸ್ಥೆಗಳು ರೈತರಿಗೆ ಮತ್ತಷ್ಟು ಸಹಕಾರಿ.

ಜಿಐಎಸ್‌ ಆಧಾರಿತ ಕೃಷಿ

ಕೃಷಿಭೂಮಿಯ ನಿರ್ವಹಣೆಗೆ ಭೌಗೋಳಿಕ ಸ್ಥಿತಿಗತಿ ಅಧ್ಯಯನ ಅಗತ್ಯ. ಭೌಗೋಳಿಕ ನಕ್ಷಾ ಮಾಹಿತಿ ವ್ಯವಸ್ಥೆ (ಜಿಐಎಸ್‌: ಜಿಯೊಗ್ರಾಫಿಕಲ್‌ ಇನ್‌ರ್ಫಮೇಷನ್‌ ಸಿಸ್ಟಂ ಮ್ಯಾಪಿಂಗ್‌) ರೈತರಿಗೆ ಹಲವು ವಿಧದಲ್ಲಿ ನೆರವಾಗುತ್ತಿದೆ. ಈ ತಂತ್ರಜ್ಞಾನಕ್ಕೆ ಈಗ ತಂತ್ರಾಂಶಗಳು, ಉಪಕರಣಗಳ ಒದಗುತ್ತಿರುವುದರಿಂದ ಕೃಷಿಕೆಲಸ ಸಲೀಸಾಗುತ್ತಿದೆ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳು, ಮಣ್ಣಿನ ತೇವಾಂಶ, ಬೆಳೆಗಳ ಆರೋಗ್ಯವನ್ನು ಕಾಲಕಾಲಕ್ಕೆ ತಿಳಿದುಕೊಳ್ಳುತ್ತಾ, ಅದರಂತೆ ಕೃಷಿ ಚಟುವಟಿಕೆಯನ್ನು ನಿರ್ವಹಿಸುತ್ತ, ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತಿದೆ. ಈ ತಂತ್ರಜ್ಞಾನಕ್ಕಾಗಿಯೇ ವಿಶೇಷವಾಗಿ ರೂಪಿಸಲಾದ ಆ್ಯಪ್‌ಗಳ ನೆರವಿನಿಂದ ಯಂತ್ರೋಪಕರಣಗಳು, ರಾಸಾಯನಿಕಗಳು ಹಾಗೂ ರಸಗೊಬ್ಬರಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT