ಸೋಮವಾರ, ಜನವರಿ 17, 2022
27 °C

5ಜಿ ಬರುತ್ತಿದೆ ವೇಗವಾಗಿ... ಬರಮಾಡಿಕೊಳ್ಳುವ ಮೊದಲು ಇದನ್ನೊಮ್ಮೆ ಓದಿ

ಕ್ಷಮಾ ವಿ. ಭಾನುಪ್ರಕಾಶ್ Updated:

ಅಕ್ಷರ ಗಾತ್ರ : | |

ಈಗ 5ಜಿ ಮನೆಯ ಹೊಸ್ತಿಲಿನವರೆಗೂ ಬಂದಾಗಿದೆ. ಬರಮಾಡಿಕೊಳ್ಳುವ ಮೊದಲು ಒಂದು ಅವಲೋಕನ ಇಲ್ಲಿದೆ.

ಜಪಾನ್‌ನಲ್ಲಿ ಮೊದಲ ಬಾರಿಗೆ 1979ರಲ್ಲಿ 1ಜಿನೆಟ್‌ವರ್ಕ್‌ ಲಭ್ಯವಾಗಿದ್ದೇ ತಡ, ಅದರ ಬಳಕೆ ಹಾಗೂ ಅದರ ಮುಂದಿನದೇನು ಎಂಬ ಹುಡುಕಾಟ ಪ್ರಾರಂಭವಾಯ್ತು. ಅಲ್ಲಿಂದ ಸುಮಾರು ಪ್ರತಿ ಹತ್ತು ವರ್ಷಗಳಿಗೊಮ್ಮೆ ಹೊಸ ತಲೆಮಾರಿನ ನೆಟ್‌ವರ್ಕ್‌ ಸರ್ವೀಸ್‌ ಹುಟ್ಟಿಕೊಳ್ಳುತ್ತಲಿದೆ. ಈಗ ಮುಂದಿನ ಸುಧಾರಿತ ನೆಟ್‌ವರ್ಕ್‌ ತಲೆಮಾರಿನ ಕಡೆ ನೆಟ್ಟಿದೆ ಎಲ್ಲರ ಚಿತ್ತ; ಅದೇ 5ಜಿ.

5ಜಿಯ ಬಗ್ಗೆ ತಜ್ಞರು ಏನು ಹೇಳುತ್ತಾರೆ ಗೊತ್ತೇ? ಇದು ಹೊಸ ಸಂಭಾವ್ಯಗಳ ಸಂಕಲನ! ಇಷ್ಟೊಂದು ವೇಗದಲ್ಲಿ ಇಂಟರ್ನೆಟ್‌ ಬಳಸಿ ಹೀಗೆಲ್ಲಾ ಸಾಧ್ಯವಾಗಬಹುದಾ ಎಂಬ ನಮ್ಮ ಊಹೆಗಳಿಗೂ ಮೀರಿದ ನಿದರ್ಶನಗಳನ್ನು ಕಾಣಲು ಎಲ್ಲರೂ ತಯಾರಾಗಬೇಕು ಎನ್ನುತ್ತಾರೆ. ಇದಕ್ಕೆ ಕಾರಣ ಇದರ ಉದ್ದೇಶಿತ ವೇಗ, ಈಗ ಲಭ್ಯವಿರುವ 4ಜಿಗಿಂತಲೂ ಸಾವಿರ ಪಟ್ಟು ಹೆಚ್ಚು! ಈಗಾಗಲೇ ಕ್ಷಣಮಾತ್ರದಲ್ಲೇ ವಿಡಿಯೊಗಳು ಡೌನ್‌ಲೋಡ್‌ ಆಗುತ್ತವೆ. ಯಾವುದೇ ಅಡೆತಡೆಯಿಲ್ಲದೇ ಸಂಪೂರ್ಣ ಚಲನಚಿತ್ರವೇ ಸ್ಟ್ರೀಮ್‌ ಆಗುತ್ತದೆ. ಹೀಗಿರುವಾಗ ಸಾವಿರ ಪಟ್ಟು ಹೆಚ್ಚು ವೇಗವೆಂದರೆ ಊಹಾತೀತವಲ್ಲವೇ?

ನಮ್ಮ ಫೋನುಗಳು ಮಾತ್ರವಲ್ಲ, ಸ್ಮಾರ್ಟ್‌ವಾಚುಗಳು, ಸ್ವಚಾಲಿತ ಕಾರುಗಳು, ವರ್ಚುಯಲ್ ರಿಯಾಲಿಟಿ, ಇಂಟರ್ನೆಟ್‌ನ ಮುಖಾಂತರ ಶಿಕ್ಷಣ, ಆರೋಗ್ಯ, ಕೃತಕ ಬುದ್ಧಿಮತ್ತೆ(ಎ.ಐ.), ಸ್ಯಾಟ್‌ಲೈಟ್ ಉಡಾವಣೆ – ಹೀಗೆ ಎಲ್ಲೆಲೂ 5ಜಿಯ ಅನಿವಾರ್ಯತೆ ಸೃಷ್ಟಿಯಾಗಲಿದೆ. 5ಜಿ ತಂತ್ರಜ್ಞಾನ ಬಳಸಿ ಒಂದೇ ಸಾಧನದಿಂದ ಸರಿಸುಮಾರು ಒಂದು ನೂರು ಸಂಪರ್ಕಗಳನ್ನು ಪಡೆಯಬಹುದಾಗಿದೆ ಕೂಡ.

ಇಂತಹ ಸುಧಾರಿತ ಹಾಗೂ ತೀವ್ರತರನಾದ ವೇಗವನ್ನು ಕೊಡಮಾಡೋ ಹೊಸ ತಲೆಮಾರಿನ ನೆಟ್‌ವರ್ಕ್‌ ಸೇವೆ, ಆರೋಗ್ಯಕ್ಕೆ ಹಾನಿಕರವೇ ಎಂಬ ಪ್ರಶ್ನೆ ತಲೆದೋರಿತ್ತು; ಟಿವಿ, ರೇಡಿಯೊ, ಮೈಕ್ರೋವೇವ್‌ ಮತ್ತು ವೈಫೈ, ಮೊಬೈಲ್‌ ನೆಟ್‌ವರ್ಕ್‌ಗಳ ಮೂಲಕ ಈಗಾಗಲೇ ನಾವೆಲ್ಲರೂ ಕಣ್ಣಿಗೆ ಕಾಣದ ತರಂಗಗಳ ಬಲೆಯ ನಡುವೆಯೇ ಬದುಕುತ್ತಿದ್ದೇವೆ; ನಮ್ಮ ಸುತ್ತಲೂ ಸದಾಕಾಲ ವಿಧವಿಧದ ವೈರ್‌ಲೆಸ್‌ ಕಿರಣಗಳು ಇದ್ದೇ ಇರುತ್ತವೆ ಮತ್ತು ಅದು ಸಮಯ ಕಳೆದಂತೆ ತಕ್ಕಮಟ್ಟಿಗೆ ಹಾನಿಕರವೇ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ, 5ಜಿ ಸೇವೆಗಳು ಲಭ್ಯವಾಗಬೇಕಾದಲ್ಲಿ, ನೆಲಕ್ಕೆ ಮತ್ತಷ್ಟು ಹತ್ತಿರವಿರುವ ಟ್ರಾನ್ಸ್‌ಮೀಟರ್‌ಗಳು ಬೇಕಾಗುತ್ತವೆ; ಏಕೆಂದರೆ ಈ ಅಲೆಗಳು ಒಂದು ನಿಗದಿತ ಚದರಡಿಯಲ್ಲಿ ಹೆಚ್ಚೆಚ್ಚು ಪ್ರಯಾಣಿಸಿ ಹೆಚ್ಚು ವೇಗ ನೀಡಬೇಕಾಗುತ್ತದೆ. ಇಲ್ಲಿ ಹೆಚ್ಚು ಫ್ರೀಕ್ವೆನ್ಸಿಯ ತರಂಗಗಳನ್ನು ಬಳಸಲಾಗುತ್ತದೆ ಕೂಡ. ಇದೇ ಕಾರಣಕ್ಕೆ ಆರೋಗ್ಯ ಸಂಬಂಧೀ ಸಮಸ್ಯೆಗಳನ್ನು 5ಜಿ ಉಂಟುಮಾಡಲಿದೆಯೇ ಎಂಬ ಪ್ರಶ್ನೆ ಎಲ್ಲರ ಹುಬ್ಬೇರಿಸಿತ್ತು; ಇದೇ ನಿಟ್ಟಿನಲ್ಲಿ ನೂರಾರು ಸಂಶೋಧನೆಗಳು ನಡೆದವು. ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಗಳು, ಸಂಶೋಧನೆಗಳ ಪ್ರಕಾರ, ಮೊಬೈಲ್‌ ನೆಟ್‌ವರ್ಕ್‌ನಿಂದ ಆರೋಗ್ಯಕ್ಕೆ ಅಂತಹದ್ದೇನೂ ಸಮಸ್ಯೆಯಿಲ್ಲ. ಆದರೆ, ಹೆಚ್ಚು ದಶಕಗಳು ಈ ಕಿರಣಗಳಿಗೆ ಸತತವಾಗಿ ಒಡ್ಡಿಕೊಂಡಿದ್ದರೆ ಸಮಸ್ಯೆಗಳು ತಲೆದೋರಬಹುದು; ಕೆಲವು ಬಗೆಯ ಕ್ಯಾನ್ಸರ್‌ಗಳಿಗೂ ಕಾರಣವಾಗಬಹುದು. ಆದರೆ ಇದಕ್ಕೆ ಯಾವ ಬಲವಾದ ಸಾಕ್ಷಿಯೂ ಇದ್ದಂತಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಡುತ್ತದೆ. ಆದರೆ 5ಜಿ ತರಂಗಗಳು ನಾನ್‌-ಅಯೊನೈಸಿಂಗ್‌ ಕಿರಣಗಳಾಗಿದ್ದು, ಇದಕ್ಕಾಗೇ ಇರುವ ಅಂತರರಾಷ್ಟ್ರೀಯ ಕಮಿಶನ್‌ನಿಂದ ಕೂಡ ‘ಸುರಕ್ಷಿತ’ ಎಂದು ಹಣೆಪಟ್ಟಿ ಪಡೆದಿದೆ. ಹಾಗಾಗಿ ಯಾವುದೇ ಯೋಚನೆಯಿಲ್ಲದೇ ಬಳಸಬಹುದು ಎನ್ನುತ್ತವೆ, ನೆಟ್‌ವರ್ಕ್‌ ಸಂಸ್ಥೆಗಳು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು