ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಡ್‌ ಬ್ಲಾಕರ್; ಏನಿದು ವಿವಾದ?

Last Updated 19 ಜೂನ್ 2019, 19:30 IST
ಅಕ್ಷರ ಗಾತ್ರ

ಇನ್ನುಮುಂದೆ ಬ್ರೌಸರ್ ಕ್ರೋಮ್‌ನಲ್ಲಿ ಆ್ಯಡ್‌ ಬ್ಲಾಕರ್‌ ಆಯ್ಕೆ ಎಲ್ಲರಿಗೂ ಸಿಗುವುದಿಲ್ಲ. ಹಣ ಪಾವತಿಸುವ ಉದ್ದಿಮೆ ಗ್ರಾಹಕರಿಗೆ ಮಾತ್ರವೇ ಈ ಆಯ್ಕೆ ಸಿಗಲಿದೆ. ಗೂಗಲ್‌ ಹೀಗೆ ಹೇಳುತ್ತಿದ್ದಂತೆಯೇ ತಂತ್ರಜ್ಞರು, ಬಳಕೆದಾರರು ಅದರ ಸಾಧಕ–ಬಾಧಕಗಳ ಬಗ್ಗೆ ಚರ್ಚೆ ನಡೆಸಲಾರಂಭಿಸಿದ್ದಾರೆ. ಇವರಲ್ಲಿ, ಗೂಗಲ್‌ ಕ್ರಮ ಸರಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿರುವವರೇ ಹೆಚ್ಚು.

ಗೂಗಲ್‌ಗೆ ಬಳಕೆದಾರರೇ ಬಂಡವಾಳ. ಜಿ–ಮೇಲ್‌, ಗೂಗಲ್‌ ಮ್ಯಾಪ್‌, ಕ್ರೋಮ್‌ ಹೀಗೆ ಯಾವುದಾದರೂ ಒಂದನ್ನು ಬಳಸುತ್ತಿದ್ದರೆ ಅಲ್ಲಿ, ಬಳಕೆದಾರನ ಪ್ರತಿ ಕ್ಷಣದ ನಡೆಯನ್ನೂ ಮಾರಾಟಕ್ಕೆ ಇಡುತ್ತದೆ. ಇದು ಬಳಕೆದಾರರಿಗೆ ತಿಳಿದಿಲ್ಲ ಎಂದೇನೂ ಅಲ್ಲ. ಕೆಲವು ಮಾಹಿತಿಗಳನ್ನು ಪಡೆಯುವ ಬಗ್ಗೆ ಸೇವೆ ಪಡೆಯುವ ಮುನ್ನವೇ ಸೂಚಿಸಲಾಗಿರುತ್ತದೆ. ಆದರೆ ಅದಕ್ಕೂ ಹೊರತಾಗಿ ಬಳಕೆದಾರನಿಗೆ ಅರಿವಿಲ್ಲದೆಯೇ ಮಾಹಿತಿಗಳನ್ನು ಪಡೆಯಲಾಗುತ್ತಿದೆ. ಇಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಆದರೆ, ಖಾಸಗಿತನದ ಬಗ್ಗೆ ಯಾವುದೇ ಗಮನ ನೀಡುತ್ತಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ.

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಇರುವ ಹಲವು ಆ್ಯಪ್‌ಗಳು ಬಳಕೆದಾರನಿಗೆ ಅರಿವಿಲ್ಲದೇ ಅವನ ಫೋಟೊ, ಕಾಂಟ್ಯಾಕ್ಟ್‌ ಮತ್ತು ಇನ್ನಿತರೆ ವೈಯಕ್ತಿಕ ಮಾಹಿತಿಗಳನ್ನು ದೋಚುತ್ತಿವೆ. ಇಂತಹ ಪ್ರಕರಣಗಳು ಪ್ರತಿ ವರ್ಷವೂ ನಡೆಯುತ್ತಲೇ ಇವೆ. ಆದರೆ ಘಟನೆ ಬೆಳಕಿಗೆ ಬಂದಾಗ ಅಂತಹ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಕೈಬಿಡುತ್ತಿದೆಯೇ ಹೊರತು, ಪ್ಲೇಸ್ಟೋರ್‌ನ ಸುರಕ್ಷತೆ ಬಿಗಿಗೊಳಿಸಲು ಗೂಗಲ್‌ ಮನಸ್ಸು ಮಾಡುತ್ತಿಲ್ಲ.

ತನ್ನ ಜಾಹೀರಾತು ವರಮಾನ ಹೆಚ್ಚಿಸಿಕೊಳ್ಳಲು ಗೂಗಲ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಕ್ರೋಮ್‌ನಲ್ಲಿ ಇರುವ ಆ್ಯಡ್‌ ಬ್ಲಾಕರ್‌ ಎಕ್ಸ್‌ಟೆನ್ಶನ್‌ ಅನ್ನು ಸಾಮಾನ್ಯ ಬಳಕೆದಾರರಿಗೆ ನೀಡುವುದಿಲ್ಲ ಎಂದು ಹೇಳಿದೆ. ಯಾರು ದುಡ್ಡು ಕೊಟ್ಟು ಸೇವೆಗಳನ್ನು ಪಡೆಯುತ್ತಾರೋ ಅವರಿಗೆ ಮಾತ್ರವೇ ಆ್ಯಡ್‌ಗಳನ್ನು ಬ್ಲಾಕ್‌ ಮಾಡುವ ಆಯ್ಕೆ ಲಭ್ಯವಾಗಲಿದೆ ಎಂದು ಘೋಷಿಸಿದೆ. ಇದಕ್ಕೆ ಮೂಲ ಕಾರಣವೇ ಜಾಹೀರಾತು ವರಮಾನ. ಸದ್ಯ ಇರುವ 2 ಕೋಟಿ ಕ್ರೋಮ್‌ ಬಳಕೆದಾರರಲ್ಲಿ ಶೇ 1ರಷ್ಟು ಬಳಕೆದಾರರು ಆ್ಯಡ್‌ ಬ್ಲಾಕರ್‌ ಬಳಸಿದರೆ ಅದರಿಂದ ಗೂಗಲ್‌ಗೆ ತಿಂಗಳಿಗೆ ಲಕ್ಷಗಟ್ಟಲೆ ವರಮಾನ ನಷ್ಟವಾಗುವ ಅಂದಾಜು ಮಾಡಲಾಗಿದೆ.

ಆ್ಯಡ್‌ ಬ್ಲಾಕರ್‌ ಇಲ್ಲದೇ ಇದ್ದರೆ, ವೆಬ್‌ಸೈಟ್‌ನ ಪ್ರತಿ ಪುಟ ತೆರೆದಾಗಲೂ ಲೆಕ್ಕವಿಲ್ಲದಷ್ಟು ಜಾಹೀರಾತುಗಳು ಕಾಣಿಸುತ್ತವೆ. ವೆಬ್‌ಸೈಟ್‌ನಲ್ಲಿ ಲೋಡ್‌ ಆಗುವುದರಲ್ಲಿ ಶೇ 50ರಷ್ಟು ಜಾಹೀರಾತು ಅಥವಾ ಟ್ರ್ಯಾಕರ್‌ಗಳಾಗಿವೆ. ಅನಿಯಮಿತ ಡೇಟಾ (unlimited data) ಇಲ್ಲದೇ ಇದ್ದರೆ ಇಂತಹ ಆ್ಯಡ್‌ಗಳಿಗೆ ಹೆಚ್ಚಿನ ಡೇಟಾ ವ್ಯಯವಾಗುತ್ತದೆ. ಆ್ಯಡ್‌ ಬ್ಲಾಕರ್‌ ಇದ್ದರೆ ಜಾಹೀರಾತುಗಳನ್ನು ಬ್ಲಾಕ್‌ ಮಾಡಿ, ಡೇಟಾ ವ್ಯಯವಾಗುವುದನ್ನು ತಪ್ಪಿಸಬಹುದು.

ಭಾರತದಲ್ಲಿ ಜಿಯೊ ಡೇಟಾ ಉಚಿತವಾಗಿದೆ. ಹೀಗಾಗಿ ಡೇಟಾ ಸಮಸ್ಯೆಯೇ ಇಲ್ಲ ಎಂದು ಹೇಳಬಹುದು. ಆದರೆ ಕ್ರೋಮ್‌ನಲ್ಲಿ ತಕ್ಷಣಕ್ಕೆ ನಿಮಗೆ ಬೇಕಿರುವ ಮಾಹಿತಿ ಹುಡುಕಲು ಹೋದರೆ ಜಾಹೀರಾತುಗಳೇ ಹೆಚ್ಚು ತೆರೆದುಕೊಳ್ಳುತ್ತವೆ. ಆಗ ಸಮಯ ವ್ಯಯವಾಗುತ್ತದೆ. ಕ್ರೋಮ್‌ನಲ್ಲಿ ಆ್ಯಡ್‌ ಬ್ಲಾಕರ್‌ ಸಿಗದೇ ಇರುವುದರಿಂದ ಮೊಜಿಲ್ಲಾ ಫೈರ್‌ಫಾಕ್ಸ್‌ ಒಂದು ಉತ್ತಮ ಪರ್ಯಾಯ ಎನ್ನುವುದು ತಜ್ಞರ ಸಲಹೆ. ಮೊಜಿಲ್ಲಾ ಲಾಭಯೇತರ ಸಂಘಟನೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಫೈರ್‌ಫಾಕ್ಸ್‌ನಲ್ಲಿ ಖಾಸಗಿತನದ ರಕ್ಷಣೆಗೆ ಹೆಚ್ಚು ಗಮನ ನೀಡಿದೆ. ಮೊಬೈಲ್‌ಗೆ ‘Firefox Focus' ಬ್ರೌಸರ್‌ ಇದೆ. ಇದು ಖಾಸಗಿತನಕ್ಕೆ ಹೆಚ್ಚಿನ ಸುರಕ್ಷತೆ ನೀಡುತ್ತದೆ. ಇದು ಎಲ್ಲಾ ಟ್ರ್ಯಾಕರ್‌ಗಳನ್ನೂ ಡಿಫಾಲ್ಟ್‌ ಆಗಿ ಬ್ಲಾಕ್‌ ಮಾಡುತ್ತದೆ. ಬ್ರೌಸರ್‌ ಹಿಸ್ಟರಿಯನ್ನೂ ಸೇವ್‌ ಮಾಡುವುದಿಲ್ಲ.

ಗೂಗಲ್‌ ಸಮರ್ಥನೆ

ಆ್ಯಡ್‌ ಬ್ಲಾಕರ್‌ಗಳನ್ನು ನಿಯಂತ್ರಿಸುತ್ತಿಲ್ಲ ಅಥವಾ ಬಳಕೆದಾರರಿಗೆ ಆ್ಯಡ್‌ಗಳನ್ನು ಬ್ಲಾಕ್‌ ಮಾಡದೇ ಇರುವಂತೆ ನಿರ್ಬಂಧ ಹೇರುತ್ತಿಲ್ಲ. ಬಳಕೆದಾರರ ಖಾಸಗಿತನದ ರಕ್ಷಣೆಯ ನಿಟ್ಟಿನಲ್ಲಿ ಎಕ್ಸ್‌ಟೆನ್ಶನ್‌ಗಳನ್ನು ಸಿದ್ಧಪಡಿಸಲು ಡೆವಲಪರ್‌ಗಳಿಗೆ ನೆರವಾಗುತ್ತಿದ್ದೇವೆ’ ಎನ್ನುವುದು ಕ್ರೋಮ್‌ ಎಕ್ಸ್‌ಟೆನ್ಶನ್‌ ತಂಡದ ಡೆವ್ಲಿನ್‌ ಕ್ರೊನಿನ್‌ ಅವರ ವಾದ. ಎಕ್ಸ್‌ಟೆನ್ಶನ್‌ಗಾಗಿ ಗ್ರಾಹಕರು ವ್ಯಯಿಸುತ್ತಿರುವ ಡೇಟಾದ ಮೇಲೆ ಅವರಿಗೆ ಹೆಚ್ಚಿನ ನಿಯಂತ್ರಣ ಹೊಂದಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಬದಲಾವಣೆಗಳ ಮೂಲಕ ಬಳಕೆದಾರರ ಬ್ರೌಸಿಂಗ್‌ ಅನುಭವ ಉತ್ತಮಪಡಿಸಲಾಗುವುದು ಎಂದಿದ್ದಾರೆ.

ಬ್ರೌಸರ್‌ಗಳ ಮಾರುಕಟ್ಟೆ

-ಕ್ರೋಮ್;62.7%
-ಸಫಾರಿ;15.89%
-ಫೈರ್‌ಫಾಕ್ಸ್‌;5.07%
-ಸ್ಯಾಮ್ಸಂಗ್‌ ಇಂಟರ್‌ನೆಟ್‌;3.38%
-ಯುಸಿ ಬ್ರೌಸರ್‌;3.16%
- ಒಪೇರಾ;2.55%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT