ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆಯಿಂದ ಲೇಖನ ಬರೆಯುವುದು ಹೇಗೆ? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

Last Updated 22 ಫೆಬ್ರುವರಿ 2022, 21:20 IST
ಅಕ್ಷರ ಗಾತ್ರ

ಕೃತಕ ಬುದ್ಧಿಮತ್ತೆಯಿಂದ ಲೇಖನ ಬರೆಯುವುದು ಹೇಗೆ? ಇದು ಎಷ್ಟರ ಮಟ್ಟಿಗೆ ಸರಿಯಾಗಿರುತ್ತದೆ? ಕಂಪ್ಯೂಟರ್ ಮೂಲಕವೇ ಲೇಖನ ತಯಾರಿಸಿದರೆ ನಮಗೇನು ಕೆಲಸ?

ಇಸವಿ 2025; ಸಂಜೆ ಎಂಟಕ್ಕೆ ಇಸ್ರೋ ಮಾನವನನ್ನು ಯಶಸ್ವಿಯಾಗಿ ಬಾಹ್ಯಾಕಾಶಯಾನ ಮಾಡಿಸಿದ ನಂತರ ಚಂದ್ರನಲ್ಲಿಗೆ ಕರೆದೊಯ್ಯುವ ಯೋಜನೆಯನ್ನು ಘೋಷಣೆ ಮಾಡಿದೆ. ಪತ್ರಿಕೆಯ ಸಂಪಾದಕರು ಇದರ ಬಗ್ಗೆ ಒಂದು ವರದಿ ತಯಾರಿಸಿ ನಾಳಿನ ಸಂಚಿಕೆಯಲ್ಲಿ ಪ್ರಕಟಣೆ ಮಾಡಬೇಕೆಂದಿದ್ದಾರೆ. ಹೆಚ್ಚು ಕಾಲಾವಕಾಶ ಇಲ್ಲ. ಆದರೇನಂತೆ, ಕೃತಕ ಬುದ್ಧಿಮತ್ತೆಯಿಂದ ಲೇಖನ ತಯಾರಿಸುವಂತೆ ವರದಿಗಾರರಿಗೆ ಸೂಚಿಸುತ್ತಾರೆ.

ಇದೇನಿದು ಕೃತಕ ಬುದ್ಧಿಮತ್ತೆಯಿಂದ ಲೇಖನ? ಹಾಗಾದರೆ ನಾವು ಬರೆಯುವುದೇ ಬೇಡವೇ? ಇದು ಎಷ್ಟರ ಮಟ್ಟಿಗೆ ಸರಿಯಾಗಿರುತ್ತದೆ? ಕಂಪ್ಯೂಟರ್ ಮೂಲಕವೇ ಲೇಖನ ತಯಾರಿಸಿದರೆ ನಮಗೇನು ಕೆಲಸ? ಹೀಗೆಲ್ಲ ಹಲವಾರು ಪ್ರಶ್ನೆ ಮೂಡಿ ಬರುವುದು ಸಹಜ. ನಾವು ಯಾವುದೋ ಕಾಲ್ಪನಿಕ ಜಗತ್ತಿನಲ್ಲಿ ಇರುವೆವೋ ಎಂದೆನಿಸಲೂಬಹುದು. ಆದರೆ ಈಗಾಗಲೇ ಇಂಗ್ಲಿಷ್‌ಭಾಷೆಯಲ್ಲಿ ಕೃತಕ ಬುದ್ದಿಮತ್ತೆ ಆಧರಿಸಿ ಯಂತ್ರಕಲಿಕೆಯ ಮಾಡೆಲ್‌ಗಳು ಅಂತರ್ಜಾಲದಲ್ಲಿ ಮುಕ್ತವಾಗಿ ಹೊರಬಂದಿದೆ. ಇನ್ನು ಹೆಚ್ಚು ನಿಖರವಾಗಿ ಫಲಿತಾಂಶವನ್ನು ನೀಡುವ ಕೆಲವು ಮಾಡೆಲ್‌ಗಳು ಮುಕ್ತವಾಗಿಲ್ಲ. ಆದರೆ ಅವುಗಳನ್ನು ಲೈಸೆನ್ಸ್ ಪಡೆದು ಬಳಸಬಹುದಾಗಿದೆ. ಇದನ್ನು ವಿಜ್ಞಾನಿಗಳು ಮತ್ತು ತಂತ್ರಜ್ಞರು ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ.

ಯಂತ್ರಕಲಿಕೆ

ಯಂತ್ರಕಲಿಕೆಯು ಕೃತಕ ಬುದ್ಧಿಮತ್ತೆಯ ಒಂದು ಪ್ರಮುಖ ವಿಧಾನ. ಹಿಂದೆ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆ ಕೇವಲ ಸಂಖ್ಯೆಗಳನ್ನೇ ಆಧರಿಸಿ ಮತ್ತು ಅದರ ಸಂಭವನೀಯ ಮಾಡಲ್ ಮೂಲಕ ಮಾತ್ರ ವಿಶ್ಲೇಷಣೆ ಎಂದಿತ್ತು. ಆದರೆ ಈಗ ಸುಮಾರು ಎರಡು-ಮೂರುದಶಕದಿಂದ ಕೇವಲ ಸಂಖ್ಯೆಗಳಲ್ಲದೇ ಪದಗಳನ್ನೂ ಆಧರಿಸಿ ವಿಶ್ಲೇಷಣೆ ಸಾಧ್ಯವಾಗಿದೆ. ಹೀಗಾಗಿ ಪದಗಳಿಂದ ಕೂಡಿದ ವಾಕ್ಯಗಳು, ವಾಕ್ಯಗಳಿಂದ ಕೂಡಿದ ಲೇಖನಗಳು, ಗದ್ಯ–ಪದ್ಯಗಳನ್ನೂ ಅರ್ಥೈಸಿಕೊಳ್ಳಬಹುದಾಗಿದೆ. ಅಷ್ಟೇಕೆ, ಶೇಕ್ಸ್‌ಪಿಯರ್‌ನ ರಚನೆಗಳನ್ನೆಲ್ಲಾ ಇಂತಹ ಯಂತ್ರಕಲಿಕಾ ಮಾಡಲ್‌ಗಳು ಈಗಾಗಲೇ ‘ಕಲಿತಿವೆ’. ಇದರಿಂದ ನೀವೇನಾದರೂಶೇಕ್ಸ್‌ಪಿಯರ್ ಬರೆದ ಒಂದು ಪ್ರಸಿದ್ಧ ವಾಕ್ಯದ ಭಾಗ ಬರೆದರೆ ಮಾಡೆಲ್ ಮಿಕ್ಕ ಭಾಗವನ್ನು ಕ್ಷಣಾರ್ಧದಲ್ಲಿ ಪೂರ್ಣ ಮಾಡುತ್ತದೆಅಥವಾ ಶೇಕ್ಸ್‌ಪಿಯರ್‌ನ ರಚಿತ ಕೆಲವು ಪಾತ್ರಗಳನ್ನು ನೇಮಿಸಿ, ಮಾಡೆಲ್ ಅದೇ ಶೈಲಿಯಲ್ಲಿ ಕೃತಕ ಕಥೆಯನ್ನೇ ರಚಿಸಬಲ್ಲದು.

ಆದರೆ ನಾವು ಗೂಗಲ್‌ನಲ್ಲಿ ಯಾವುದಾದರು ಪದ / ವಿಷಯ ಹುಡುಕಿದಾಗ ಅದು ಬಿತ್ತರಿಸುವುದು ಅದರ ಸ್ಮರಣೆಯಲ್ಲಿ ಹುಡುಕಿದ ಪದಗಳಿಗೆ ಅನ್ವಯವಾಗುವ ವೆಬ್‌ಪೇಜ್ ಅಥವಾ ತಾಣಗಳು. ಇದು ಸಂಖ್ಯಾಶಾಸ್ತ್ರೀಯ ಮಾಡೆಲ್‌ನಿಂದ ರಚಿಸಿದ ‘ಪೇಜ್ ರಾಂಕ್’ ಎಂಬ ವಿಧಾನದಿಂದ ಸಾಧ್ಯವಾಗಿದೆ. ಇಲ್ಲಿ ಕೇವಲ ಅದರ ಸ್ಮರಣೆಯಲ್ಲಿರುವ ಮಾಹಿತಿಯನ್ನು ಮಾತ್ರ ಹೊರಹಾಕಬಲ್ಲದು. ಯಂತ್ರಕಲಿಕೆಯನ್ನು ಬಳಸಿ ಕೃತಕ ಬುದ್ಧಿಮತ್ತೆಯಲ್ಲಿ ಸ್ಮರಣೆಯ ಜೊತೆ ಅರ್ಥೈಸಿಕೊಳ್ಳುವ ಸಾಮರ್ಥ್ಯವಿದೆ. ಮಾನವರ ಬುದ್ಧಿಮತ್ತೆಯನ್ನೇ ನಕಲು ಮಾಡುವಂತೆ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆಯುಳ್ಳ ಯಂತ್ರಕಲಿಕಾ ಮಾಡೆಲ್‌ಗಳನ್ನು ರಚಿಸಲು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಒಂದು ಮಗುವು ತಾನು ಬೆಳೆದಂತೆ ತನ್ನ ಪರಿಸರದಲ್ಲಿ ಗ್ರಹಿಸುವ ಮತ್ತು ಅನುಭವಿಸುವ ವಿಷಯಗಳನ್ನು ಕಲಿಯುತ್ತದೆ. ಪ್ರಾರಂಭಿಕವಾಗಿ ರುಚಿ, ಬಣ್ಣಗಳು, ಪದಗಳು, ಪದಾರ್ಥಗಳು, ಸಂಖ್ಯೆಗಳು, ವಾಕ್ಯಗಳು – ಹೀಗೆ ಒಂದೊಂದಾಗಿ ಮಗು ಹೇಗೆ ಕಲಿಯುವುದೋ ಹಾಗೆಯೇ ವಿಜ್ಞಾನಿಗಳು ಒಂದೊಂದಾಗಿ ಕೃತಕವಾಗಿ ರಚಿಸಿದ ಮಾಡೆಲ್‌ಗಳಿಗೆ ಕಲಿಸಲು ಯಶಸ್ವಿಯಾಗಿದ್ದಾರೆ. ಈ ಬಗೆಯ ಕಲಿಕೆಯಲ್ಲಿ ಸ್ಮರಣೆಯ ಜೊತೆ ವಿಷಯದ ವಿಶ್ಲೇಷಣೆ ಕೂಡ ಸಾಧ್ಯವಾಗಿದೆ.

ಇದು ಸ್ವಾಭಾವಿಕ ಭಾಷೆ ಸಂಸ್ಕರಣೆ(ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸ್ಸಿಂಗ್)ಯ ಒಂದು ಅಂಶ. ಇದಕ್ಕೆ ಇಂಗ್ಲಿಷಿನ ಲಕ್ಷಾಂತರ ಲೇಖನಗಳನ್ನು ಅರ್ಥೈಸಿಕೊಳ್ಳುವಂತೆ ಮಾಡೆಲ್‌ಗೆ ಕಲಿಸಿದ್ದಾರೆ. ಇವೆಲ್ಲವನ್ನು ಅರ್ಥೈಸಿಕೊಂಡ ಕೆಲವು ಮಾಡೆಲ್‌ಗಳನ್ನು ಸಂಶೋಧಕರ ತಂಡಗಳು ಸಿದ್ಧಗೊಳಿಸಿವೆ. ಅದರಲ್ಲಿ ಓಪನ್ ಎಐ ಎಂಬ ಸಂಸ್ಥೆಯಿಂದ ರಚಿತವಾಗ GPT-2 ಎಂಬುದು ಪ್ರಮುಖವಾದುದು. ಇದನ್ನು 2019ರಲ್ಲಿಯೇ ಮುಕ್ತವಾಗಿ ಬಿಡುಗಡೆ ಮಾಡಿದ್ದಾರೆ. ಇದನ್ನು ಬಳಸಿ ಸಾಕಷ್ಟು ಅಪ್ಲಿಕೇಷನ್‌ಗಳು ಬಂದಿವೆ. ಉದಾಹರಣೆಗೆ, ಒಂದು ವಾಕ್ಯವು ವ್ಯಾಕರಣಬದ್ಧವಾಗಿಲ್ಲದಿದ್ದರೆ ಅದನ್ನು ಇದರಿಂದ ಸರಿಪಡಿಸಬಹುದು ಅಥವಾ ಒಂದು ಕ್ಲಿಷ್ಟಕರ ಲೇಖನದ ಸಾರಾಂಶವನ್ನು ಒಬ್ಬ ಹತ್ತು ವರ್ಷದ ಮಗುವಿಗೆ ಅರ್ಥವಾಗುವಂತೆ GPT-2 ಬಳಸಿ ಸರಳಗೊಳ್ಳಿಸಬಹುದು; ಹಲವಾರು ವಿಷಯಗಳನ್ನು ಕೊಟ್ಟು ಅವನ್ನು ಸೂಕ್ತವಾಗಿ ವಿಂಗಡಿಸಬಹುದು. ಆದರೆ ಇದರ ಮುಂದುವರಿದ ಮತ್ತು ಇನ್ನು ಹೆಚ್ಚು ಪರಿಣಾಮಕಾರಿ ಮಾಡೆಲ್ ಆದ GPT-3 ಅನ್ನು ಮುಕ್ತವಾಗಿ ಪ್ರಕಟಿಸಿಲ್ಲ. ಇದನ್ನು ಅವರ ನಿರ್ದಿಷ್ಟ API ಮೂಲಕ ಮಾತ್ರ ಬಳಸಬಹುದು. GPT-3ಯನ್ನು ರಚಿಸಿದೆ ಎಂದು ತಿಳಿಸಿದ್ದಾರೆಯೇ ಹೊರತು ಇದರ ಬಳಕೆ ನಿಗದಿತವಾಗಿದೆ. ಏಕೆಂದರೆ, ಇದು ತಪ್ಪು ಕೈಸೇರಿದರೆ ಇದರಿಂದ ಆಗುವ ಅನಾಹುತ ಊಹೆಗೂ ನಿಲುಕದು.

ಇಂಗ್ಲಿಷ್‌ ಬದಲು ಚೀನಾದವರು ತಮ್ಮ ಭಾಷೆಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಬಹುಭಾಷಾ ದೇಶವಾದ ನಮ್ಮ ದೇಶದಲ್ಲಿ ಇದರ ಪ್ರಯೋಗವಾಗಬೇಕಿದೆ. ಇತ್ತೀಚಿನ ಸಂಶೋಧನೆಯ ಹಾದಿಯನ್ನು ನೋಡಿದರೆ, 2025ರ ಊಹಿಸಿದ ಘಟನೆ ಕಾಲ್ಪನಿಕವಾಗಿದ್ದರೂ, ಇನ್ನೊಂದೆರಡು ವರ್ಷಗಳಲ್ಲಿಯೇ ಇದು ನಿಜವಾಗಬಹುದು. ಅಂದಹಾಗೆ ಈ ಲೇಖನವನ್ನು ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT