ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡೆಗೂ ಬಂತು ಬ್ಲೂಟೂತ್‌

Last Updated 13 ಜುಲೈ 2021, 19:30 IST
ಅಕ್ಷರ ಗಾತ್ರ

ಮಳೆಗಾಲದಲ್ಲಿ ಕೊಡೆಗಳ ಆಶ್ರಯ ಬೇಕು. ತಂತ್ರಜ್ಞಾನದ ಜೊತೆಗೆ ಕೊಡೆಗಳಿಗೆ ಆಧುನಿಕ ಸ್ಪರ್ಶ ದಕ್ಕುತ್ತಿದೆ. ಭಿನ್ನ ಎನಿಸುವಂಥ ಕೆಲವು ಕೊಡೆಗಳ ಮಾಹಿತಿ ಇಲ್ಲಿದೆ.

ಪೈಲೆಸ್‌ ಇಂಟರ್‌ನೆಟ್‌ ಅಂಬ್ರೆಲ್ಲಾ

ಕೊಡೆಯ ಬಟ್ಟೆಯ ಮೇಲಿರುವ ಬಣ್ಣ ಬಣ್ಣದ ಅಕ್ಷರಗಳೇ ಆಕರ್ಷಕವಾಗಿ ಕಾಣಿಸುತ್ತವೆ. ಇನ್ನು ಅದೇ ಬಟ್ಟೆ ಪ್ರೊಜೆಕ್ಟರ್‌ ಸ್ಕ್ರೀನ್‌ನಂತೆ ಬಳಕೆಯಾಗುವಂತಿದ್ದರೆ ಹೇಗಿರಬಹುದು? ಇದೇ ದಾರಿಯಲ್ಲಿ ಅಭಿವೃದ್ಧಿಯಾಗಿದೆ ಪೈಲೆಸ್‌ ಇಂಟರ್‌ನೆಟ್‌ ಅಂಬ್ರೆಲ್ಲಾ. ಈ ಕೊಡೆಯಲ್ಲಿ ಡಿಜಿಟಲ್‌ ಕ್ಯಾಮೆರಾ, ಮೋಷನ್‌ ಸೆನ್ಸರ್‌, ಜಿಪಿಎಸ್‌, ಡಿಜಿಟಲ್‌ ಕಾಂಪಸ್‌ ಅಳವಡಿಸಿರುವುದು ವಿಶೇಷ. ಇದರಲ್ಲಿನ ಕ್ಯಾಮೆರಾ ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸೆರೆ ಹಿಡಿದು ಕೊಡೆಯ ಮೇಲೆ ಮೂಡಿಸುತ್ತದೆ. ಜೋರು ಮಳೆಯಲ್ಲಿ ಬೆನ್ನ ಹಿಂದೆ ವಾಹನ ಬಂದರೂ ಅದರ ಬಿಂಬ ಸ್ಕ್ರೀನ್‌ ಮೇಲೆ ಮೂಡುತ್ತದೆ. ಇದು ಸುತ್ತಲಿನ ಪ್ರದೇಶಗಳ ಚಿತ್ರಗಳನ್ನು ಸೆರೆ ಹಿಡಿಯುವುದಕ್ಕೂ ನೆರವಾಗುತ್ತದೆ.

ನೀರು ಬಿದ್ದರೆ ಹೊಳೆಯುವ ಛತ್ರಿ
ರಭಸವಾಗಿ ಧುಮುಕುವ ನೀರಿನ ಶಕ್ತಿಯನ್ನೇ ನಾವು ವಿದ್ಯುತ್‌ ಶಕ್ತಿಯಾಗಿ ಪರಿವರ್ತಿಸಿಕೊಳ್ಳುತ್ತಿದ್ದೇವೆ. ಇನ್ನು ಆಕಾಶದಿಂದ ಕೊಡೆಯ ಮೇಲೆ ಬೀಳುವ ನೀರಿನ ಶಕ್ತಿಯನ್ನು ವಿದ್ಯುತ್‌ ಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವಾಗುವಂತಿದ್ದರೆ? ಇದೇ ಸಿದ್ಧಾಂತದಿಂದ ವಿಭಿನ್ನ ಕೊಡೆಯೊಂದು ಸಿದ್ಧವಾಗಿದೆ. ಇದರ ಹೆಸರು ದಿ ಲೈಟ್‌ ಡ್ರಾಪ್ಸ್‌ ಅಂಬ್ರೆಲ್ಲಾ. ಹೆಸರಿಗೆ ತಕ್ಕಂತೆ ಇದರ ಮೇಲೆ ಬೀಳುವ ಮಳೆಯ ಹನಿಗಳು ಬೆಳಕನ್ನು ಮೂಡಿಸುತ್ತವೆ! ಕೊಡೆಗೆ ಅಳವಡಿಸಿರುವ ವಿಶೇಷ ಬಟ್ಟೆ ಮಳೆಯ ಹನಿಗಳನ್ನು ಕೈನೆಟಿಕ್‌ ಎನರ್ಜಿಯಾಗಿ ಬದಲಿಸುತ್ತದೆ. ಈ ಶಕ್ತಿ ಕಡಿಮೆ ಪ್ರಮಾಣದ್ದಾಗಿದ್ದರೂ ಪುಟ್ಟ ಎಲ್‌ಇಡಿ ಬಲ್ಬ್‌ಗಳು ಉರಿಯಲು ಸಾಕಾಗುತ್ತದೆ. ಈ ಬಲ್ಬ್‌ಗಳು ಉರಿಯುತ್ತಿದ್ದಂತೆಯೇ ಕೊಡೆಯ ಬಟ್ಟೆಯಲ್ಲಿ ಬೆಳಕು ಮೂಡುತ್ತದೆ.

ದಿ ಮಲ್ಟಿ ಯೂನಿಟ್‌ ಸೂಪರ್‌ಬ್ರೆಲ್ಲಾ
ಕೊಡೆಗಳು ಸಾಮಾನ್ಯ ಮಳೆಯಲ್ಲಿ ನಾವು ನೆನೆಯದಂತೆ ನೆರವಾಗುತ್ತವೆ. ಆದರೆ ಜೋರು ಗಾಳಿ ಬೀಸಿದಾಗ, ಮಳೆಯ ರಭಸ ಹೆಚ್ಚಿದ್ದಾಗ ಧರಿಸಿದ ಅಂಗಿ ಒದ್ದೆಯಾಗುವುದು ಸಹಜ. ಆದರೆ ಈ ಸೂಪರ್‌ಬ್ರೆಲ್ಲಾ ಕೊಡೆಯಲ್ಲಿ ಈ ಸಮಸ್ಯೆ ಇರುವುದಿಲ್ಲ. ಜೋರು ಮಳೆಯಲ್ಲೂ ದೇಹಕ್ಕೆ ರಕ್ಷಣೆ ನೀಡುತ್ತದೆ. ಭಿನ್ನ ಗಾತ್ರದ ಐದು ಕೊಡೆಗಳನ್ನು ಕೂಡಿಸಿ ಇದನ್ನು ತಯಾರಿಸಲಾಗಿದೆ. ನೆತ್ತಿಯ ಮೇಲೆ ಒಂದು ಕೊಡೆ ಇದ್ದರೆ ಸುತ್ತಲೂ ನಾಲ್ಕು ಕೊಡೆಗಳು ಒಂದಕ್ಕೊಂದು ಕೂಡಿಕೊಂಡಿರುತ್ತವೆ. ಒಮ್ಮೆಲೆ ಇಬ್ಬರು ಅಥವಾ ಮೂವರು ಮಳೆಯಲ್ಲಿ ನೆನೆಯದಂತೆ ನಡೆದುಕೊಂಡು ಹೋಗಬಹುದು. ಇದರ ಮುಂದುವರಿದ ಉತ್ಪನ್ನದಂತೆ, ಸ್ಪೋರ್ಟ್‌ ಸೂಪರ್‌ಬ್ರೆಲ್ಲಾ ಹೆಸರಿನ ಮತ್ತೊಂದು ಕೊಡೆ ಕೂಡ ರೂಪವನ್ನು ಪಡೆದಿದೆ. ಇದನ್ನು ಆಟದ ಮೈದಾನಗಳಲ್ಲಿ ಪುಟ್ಟ ಗುಡಾರದಂತೆಯೂ ಬಳಸಿಕೊಳ್ಳಬಹುದು.

ಬ್ಲೂಟೂತ್‌ ಮೊಬೈಲ್‌ ಮೆಸೆಂಜರ್‌ ಅಂಬ್ರೆಲ್ಲಾ
ಜೋರು ಮಳೆ, ಗಾಳಿಯಲ್ಲಿ ಕೊಡೆಯನ್ನು ಹಿಡಿದು ನಡೆದುಕೊಂಡು ಹೋಗುವಾಗ ಮೊಬೈಲ್‌ ರಿಂಗಣಿಸಿದರೆ ಏನಾಗುತ್ತದೆ? ಒಂದು ಕೈಗೆ ಬಿಡುವಿದ್ದರೂ ಆ ಪರಿಸ್ಥಿತಿಯಲ್ಲಿ ಕಿರಿಕಿರಿ ಎನಿಸುತ್ತದೆ; ಕರೆಯನ್ನು ಸ್ವೀಕರಿಸಲು ಕಷ್ಟವೂ ಆಗುತ್ತದೆ. ಆದರೆ ಈ ಬ್ಲೂಟೂತ್‌ ಅಂಬ್ರೆಲ್ಲಾದಲ್ಲಿ ಹೀಗಾಗದು. ಇದರ ಹಿಡಿಯಲ್ಲಿ ಕಾಲರ್‌ ಐಡಿ ಇರುವಂಥ ಟಚ್‌ ಸ್ಕ್ರೀನ್‌ ಡಿಸ್‌ಪ್ಲೇ, ಸ್ಪೀಕರ್‌, ಮೈಕ್‌ ಹಾಗೂ ರೇಡಿಯೊ ರಿಸೀವರ್‌ ಅಳವಡಿಸಲಾಗಿದೆ. ಮೊಬೈಲ್‌ಫೋನ್‌ ರಿಂಗಣಿಸಿದ ಕೂಡಲೇ ಹಿಡಿಯ ಡಿಸ್‌ಪ್ಲೇನಲ್ಲಿ ಯಾರಿಂದ ಕರೆ ಬಂದಿದೆ ಎಂಬುದು ತಿಳಿಯುತ್ತದೆ. ಬಟನ್‌ ಒತ್ತಿ, ಫೋನ್‌ನಲ್ಲಿ ಮಾತನಾಡಲು ತೊಡಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT