ಭಾನುವಾರ, ಜನವರಿ 19, 2020
29 °C

ಅಕೌಂಟ್‌ ಜೋಪಾನ | ಪಾಸ್‌ವರ್ಡ್ ಸೋರಿಕೆ ಆಗಿದೆಯೇ? ನೀವೇ ಪರೀಕ್ಷಿಸಿಕೊಳ್ಳಿ

ರಶ್ಮಿ ಕೆ. Updated:

ಅಕ್ಷರ ಗಾತ್ರ : | |

ಯಾವುದೇ ವೆಬ್‌ಸೈಟ್, ಇಮೇಲ್ ಅಥವಾ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಜಾಗರೂಕರಾಗಿರಬೇಕು. ಇಲ್ಲಿ ಬಳಸುವ ಪಾಸ್‌ವರ್ಡ್‌ಗಳ ಬಗ್ಗೆ ನಾವು ಜಾಗ್ರತೆ ವಹಿಸದೇ ಇದ್ದರೆ ಪಾಸ್‌ವರ್ಡ್ ದುರ್ಬಳಕೆಯಾಗುವ ಸಾಧ್ಯತೆ ಇದೆ. ನೆನಪಿಟ್ಟುಕೊಳ್ಳಲು ಸುಲಭ ಎಂದು ಕೆಲವರು ತಮ್ಮ ಮೊಬೈಲ್ ಸಂಖ್ಯೆ ಅಥವಾ 123456, QWERT ಮೊದಲಾದ ಪಾಸ್‌ವರ್ಡ್‌ಗಳನ್ನು ಬಳಸುವುದುಂಟು. ಎಂದಿಗೂ ಇಂಥ ಪಾಸ್‌ವರ್ಡ್‌ಗಳನ್ನು ಬಳಸಲೇಬಾರದು.

ಪಾಸ್‌ವರ್ಡ್‌ಗಳಲ್ಲಿ ದೊಡ್ಡಕ್ಷರ, ಸಣ್ಣಕ್ಷರ, ಸಂಖ್ಯೆ, ಚಿಹ್ನೆ ಮೊದಲಾದುವುಗಳನ್ನು ಬಳಸಿದರೆ ಉತ್ತಮ. ಬೇರೆಬೇರೆ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗುವಾಗ ಬೇರೆಬೇರೆ ರೀತಿಯ ಪಾಸ್‌ವರ್ಡ್‌ಗಳನ್ನು ಬಳಸಿ. ಎಲ್ಲಾ ಕಡೆ ಒಂದೇ ಪಾಸ್‌ವರ್ಡ್ ಬಳಸುವುದು ಬೇಡವೇ ಬೇಡ. ನೀವು ಬಳಸಿರುವ ಪಾಸ್‌ವರ್ಡ್ ಸ್ಟ್ರಾಂಗ್ ಆಗಿದ್ದರೆ ಅದು ದುರ್ಬಳಕೆಗೆ ಒಳಗಾಗುಗುವ ಸಾಧ್ಯತೆಯೂ ಕಡಿಮೆ. ಒಂದು ವೇಳೆ ದುರ್ಬಳಕೆ ಆಗಿದೆ ಎಂಬ ಸೂಚನೆ ಸಿಕ್ಕಿದರೆ ತಕ್ಷಣ ಪಾಸ್‌ವರ್ಡ್ ಬದಲಿಸಬೇಕು. ಯಾವತ್ತೂ ಯಾರ ಜತೆಗೂ ಪಾಸ್‌ವರ್ಡ್‌ ಹಂಚಿಕೊಳ್ಳಬಾರದು.

ಇದನ್ನೂ ಓದಿ: ಕ್ರೋಮ್‌ ಬ್ರೌಸರ್‌ನಲ್ಲಿ ಪಾಸ್‌ವರ್ಡ್ ನೋಡುವುದು ಹೇಗೆ?


ಗೂಗಲ್ ಪಾಸ್‌ವರ್ಡ್‌ ಮ್ಯಾನೇಜರ್‌ನಲ್ಲಿ ಪಾಸ್‌ವರ್ಡ್‌ ಪರಿಶೀಲಿಸಬಹುದು

ಪಾಸ್‌ವರ್ಡ್‌ ಸುರಕ್ಷಿತವಾಗಿರಿಸುವುದು ಹೇಗೆ?

ವೆಬ್‌ಸೈಟ್ ಅಥವಾ ಸಾಮಾಜಿಕ ಜಾಲತಾಣಗಳಿಗೆ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಲಾಗಿನ್ ಆಗುವುದಾದರೆ ಎಂದಿಗೂ ಪಾಸ್‌ವರ್ಡ್ ಸೇವ್ ಮಾಡಬೇಡಿ. ಪಾಸ್‌ವರ್ಡ್ ನೆನಪಿಲ್ಲ ಎಂದು ಎಲ್ಲಿಯಾದರೂ ಬರೆದಿಡುವುದಾದರೆ ಅದನ್ನು ಗುಪ್ತವಾಗಿಟ್ಟುಕೊಳ್ಳಿ. ನಿಮ್ಮ ಪಾಸ್‌ವರ್ಡ್ 'ಸೇವ್' ಮಾಡಬೇಕೆ ಎಂದು ಬ್ರೌಸರ್ ಕೇಳಿದರೆ ಅದಕ್ಕೆ ಇಲ್ಲ ಎಂದೇ ಉತ್ತರಿಸಿ. ನಿಮ್ಮ ಸ್ವಂತ ಕಂಪ್ಯೂಟರ್‌ನಲ್ಲಿ ನೀವು ಈ ರೀತಿ ಪಾಸ್‌ವರ್ಡ್ ಸೇವ್ ಮಾಡುವುದು ತಪ್ಪು ಅಲ್ಲ, ಆದರೆ ಕಚೇರಿ ಅಥವಾ ಇನ್ಯಾವುದೇ ಸಂಸ್ಥೆಗಳಲ್ಲಿ ಬಳಸುವ ಕಂಪ್ಯೂಟರ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಸೇವ್ ಮಾಡಬೇಡಿ. ಗೂಗಲ್ ಖಾತೆಗೆ ಲಾಗಿನ್ ಆಗುವ ಮುನ್ನ ನಿಮ್ಮ ಮೊಬೈಲ್‌ಗೆ ವೆರಿಫಿಕೇಶನ್ ಕೋಡ್ ಬರುವಂತೆ 2 ಸ್ಟೆಪ್ ವೆರಿಫಿಕೇಶನ್ ಎನೇಬಲ್ ಮಾಡಿಟ್ಟುಕೊಳ್ಳಿ. 

ಇದನ್ನೂ ಓದಿ: ಇಂಥ ಪಾಸ್‌ವರ್ಡ್‌ ಎಂದಿಗೂ ಕೊಡಬೇಡಿ


passwords.google.com ಮೂಲಕವೂ ಪಾಸ್‌ವರ್ಡ್‌ ಪರಿಶೀಲಿಸಬಹುದು

ಪಾಸ್‌ವರ್ಡ್ ದುರ್ಬಳಕೆಯಾಗಿದೆಯೇ ಎಂದು ಪರೀಕ್ಷಿಸಿ

ಗೂಗಲ್ ಪಾಸ್‌ವರ್ಡ್ ಮ್ಯಾನೇಜರ್ (https://passwords.google.com/intro) ನೀವು ಕ್ರೋಮ್ ಬ್ರೌಸರ್‌ನಲ್ಲಿ ಬಳಸಿದ ಗೂಗಲ್ ಖಾತೆಯನ್ನು ಅಂಡ್ರಾಯ್ಡ್ ಮೊಬೈಲ್ ಜತೆ ಸಿಂಕ್ (Sync) ಮಾಡುವುದಲ್ಲದೆ, ಪಾಸ್‌ವರ್ಡ್ ಚೆಕ್‌ಅಪ್ ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯ ಬ್ರೌಸರ್ ಎಕ್ಸ್‌ಟೆನ್ಶನ್‌ನಲ್ಲಿ (Password Checkup extension) ಲಭ್ಯವಿದೆ. ಕ್ರೋಮ್ ಬ್ರೌಸರ್ ಬಳಸುವುವಾಗ ಪಾಸ್‌ವರ್ಡ್ ಚೆಕ್ಅಪ್ ಎಕ್ಸ್‌ಟೆನ್ಶನ್‌ನ್ನು ಬಳಸಿದರೆ ನಿಮ್ಮ ಪಾಸ್‌ವರ್ಡ್ ದುರುಪಯೋಗಕ್ಕೆ ಒಳಗಾಗುವುದನ್ನು ತಡೆಯಬಹುದು.

passwords.google.comಗೆ ಲಾಗಿನ್ ಆಗುವ ಮೂಲಕವೂ ನಿಮ್ಮ ಮೊಬೈಲ್‌ ಅಥವಾ ಕಂಪ್ಯೂಟರ್ ಬ್ರೌಸರ್‌ನಲ್ಲಿ ಸೇವ್ ಆಗಿರುವ ಪಾಸ್‌ವರ್ಡ್‌ಗಳು ಸುರಕ್ಷಿತವಾಗಿಯೇ? ಅದರಲ್ಲಿ ಯಾವುದು ದುರ್ಬಲ ಪಾಸ್‌ವರ್ಡ್ ಎಂಬುದನ್ನು ತಿಳಿಯಬಹುದು.


www.avast.com/hackcheck ಮೂಲಕ ಪಾಸ್‌ವರ್ಡ್‌ ಸೋರಿಕೆ ಪರಿಶೀಲಿಸಬಹುದು

ಇದಲ್ಲದೆ https://haveibeenpwned.com/ ಎಂಬ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ನಿಮ್ಮ ಇಮೇಲ್ ಖಾತೆ ನಮೂದಿಸಿ. ಒಂದು ವೇಳೆ ನಿಮ್ಮ ಇಮೇಲ್ ಖಾತೆ ದುರ್ಬಳಕೆಯಾಗಿದ್ದರೆ ಎಲ್ಲಿ ಇಮೇಲ್ ದುರ್ಬಳಕೆಯಾಗಿದೆ ಎಂಬ ಮಾಹಿತಿ ಸಿಗುತ್ತದೆ. ಇಮೇಲ್ ಖಾತೆ ದುರ್ಬಳಕೆಯಾಗಿದೆ ಎಂದಾದರೆ ತಕ್ಷಣವೇ ಪಾಸ್‌ವರ್ಡ್ ಬದಲಿಸಿ. ಹೀಗೆ ಪಾಸ್‌ವರ್ಡ್ ಬದಲಿಸುವಾಗ ಒಮ್ಮೆ ಬಳಸಿದ ಪಾಸ್‌ವರ್ಡ್‌ನ್ನು ಮತ್ತೊಮ್ಮೆ ಬಳಸಬೇಡಿ.
ಅದೇ ರೀತಿ www.avast.com/hackcheck ವೆಬ್‌ಸೈಟ್‌ನಲ್ಲಿ ನಿಮ್ಮ ಇಮೇಲ್ ಖಾತೆ ನಮೂದಿಸುವ ಮೂಲಕವೂ ಪಾಸ್‌ವರ್ಡ್ ಸೋರಿಕೆಯಾಗಿದೆಯೇ ಎಂಬುದನ್ನು ಪರೀಕ್ಷಿಸಬಹುದು. 

ಇನ್ನಷ್ಟು...

‘123456’ ಹೆಚ್ಚು ಜನ ಬಳಸುವ ಪಾಸ್‌ವರ್ಡ್‌

ವಾಟ್ಸ್‌ಆ್ಯಪ್‌ ಸುರಕ್ಷತೆಗೆ ಟಿಪ್ಸ್

ಪ್ರತಿಕ್ರಿಯಿಸಿ (+)