ಗುರುವಾರ , ಜುಲೈ 29, 2021
20 °C

‘ಹ್ಯಾಕಿಂಗ್‌ಗೆ ದಾಳವಾದ ಕೋವಿಡ್‌’

ವಿಶ್ವನಾಥ ಎಸ್‌. Updated:

ಅಕ್ಷರ ಗಾತ್ರ : | |

Prajavani

ಭಯ, ಕುತೂಹಲ ಮತ್ತು ತಿಳಿವಳಿಕೆಯ ಕೊರತೆಯ ಕಾರಣಗಳಿಂದಾಗಿ ಜನರು ಸುಲಭವಾಗಿ ಸೈಬರ್‌ ದಾಳಿಗೆ ತುತ್ತಾಗುತ್ತಿದ್ದಾರೆ. ಇದೀಗ ಕೋವಿಡ್‌ ಸೃಷ್ಟಿಸಿರುವ ಆತಂಕವು ಹ್ಯಾಕರ್‌ಗಳಿಗೆ ವಂಚಿಸಲು ದಾರಿ ಮಾಡಿಕೊಟ್ಟಿದೆ. ಸೈಬರ್‌ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆಚ್ಚಿನ ಮುಂಜಾಗರೂಕತೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಡಿಜಿಟಲ್‌ ಯುಗದಲ್ಲಿ ಸೈಬರ್ ದಾಳಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಇದೀಗ ಕೋವಿಡ್‌–19 ಸೃಷ್ಟಿಸಿರುವ ಆತಂಕ, ಭಯದಿಂದಾಗಿ ಭಾರತವನ್ನೂ ಒಳಗೊಂಡ ಜಾಗತಿಕ ಮಟ್ಟದಲ್ಲಿ ಸೈಬರ್‌ದಾಳಿ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆ ಕಂಡಿವೆ.

‘ಜನರು ಭಯಕ್ಕೆ ಒಳಗಾದಾಗ ಅವರನ್ನು ಸುಲಿಗೆ ಮಾಡುವುದು ಸುಲಭ. ಈ ತಂತ್ರಜ್ಞಾನ ಯುಗದಲ್ಲಿ ಅಪರಾಧ ಕೃತ್ಯ ಎಸಗುವವರು ನಿಮ್ಮ ಮನೆಗೆ ನುಗ್ಗಿಯೇ ಕಳವು ಮಾಡಬೇಕು ಎಂದೇನಿಲ್ಲ. ನೀವು ಬಳಸುತ್ತಿರುವ ಮೊಬೈಲ್‌, ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌ಗಳೇ ಸಾಕು’ ಎನ್ನುತ್ತಾರೆ ಪ್ರಮುಖ ಸಾಫ್ಟ್‌ವೇರ್‌ ಕಂಪನಿ ಆಕ್ರಾನಿಸ್‌ನ ಸೈಬರ್‌ ಸುರಕ್ಷತೆಗೆ ಸಂಬಂಧಿಸಿದ ಮಾರಾಟ ವಿಭಾಗದ ನಿರ್ದೇಶಕ ರಾಜೇಶ್‌ ಛಾಬ್ರಾ. 

‘ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ನೆರವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆಯೇ (ಡಬ್ಲ್ಯುಎಚ್‌ಒ) ಕಳುಹಿಸಿದೆ ಎನ್ನುವ ರೀತಿಯ ವಂಚಕ ಇ–ಮೇಲ್‌ಗಳ ಬಲೆಗೆ ಜನರು ಸುಲಭವಾಗಿ ಬೀಳುತ್ತಿದ್ದಾರೆ. ಇದೇ ರೀತಿ, ಸ್ಥಳೀಯ ಆರೋಗ್ಯ ಇಲಾಖೆಗಳು, ಪೊಲೀಸರ ಹೆಸರಿನಲ್ಲಿ ನಕಲಿ ಜಾಲತಾಣ ಮತ್ತು ಲೈವ್‌ ಕೊರೊನಾವೈರಸ್‌ ಮ್ಯಾಪ್‌ಗಳನ್ನು ಸೃಷ್ಟಿಸಿ ಮಾಲ್‌ವೇರ್‌ಗಳ ಮೂಲಕ ವಂಚಿಸಲಾಗುತ್ತಿದೆ.

‘ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಕಚೇರಿಯ ಹೊರಗೆ ಅಂದರೆ, ಮನೆಯಿಂದ, ಕೊ ವರ್ಕಿಂಗ್ ಪ್ರದೇಶಗಳಲ್ಲಿ ಕೆಲಸ ಮಾಡಲು ಸಿದ್ದವಿಲ್ಲ ಎಂದು ಶೇ 50ರಷ್ಟು ಜಾಗತಿಕ ಉದ್ದಿಮೆಗಳು ಹೇಳಿವೆ. ಮಾಹಿತಿ ತಂತ್ರಜ್ಞಾನದ ಸುರಕ್ಷತೆಯ ದೃಷ್ಟಿಯಿಂದ ಕಚೇರಿ ಕೆಲಸವೇ ಹೆಚ್ಚು ಸೂಕ್ತ ಎನ್ನುವುದು ಹಲವರ ಅಭಿಪ್ರಾಯ. 

‘ಉದ್ದಿಮೆಗಳು ಅಥವಾ ಗ್ರಾಹಕರು ಮಾತ್ರವೇ ಸೈಬರ್‌ ದಾಳಿಯ ಬಲಿಪಶುಗಳಾಗುತ್ತಿಲ್ಲ. ಆಸ್ಪತ್ರೆಗಳು, ವೈದ್ಯಕೀಯ ಪ್ರಯೋಗಾಲಯಗಳು ಸಹ ದಾಳಿಗೆ ಒಳಗಾಗುತ್ತಿವೆ. ಯುರೋಪಿನ ಅತಿ ದೊಡ್ಡ ಖಾಸಗಿ ಆಸ್ಪತ್ರೆ ನಿರ್ವಾಹಕರು ಸ್ನೇಕ್‌ ರ್‍ಯಾನ್‌ಸಮ್‌ ವೇರ್‌ ದಾಳಿಗೆ ಒಳಗಾಗಿದ್ದಾರೆ. ವಿವಿಧ ದೇಶಗಳಲ್ಲಿ ಇರುವ 100ಕ್ಕೂ ಅಧಿಕ ಕಂಪ್ಯೂಟರ್‌ಗಳಿಗೆ ಹಾನಿಯಾಗಿದೆ.

‘ಇಂತಹ ಪ್ರಕರಣಗಳಲ್ಲಿ ಎಷ್ಟು ನಷ್ಟವಾಗಿದೆ ಎಂದು ಅಂದಾಜು ಮಾಡುವುದು ಸಹ ಕಷ್ಟ. ಆದರೆ ಕೊರೊನಾದಿಂದಾಗಿ ಎರಡು ಪಟ್ಟು ಹೆಚ್ಚಾಗಿದೆ ಎಂದು ಹೇಳಬಹುದು. ಇತ್ತೀಚಿನ ವರ್ಷಗಳಲ್ಲಿ ಸೈಬರ್‌ ದಾಳಿಗೆ ತುತ್ತಾಗುತ್ತಿರುವ ಪ್ರಮುಖ 10 ಕಂಪನಿಗಳಲ್ಲಿ ಭಾರತವೂ ಒಂದಾಗಿದೆ’ ಎಂದು ಅವರು ವಿವರಿಸುತ್ತಾರೆ. 

ಕೆಲವು ಮಾಲ್‌ವೇರ್‌ಗಳು: *okibot, AZORu*t, Trickbot, NanoCore 

ಸಲಹೆಗಳು

* ಕೋವಿಡ್‌–19 ಪರಿಹಾರ ನಿಧಿಗೆ ಕೊಡುಗೆ ನೀಡುವಂತೆ ಸಂದೇಶ ಇರುವ ಎಸ್‌ಎಂಎಸ್‌, ಇ–ಮೇಲ್‌ನಲ್ಲಿ ಇರುವ‌ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್‌ ಮಾಡಬೇಡಿ

ಎರಡು ಹಂತದ ಸುರಕ್ಷತೆ: ಉದಾಹರಣೆಗೆ: ಜಿ–ಮೇಲ್‌ ಖಾತೆಗೆ ಮೊಬೈಲ್‌ ನಂಬರ್‌ ಜೋಡಿಸುವುದರಿಂದ ಬೇರೊಬ್ಬರು ಅಥವಾ ಅನ್ಯ ಮೊಬೈಲ್‌ ಅಥವಾ ಡೆಸ್ಕ್‌ಟಾಪ್‌ನಲ್ಲಿ ನಿಮ್ಮ ಖಾತೆ ತೆರೆಯಲು ಪ್ರಯತ್ನಿಸಿದರೆ ಆಗ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ನೀಡಿದರೆ ಮಾತ್ರವೇ ಖಾತೆ ತೆರೆದುಕೊಳ್ಳಲಿದೆ.

* ಮನೆಯಿಂದ ಕೆಲಸ ಮಾಡುವವರ ನೆಟ್‌ವರ್ಕ್‌ ಸುರಕ್ಷತೆಗೆ ವಿಪಿಎನ್ (ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್)‌ ಬಳಕೆ

* ಐ.ಟಿ ಹೆಲ್ಪ್‌ಡೆಸ್ಕ್ ಇಲ್ಲದೇ ಮನೆಯಿಂದ ಕೆಲಸ ಮಾಡುವುದು ಸುರಕ್ಷಿತವಲ್ಲ

* ಅಧಿಕೃತ ಮತ್ತು ವಿಶ್ವಾಸಾರ್ಹವಾದ ಸೈಬರ್‌ ಸುರಕ್ಷತಾ ಸಾಫ್ಟ್‌ವೇರ್‌ ಬಳಕೆ

* ಅನಧಿಕೃತ ಲಿಂಕ್‌ಗಳನ್ನು ಕ್ಲಿಕ್‌ ಮಾಡದಿರಿ

* ಅಪರಿಚಿತ ಇ–ಮೇಲ್‌ನಿಂದ ಬಂದ ಫೈಲ್‌, ಲಿಂಕ್‌ ತೆರೆಯದಿರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು