ಸೋಮವಾರ, ಡಿಸೆಂಬರ್ 6, 2021
24 °C

ಓದಲು ಪುಸ್ತಕವೇ ಬೇಕಿಲ್ಲ! ಕೊರತೆ ನೀಗಿಸುತ್ತಿವೆ ಇ–ರೀಡರ್‌ಗಳು

ಪ್ರಶಾಂತ್‌ ಭಟ್‌ Updated:

ಅಕ್ಷರ ಗಾತ್ರ : | |

Prajavani

ಆಧುನಿಕ ಜಗತ್ತಿನ ಕಿಷ್ಕಿಂಧೆಯಂತಹ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಓದಿನ ಆಸಕ್ತಿ ಇರುವವರಿಗೆ ಎದುರಾಗುವ ಬಹುದೊಡ್ಡ ಸಮಸ್ಯೆ ಎಂದರೆ ಓದಲು ಕೊಂಡ ಪುಸ್ತಕಗಳನ್ನು ಕಾಪಿಡುವಂತಹ ಸ್ಥಳಾವಕಾಶದ ಕೊರತೆ. ಇಂತಹ ತೊಂದರೆಗಳ ದೂರ ಮಾಡಲು ಕಳೆದೊಂದು ದಶಕದಿಂದ ಬಹುಜನಪ್ರಿಯವಾಗುತ್ತಿರುವುದು ಇ–ರೀಡರ್‌ಗಳು.

ಇ–ರೀಡರ್‌ಗಳು ಎಂದರೆ ಡಿಜಿಟಲ್ ಆಗಿ ನಿಮ್ಮ ಸ್ಪರ್ಶಪರದೆಯ ಮೇಲೆ ಪುಸ್ತಕಗಳಂತೆ ಓದಲು ಸಾಧ್ಯವಾಗುವ ಹಾಗೆ ಮಾಡುವ ಸಾಧನ. ಇದರ ಕುರಿತಾದ ಮೊಟ್ಟಮೊದಲ ಆಲೋಚನೆ 1930ರಲ್ಲಿ ಬಾಬಿ ಬ್ರೌನ್ ಬರೆದ ಒಂದು ಲೇಖನದಲ್ಲಿತ್ತು. 1994ರ ಸುಮಾರಿಗೆ ಬಂದ ಪಿಡಿಎಫ್ ಫೈಲ್‌ಗಳು, 1997ರ ಸ್ಥಾಪಿತವಾದ ಇ ಇಂಕ್ ಕಾರ್ಪೋರೇಷನ್ ಹಾಗೂ 1998ರ ಸುಮಾರಿಗೆ ಬಂದ ರಾಕೆಟ್ ಇ–ಬುಕ್ ರೀಡರ್ ಈ ದಿಶೆಯಲ್ಲಿ ಮಹತ್ವದ ಹೆಜ್ಜೆಗಳು. ಸೋನಿ ಕಂಪನಿ ಕೂಡ 2004ರಲ್ಲಿ ಸೋನಿ ಲಿಬ್ರೀ ಹಾಗೂ 2006ರಲ್ಲಿ ಸೋನಿ ರೀಡರ್ ಅನ್ನು ಹೊರತಂದು ಇ–ಬುಕ್ ಪ್ರಪಂಚಕ್ಕೆ ಕಾಲಿಟ್ಟಿತು.

ಆದರೆ ಈ ನಿಟ್ಟಿನಲ್ಲಿ ಕ್ರಾಂತಿಕಾರಕ ಬದಲಾವಣೆ ತಂದದ್ದು ಮಾತ್ರ ಅಮೆಜಾನ್. ಅದು 2007ರಲ್ಲಿ ಪರಿಚಯಿಸಿದ ‘ಕಿಂಡಲ್’ – ಇದು ಪುಸ್ತಕಗಳ ಓದುವ ಪರಿಭಾಷೆಯನ್ನೇ ಬದಲಾಯಿಸಿಬಿಟ್ಟಿತು.

ಇ–ಬುಕ್ ಎಂದರೇನು? ಸರಳವಾಗಿ ಹೇಳುವುದಾದರೆ ಇ–ಬುಕ್ ಅಥವಾ ಇಲೆಕ್ಟ್ರಾನಿಕ್ ಬುಕ್ ಒಂದು ಪುಸ್ತಕದ ಡಿಜಿಟಲ್ ಪ್ರತಿ. ಅದರಲ್ಲಿ ಇಡಿಯ ಪುಸ್ತಕವನ್ನು ಒಂದು ಪರದೆಯ ಮೂಲಕ ಓದಬಹುದಾದ ಅವಕಾಶ ಇರುತ್ತದೆ. ಇದು ಕೆಲವೇ ಮೆಗಾಬೈಟ್ (ಎಮ್‌ಬಿ) ಗಳನ್ನು ಹೊಂದಿರುತ್ತದೆ‌. ಇಲ್ಲಿ ಪುಸ್ತಕ ಹಾಳಾಗುವ ಭಯ ಇರುವುದಿಲ್ಲ. ಎಲ್ಲಿ ಯಾವಾಗ ಬೇಕಾದರೂ ಓದಬಹುದಾದ ಅವಕಾಶ, ಕಡಿಮೆ ಬೆಲೆ ಇವೆಲ್ಲ ಇ–ಬುಕ್‌ನ ಇತರ ಅಂಶಗಳು. ಇ–ಬುಕ್ ಅನ್ನು ಮೊಬೈಲ್, ಕಂಪ್ಯೂಟರ್ ಹಾಗೂ ಇನ್ನಿತರ ಪರದೆಗಳ ಮೇಲೆ ಓದಬಹುದಾಗಿದೆ.

ಜಗತ್ತಿನಾದ್ಯಂತ ಹೆಚ್ಚಿನ ಜನರು ಬಳಸುವ ಹಾಗೂ ಬಹುಜನಪ್ರಿಯ ಇ–ಬುಕ್ ರೀಡರ್ ಎಂದರೆ ಕಿಂಡಲ್. ಇದು ಐದು ಸಾವಿರ ರೂಪಾಯಿಗಳಿಂದ ಇಪ್ಪತ್ತೈದು ಸಾವಿರದವರೆಗಿನ ವಿವಿಧ ಆವೃತ್ತಿಗಳಲ್ಲಿ ಲಭ್ಯ. ನಾಲ್ಕು ಜಿಬಿಯಿಂದ ಹಿಡಿದು ಮೂವತ್ತೆರಡು ಜಿಬಿಯವರೆಗಿನ ಸಾಮರ್ಥ್ಯದ ಇವುಗಳಲ್ಲಿ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿಡಬಹುದು. ಇದರ ಪರದೆ ಆರರಿಂದ ಏಳು ಇಂಚು ದೊಡ್ಡದಾಗಿರುತ್ತದೆ. ಕಿಂಡಲ್ ಸ್ಟೋರ್‌ನಲ್ಲಿ ಬೇಕಾದ ಪುಸ್ತಕಗಳ ಆಯ್ಕೆ ಮಾಡಿ ಕೊಂಡರೆ ಆಟೋಮ್ಯಾಟಿಕ್ ಆಗಿ ಡೌನ್‌ಲೋಡ್ ಆಗುತ್ತವೆ. ಓದಿ ಡಿಲೀಟ್ ಮಾಡಿದರೂ ನಿಮ್ಮ ಅಕೌಂಟ್‌ನ ಕ್ಲೌಡ್‌ನಲ್ಲಿ ಆ ಪುಸ್ತಕ ಇರುವ ಕಾರಣ ಮತ್ತೆ ಬೇಕಾದಾಗ ಯಾವುದೇ ಖರ್ಚಿಲ್ಲದೆ ಅದನ್ನು ಇಳಿಸಿಕೊಳ್ಳಬಹುದು. ನಿಗದಿತ ಮೊತ್ತ ಪಾವತಿ ಮಾಡಿ, ಬೇಕಾದ ಪುಸ್ತಕ, ವಾರ್ತಾಪತ್ರಿಕೆಗಳಿಗೆ ಚಂದಾದಾರರಾಗುವ ಆಯ್ಕೆಗಳೂ ಇವೆ‌.

ಇತ್ತೀಚಿನ ಇ–ಬುಕ್ ರೀಡರ್‌ಗಳು ಲೈಟ್ ಆಯ್ಕೆ ಕೂಡ ಹೊಂದಿರುವ ಕಾರಣ ಅವುಗಳನ್ನು ಕತ್ತಲುಕೋಣೆಯಲ್ಲಿ ಕೂಡ, ಇತರರಿಗೆ ತೊಂದರೆ ಆಗದ ಹಾಗೆ ಓದುವ ಅವಕಾಶವನ್ನು ಒದಗಿಸುತ್ತದೆ. ಓದಲು ಸಮಸ್ಯೆ ಆಗುವವರಿಗೆ ಹಾಗೂ ಪುಸ್ತಕ ಹಿಡಿಯಲು ಸಮಯಾಭಾವ ಆಗುವವರಿಗೆ ಎಂದು ಇತ್ತೀಚೆಗೆ ಆಡಿಯೋ ಪುಸ್ತಕಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಕನ್ನಡದಲ್ಲಿ ಇ–ಬುಕ್‌ಗಳು ಮಾರುಕಟ್ಟೆಗೆ ಬಂದದ್ದು ಇತ್ತೀಚೆಗಷ್ಟೆ. ಭಾರತದ ಇತರ ಭಾಷೆಗಳ ಪುಸ್ತಕಗಳ ತನ್ನಲ್ಲಿ ಅಡಕಗೊಳಿಸಲು ಸರಿಯಾದ ಸಾಫ್ಟ್‌ವೇರ್ ಬೆಳೆಸಿದ ಅಮೆಜಾನ್ ಕಿಂಡಲ್ ಅದೇಕೋ ಕನ್ನಡದ ಬಗ್ಗೆ ಇನ್ನೂ ಒಲವು ತೋರಿಲ್ಲ. ಆದರೆ ಕನ್ನಡದ ಹಲವಾರು ಸಂಸ್ಥೆಗಳ ಸ್ಥಾಪನೆ ಈ ಕೊರತೆಯನ್ನು ಹೋಗಲಾಡಿಸಿದೆ.

ಮೈ ಲ್ಯಾಂಗ್, ಋತುಮಾನ, ಮನೋಹರ ಗ್ರಂಥಮಾಲೆ ಅವರ ವಿವಿಧ್ ಲಿಪಿ, ಅಕ್ಷರ ಪ್ರಕಾಶನ ಇವೆಲ್ಲ ತಮ್ಮ ತಮ್ಮ ಪ್ರಕಟಣೆಗಳ ಹಾಗೂ ಇತರ ಪುಸ್ತಕಗಳ ಇ–ಆವೃತ್ತಿ ಬಿಡುಗಡೆ ಮಾಡಿ ಕನ್ನಡದ ಓದುಗರಿಗೆ ಹೊಸ ಓದಿನ ಹಾದಿಯ ಹುಡುಕುವಲ್ಲಿ ಶ್ರಮಿಸುತ್ತಿವೆ. ಇವುಗಳ ಬೆಲೆಯೂ ಕಡಿಮೆ ಇರುವುದರಿಂದ ಓದುಗರ ಕಿಸೆಗೂ ಭಾರವಿಲ್ಲ. ಈ ಸಂಸ್ಥೆಗಳ ಆ್ಯಪ್ ಹಾಕಿಕೊಂಡು ಅದರ ಮೂಲಕ ಖರೀದಿ ನಡೆಸಿ ಓದುವ ಸೌಲಭ್ಯ ಕಲ್ಪಿಸಿಕೊಟ್ಟಿವೆ. ಇವುಗಳ ಬಹುಮುಖ್ಯ ಸಮಸ್ಯೆ ಎಂದರೆ ಇವುಗಳ ಮೊಬೈಲ್, ಕಂಪ್ಯೂಟರ್ ಮತ್ತು ಟ್ಯಾಬ್‌ಗಳಲ್ಲೇ ಓದಬೇಕಾದ ಕಾರಣ ಕಣ್ಣಿಗೆ ಹಾನಿಯಾಗುವ ಸಂಭಾವ್ಯತೆ. ಕಿಂಡಲ್ ತರಹದ ಓದಲೆಂದೇ ಇರುವ ಇ ರೀಡರ್‌ಗಳಲ್ಲಿ ಆ್ಯಂಟಿ ಗ್ಲೇರ್ ಪರದೆ ಇರುವ ಕಾರಣ ಅದು ಕಣ್ಣುಗಳಿಗೆ ಜಾಸ್ತಿ ಹಾನಿ ಉಂಟುಮಾಡುವುದಿಲ್ಲ.

ಜಗತ್ತು ಬೆಳೆಯುತ್ತಾ ಹೋದ ಹಾಗೆ ಹೊಸ ಹೊಸ ಆವಿಷ್ಕಾರಗಳಾಗುತ್ತಾ ಹೋದಂತೆ ಓದಿನ ಸಾಧ್ಯತೆಗಳು ಬದಲಾಗುತ್ತಿವೆ. ದಪ್ಪ ದಪ್ಪ ಪುಸ್ತಕಗಳ ಹಿಡಿದು ಬೆಳಕಿರುವ ಕಡೆ ಕಣ್ಣು ಕೀಲಿಸಿಕೊಂಡು ಓದಬೇಕಾದ ಪರಿಸ್ಥಿತಿಯಿಂದ ಆರಾಮಾಗಿ ಪ್ರಯಾಣ ಮಾಡುವಾಗ ಬೇಕಾದ ಕಡೆ ಮಲಗಿ ನಿಂತು ಸಣ್ಣ ಇ–ರೀಡರ್ ಕೈಲಿ ಹಿಡಿದು ಓದಬಹುದಾದವರೆಗಿನ ಸಾಧನೆ ಸಾಮಾನ್ಯದ್ದಲ್ಲ. ಈ ಕ್ಷೇತ್ರದಲ್ಲಿ ಇನ್ನೂ ಬಹಳಷ್ಟು ಬದಲಾವಣೆಗಳು ಬರಲಿಕ್ಕಿದೆ.‌

ಕನ್ನಡದ ಪುಸ್ತಕ ಓದಲೆಂದೇ ಒಂದು ಪ್ರತ್ಯೇಕ ಇ–ರೀಡರ್ ಬರಬಹುದಾದ ಓದುಗ ವರ್ಗ ಸೃಷ್ಟಿಯಾಗಲಿ ಎಂದು ಹಾರೈಸೋಣ.

ಪ್ರಮುಖ ಇ–ರೀಡರ್ ಕಂಪನಿಗಳು

ಕಿಂಡಲ್ (ಅಮೆಜಾನ್)

ಕೋಬೋ

ಬಾರ್ನ್ಸ್ ಆ್ಯಂಡ್ ನೋಬಲ್

ಪಾಕೆಟ್ ಬುಕ್

ಬುಕೀನ್

ಧನಾತ್ಮಕ ಅಂಶಗಳು

l ಕಡಿಮೆ ಬೆಲೆಗೆ ಪುಸ್ತಕಗಳ ಡಿಜಿಟಲ್ ಆವೃತ್ತಿ

l ಸಂಗ್ರಹಸಾಮರ್ಥ್ಯ

l ಎಲ್ಲಿ ಬೇಕಾದರೂ ಕೊಂಡೊಯ್ದು ಓದಬಹುದಾದ ಅವಕಾಶ

l ರಾತ್ರಿ ಹಗಲೂ ಓದಬಹುದಾದ ಆಯ್ಕೆ

l ಒಂದು ಸಲ ಚಾರ್ಜ್ ಮಾಡಿದರೆ ತಿಂಗಳುಗಟ್ಟಲೆ ಬಳಸಬಹುದು

ನಕಾರಾತ್ಮಕ ಅಂಶಗಳು

l ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಓದುವಂಥ ಅನುಭೂತಿಯ ಕೊರತೆ

l ಅತಿಯಾದ ಬೆಳಕಿನಿಂದ ಕಣ್ಣುಗಳಿಗೆ ತೊಂದರೆ

l ಬೇರೆ ಯಾವುದೇ ಕಾರ್ಯಗಳನ್ನು, ಉದಾಹರಣೆಗೆ ಫೋನ್‌ನಲ್ಲಿ ಮಾಡುವಂಥ ಕೆಲಸಗಳನ್ನು ಇದರಿಂದ ಮಾಡಲಾಗುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು