ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಪೆಟ್ (PET) ಸ್ಕ್ಯಾನ್‌ನ ವಿಭಿನ್ನ ಅನುಭವ

ಕೈ ಹಿಡಿದಳು ಗಾಯತ್ರಿ –5 (ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ)
Last Updated 28 ಫೆಬ್ರುವರಿ 2021, 10:32 IST
ಅಕ್ಷರ ಗಾತ್ರ

ಯೋಗ ವಿಜ್ಞಾನದಂತೆ ಮುದ್ರಾ ವಿಜ್ಞಾನವೂ ಆರೋಗ್ಯ ಕಾಯುವಲ್ಲಿ ಅತ್ಯಂತ ಪರಿಣಾಮಕಾರಿಯೆನಿಸಿದೆ. ಈ ಮುದ್ರಾ ವಿಜ್ಞಾನದಲ್ಲಿ ಕ್ಯಾನ್ಸರ್‌ ನಿವಾರಣಾ ಗಾಯತ್ರಿ ಮುದ್ರೆಗಳು ಕ್ಯಾನ್ಸರ್‌ ಕೋಶಗಳನ್ನು ನಿವಾರಿಸುವಲ್ಲಿ, ಕ್ಯಾನ್ಸರ್‌ ಕೋಶಗಳು ಉತ್ಪತ್ತಿಯಾಗದಂತೆ ನಿಗ್ರಹಿಸುವಲ್ಲಿ ಕಾರ್ಯನಿರ್ವಹಿಸುತ್ತವೆ. ಕ್ಯಾನ್ಸರ್‌ ನಿವಾರಣಾ ಗಾಯತ್ರಿ ಮುದ್ರೆಗಳನ್ನು ಮುಂದಿಟ್ಟುಕೊಂಡು ದೆಹಲಿಯ ಮುದ್ರಾ ತಜ್ಞ ಕೇಶವ್‌ ದೇವ್ ಸಂಶೋಧನೆಯನ್ನೂ ನಡೆಸುತ್ತಿದ್ದಾರೆ. ನಾನು ಕೂಡ ಅದನ್ನು ಅನುಸರಿಸಿ ಹೇಗೆ ಫಲಿತಾಂಶ ಕಂಡುಕೊಂಡೆ ಎಂಬುದನ್ನು ಹಿಂದಿನ ವಾರ ನೀವೆಲ್ಲ ಓದಿದ್ದೀರಿ. ಈ ವಾರ ಪೆಟ್‌ (PET) ಸ್ಕ್ಯಾನ್‌ ಪರಿಚಯ ಮಾಡಿಕೊಡುತ್ತಿದ್ದೇನೆ.

***

ಸ್ಕ್ಯಾನ್, ಮುಂದೆ ಸಿ.ಟಿ ಸ್ಕ್ಯಾನ್‌ ತನಕ ಕೇಳಿದ್ದೆ. ಇದೇನು PET (Positron Emission Tomography) ಸ್ಕ್ಯಾನ್? ಡಾ.ಪ್ರಸಾದ್ ಗುನಾರಿ ಪೆಟ್ ಸ್ಕ್ಯಾನ್ ರಿಪೋರ್ಟ್‌ ನೋಡಿ ಟ್ರೀಟ್‌ಮೆಂಟ್ ಪ್ಲಾನ್ ಮಾಡುವ ಎಂದು ಹೇಳಿದಾಗ ಇದ್ಯಾವ ಬಗೆಯ ಸ್ಕ್ಯಾನಿಂಗಪ್ಪಾ ಅನ್ನೋ ಯೋಚನೆ ತಲೆಯೊಳಗೆ ಹುಳ ಬಿಟ್ಟಂಗಿತ್ತು. ಅದು ಹೇಳಿ ಕೇಳಿ ತಕ್ಷಣ ಮಾಡೋ ಸ್ಕ್ಯಾನಿಂಗೂ ಅಲ್ಲ. ಹುಬ್ಬಳ್ಳಿಯಲ್ಲಿ ಎಚ್‌ಸಿಜಿಎನ್‌ಎಂಆರ್‌ನಲ್ಲಿ ವಾರದಲ್ಲಿ ಎರಡು ದಿನಗಳು ಮಾತ್ರ ಮಾಡುತ್ತಿದ್ದರು. ಅದು ಕನಿಷ್ಠ ನಾಲ್ಕು ಪೇಷಂಟ್ ಇದ್ದರೆ ಮಾತ್ರ ಆ ಸ್ಕ್ಯಾನಿಂಗ್ ನಡೆಯೋದು. ಸ್ಕ್ಯಾನಿಂಗ್‌ಗೆ ಬೇಕಾಗುವ ಪದಾರ್ಥಗಳನ್ನು (ಮೆಡಿಸಿನ್) ಬೆಂಗಳೂರಿನಿಂದ ತರಿಸಬೇಕಿರುವುದರಿಂದ ಈ ರಿವಾಜು. ನಸುಕಿನ 5 ಕ್ಕೆ ಹುಬ್ಬಳ್ಳಿ ತಲುಪಿದ ಮೇಲೆ ಅದರ ಅವಧಿ (ಎಕ್ಪೈರಿ ಟೈಮ್‌)ಮುಗಿಯುವುದರೊಳಗೆ ಸ್ಕ್ಯಾನಿಂಗ್ ಮುಗಿಸಬೇಕು. ಆ ಮೆಡಿಸಿನ್ ದುಬಾರಿ. ಆದ್ದರಿಂದಲೇ ಆಗ (ನಾನು ಮೊದಲ ಬಾರಿ ಈ ಪೆಟ್‌ ಸ್ಕ್ಯಾನ್‌ಗೆ ಒಳಪಟ್ಟಾಗ) ಒಂದು ಪೆಟ್ ಸ್ಕ್ಯಾನ್‌ಗೆ 25ಸಾವಿರ ರೂಪಾಯಿ ಆಗಿತ್ತು.

ನವೆಂಬರ್ 29. ಮಂಗಳವಾರ, ಪೆಟ್ ಸ್ಕ್ಯಾನ್‌ಗೆ ಡೇಟ್ ಫಿಕ್ಸ್ ಆಯ್ತು. ಸ್ಕ್ಯಾನಿಂಗ್ ಸೆಂಟರ್‌ನಲ್ಲಿದ್ದ ಡಾ.ಸಂಜೀವ ಕುಲಕರ್ಣಿ ಎರಡು ಬಗೆಯ ಗುಳಿಗೆಗಳನ್ನು ಬರೆದುಕೊಟ್ಟರು. ಹಿಂದಿನ ದಿನ ಮೋಷನ್ ಕ್ಲಿಯರ್ ಆಗ್ಲಿಕ್ಕೆ, ಮತ್ತೊಂದು ಮಾತ್ರೆ ಸೇರಿ ಎರಡು ಜಾತಿ ಗುಳಿಗೆಯನ್ನು 2 ಬಾರಿ ತೆಗೆದುಕೊಳ್ಳಬೇಕಿತ್ತು. ‘ಮಧ್ಯಾಹ್ನ ಊಟದ ನಂತರ, ಮತ್ತೆ ರಾತ್ರಿ ಊಟದ ನಂತ್ರ ತಗೊಳ್ಳಿ. ಮೋಷನ್ 2–3 ಸರ್‍ತಿ ಜಾಸ್ತಿ ಆಗುತ್ತೆ. ಬೆಳಿಗ್ಗೆ 8.30ಕ್ಕೆ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಇರಿ. ಹೊಟ್ಟೆಗೆ ಏನೂ ತಗೋಬೇಡಿ’ ಅಂದ್ರು. ಅವರು ಹೇಳಿದಂತೆ ಗುಳಿಗೆ ನುಂಗಿದೆ. ಆದರೆ ಅವರು ಹೇಳಿದ ಹಾಗೇನೂ ಎರಡ್ಮೂರು ಬಾರಿ ಭೇದಿ ಆಗ್ಲೇ ಇಲ್ಲ. ಆಗಿದ್ದು ಮಾಮೂಲು ಒಂದೇ ಸರ್‍ತಿ. ಮೋಷನ್‌ ಗುಳಿಗೆನೂ ನನ್ನ ಮೇಲೆ ಪ್ರಭಾವ ಬೀರಲಿಲ್ವೆನೋ ಅಂತ ಕೊಂಚ ಗಲಿಬಿಲಿ ಆಯ್ತು.

ಅವರು ಹೇಳಿದಂತೆ ಸಮಯಕ್ಕಿಂತ ಅರ್ಧ ತಾಸು ಮೊದಲೇ ನಾನು, ಗಿರೀಶ ಸ್ಕ್ಯಾನಿಂಗ್‌ ಸೆಂಟರ್‌ಗೆ ಹೋದ್ವಿ. ಅಂದರೆ ಬೆಳಿಗ್ಗೆ ಸರಿಯಾಗಿ 8 ಗಂಟೆಗೆ ಸ್ಕ್ಯಾನಿಂಗ್ ಸೆಂಟರ್ ಪ್ರವೇಶವಾಯ್ತು. ಪೆಟ್‌ಸ್ಕ್ಯಾನ್‌ ನನಗದು ಹೊಸ ಅನುಭವ. ಉತ್ತರ ಕರ್ನಾಟಕ ಭಾಗಕ್ಕೇ ಹುಬ್ಬಳ್ಳಿಯ ಈ ಪೆಟ್‌ ಸ್ಕ್ಯಾನ್‌ ಸೆಂಟರ್‌ ಮೊದಲನೆಯದ್ದು. ಆಗ ತಾನೆ ನಿಧಾನವಾಗಿ ಈ ಭಾಗಕ್ಕೆ ತೆರೆದುಕೊಳ್ಳುತ್ತಿತ್ತು. ಅಷ್ಟಕ್ಕೂ ಪೆಟ್‌ ಸ್ಕ್ಯಾನ್ ಒಂದು ಲಾಂಗ್ ಪ್ರೊಸೆಸ್. ಫಸ್ಟ್ ಟೈಮ್ ಆಗಿದ್ದಕ್ಕೆ ಹೇಗಪ್ಪಾ ಅನ್ನಿಸಿದ್ದು ಸುಳ್ಳಲ್ಲ. ‘ಮೈಮೇಲೆ ಮೆಟಲ್‌ ಆಭರಣ ಇದ್ರೆ ತೆಗೆದುಬಿಡಿ. ಡ್ರೆಸ್ ಚೇಂಜ್ ಮಾಡ್ರಿ’ ಎಂದು ಸಿಸ್ಟರ್‌ ಗೌನ್ ಕೊಟ್ಟರು. ಹುಂ ಎಂದು ಅದನ್ನು ಹಾಕಿಕೊಂಡು ನಮಗಾಗಿಯೇ ಇರುವ ಸ್ಪೇಷಲ್ ರೂಮ್‌ನಲ್ಲಿ ಕುಳಿತೆ. ನನ್ನ ಹಾಗೇ ಮತ್ತೆ ನಾಲ್ವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಅವರಲ್ಲಿ ಮೂವರ ಕೈಗೆ ಕ್ಯಾನುಲಾ ಚುಚ್ಚಿದ್ದರು. ನನ್ನ ಕೈಗೂ ಕ್ಯಾನುಲಾ ಹಾಕಲು ಅಲ್ಲೇ ಪಕ್ಕದ ರೂಂಗೆ ಬರಲು ಹೇಳಿದರು. ಎಡಗೈ ಮುಷ್ಟಿಕಟ್ಟಿ ಎಂದರು. ಕಟ್ಟಿದೆ. ಕೈ ಮೇಲಿನ ನರಗಳ ಮೇಲೆ ಫಟ್‌ ಫಟ್‌ ಅಂಥ ಒಂದೆರಡು ಬಾರಿ ಹೊಡೆದರು ಸಿಸ್ಟರ್‌. ಒಂದೆರಡು ನರಗಳು ಅಯ್ಯೋ ಎಂಬಂತೆ ಕೊಂಚ ಉಬ್ಬಿಕೊಂಡವು. ಅದರಲ್ಲೇ ಒಂದು ನರ ಹಿಡಿದು ಕ್ಯಾನುಲಾ ಚುಚ್ಚೇ ಬಿಟ್ಟರು. ಆಯಿಇಇಇ... ಎಂಬಷ್ಟು ನೋವಾಯ್ತು. ಹೋಗಿ ರೂಂನಲ್ಲಿ ಕುಳಿತುಕೊಳ್ಳಿ ಎಂಬ ಸಿಸ್ಟರ್‌ ಆದೇಶವನ್ನು ಚಾಚೂತಪ್ಪದೆ ಪಾಲಿಸಿದೆ. ಸ್ವಲ್ಪ ಹೊತ್ತಿಗೆ ಬ್ರದರ್‌ ಒಬ್ಬರು ಬಂದು, ‘ಯಾರೂ ಕೈಯನ್ನು ಅಲುಗಾಡಿಸಬೇಡಿ. ಸುಮ್ನೆ ಕುತ್ಕೊಳ್ಳಿ. ಮಾತಾಡಬೇಡಿ’ ಎಂದು ಎಚ್ಚರಿಕೆ ನೀಡಿ ಹೋದರು. ಆ ಕೊಠಡಿಯೊಳಗಿನ ಗೋಡೆಗೆ ಕಿವಿ ಹಚ್ಚಿದರೂ ಹೊರಗಿನ ಶಬ್ದ ಅಕ್ಷರಶಃ ಕೇಳ್ತಿರಲಿಲ್ಲ. ಮೂರು ವಿಶೇಷ ಸೋಫಾ, ಉಳಿದಂತೆ ಮಾಮೂಲು ಕುರ್ಚಿ ಇದ್ದವು. ನಾಲ್ಕು ಜನ 60 ದಾಟಿದ ವೃದ್ಧರು. ಜೊತೆಗೆ ನಾನೊಬ್ಬಳು. ಎಲ್ಲರೂ ಕೈಯನ್ನು ಸ್ಥಿರವಾಗಿಟ್ಟುಕೊಂಡು ಒಬ್ಬರ ಮುಖ ಒಬ್ರು ನೋಡ್ತಾ, ಆಗಾಗ ನಮಗೆ ಚುಚ್ಚಿ ಕ್ಯಾನೂಲಾ ನೋಡ್ತಾ ಕುತ್ಕೊಂಡಾಯ್ತು.

ನಂತರ ಒಬ್ಬೊಬ್ಬರನ್ನೇ ಕರೆದು ರೇಡಿಯೇಷನ್ ಇಂಜೆಕ್ಷನ್ ಕೊಟ್ರು. ಅದನ್ನು ಇಂಜೆಕ್ಟ್ ಮಾಡುವಾಗ ಬ್ರದರ್‌, ಫುಲ್ ರೇಡಿಯೇಷನ್ ಪ್ರಾಟೆಕ್ಟ್‌ ಗೌನ್ ಧರಿಸಿ ಅಗ್ದಿ ಸೇಫ್ ಆಗಿದ್ದುಕೊಂಡು ಕ್ಯಾನುಲಾ ಮೂಲಕ ಇಂಜೆಕ್ಟ್ ಮಾಡಿದರು. ಅವರನ್ನು ನೋಡುತ್ತಲೇ ಚಂದ್ರಲೋಕಕ್ಕೆ ಹೋಗೋ ಗಗನಯಾನಿ ನೆನಪಾದ. ಇಂಜೆಕ್ಷನ್‌ ದೇಹದೊಳಗೆ ಹೋಗುವಾಗ ತುಂಬಾನೆ ನೋವಾಯ್ತು. ತಡ್ಕೊಳ್ಳೊದು ಅನಿವಾರ್ಯ. ‘ಹೋಗಿ ಕುತ್ಕೊಳ್ಳಿ. ಯಾರ ಜೊತೆನೂ ಮಾತಾಡಬಾರದು. ರೆಡಿಯೇಷನ್ ಇರುತ್ತೆ’ ಅಂದ್ರು. ಗಪ್ಪ ಅಂತಾ ಕುತ್ಕೊಂಡಾಯ್ತು. ಅವರ ಎಚ್ಚರಿಕೆ ಮಾತು ಹೇಗಿತ್ತು ಅಂದರೆ, ನಮ್ಮ ದೇಹದೊಳಗೆ ರೇಡಿಯೇಷನ್‌ ಸೇರಿಕೊಂಡಿದೆ. ಬಾಯ್ಬಿಟ್ಟರೆ ಹೊರಬಂದು ಆ ರೂಮೊಳಗೆಲ್ಲ ವಿಕಿರಣಗಳೇ ತುಂಬಿಕೊಳ್ಳುತ್ತೇನೋ ಅನ್ನೋತರಹವಿತ್ತು.

ಸ್ವಲ್ಪ ಹೊತ್ತಿಗೆ ಒಂದು ಲೀಟರ್ ನೀರು, ಒಂದು ಗ್ಲಾಸ್ ತಂದು ಕೈಗಿಟ್ಟರು. ಪ್ರತಿ 10 ನಿಮಿಷಕ್ಕೆ ಅರ್ಧ ಗ್ಲಾಸ್‌ ಮಾತ್ರ ಕುಡಿಯಿರಿ ಎಂಬ ಆದೇಶ ಬೇರೆ. ಅವರು ಹೇಳಿದಂತೆ ಬಾಯಿಗೆ ಗ್ಲಾಸ್ ಏರಿಸಿದೆ. ಹೂಂ.. ನೋಡೊಕಷ್ಟೆ ನೀರಿನಂತಿತ್ತು. ರುಚಿ ನೀರಿನಂತಿರಲಿಲ್ಲ. ಕುಡಿಯೋಕೆ ಒಂಥರಾ ಅನ್ನಿಸ್ತಿತ್ತು. ಅದಕ್ಕೆ ಏನ್‌ ಔಷಧಿ ಬೆರಿಸಿರ್ತಾರೋ ಗೊತ್ತಿಲ್ಲ. ಒಂದು ಗುಟುಕು ಕೂಡಿದ್ರೂ ವಾಕರಿಕೆ ಒತ್ತರಿಸಿ ಬರ್ತಿತ್ತು. ಆದರೂ ಕುಡಿಯೋದು ಅನಿವಾರ್ಯ.

ಹೆಚ್ಚು ವಯಸ್ಸಾದವರಿಗೆ, ತೀರಾ ದುರ್ಬಲರಾದವರಿಗೆ ಪೆಟ್‌ ಸ್ಕ್ಯಾನ್‌ನಲ್ಲಿ ಮೊದಲ ಆದ್ಯತೆ. ಅವರನ್ನೆಲ್ಲ ಒಬ್ಬೊಬ್ಬರಾಗಿ ಕರೆದು ಸ್ಕ್ಯಾನಿಂಗ್‌ ಮಾಡಿ ಬಿಡುತ್ತಿದ್ದರು. ನನ್ನ ನೀರಿನ ಬಾಟಲ್ ಖಾಲಿಯಾಯ್ತು. ನನ್ನ ಸರದಿ ಎಷ್ಟು ಹೊತ್ತಿಗೋ ಅಂತ ಕಾದು ಕುಳಿತೆ. ಅಷ್ಟರಲ್ಲಿ ಊರಿನಿಂದ ಬಲುಮಾಮ ಬಂದು ಹೊರಗೆ ಕಾಯುತ್ತಿದ್ದ. ನಮಗೋ ಹೊರಗೆ ಬಿಡ್ತಿರಲಿಲ್ಲ; ಹೊರಗಿದ್ದವರಿಗೂ ಒಳಗೆ ಬಿಡ್ತಿರಲಿಲ್ಲ. ಅಷ್ಟಕ್ಕೂ ಅದು ರೇಡಿಯೇಷನ್‌ ಏರಿಯಾ. ರೋಗಿಗಳ ಹೊರತು ಆರಾಮ ಇದ್ದವರು ಒಬ್ಬರೂ ಬರುವಂತಿರಲಿಲ್ಲ.

ಒಂದು ತಾಸು ಬಿಟ್ಟು ಒಬ್ರು ಬಂದು, ‘ಯೂರಿನ್ ಪಾಸ್ ಮಾಡಿ ಬನ್ನಿ’ ಅಂದ್ರು. ಅದೂ ಆಯ್ತು. ಸ್ಕ್ಯಾನಿಂಗ್ ರೂಮ್ ಒಳಗೆ ಹೋದೆ. ಗುಹೆಯಾಕಾರದ ಮಷಿನ್‌ನೊಳಗೆ ಮಲಗಿಸಿ, ಬಾಯಿಯೊಳಗೆ ಮತ್ತೆ ಒಂದ್ ಅರ್ಧ ಲೋಟ್ ನೀರು ಸುರಿದ್ರು. ಮಲಗಿದ್ದ ಸ್ಥಿತಿಯಲ್ಲಿ ನೀರು ಕುಡಿದಿದ್ದು ಅದೇ ಮೊದಲು. ಬಾಯಲ್ಲಿ ಸುರಿದ ನೀರು ಮೂಗಲ್ಲಿ ಬರುತ್ತೇನೆ ಅನ್ನೋ ಹಾಗನಿಸಿತು. ಸದ್ಯ ಹಾಗೇನು ಆಗಲಿಲ್ಲ. ರೂಂನಲ್ಲಿ ಮೂರು ಮಂದಿ ಬ್ರದರ್ಸ್‌ ಇದ್ದರು. ಕ್ಯಾನುಲಾಗೆ ಒಂದು ಇಂಜೆಕ್ಷನ್ ಇಂಜೆಕ್ಟ್ ಮಾಡಿದ್ರು. ಮತ್ತೊಂದನ್ನು ಆಟೊಮೆಟಿಕ್ ಆಗಿ ಇಂಜೆಕ್ಟ್ ಆಗೋ ಹಾಗೆ ರೆಡಿ ಮಾಡಿಟ್ಟು ಅವರೆಲ್ಲ ಪಕ್ಕದ ಕಂಪ್ಯೂಟರ್ ರೂಂಗೆ ನಡೆದರು. ಹೋಗುವಾಗ ಹೇಳಿದ್ದೆನಂದ್ರೆ, ‘ನೋಡಿ, ಸ್ಕ್ಯಾನಿಂಗ್ ವೇಳೆ ಸ್ವಲ್ಪವೂ ಅಲುಗಾಡಬಾರದು. ಅಲುಗಾಡಿದರೆ ಮತ್ತೆ ಸ್ಕ್ಯಾನಿಂಗ್ ಮಾಡಬೇಕಾಗುತ್ತೆ. ಸ್ಕ್ಯಾನಿಂಗ್ 20ರಿಂದ 30 ನಿಮಿಷ ನಡೆಯೋದು’. ಯಪ್ಪಾ ಅಷ್ಟೂ ಹೊತ್ತು ಅಲುಗಾಡದೇ ಇರಬೇಕಾ? ದೇವರೆ ಇದೆಂಥ ಶಿಕ್ಷೆಯಪ್ಪ ಎಂದಿತು ಮನಸ್ಸು. ಹೂಂ ಎಂದು ತಲೆಯಾಡಿಸಿದ್ದನ್ನು ಅವರ್ಯಾರೂ ಗಮನಿಸಲಿಲ್ಲ. ಅವರ ಪಾಡಿಗೆ ಅವರು ಹೊರಟು ಹೋಗಿದ್ದರು.

ಫುಲ್‌ ಎಸಿ ರೂಂನಲ್ಲಿ ಮಷಿನ್‌ ಸದ್ದು ಬಿಟ್ಟರೆ ಮತ್ತೆನೂ ಕೇಳುತ್ತಿರಲಿಲ್ಲ. ದೇಹವೆಲ್ಲ ಚಳಿಯಿಂದ ಮರಗಟ್ಟಿದಂತಾಯ್ತು. ಪೆಟ್‌ ಸ್ಕ್ಯಾನ್‌ ಮಷಿನ್‌ ಒಮ್ಮೊಮ್ಮೆ ಒಂದೊಂದು ರೀತಿಯ ಶಬ್ದ ಹೊರಡಿಸುತ್ತಿತ್ತು. ಅಡಿಯಿಂದ ಮುಡಿವರೆಗೂ ದೇಹದ ಇಂಚಿಂಚಿನ ಸ್ಕ್ಯಾನಿಂಗ್ ರಿಪೋರ್ಟ್‌ ದಾಖಲಾಗುತ್ತ ಸಾಗಿತ್ತು. ನಾನಂತು ಉಸಿರು ಬಿಗಿಹಿಡಿದ ಹಾಗೆ ಮಲ್ಕೊಂಡಿದ್ದೆ. ಸ್ಕ್ಯಾನಿಂಗ್ ಪ್ರಕ್ರಿಯೆಯ ಅರ್ಧ ಭಾಗ ಕಳೆಯುತ್ತಿದ್ದಂತೆ ಇಂಜೆಕ್ಷನ್ ಚಕ್ ಅಂತ ಆಟೊಮೆಟಿಕಾಗಿ ಇಂಜೆಕ್ಟ್ ಆಯ್ತು. ಯಪ್ಪೋ...ಅದೇನ್‌ ಕೇಳ್ತಿರಿ ಆ ಒಂದು ಕ್ಷಣ. ಒಮ್ಮೆಲೆ ಶಾಕ್ ಹೊಡೆದಂತಾಯ್ತು. ಕಾಲ ಬೆರಳ ತುದಿಯಿಂದ ತಲೆವರೆಗೆ ಬಿಸಿಯಾಯ್ತು. ಅಂಥ ಸಂದಿಗ್ಧ ಕ್ಷಣವನ್ನು ಅಲುಗಾಡದೇ ದಾಟಿದೆ. ಇದೇ ಸ್ಕ್ಯಾನಿಂಗ್‌ನ ಅತ್ಯಂತ ಮಹತ್ವದ ಅವಧಿ. ಇಂಜೆಕ್ಷನ್‌ನಿಂದ ನಾವು ಅಲುಗಾಡಿದರೆ ಸ್ಕ್ಯಾನಿಂಗ್‌ ರಿಪೋರ್ಟ್‌ ಕ್ಲಿಯರ್ ಆಗಿ ಬಾರದು. ಮತ್ತೆ ನಿಧಾನವಾಗಿ ದೇಹ ನಾರ್ಮಲ್‌ ಸ್ಥಿತಿಗೆ ಬಂತು. ಅರ್ಧ ತಾಸು ಕಳೆದ ನಂತರ ಮತ್ತೆ ಒಂದಿಷ್ಟು ಸ್ಕ್ಯಾನಿಂಗ್ ಪ್ರೊಸೆಸ್ ನಡೆಯಿತು. ನಂತರ ರೂಮ್‌ನ ಬಾಗಿಲು ತಳ್ಳಿದ ಸದ್ದು ಕೇಳಿತು. ಸ್ಕ್ಯಾನಿಂಗ್‌ ಮುಗಿದಿದೆ. ನೀವು ಹೊರಗೆ ಕಾಯಿರಿ ಎಂದು ಬ್ರದರ್‌ ಒಬ್ಬರು ಹೇಳಿದರು. ಅಬ್ಬಾ ಅಂತೂ ಒಂದು ಹಂತ ಮುಗಿತಲ್ಲ ಎಂದು ಸ್ಕ್ಯಾನಿಂಗ್‌ ಬೆಡ್‌ನಿಂದ ಎದ್ದೆ. ದೇಹದಲ್ಲಿ ಒಂಥರಾ ಅಮಲಿನ ಅನುಭವ. ಮತ್ತೆ ಒಂದು ತಾಸು ಕಾಯಬೇಕು. ರಿಪೋರ್ಟ್‌ ಓಕೆ ಆದ್ರೆ ಮನೆಗೆ, ಇಲ್ಲಾಂದ್ರೆ ಮತ್ತೊಮ್ಮೆ ಸ್ಕ್ಯಾನಿಂಗ್‌ಗೆ ಒಳಪಡಬೇಕು.

ಮೊದಲಿದ್ದ ಮೂವರು ವೃದ್ಧರ ಪೈಕಿ ಒಬ್ಬರದು ರೀ ಸ್ಕ್ಯಾನಿಂಗ್‌ ಮಾಡೋದು ಬಂತು. ಅವರು ಮತ್ತೆ ನಾನು ಇಬ್ಬರೇ ಕೂತುಕೊಂಡಿದ್ದೆವು. ರೂಮಿನ ಬಾಗಿಲು ತಳ್ಳಿದ ಬ್ರದರ್‌, ‘ನೀವಿನ್ನು ಹೋಗ್ಬಹುದು. ರಿಪೋರ್ಟ್‌ ಬರಲು ಒಂದೆರಡು ದಿನ ಆಗ್ಬಹುದು’ ಎಂದು ಹೇಳಿ ಹೋದರು. ಎಡಗೈಲಿದ್ದ ಕ್ಯಾನುಲಾ ರಿಮೂವ್ ಮಾಡಿ, ಡ್ರೆಸ್ ಚೇಂಜ್ ಮಾಡಿ ಮನೆಗೆ ಹೊರಟು ನಿಂತಾಗ ಮಧ್ಯಾಹ್ನ 2.30. ಆ ರೂಮೊಳಗೆ ಇದ್ದರೆ ಪ್ರಪಂಚವೇ ಮುಳುಗಿದರೂ ನಮ್ಮ ಅರಿವಿಗೆ ಬಾರದಂಥ ವಾತಾವರಣ. ಅಂತೂ ಆ ರೂಮಿನಿಂದ ಹೊರಬಿದ್ದು, ಮನೆಗೆ ಬಂದಾಯ್ತು. ಮೂರನೇ ಫ್ಲೋರ್‌ನಲ್ಲಿದ್ದ ಮನೆಗೆ ಬರುವಾಗ ದೇಹ ತೇಲಿದ ಅನುಭವವಾಯ್ತು. ಆ ರೇಡಿಯೇಷನ್‌ ಇಂಜೆಕ್ಷನ್‌ ಪ್ರಭಾವ ಇನ್ನೂ ಇಳಿದಿರಲಿಲ್ಲ. ಬಂದವಳೇ ಸೀದಾ ಟಾಯ್ಲೆಟ್‌ಗೆ ಓಡಿದೆ. ಅದೇ ಆಗಲೇ ಹೇಳಿದ್ದೇನಲ್ಲ. ಭೇದಿ ಟ್ಯಾಬ್ಲೆಟ್‌. ಅದರ ಪ್ರಭಾವ ಸ್ಕ್ಯಾನಿಂಗ್‌ ಎಲ್ಲ ಆದ ಮೇಲೆ ತೋರಬೇಕೆ? ಬಾತ್‌ರೂಂಗೆ ಹೋಗಿ ಸ್ನಾನ ಮಾಡಿ ಫ್ರೆಶ್‌ ಆದೆ.

ಮಾರನೇ ದಿನ ಮಧ್ಯಾಹ್ನ ಎಚ್‌ಸಿಜಿ ಪೆಟ್‌ ಸ್ಕ್ಯಾನ್‌ ಸೆಂಟರ್‌ನಿಂದ ಫೋನ್‌ ಬಂತು. ನಿಮ್ಮ ರಿಪೋರ್ಟ್‌ ಬಂದಿದೆ. ಒಯ್ಯಿರಿ ಎಂದರು. ಒಂದು ದಿನ ಮೊದಲೇ ರಿಪೋರ್ಟ್‌ ಬಂತು. ಮನದೊಳಗೆ ಆತಂಕ ಶುರುವಾಯಿತು. ರಿಪೋರ್ಟ್‌ ಏನಂತ ಬಂದಿರಬಹುದು? ಕ್ಯಾನ್ಸರ್‌ ಸ್ಪ್ರೆಡ್‌ ಆಗಿರ್ಬಹುದಾ ಎಂಬ ಆಲೋಚನೆ ಮನಸ್ಸಿನ ದುಗುಡವನ್ನು ಹೆಚ್ಚಿಸಿತು. ಸಂಜೆ ಗಿರೀಶ ಶಾಲೆಯಿಂದ ಬರುತ್ತಲೇ ಹೋಗಿ ರಿಪೋರ್ಟ್‌ ತಗೊಂಡಾಯ್ತು.

ಡಾಕ್ಟರ್‌ ಹತ್ರ ಹೋಗೋವರ್ಗೂ ನನ್ನಲ್ಲಿನ ಆತಂಕ ಕಾಯಬೇಕಲ್ಲ? ಸ್ಕ್ಯಾನ್‌ ಮಾಡಿದವರಲ್ಲೇ ಕೇಳಿದೆ. ಹೇಗಿದೆ ಸರ್‌ ರಿಪೋರ್ಟ್‌ ಎಂದು. ಅಲ್ಲಿನ ಇನ್‌ಚಾರ್ಜ್‌ ಡಾ.ಕುಲಕರ್ಣಿ ಸರ್‌, ನನ್ನ ನೋಡುತ್ತಲೇ, ‘ಎಲ್ಲಿಯೂ ಹರಡಿಲ್ಲ. ಆದರೆ ಬಲಭಾಗದಲ್ಲಿ ಎದೆಗೂಡಿನ ಆಳಕ್ಕೆ ಇಳಿದಿದೆ. ಎಡಭಾಗದಲ್ಲಿ ತೊಂದರೆಯೇನಿಲ್ಲ’ ಎಂದರು. ಎದೆಗೂಡಿನ ಆಳಕ್ಕೆ ಇಳಿದಿದೆ ಎಂಬ ಅವರ ಮಾತು ಸ್ವಲ್ಪ ಭಯಪಡಿಸಿತು. ಆದರೂ ಎಡಭಾಗದಲ್ಲಿದ್ದ ಗಂಟು ಕರಗಿ ಹೋಗಿದ್ದು ನನ್ನಲ್ಲಿ ವಿಶ್ವಾಸವನ್ನು ಹೆಚ್ಚಿಸಿತು. ಲಗುಬಗೆಯಿಂದ ಡಾ.ಪ್ರಸಾದ ಅವರ ಚೇಂಬರ್‌ಗೆ ಬಂದರೆ ಅವರಿರಲಿಲ್ಲ. ಸ್ವಲ್ಪ ಕಾಯಿರಿ ಎಂದರು. ಆಯ್ತು ಅಂತ ಕಾಯುತ್ತಾ ಕುಳಿತೆವು. ಪ್ರಸಾದ್ ಡಾಕ್ಟರ್‌ ಬರುತ್ತಲೇ ಅವರ ಹಿಂದೆಯೇ ನಾನು ರಿಪೋರ್ಟ್‌ ಜೊತೆಗೆ ಹೋದೆ. ರಿಪೋರ್ಟ್‌ ಹಿಡಿಯುತ್ತಲೇ, ‘ಗುಡ್‌ ರಿಪೋರ್ಟ್‌ ಕೃಷ್ಣಿ, ಎಲ್ಲೂ ಹರಡಿಲ್ಲ’ ಎಂದವರೇ ಮುಖವನ್ನು ದಿಟ್ಟಿಸಿ ನೋಡಿ ಹಲ್ಲು ತೋರಿಸದೇ ನಕ್ಕರು. ಅದು ಅವರ ಸ್ಮೈಲಿಂಗ್‌ ಸ್ಟೈಲು. ನಾನು ಮಂದಹಾಸ ಬೀರಿದೆ. ಅದಾಗಲೇ ಆ ರಿಪೋರ್ಟ್‌ ಅನ್ನು ಅವರು ನೋಡಿದ್ದರು ಎಂಬುದು ನನಗೆ ನಂತರ ಗೊತ್ತಾಯ್ತು.

ಈ ಪೆಟ್‌ ಸ್ಕ್ಯಾನಿಂಗ್‌ನಲ್ಲಿ ಕೂಡ ನಮ್ಮ ತಾಳ್ಮೆಯನ್ನು ಒರೆಗೆ ಹಚ್ಚಲೇಬೇಕು. ಏಕಾಗ್ರತೆಯನ್ನೂ ಮುನ್ನೆಲೆಗೆ ತಂದುಕೊಳ್ಳಲೇಬೇಕು. ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಬೇಕು. ನೋವನ್ನು ತಡೆದುಕೊಳ್ಳಲು ಮನಸ್ಸನ್ನು ಕಠಿಣಗೊಳಿಸಿಕೊಳ್ಳಬೇಕು. ಮತ್ತೆ ಫಲಿತಾಂಶ ಹೇಗೆ ಏನೋ ಎಂಬ ಆತಂಕವನ್ನು ಎದುರಿಸಲು ಸಜ್ಜುಗೊಳಿಸಿಕೊಳ್ಳಬೇಕು. ಅಬ್ಬಾ... ಸ್ಕ್ಯಾನ್ ಒಂದಾದರೂ ಸವಾಲುಗಳು ಎಷ್ಟೊಂದು. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತರೆ ಮಾತ್ರ ಮುಂದಿನ ಹೆಜ್ಜೆಯನ್ನು ದಿಟ್ಟವಾಗಿ ಇಡಬಹುದು.

(ಮುಂದಿನ ವಾರ: ದೇಹ ಸೇರಿದ ಚೊಚ್ಚಲ ಕಿಮೊ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT