ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹13 ಕೋಟಿ ವಂಚನೆ: ಕೇರಳದ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಪುತ್ರನ ವಿರುದ್ಧ ದುಬೈ ಕಂಪನಿ ಆರೋಪ

Last Updated 24 ಜನವರಿ 2018, 13:01 IST
ಅಕ್ಷರ ಗಾತ್ರ

ತಿರುವನಂತಪುರಂ: ಕೇರಳದ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಮಗ ಬಿನೋಯ್ ವಿನೋದಿನಿ ಬಾಲಕೃಷ್ಣನ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.

ಅಬುದಾಬಿಯಲ್ಲಿರುವ ಜಾಸ್ ಟೂರಿಸಂ ಕಂಪನಿ ಬಿನೋಯ್ ವಿರುದ್ಧ ಈ ಆರೋಪ ಮಾಡಿದೆ. ವಿವಿಧ ದೇಶಗಳಲ್ಲಿ ವ್ಯವಹಾರಕ್ಕಾಗಿ ಬಿನೋಯ್  ₹7,87,50,000 ಸಾಲ ಪಡೆದಿದ್ದರು. ಇದೀಗ ಬ್ಯಾಂಕ್ ಬಡ್ಡಿ ಸೇರಿ ₹13 ಕೋಟಿ ಆಗಿದೆ ಎಂದು ಜಾಸ್ ಕಂಪನಿ ಮುಖ್ಯಸ್ಥ ಹಸನ್ ಇಸ್ಮಾಯಿಲ್ ಅಬ್ದುಲ್ಲ ಅಲ್ ಮರ್ಸುಖಿ ಆರೋಪಿಸಿದ್ದಾರೆ.

ತಮ್ಮ ವ್ಯವಹಾರದಲ್ಲಿ ಸಹಭಾಗಿಯಾಗಿರುವ ರಾಹುಲ್ ಕೃಷ್ಣನ್ ಅವರ ಸಹಾಯದಿಂದ  ಬಿನೋಯ್ ಅವರು ಕಾರು ಖರೀದಿಸುವುದಕ್ಕಾಗಿ ₹3,13,200 ದಿರಹಂ ಸಾಲ ಪಡೆದಿದ್ದರು.ಇದರಲ್ಲಿ ಒಂದಿಷ್ಟು ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

(ದೂರಿನ ಪ್ರತಿ, ಕೃಪೆ: ಮಾತೃಭೂಮಿ ಪತ್ರಿಕೆ)

ತಮ್ಮ ಕಂಪನಿ ಹೊರತಾಗಿ ಇನ್ನು ಹಲವಾರು ವ್ಯಕ್ತಿಗಳ ಬಳಿ ಬಿನೋಯ್ ಸಾಲ ಪಡೆದಿದ್ದು, ಅದನ್ನು ಮರುಪಾವತಿ ಮಾಡದೆ ತಲೆಮರೆಸಿಕೊಂಡು ಭಾರತಕ್ಕೆ ಬಂದಿದ್ದಾರೆ. ಬಿನೋಯ್ ವಿರುದ್ದ 5 ಪ್ರಕರಣಗಳು ಈಗಾಗಲೇ ಇವೆ ಎಂದು ದೂರುದಾತ ಆರೋಪಿಸಿದ್ದಾರೆ.

2015ರಿಂದ 2017 ವರೆಗಿನ ಅವಧಿಯಲ್ಲಿ ತಮ್ಮ ಸಹಭಾಗಿ ಹಲವಾರು ಬಾರಿ ಬಿನೋಯ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಬಿನೋಯ್ ಅವರು ಭೇಟಿಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಏತನ್ಮಧ್ಯೆ, ಬಿನೋಯ್ ಅವರು ಚೆಕ್ ನೀಡಿದ್ದರೂ ಅದು ಬೌನ್ಸ್ ಆಗಿದೆ ಎಂದು ಜಾಸ್ ಗ್ರೂಪ್ ಹೇಳಿದೆ.

ಬಿನೋಯ್ ತಮ್ಮನ್ಮು ವಂಚಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಇಂಟರ್‍‍ಪೋಲ್ ಸಹಾಯ ಬೇಕು ಎಂದು ದೂರುದಾತರು ಒತ್ತಾಯಿಸಿದ್ದಾರೆ.

ಸಿಪಿಎಂ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ
ಕೊಡಿಯೇರಿ ಬಾಲಕೃಷ್ಣನ್ ಮಗ ಬಿನೋಯ್ ವಿರುದ್ಧ ಪ್ರಕರಣವು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಹಾಗಾಗಿ ಇದರಲ್ಲಿ ಪಕ್ಷ ಮಧ್ಯಪ್ರವೇಶಿಸುವುದಿಲ್ಲ ಎಂದು ಸಿಪಿಎಂ ಹೇಳಿದೆ.
ಆರೋಪದ ಬಗ್ಗೆ ಮಗನೇ ಉತ್ತರಿಸುತ್ತಾನೆ. ಈ ಬಗ್ಗೆ ತನಿಖೆ ನಡೆಯಲಿ .ಇದೀಗ ನನ್ನ ಮಗನ ವಿರುದ್ಧ ಪ್ರಕರಣ ದಾಖಲಾಗಿಲ್ಲ, ಹಾಗೇನಾದರೂ ಇದ್ದರೆ ಕಾನೂನು ಪ್ರಕ್ರಿಯೆಗೆ ಸಹಕರಿಸಲು ಆತ ತಯಾರಿದ್ದಾನೆ ಎಂದು ಕೊಡಿಯೇರಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.

ವಂಚನೆ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿ: ಕುಮ್ಮನಂ
ಆರನ್ಮುಳಂ:  ಸಿಪಿಎಂ ಕೇರಳ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಪುತ್ರನ ಹಣಕಾಸು ವಂಚನೆ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕೆಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ. ಇದು ತುಂಬಾ ಗಂಭೀರ ಪ್ರಕರಣ. ಸಿಪಿಎಂ ರಾಷ್ಟ್ರಮಟ್ಟದಲ್ಲಿ ಭಿನ್ನತೆಯಿದ್ದ ಕಾರಣದಿಂದಾಗಿ ಈ ಸುದ್ದಿ ಬಹಿರಂಗವಾಗಿದೆ ಎಂದಿದ್ದಾರೆ  ಕುಮ್ಮನಂ.

ಕೊಡಿಯೇರಿಗೆ ಪುತ್ರನ ವಂಚನೆ ಬಗ್ಗೆ ತಿಳಿದಿತ್ತು. ಆದರೂ ಅವರು ಅದಕ್ಕೆ ಸಾಥ್ ನೀಡಿದ್ದಾರೆ. ಹಾಗಾಗಿ ಕೇರಳ ಸರ್ಕಾರ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಕೇರಳದಲ್ಲಿ ಅಧಿಕಾರ ಹೊಂದಿರುವ ಪಕ್ಷದ ರಾಜ್ಯ ಕಾರ್ಯದರ್ಶಿಯ ಪುತ್ರನಿಗಾಗಿ ಇಂಟರ್‌ಪೋಲ್ ಹುಡುಕಾಟ ನಡೆಸುತ್ತಿದೆ ಎಂಬುದು ರಾಜ್ಯಕ್ಕೆ ಮಾತ್ರ ಅಲ್ಲ ದೇಶಕ್ಕೂ ನಾಚಿಕೆಗೇಡಿನ ವಿಷಯವಾಗಿದೆ. ಕೊಡಿಯೇರಿ ಕುಟುಂಬದ ಸಂಪತ್ತಿನ ಮೂಲದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಕುಮ್ಮನಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT