ಶನಿವಾರ, ಜನವರಿ 23, 2021
23 °C
10 ವರ್ಷಗಳ ಬಾಹ್ಯಾಕಾಶ ಕಾರ್ಯಕ್ರಮಗಳ ಕನಸು ಬಿಚ್ಚಿಟ್ಟ ಕೆ.ಶಿವನ್‌

ಚಂದ್ರಯಾನ–3: ಗಗನಯಾನ ತಯಾರಿ ಶುರು

ರವಿ ಪ್ರಕಾಶ್ .ಎಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾದಿಂದಾಗಿ ಕಳೆದ ವರ್ಷ ಬಹುತೇಕ ಯೋಜನೆಗಳಿಗೆ ತಡೆ ನೀಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೊಸ ವರ್ಷದಲ್ಲಿ (2021) ಅವುಗಳಿಗೆ ಮರು ಚಾಲನೆ ನೀಡಲು ಮುಂದಾಗಿದೆ. ‌

ಬಹು ಉಪಯೋಗಿ ಉಪಗ್ರಹಗಳ ಉಡಾವಣೆಗಳಲ್ಲದೆ, ಸಣ್ಣ ಉಪಗ್ರಹಗಳ ಉಡಾವಣೆ ವಾಹನ (ಎಸ್‌ಎಸ್‌ಎಲ್‌ವಿ), ಚಂದ್ರಯಾನ–3, ಆದಿತ್ಯ ಎಲ್‌–1 ಮತ್ತು ಗಗನಯಾನ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ.

ಇಸ್ರೊ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಕೆ.ಶಿವನ್‌ ಅವರು ತಮ್ಮ ಹೊಸ ವರ್ಷದ ಸಂದೇಶದಲ್ಲಿ ಈ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಹತ್ತು ವರ್ಷಗಳ ಮಹತ್ವದ ಕಾರ್ಯಕ್ರಮಗಳ ರೂಪುರೇಷೆಯನ್ನೂ ಮುಂದಿಟ್ಟಿದ್ದಾರೆ.

‘ಅತ್ಯಂತ ಅಲ್ಪಾವಧಿಯಲ್ಲಿ ಮಹತ್ವದ ಮತ್ತು ವೈವಿಧ್ಯ ಕಾರ್ಯಕ್ರಮಗಳನ್ನು ಸಾಧಿಸಬೇಕಾದ ಸವಾಲು ನಮ್ಮ ಮುಂದಿದೆ. ಅಲ್ಲದೆ, ಭಾರತದ ಪ್ರಥಮ ಡೆಟಾ ರಿಲೇ ಉಪಗ್ರಹ ಉಡಾವಣೆಯೂ ನಡೆಯಲಿದೆ. ಇದರಲ್ಲಿ ಆದಿತ್ಯ ಎಲ್‌–1 ಮತ್ತು ಗಗನಯಾನ ಮೈಲುಗಲ್ಲಾಗಳಾಗಲಿವೆ’ ಎಂದು ಅವರು ಬಣ್ಣಿಸಿದ್ದಾರೆ.

‘ಲಾಕ್‌ಡೌನ್‌ ಅವಧಿಯಲ್ಲಿ ನಾವು ಸುಮ್ಮನೆ ಕುಳಿತಿಲ್ಲ. ವಿವಿಧ ಕಾರ್ಯಕ್ರಮಗಳ ಆತ್ಮಾವಲೋಕನ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿ ಕುರಿತು ಚಿಂತನ ಮಂಥನ, ಮುಂದಿನ ಹತ್ತು ವರ್ಷಗಳಲ್ಲಿನ ಯೋಜನೆಗಳ ರೂಪುರೇಷೆಗಳ ಬಗ್ಗೆ ಚಿಂತನೆ ನಡೆಸಲಾಯಿತು. ಅದರಲ್ಲಿ ಉಡಾವಣಾ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗುವುದು’ ಎಂದು ಅವರು ಹೇಳಿದ್ದಾರೆ.

ಕೋವಿಡ್‌–19 ಲಾಕ್‌ಡೌನ್‌ ಬಳಿಕ ಉಪಗ್ರಹ ಉಡಾವಣೆ ಮತ್ತು ಬಾಹ್ಯಾಕಾಶ ಯಾನಗಳನ್ನು ನಿಲ್ಲಿಸಿದ್ದ ಇಸ್ರೊ, 11 ತಿಂಗಳ ಬಳಿಕ ಅಂದರೆ 2020 ರ ನವೆಂಬರ್‌ನಲ್ಲಿ ಚಟುವಟಿಕೆಗಳಿಗೆ ಮರು ಚಾಲನೆ ನೀಡಿತು. ನವೆಂಬರ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಎರಡು ಉಡಾವಣೆಗಳನ್ನು ನಡೆಸಿದೆ. ಇದಕ್ಕೆ ಮೊದಲು 2019ರ ಡಿಸೆಂಬರ್‌ 11 ರಂದು ಇಸ್ರೊ ನಡೆಸಿದ ಉಪಗ್ರಹ ಉಡಾವಣೆಯೇ ಕೊನೆಯ ಉಡಾವಣೆ ಆಗಿತ್ತು.

ಕೋವಿಡ್‌ನಿಂದಾಗಿ 2020 ರಲ್ಲಿ ವಿವಿಧ ಬಗೆಯ ಒಟ್ಟು 20 ಉಡಾವಣೆಗಳನ್ನು ತಡೆ ಹಿಡಿಯಲಾಯಿತು. ಇವುಗಳಲ್ಲಿ ಭಾರತದ್ದೂ ಅಲ್ಲದೇ ಹಲವು ವಿದೇಶಿ ಉಪಗ್ರಹಗಳ ಉಡಾವಣೆಯೂ ಸೇರಿತ್ತು. ಇದರ ಪರಿಣಾಮ ಇಸ್ರೊಗೆ ಆದಾಯದಲ್ಲೂ ಖೋತಾ ಆಗಿದೆ. 2018-19 ರಲ್ಲಿ ವಿದೇಶಿ ಉಪಗ್ರಹಗಳ ಉಡಾವಣೆ ಮೂಲಕ ₹324.19 ಕೋಟಿ ಆದಾಯ ಗಳಿಸಿತ್ತು. 2017–18ರ ಸಾಲಿನ ಆದಾಯಕ್ಕಿಂತ ಶೇ 40ರಷ್ಟು ಏರಿಕೆ ಕಂಡಿತ್ತು ಎಂದು ಇಸ್ರೊ ಮೂಲಗಳು ತಿಳಿಸಿವೆ.

ದಶಕದ ಕನಸುಗಳ ಹಾದಿ
ಮುಂದಿನ ಹತ್ತು ವರ್ಷಗಳಿಗೆ 10 ಕ್ಕೂ ಹೆಚ್ಚು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಬಹುತೇಕ ಇಸ್ರೊ ಉಡಾವಣೆ ತಂತ್ರಜ್ಞಾನ ಸಾಮರ್ಥ್ಯ ಹೆಚ್ಚಿಸುವ, ಮರುಬಳಕೆ ಮಾಡಬಹುದಾದ ರಾಕೆಟ್‌ಗಳ ಬಗ್ಗೆ ಗಮನ ಕೇಂದ್ರೀಕರಿಸಿದೆ.

ಪ್ರಮುಖ ಅಂಶಗಳು ಕೆಳಕಂಡಂತಿವೆ

* ಬಾಹ್ಯಾಕಾಶಕ್ಕೆ ಮಾನವನನ್ನು ಒಯ್ಯಬಹುದಾದ ಹೊಸ ಉಡ್ಡಯನ ವಾಹನಗಳ ಅಭಿವೃದ್ಧಿ. ದೇಶದಲ್ಲಿ ಖಾಸಗಿ ಬಾಹ್ಯಾಕಾಶ ಯಾನಕ್ಕೆ ಪೂರಕ ವ್ಯವಸ್ಥೆ ನಿರ್ಮಾಣ.

* ಬಾಹ್ಯಾಕಾಶ ವಿಜ್ಞಾನ ಮತ್ತು ಅನ್ವೇಷಣೆ ಯಾನ ಯೋಜನೆಗಳಿಗೆ ಸಹಾಯಕವಾಗುವ ಅತ್ಯಾಧುನಿಕ ಇನೆರ್ಷಿಯಲ್‌ ವ್ಯವಸ್ಥೆಯ ಸ್ಥಾಪನೆ

* ಬಾಹ್ಯಾಕಾಶದಲ್ಲಿ ವಾಸಕ್ಕೆ ಯೋಗ್ಯ, ಪುನರುತ್ಪಾದಕ ಜೀವಪೂರಕ ವ್ಯವಸ್ಥೆ ನಿರ್ಮಿಸುವ ಬಗ್ಗೆ ಸಂಶೋಧನೆ ಮತ್ತು ಅಭಿವೃದ್ಧಿ. ಮಾನವನನ್ನು ಒಯ್ಯಬಲ್ಲ ಬಾಹ್ಯಾಕಾಶ ನೌಕೆ ಮತ್ತು ಆರ್ಬಿಟಲ್ ಮಾಡ್ಯೂಲ್‌ ಅಭಿವೃದ್ಧಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು