ಶನಿವಾರ, ಮಾರ್ಚ್ 6, 2021
21 °C

ಗೂಗಲ್‌ ಮ್ಯಾಪ್‌ಗೆ ಹೊಸ ಸೌಲಭ್ಯ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಪ್ರಿಯ ಮಾಹಿತಿ ಶೋಧ ತಾಣ ಗೂಗಲ್, ಇದೀಗ ಭಾರತದಲ್ಲಿನ ಗೂಗಲ್‌ ಮ್ಯಾಪ್‌ಗೆ ಹೊಸ ಸೌಲಭ್ಯವೊಂದನ್ನು ಪರಿಚಯಿಸಲು ಮುಂದಾಗಿದೆ. ಇದು ವಾಹನಗಳಿಗೆ ಸಂಬಂಧಿಸಿದ ನೂತನ ವೈಶಿಷ್ಟ್ಯವಾಗಿದೆ.

ವಾಹನಗಳು ಕ್ರಮಿಸುವ ದೂರ ಮತ್ತು ಕಾಲವನ್ನು ಈ ಸೌಲಭ್ಯವು ಕರಾರುವಕ್ಕಾಗಿ ತಿಳಿಸಲಿದೆ. ಅದರಲ್ಲೂ ದ್ವಿಚಕ್ರವಾಹನಗಳ ಮಾಹಿತಿಗೆ ಈ ಟೂಲ್‌ ಹೆಚ್ಚು ಸಹಕಾರಿ ಎನ್ನಲಾಗಿದೆ. ದ್ವಿಚಕ್ರ ವಾಹನಗಳು ಸಾಗುವ ರಸ್ತೆ ಮಾರ್ಗಗಳು ಮಾತ್ರವಲ್ಲದೆ, ಕಾಡು ಮತ್ತು ಬೆಟ್ಟ ಗುಡ್ಡಗಳಲ್ಲಿ ಸಂಚರಿಸಬಹುದಾದ ಹಾದಿಯನ್ನು ಗೂಗಲ್‌ ಮ್ಯಾಪ್ ತೋರಿಸಲಿದೆ.

ದೇಶದಲ್ಲಿನ ಎಲ್ಲಾ ರೈಲು ಮಾರ್ಗಗಳನ್ನು ಇನ್ನು ಮುಂದೆ ಗೂಗಲ್ ಮ್ಯಾಪ್‌ನಲ್ಲಿ ವೀಕ್ಷಣೆ ಮಾಡಬಹುದು, ರೈಲು ಬರುವ ಸಮಯ, ಅದು ತಲುಪುವ ವೇಳೆಯನ್ನು ಮ್ಯಾಪ್‌ ಮೂಲಕವೇ ನೋಡಬಹುದು. ಇದರ ಜತೆಗೆ ದೇಶದ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ
ಲಭ್ಯವಿರುವ ಸಾರ್ವಜನಿಕ ಶೌಚಾಲಯಗಳನ್ನು ಗುರುತಿಸಬಹುದು. ಈ ಹೊಸ ವೈಶಿಷ್ಟ್ಯ ಜಾರಿಗೆ ತರುವ ಬಗ್ಗೆ ಕೇಂದ್ರ ನಗರಾಭಿವೃದ್ಧಿ ಸಚಿವರ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಗೂಗಲ್ ತಿಳಿಸಿದೆ.

ರಿಟೇಲ್ ಮಳಿಗೆಗಳತ್ತ ಈಸೀಮೈ ಆ್ಯಪ್‌

ಇ–ಕಾಮರ್ಸ್‌ ತಾಣಗಳಲ್ಲಿ ವಹಿವಾಟು ನಡೆಸುವ ಗ್ರಾಹಕರನ್ನು ಮರಳಿ ಸ್ಟೋರ್ಸ್, ಮಾಲ್‌ಗಳು ಮತ್ತು ಮಳಿಗೆಗಳ ಕಡೆ ಸೆಳೆಯುವ ಪ್ರಯತ್ನವಾಗಿ ಹೊಸ ರಿಟೇಲ್‌ ಮೊಬೈಲ್‌ ಆ್ಯಪ್‌ ಅನ್ನು ಈಸಿಮೈಆ್ಯಪ್‌ ಅಭಿವೃದ್ಧಿಪಡಿಸಿದೆ.

ಆನ್‌ಲೈನ್‌ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಆ್ಯಪ್ ಅನ್ನು ವಿನ್ಯಾಸ ಮಾಡಲಾಗಿದೆ. ಇದು ಆಂಡ್ರಾಯ್ಡ್‌ ಮತ್ತು ಐಒಎಸ್‌ ಮಾದರಿಗಳಲ್ಲಿ ಲಭ್ಯವಿರಲಿದೆ. ರಿಟೇಲ್‌ ಸ್ಟೋರ್‌ಗಳು ಮತ್ತು ಮಳಿಗೆಗಳಲ್ಲಿ ಲಭ್ಯವಿರುವ ಭಾರಿ ರಿಯಾಯ್ತಿಗಳ ಮಾಹಿತಿಯನ್ನು ಗ್ರಾಹಕರು ಈಸಿಮೈಆ್ಯಪ್‌ ಮೂಲಕ ಪಡೆಯಬಹುದು.

ಉದಾಹರಣೆಗೆ ಫ್ಲಿಫ್‌ಕಾರ್ಟ್‌, ಅಮೆಜಾನ್‌ನಂತಹ ದೈತ್ಯ ಇ–ಕಾಮರ್ಸ್‌ ಕಂಪನಿಗಳು ರಿಯಾಯ್ತಿ ದರದಲ್ಲಿ ಸರಕುಗಳನ್ನು ಮಾರಾಟ ಮಾಡುತ್ತವೆ. ಅದೇ ರಿಯಾಯ್ತಿ ಸ್ಥಳೀಯ ಸ್ಟೋರ್‌ಗಳು ಮತ್ತು ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಆದರೆ ಈ ಮಾಹಿತಿ ಗ್ರಾಹಕರಿಗೆ ತಿಳಿದಿರುವುದಿಲ್ಲ. ಸ್ಥಳೀಯ ರಿಟೇಲ್‌ ಮಳಿಗೆಗಳಲ್ಲಿ ದೊರೆಯುವ ರಿಯಾಯಿತಿ ಮಾಹಿತಿಯನ್ನು ಈಸೀಮೈ ಆ್ಯಪ್‌ ನೀಡಲಿದೆ.

ಉಚಿತವಾಗಿ ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಬಳಕೆದಾರರು ಗೂಗಲ್‌ ಮ್ಯಾಪ್‌ ಮೂಲಕ ತಾವಿರುವ ಸ್ಥಳವನ್ನು ನಮೂದಿಸಬೇಕು. ನಂತರ ಬಳಕೆದಾರರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಇರುವ ರಿಟೇಲ್‌ ಸ್ಟೋರ್‌ಗಳ ಬಗ್ಗೆ ಮಾಹಿತಿ ನೀಡುತ್ತದೆ.

ಯಾವ ಯಾವ ಮಳಿಗೆಗಳಲ್ಲಿ ಎಷ್ಟು ರಿಯಾಯಿತಿ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಅನುಸರಿಸಿ ಗ್ರಾಹಕರು ಆ ಮಳಿಗೆಗಳಿಗೆ ತೆರಳಿ ಸರಕುಗಳನ್ನು ಖರೀದಿಸಬಹುದು. ಆರಂಭಿಕ ಹಂತದಲ್ಲಿ ಉಡುಪುಗಳು, ಫ್ಯಾಷನ್, ದಿನಸಿ ಸಾಮಾನುಗಳು, ಗೃಹ ಉಪಯೋಗಿ ವಸ್ತುಗಳ ಸ್ಟೋರ್‌ಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಈಸೀಮೈಆ್ಯಪ್‌ ಕಂಪನಿ ತಿಳಿಸಿದೆ.

ಇ–ಪುಸ್ತಕ ಉದ್ಯಮದಲ್ಲಿ ಹೊಸತು

ಭಾರತದ 22 ಪ್ರಾದೇಶಿಕ ಭಾಷೆಗಳಲ್ಲಿ ಆ್ಯಪ್‌ ಮೂಲಕ ಸಾಹಿತ್ಯದ ಓದುಗರಿಗೆ ಕಥೆ, ಕವನ, ಕಾದಂಬರಿಗಳು ಮತ್ತು ಪುಸ್ತಕಗಳನ್ನು ನೀಡುತ್ತಿರುವ ಮಾತೃಭೂಮಿ ಇದೀಗ ವ್ಯಾಲೆಟ್‌ ಪರಿಚಯಿಸುತ್ತಿದೆ. ಇದರ ಮೂಲಕ ವ್ಯವಹಾರ ನಡೆಸಿದರೆ ಉಚಿತವಾಗಿ ಕಾಯಿನ್‌ಗಳನ್ನು ಪಡೆಯಬಹುದು. ಈ ಕಾಯಿನ್‌ಗಳನ್ನು ಬಳಸಿ ಮಾತೃಭೂಮಿ ಆ್ಯಪ್‌ನಲ್ಲಿ ಲಭ್ಯವಿರುವ ಹೊಸ ಪುಸ್ತಕಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಈ ಆ್ಯಪ್‌ ಅನ್ನು 2015ರಲ್ಲಿ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿತ್ತು. ಗುಜರಾತ್‌ನ ಮಾತೃಭೂಮಿ ಆ್ಯಪ್‌ ಅನ್ನು ಇಲ್ಲಿಯತನಕ 1.5 ಕೋಟಿಗೂ ಹೆಚ್ಚು ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. 22 ಭಾಷೆಗಳಲ್ಲಿನ ಸಾವಿರಾರು ಸಾಹಿತ್ಯ ಪುಸ್ತಕಗಳನ್ನು ಈ ಆ್ಯಪ್ ಮೂಲಕ ಓದಬಹುದು. ಇದರ ಜತೆಗೆ ಯುವ ಬರಹಗಾರರು ಈ ವೇದಿಕೆಯಲ್ಲಿ ಪುಸ್ತಕಗಳನ್ನು ಪ್ರಕಟಿಸಬಹುದು. ಸಣ್ಣ ಕಥೆ, ಕವನ, ಕಾದಂಬರಿಗಳನ್ನು ರಚಿಸಿ ಉಚಿತವಾಗಿ ಪ್ರಕಟಿಸಬಹುದು.
ಈ ಪ್ರಯೋಗ ದೇಶದ ಇ–ಪುಸ್ತಕ ಉದ್ಯಮದಲ್ಲೇ ಹೊಸತು ಎಂದು ಮಾತೃಭೂಮಿ ಕಂಪೆನಿಯ ಮುಖ್ಯಸ್ಥರಾದ ಮಹೇಂದ್ರ ಶರ್ಮಾ ತಿಳಿಸಿದ್ದಾರೆ.

‘ಅಲೆಕ್ಸಾ’ಗಳಿಗೆ ಪ್ರಾದೇಶಿಕ ಭಾಷೆಗಳ ಕಲಿಕೆ

ಅಮೆಜಾನ್‌ ಅಭಿವೃದ್ಧಿಪಡಿಸಿರುವ ಡಿಜಿಟಲ್‌ ಸಹಾಯಕಿ ಅಲೆಕ್ಸಾಗಳಿಗೆ ಬಳಕೆದಾರರು ಇನ್ನು ಮುಂದೆ ಕನ್ನಡವೂ ಸೇರಿದಂತೆ ಸ್ಥಳೀಯ ಪ್ರಾದೇಶಿಕ ಭಾಷೆಗಳನ್ನು ಕಲಿಸಬಹುದು. ಕೃತಕ ಬುದ್ಧಿಮತ್ತೆಯಿಂದ (ಎಐ) ಕಾರ್ಯನಿರ್ವಹಿಸುವ ಅಲೆಕ್ಸಾಳ ಭಾಷೆ ಗುರುತಿಸುವ ಸಾಮರ್ಥ್ಯವನ್ನು ಈಗ ಹೆಚ್ಚಿಸಲಾಗಿದೆ.

ದಿನೇ, ದಿನೇ ಅಲೆಕ್ಸಾ ಹೆಚ್ಚೆಚ್ಚು ಚುರುಕಾಗುತ್ತಿದ್ದಾಳೆ. ಬಳಕೆದಾರರು ‘ಕ್ಲೆವೊ ಸ್ಕಿಲ್‌’ (Cleo skill) ಬಳಸಿ ಅಲೆಕ್ಸಾಳ ಜತೆ ಸಂವಹನ ನಡೆಸಬಹುದು. ಅಲೆಕ್ಸಾಳ ಇಂಗ್ಲಿಷ್‌ ಹೇಳಿಕೆಗೆ ಕನ್ನಡ, ಮರಾಠಿ, ಹಿಂದಿ, ತೆಲುಗು ಭಾಷೆಗಳಲ್ಲಿ ಪ್ರತಿಕ್ರಿಯಿಸಬೇಕು. ಇದರಿಂದ ದೀರ್ಘಾವಧಿಯಲ್ಲಿ  ಇತರ ಭಾಷೆಗಳನ್ನು ಗುರುತಿಸುವ ‘ಅಲೆಕ್ಸಾ’ಳ ಸಾಮರ್ಥ್ಯ ವೃದ್ಧಿಯಾಗುತ್ತದೆ. ಅಲೆಕ್ಸಾ ಆ್ಯಪ್‌ನಲ್ಲಿನ ಸ್ಕಿಲ್ಸ್‌ ವಿಭಾಗದಲ್ಲಿ ‘ಕ್ಲೆವೊ’ಗೆ ಚಾಲನೆ ನೀಡಬಹುದು.

ಟ್ವಿಟರ್‌ನ ಲಘು ಆ್ಯಪ್‌

ಟ್ವಿಟರ್‌, ಲೈಟ್‌ ಆಂಡ್ರಾಯ್ಡ್‌ ಆ್ಯಪ್‌ ಅನ್ನು ಭಾರತವೂ ಸೇರಿದಂತೆ 21 ದೇಶಗಳಲ್ಲಿ ಪರಿಚಯಿಸಿದೆ. ಕಡಿಮೆ ದತ್ತಾಂಶ ಬಳಕೆ, ತ್ವರಿತ ಬಳಕೆ ಮತ್ತು ಕಡಿಮೆ ಸ್ಥಳಾವಕಾಶ ಬಳಕೆ ಇದರ ವೈಶಿಷ್ಟ್ಯಗಳಾಗಿವೆ.

ದೇಶದ ಬಹುಭಾಗದಲ್ಲಿ ಈಗಲೂ ಬಳಕೆಯಲ್ಲಿ ಇರುವ 2ಜಿ ಮತ್ತು 3ಜಿ ಸಂಪರ್ಕ ಜಾಲದಲ್ಲಿ ಸುಲಭವಾಗಿ ಬಳಸುವ ಉದ್ದೇಶಕ್ಕೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಫೇಸ್‌ಬುಕ್‌ ಲೈಟ್‌, ಯೂಟ್ಯೂಬ್‌ಗೊ ಬಗೆಯಲ್ಲಿ, ಟ್ವಿಟರ್‌ ಲೈಟ್‌ ಬಳಕೆಯಲ್ಲಿ ಗ್ರಾಹಕರು ಕಡಿಮೆ ದತ್ತಾಂಶ ಬಳಸಬಹುದು. ’3ಎಂಬಿ’ಯ ಇದನ್ನು  ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು