ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಸ್ಮಾರ್ಟ್ ಫೋನ್ ಸೆನ್ಸರ್‌: ಕನ್ನಡಿಗನ ಕೊಡುಗೆ

ಶಿರಸಿಯ ಪ್ರದೀಪ ಹೆಗಡೆ ಸಂಶೋಧನೆಗೆ ಅಂತರರಾಷ್ಟ್ರೀಯ ಪೇಟೆಂಟ್
Last Updated 7 ಸೆಪ್ಟೆಂಬರ್ 2020, 2:30 IST
ಅಕ್ಷರ ಗಾತ್ರ

ಮೊಬೈಲ್ ಫೋನ್ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಕರೆ ಮಾಡಿ ಕ್ಷೇಮ–ಕುಶಲ ವಿಚಾರಿಸಲಷ್ಟೇ ಸೀಮಿತವಾಗಿರುವ ಮೊಬೈಲ್‌ ಫೋನ್‌, ಯುವ ಪೀಳಿಗೆಗೆ ಆಕರ್ಷಿತವಲ್ಲ. ಹೀಗಾಗಿ, ಈಗೇನಿದ್ದರೂ ಸ್ಮಾರ್ಟ್‌ ಫೋನ್ ಹವಾ. 21ನೇ ಶತಮಾನದಲ್ಲಿ ತಲೆಮಾರಿನ ಭೇದವಿಲ್ಲದೆ, ಜನರನ್ನು ಅತಿ ಹೆಚ್ಚು ಸೆಳೆದಿದ್ದು, ಮರುಳು ಮಾಡಿದ್ದು ಸ್ಮಾರ್ಟ್‌ ಫೋನ್‌ಗಳೇ.

ಕೋವಿಡ್–19 ಸಾಂಕ್ರಾಮಿಕ ಕಾಯಿಲೆಯ ದುರಿತ ಕಾಲದಲ್ಲಿ ಜನರು ಆತಂಕ ಮರೆತು, ಆತ್ಮೀಯರೊಂದಿಗೆ ಹರಟಲು, ಹಾಸ್ಯದ ತುಣಕುಗಳನ್ನು ನೋಡಿ ದುಗುಡ ನಿವಾರಿಸಿಕೊಳ್ಳಲು ಸಹಕಾರಿಯಾಗಿದ್ದು ಈ ಸ್ಮಾರ್ಟ್ ಫೋನ್‌ಗಳೇ. ವಿದ್ಯಾರ್ಥಿಗಳ ಆನ್‌ಲೈನ್ ಕ್ಲಾಸ್‌ಗಳು, ವೆಬಿನಾರ್‌ಗಳು, ಸಭೆಗಳು ಎಲ್ಲಕ್ಕೂ ಸ್ಮಾರ್ಟ್‌ ಫೋನ್‌ ಸೂತ್ರಧಾರನಂತೆ ಕೆಲಸ ಮಾಡುತ್ತಿದೆ. ಇದು ಕೈಕೊಟ್ಟರೆ, ಅಂದಿನ ಎಲ್ಲ ಯೋಜನೆಗಳೂ ನಿಶ್ಚಲವಾಗಿಬಿಡುತ್ತವೆ.

ಸ್ಮಾರ್ಟ್‌ ಫೋನ್‌ಗಳೇ ‘ಜೀವನ ನಿಯಂತ್ರಕ’ಗಳಾಗಿರುವ ಸಂದರ್ಭದಲ್ಲಿ, ಅವುಗಳ ಕಾರ್ಯಕ್ಷಮತೆ, ವಿನ್ಯಾಸ, ಸುಧಾರಿತ ತಂತ್ರಜ್ಞಾನವನ್ನು ಗ್ರಾಹಕರು ಸೂಕ್ಷ್ಮವಾಗಿ ಗಮನಿಸಲು ಶುರು ಮಾಡಿದ್ದಾರೆ. ಸದಾ ಸಂಗಾತಿಯಾಗಿರುವ ಸ್ಮಾರ್ಟ್‌ ಫೋನ್‌ನ ಸ್ಕ್ರೀನ್ ಕಣ್ಣಿಗೆ ಹಿತ ಕೊಡಬೇಕೆಂದು ಬಯಸುತ್ತಾರೆ.

ಬಳಕೆದಾರರ ಮನದಾಳ ಅರಿತಿರುವ ಎಂಜಿನಿಯರ್ ‍ಪ್ರದೀಪ ಹೆಗಡೆ ಅವರು, ಸ್ಮಾರ್ಟ್ ಫೋನ್‌ಗಳ ಸ್ಕ್ರೀನ್‌ ಸೆನ್ಸರ್‌ನಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಿ, ಗ್ರಾಹಕಸ್ನೇಹಿಯಾಗಿ ರೂಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಪ್ರದೀಪ ಹೆಗಡೆ, ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿ, ಅಮೆರಿಕದ ನ್ಯೂಯಾರ್ಕ್‌ನ ಸಿರಾಕ್ಯೂಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರು. ಪ್ರಸ್ತುತ ಅವರು, ಸ್ಮಾರ್ಟ್ ಫೋನ್ ಹಾಗೂ ಉದ್ದಿಮೆಗಳಲ್ಲಿ ಉಪಯೋಗಿಸುವ ಸೆನ್ಸರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ, ಅಮೆರಿಕದ ‘ams AG’ ಸಂಸ್ಥೆಯ ಸಾಫ್ಟ್‌ವೇರ್ ತಂಡದ ಮುಖ್ಯಸ್ಥರು.

ಪ್ರದೀಪ ಹೆಗಡೆ ನಡೆಸಿರುವ ಸಂಶೋಧನೆ ಏನು?

ಸ್ಮಾರ್ಟ್ ಫೋನ್‌ಗಳು ವಿವಿಧ ರೀತಿಯ ಪ್ರಚೋದನೆಗಳಿಂದ ಕಾರ್ಯನಿರ್ವಹಿಸುತ್ತವೆ. ಹೀಗಾಗಿ, ಇವುಗಳ ಸಮರ್ಥ ಕಾರ್ಯನಿರ್ವಹಣೆಗೆ 10ರಿಂದ 15 ಬಗೆಯ ಸೆನ್ಸರ್‌ಗಳನ್ನು ಅಳವಡಿಸಲಾಗುತ್ತದೆ. ಇದರಲ್ಲಿ ಪ್ರಾಕ್ಸಿಮಿಟಿ ಸೆನ್ಸರ್ ಹಾಗೂ ಎಂಬಿಎನ್ಸ್ ಲೈಟ್ ಸೆನ್ಸರ್‌ಗಳನ್ನು ಮೊಬೈಲ್ ಸೆಟ್‌ನ ಮುಂಭಾಗದಲ್ಲಿರುತ್ತವೆ. ಸೆನ್ಸರ್ ಅಳವಡಿಸಿದ ಜಾಗ ಸಾಮಾನ್ಯವಾಗಿ ಸ್ಕ್ರೀನ್ ವಿಸ್ತಾರದ ಹೊರಗೆ ಇರುತ್ತದೆ. ಇತ್ತೀಚಿನ ಸೆಟ್‌ಗಳು ವಿಸ್ತಾರವಾದ ಸ್ಕ್ರೀನ್ ಹೊಂದಿರುತ್ತವೆ.

ಸ್ಕ್ರೀನ್ ವಿಸ್ತಾರ ಹೆಚ್ಚಾದಾಗ ಸೆನ್ಸರ್ ಅಳವಡಿಸಲು ಜಾಗ ಇರುವುದಿಲ್ಲ. ಸೆನ್ಸರ್‌ ಅನ್ನು ಸ್ಮಾರ್ಟ್ ಫೋನ್‌ ಸೆಟ್‌ನ ಹಿಂಭಾಗದಲ್ಲಿಟ್ಟರೆ, ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಈ ಸಮಸ್ಯೆಗೆ ಪ್ರದೀಪ ಹೆಗಡೆ ಪರಿಹಾರ ಕಂಡುಹಿಡಿದಿದ್ದಾರೆ. ಅವರು ನಡೆಸಿರುವ ‘OLED (organic light emitting diode) ಹಿಂದೆ ಪ್ರಕಾಶ ಸೆನ್ಸರ್ ಇಡುವ’ ಸಂಶೋಧನೆಯನ್ನು ಈಗ ಸ್ಮಾರ್ಟ್ ಫೋನ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಎರಡು ವರ್ಷ ಶ್ರಮವಹಿಸಿ, ಅವರು ಕಂಡುಹಿಡಿದ ಈ ತಂತ್ರಜ್ಞಾನಕ್ಕೆ, ಅಂತರರಾಷ್ತ್ರೀಯ ಪೇಟೆಂಟ್ ದೊರೆತಿದೆ.

ಈ ತಂತ್ರಜ್ಞಾನವನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿ, ಸ್ಯಾಮ್‌ಸಂಗ್ ನೋಟ್ ಸರಣಿ, ಸ್ಯಾಮ್‌ಸಂಗ್ A ಸರಣಿ, ಹುವೈ ಮೇಟ್ ಸರಣಿ, ಒಪ್ಪೊ, ವಿವೋ, ಒನ್ ಪ್ಲಸ್ ಹಾಗೂ ಇನ್ನಿತರ ಕಂಪನಿಗಳ ಸ್ಮಾರ್ಟ್ ಫೋನ್‌ಗಳಲ್ಲಿ ಅಳವಡಿಸಲಾಗಿದೆ.

ತಾಂತ್ರಿಕ ಮಾಹಿತಿ ಏನು?:

ಸ್ಮಾರ್ಟ್ ಫೋನ್‌ಗಳಲ್ಲಿ ಬಳಕೆಯಾಗುವ ತಾಂತ್ರಿಕತೆಯ ಬಗ್ಗೆ ಪ್ರದೀಪ ಹೆಗಡೆ ತಾಂತ್ರಿಕವಾಗಿ ವಿವರಿಸಿದ್ದು ಹೀಗೆ–

‘ಸ್ಮಾರ್ಟ್ ಫೋನಿನ ಸೂಕ್ಷ್ಮಗ್ರಾಹಿ ಸ್ಕ್ರೀನ್‌ಗೆ ದೇಹದ ಯಾವುದೇ ಭಾಗ ಸ್ವಲ್ಪ ತಾಗಿದರೂ ಅದರ ಕಾರ್ಯತೆಯಲ್ಲಿ ಬದಲಾವಣೆಗಳಾಗುತ್ತವೆ. ಕಾಲ್ ಮಾಡುವಾಗ ಪ್ರಾಕ್ಸಿಮಿಟಿ ಸೆನ್ಸರ್ ಸನಿಹ ಬಂದ ವಸ್ತು(ಉದಾ: ಕಿವಿ)ವನ್ನು ಗ್ರಹಿಸಿ ಆಪರೇಟಿಂಗ್ ಸಿಸ್ಟಮ್‌ಗೆ ಸಂಜ್ಞೆ ರವಾನಿಸುವುದರಿಂದ, ಸ್ಕ್ರೀನಿಗೆ ತಗುಲಿದ ಉಳಿದೆಲ್ಲ ಕಾರ್ಯಗಳನ್ನು (ಉದಾ: ಬೆರಳು, ಮುಖದ ಚರ್ಮದ ಸ್ಪರ್ಶ) ತಟಸ್ಥಗೊಳಿಸುವ ವಿಶಿಷ್ಟ ವ್ಯವಸ್ಥೆ ಇರುತ್ತದೆ. ಹೀಗಿಲ್ಲದಿದ್ದರೆ, ಕಾಲ್ ಮಾಡುವುದೇ ಕಷ್ಟವಾಗುತ್ತಿತ್ತು.

‘ಎಂಬಿಎನ್ಸ್ ಲೈಟ್ ಸೆನ್ಸರ್ ಪ್ರಕಾಶದ ತೀವ್ರತೆಯನ್ನು ಗುರುತಿಸುತ್ತದೆ. ಈ ಮಾಹಿತಿ ಸ್ಕ್ರೀನಿನ ಪ್ರಭೆಯನ್ನು ಏರಿಳಿತ ಮಾಡುವಲ್ಲಿ ಸಹಾಯಕ. ಸೂರ್ಯನ ಪ್ರಕಾಶ ಹೆಚ್ಚಿಗೆ ಇದ್ದಾಗ, ನಮಗೆ ಅಗತ್ಯವಿರುವ ಮಾಹಿತಿ ಸ್ಕ್ರೀನ್ ಮೇಲೆ ಸ್ಪಷ್ಟವಾಗಿ ಕಾಣುವಂತೆ ಸ್ಕ್ರೀನ್ ಪ್ರಭೆಯನ್ನು ಏರಿಸುತ್ತದೆ. ಕತ್ತಲೆ ಅಥವಾ ಮಂದಬೆಳಕಿನಲ್ಲಿ ಪ್ರಭೆಯನ್ನು ಕಮ್ಮಿ ಮಾಡಿ, ಬ್ಯಾಟರಿ ಖರ್ಚನ್ನು ಕಡಿತಗೊಳಿಸುತ್ತದೆ. ಇದರಿಂದ ದೃಶ್ಯಾನುಭವ ಹಿತವಾಗುತ್ತದೆ.

‘ಹೊಸ ಬಿಜೆಲ್ ರಹಿತ ಫೋನ್‌ಗಳ ವಿನ್ಯಾಸ ಹಾಗೂ ಅವುಗಳನ್ನು ಸ್ಕ್ರೀನಿನ ತುದಿಯವರೆಗೂ ಬಳಸಿಕೊಳ್ಳುವ ಪದ್ಧತಿಯಿಂದಾಗಿ ಸೆನ್ಸರ್ ಅಳವಡಿಸಲು ಸ್ಥಳವೇ ಇಲ್ಲದಂತಾಗಿದೆ. ಆದ್ದರಿಂದ ಸೆನ್ಸರ್‌ಗಳನ್ನು OLED (ಜೈವಿಕ ಬೆಳಕು ಸೂಸುವ ಡಿಯೋಡ್) ಸ್ಕ್ರೀನಿನ ಹಿಂದೆ ಅಳವಡಿಸಲಾಗುತ್ತಿದೆ. ಇದರಿಂದ ಕೆಲವು ಸಮಸ್ಯೆಗಳು ಎದುರಾಗಿವೆ. OLED ಸ್ಕ್ರೀನ್ ಹಿಂದೆ ಸೆನ್ಸರ್ ಇಡುವುದರಿಂದ ಸ್ಕ್ರೀನ್ ಪ್ರಸಾರವಾದ ಬೆಳಕನ್ನು ಕುಂದಿಸುತ್ತದೆ. ಇದರಿಂದ, ಪ್ರಾಕ್ಸಿಮಿಟಿ ಸೆನ್ಸಿಂಗ್ ಹಾಗೂ ಎಂಬಿಎನ್ಸ್ ಲೈಟ್ ಸೆನ್ಸಿಂಗ್ ಇನ್ನೂ ಜಟಿಲವಾಗಿ ಬಿಡುತ್ತದೆ.

‘ಪ್ರಾಕ್ಸಿಮಿಟಿ ಸೆನ್ಸರ್ ಪ್ರಕಾಶದ ಸ್ಪಂದನೆಗಳನ್ನು (pulses) ಕಳುಹಿಸಿ, ವಸ್ತುವಿನಿಂದ ಪ್ರತಿಬಿಂಬಿಸಿದ ಬೆಳಕಿನ ತೀವ್ರತೆಗೆ ಅನುಗುಣವಾಗಿ ವಸ್ತು (ಉದಾ: ಸ್ಪರ್ಶಿಸುತ್ತಿರುವ ದೇಹದ ಅಂಗ) ಹತ್ತಿರವಿದೆಯೋ ಅಥವಾ ದೂರವಿದೆಯೋ ಎಂಬುದನ್ನು ನಿರ್ಧರಿಸುತ್ತದೆ. ಪ್ರಾಕ್ಸಿಮಿಟಿ ಸೆನ್ಸರನ್ನು OLED ಹಿಂದೆ ಅಳವಡಿಸುವುದರಿಂದ OLED ಸೆನ್ಸರನ್ನು ಪ್ರೇರೇಪಿಸಿದಂತಾಗಿ, ವಿಕಾರವಾದ ಚಿತ್ರ ಮೂಡುತ್ತದೆ.

‘ಆದರೆ, ಸೆನ್ಸರ್ ಅಳವಡಿಸುವ ಸ್ಥಾನ ನಿರ್ಧರಿಸುವಲ್ಲಿ ಮತ್ತು OLED ಸ್ಕ್ರೀನಿನ ಹೆಚ್ಚಿನ ಭಾಗಕ್ಕೆ ಬೆಳಕಿನ ಶಕ್ತಿ ಹಂಚಿಕೆಯಾಗುವಂತೆ ಮಾಡುವಲ್ಲಿ ams AG ಸಂಸ್ಥೆ ಯಶಸ್ವಿಯಾಗಿದೆ.

‘ನಮ್ಮ ಸಂಶೋಧನೆಯಿಂದ, ಸ್ಕ್ರೀನ್ ಸೂಸುವ ಬೆಳಕು ಮತ್ತು ಪರಿಸರದ ಬೆಳಕನ್ನು ಪ್ರತ್ಯೇಕಿಸಲು ಸಾಧ್ಯವಾಗಿದೆ. ಸಂಖ್ಯಾತ್ಮಕ ಗುಣಕೈಗಳಿಂದ (algorithms) OLED ಸ್ಕ್ರೀನಿನ ಕೆಲವು ಗುಣಲಕ್ಷಣಗಳು ಹಾಗೂ ಪರಿಸರದ ಪ್ರಕಾಶ ವರ್ತನೆಗಳನ್ನು ಬೇರ್ಪಡಿಸಲು ಸಾಧ್ಯವಾಗಿದೆ. ಅಲ್ಲದೇ, ಅವುಗಳನ್ನು ಸಂಖ್ಯಾರೂಪದಲ್ಲಿ ವಸ್ತುನಿಷ್ಠವಾಗಿ ತೋರಿಸಬಹುದು. ಪ್ರಸ್ತುತ, ಪ್ರಕಾಶ ಸೆನ್ಸರ್‌ಗಳನ್ನು OLED ಬೆನ್ನಿಗೆ ಅಳವಡಿಸುವ ಎಲ್ಲ ಸ್ಮಾರ್ಟ್ ಫೋನ್‌ಗಳಲ್ಲಿಯೂ ಈ ಸಂಖ್ಯಾತ್ಮಕ ಗುಣಕಗಳನ್ನು ಉಪಯೋಗಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT