ಶನಿವಾರ, ಜುಲೈ 31, 2021
20 °C
ಫೋನ್, ಇಂಟರ್ನೆಟ್ ಸಂಪರ್ಕವಿದ್ದರಾಯಿತು, ಉಚಿತವಾಗಿ ತಿಳಿಯಬಹುದು

ಸ್ಮಾರ್ಟ್ ಫೋನ್‌ಗಳಲ್ಲಿ ಆಮ್ಲಜನಕ ಪ್ರಮಾಣ ತೋರಿಸುವ ಆ್ಯಪ್: ಬಳಕೆಯಲ್ಲಿರಲಿ ಎಚ್ಚರ

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

Prajavani

ಕೋವಿಡ್-19 ಸಂಕಷ್ಟದ ಈ ಕಾಲದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಉಂಟಾದ ಸಾವುನೋವುಗಳ ಬಗ್ಗೆ ಕೇಳಿದ್ದೇವೆ. ಸದಾ ಕಾಲವೂ ನಮ್ಮ ರಕ್ತದ ಆಮ್ಲಜನಕವನ್ನು ಪರಿಶೀಲಿಸುತ್ತಿರಬೇಕು ಎಂಬ ವೈದ್ಯರ ಸಲಹೆಯಿಂದಾಗಿ, ಆಕ್ಸಿಮೀಟರ್ ಖರೀದಿಗಾಗಿ ಜನರು ಮುಗಿಬಿದ್ದಿದ್ದಾರೆ. ಬೇಡಿಕೆ ಹೆಚ್ಚಿದೆ, ಪೂರೈಕೆ ಕಡಿಮೆಯಾಗಿದೆ. ಇದೇ ನೆಪವನ್ನಾಗಿಸಿ ಹೇಳಹೆಸರಿಲ್ಲದ ಕಂಪನಿಗಳೆಲ್ಲವೂ ಆಕ್ಸಿಮೀಟರ್ ಹೆಸರಿನಲ್ಲಿ ಕೆಲವು ನಕಲಿ ಯಂತ್ರಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿ ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡಿವೆ. ಆಕ್ಸಿಮೀಟರ್ ಬೆಲೆಯೂ ಗಗನಕ್ಕೇರಿದೆ. ಹೀಗಾಗಿ, ಚಿಕಿತ್ಸೆಗಾಗಿ ಮೊದಲೇ ಹೈರಾಣಾಗಿರುವ ಜನಸಾಮಾನ್ಯರೇನು ಮಾಡಬೇಕು? ಅದಕ್ಕೆ ಪರ್ಯಾಯವಾಗಿ ಮೊಬೈಲ್ ಫೋನ್‌ನಲ್ಲೇ ನಮ್ಮ ದೇಹದ ರಕ್ತದ ಆಮ್ಲಜನಕದ ಪ್ರಮಾಣವೆಷ್ಟೆಂಬುದನ್ನು ತಿಳಿದುಕೊಳ್ಳಬಹುದು. ಅದೂ ಉಚಿತವಾಗಿ. ಆದರೆ, ಈ ರೀತಿಯ ಆ್ಯಪ್‌ಗಳ ಬಳಕೆ ಬಗ್ಗೆ ತಜ್ಞರು ಎಚ್ಚರಿಕೆಯನ್ನೂ ನೀಡಿದ್ದಾರೆ. ಬಯೋಮೆಟ್ರಿಕ್ ಮಾಹಿತಿಗಳು ಸೋರಿಕೆಯಾಗುವ ಅಪಾಯವಿದೆ ಎಂಬುದು ತಜ್ಞರು ನೀಡುವ ಎಚ್ಚರಿಕೆ.

ಇತ್ತೀಚಿನ ಅಪ್‌ಡೇಟ್: ಇದೀಗ ಕೇರ್‌ಪ್ಲಿಕ್ಸ್ ವೈಟಲ್ಸ್ (CarePlix Vitals) ಹೆಸರಿನ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸದ್ಯ ಲಭ್ಯವಾಗುತ್ತಿಲ್ಲ. ಆ್ಯಪಲ್‌ನ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಆದರೆ, ಆಂಡ್ರಾಯ್ಡ್ ಫೋನ್‌ಗಳಿಗಾಗಿರುವ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಜನರ ಬಳಕೆ ಹೆಚ್ಚಳದಿಂದಾಗಿ ಆ್ಯಪ್ ಕ್ರ್ಯಾಶ್ ಆಗಿದ್ದು, ಶೀಘ್ರದಲ್ಲೇ ಸರಿಪಡಿಸಿ, ಪ್ಲೇ ಸ್ಟೋರ್‌ಗೆ ಮತ್ತೆ ಅಳವಡಿಸುವುದಾಗಿ ಕಂಪನಿಯು ಹೇಳಿಕೊಂಡಿದೆ.

ಈ ಆ್ಯಪ್ ಅನ್ನು ಅಭಿವೃದ್ದಿಪಡಿಸಿದ್ದು ಕೇರ್‌ಪ್ಲಿಕ್ಸ್ ಹೆಲ್ತ್‌ಕೇರ್‌ನ ಅಮೆರಿಕ ಮತ್ತು ಕೇರ್‌ನೌ ಹೆಲ್ತ್‌ಕೇರ್‌ನ ಕೋಲ್ಕತಾ ಘಟಕ. ಈ ಆ್ಯಪ್ ಮೂಲಕ ನಮ್ಮ ದೇಹದಲ್ಲಿರುವ ರಕ್ತದ ಆಮ್ಲಜನಕ ಪ್ರಮಾಣ, ಹೃದಯ ಬಡಿತದ ವೇಗ ಮತ್ತು ಉಸಿರಾಟದ ವೇಗವನ್ನು ಅಳೆಯಬಹುದಾಗಿದೆ. ಕೇವಲ ಒಂದು ಸ್ಮಾರ್ಟ್ ಫೋನ್ ಹಾಗೂ ಇಂಟರ್‌ನೆಟ್ ಸಂಪರ್ಕವಿದ್ದರೆ ಸಾಕಾಗುತ್ತದೆ.

ಹೇಗೆ ಕೆಲಸ ಮಾಡುತ್ತದೆ?
ಸ್ಮಾರ್ಟ್ ಫೋನ್‌ಗಳಲ್ಲಿರುವ ಕ್ಯಾಮೆರಾ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಫ್ಲ್ಯಾಶ್ ಲೈಟ್ ಬಳಸಿಕೊಂಡು ಈ ಆ್ಯಪ್ ಕೆಲಸ ಮಾಡುತ್ತದೆ. ನಾವು ಮಾಡಬೇಕಾದುದಿಷ್ಟೇ. ಆ್ಯಪ್ ತೆರೆದು, ಹೆಸರು, ಜನ್ಮದಿನಾಂಕ ಹಾಗೂ ಇಮೇಲ್ ವಿಳಾಸದೊಂದಿಗೆ ನೋಂದಣಿ ಮಾಡಿಕೊಂಡು, ಪಾಸ್‌ವರ್ಡ್ ಸೆಟ್ ಮಾಡಿಕೊಂಡರಾಯಿತು. ನಂತರ, ತೆರೆಯುವ ಸ್ಕ್ರೀನ್ ಮೇಲೆ, ನಾಲ್ಕು ಆಯ್ಕೆಗಳು ಗೋಚರಿಸುತ್ತವೆ. ವೈಟಲ್ಸ್ (ಜೀವಚೈತನ್ಯಗಳ) ರೆಕಾರ್ಡ್, ವೈಟಲ್ಸ್ ಚರಿತ್ರೆ, ವೈಟಲ್ಸ್ ಅನಲಿಟಿಕ್ಸ್ (ವಿಶ್ಲೇಷಣೆ) ಹಾಗೂ ಅಪ್‌ಗ್ರೇಡ್ ಮಾಡುವ ಆಯ್ಕೆ (ಇದನ್ನು ಕೋವಿಡ್-19 ಸಂಕಷ್ಟಗಳಿಂದಾಗಿ ಈಗ ಉಚಿತವಾಗಿಯೇ ಒದಗಿಸಲಾಗುತ್ತಿದೆ).

ಆಕ್ಸಿಮೀಟರ್ ಅಥವಾ ಸ್ಮಾರ್ಟ್ ವಾಚ್‌ಗಳಂತಹಾ ಸಾಧನಗಳು ಬಳಸುವ ಫೋಟೋಪ್ಲೆಥಿಸ್ಮೋಗ್ರಫಿ ಅಥವಾ ಪಿಪಿಜಿ ತಂತ್ರಜ್ಞಾನವನ್ನು ಈ ಆ್ಯಪ್ ಬಳಸುತ್ತದೆ. ಕೇವಲ ವ್ಯತ್ಯಾಸವೆಂದರೆ, ಆ ಸಾಧನಗಳು ಇನ್‌ಫ್ರಾರೆಡ್ ಕಿರಣಗಳನ್ನು ಬಳಸಿ ರಕ್ತದ ಆಮ್ಲಜನಕ ಮುಂತಾದವುಗಳನ್ನು ಅಳೆದರೆ, ಆ್ಯಪ್ ಬಳಸುವುದು ಫ್ಲ್ಯಾಶ್ ಬೆಳಕನ್ನು. ಬೆರಳಿನ ಮೂಲಕ ಹಾದುಹೋಗುವ ಬೆಳಕಿನ ತೀಕ್ಷ್ಣತೆ ಆಧಾರದಲ್ಲಿ ಈ ಅಳತೆಗಳು ದೊರೆಯುತ್ತವೆ. ಕ್ಯಾಮೆರಾ ಹಾಗೂ ಫ್ಲ್ಯಾಶ್ ಲೈಟಿನ ಮೇಲೆ ಕೈಬೆರಳು ಇರಿಸಿ, ಈ ಆ್ಯಪ್‌ನಲ್ಲಿ 'ರೆಕಾರ್ಡ್ ವೈಟಲ್ಸ್' ಎಂಬ ಬಟನ್ ಒತ್ತಿದರಾಯಿತು. ಬೆರಳು ಸರಿಯಾಗಿ ಇರಿಸಲಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ನೆರವಾಗುತ್ತದೆ. ಒಟ್ಟಿನಲ್ಲಿ 30-40 ಸೆಕೆಂಡುಗಳಲ್ಲಿ ಆಮ್ಲಜನಕ, ಹೃದಯಬಡಿತ, ಉಸಿರಾಟದ ಪ್ರಮಾಣವು ಅಲ್ಲೇ ಕಾಣಿಸಿಕೊಳ್ಳುತ್ತದೆ. ಹೆಚ್ಚು ನಿಖರವಾಗಿ ತಿಳಿದುಕೊಳ್ಳಲು, ಕುಳಿತುಕೊಂಡು, ನಿಂತುಕೊಂಡು, ನಡೆಯುವಾಗ, ಓಡುವಾಗ ಕೂಡ ಇದನ್ನು ಪರೀಕ್ಷಿಸಿಕೊಳ್ಳಬಹುದು.

ಮಿತಿಗಳು
ಕೆಲವು ಒಂದು ಅಥವಾ ಎರಡು ಕ್ಯಾಮೆರಾ ಲೆನ್ಸ್ ಇರುವ ಫೋನ್‌ಗಳಲ್ಲಿ ಸುಲಭವಾಗಿ ಬೆರಳು ಇರಿಸಬಹುದು. ಆದರೆ, ಈಗಿನ ಹೊಸ ಮೊಬೈಲ್‌ಗಳಲ್ಲಿರುವ ತ್ರಿವಳಿ ಅಥವಾ ನಾಲ್ಕು ಲೆನ್ಸ್‌ಗಳಿರುವ ಕ್ಯಾಮೆರಾ ಮತ್ತು ಫ್ಲ್ಯಾಶ್ ಮೇಲೆ ಬೆರಳು ಇರಿಸುವುದು ಕಷ್ಟವಾದರೂ, ಮೊದಲ (ಪ್ರಧಾನ) ಕ್ಯಾಮೆರಾ ಲೆನ್ಸ್ ಕವರ್ ಆದರೆ ಸಾಕಾಗುತ್ತದೆ. ಇನ್ನು ಕೆಲವು ಮೊಬೈಲ್‌ನಲ್ಲಿ ಫ್ಲ್ಯಾಶ್ ಬೆಳಕಿನ ಪ್ರಖರತೆಯಿಂದ ಉಂಟಾಗುವ ಬಿಸಿ ಎಷ್ಟಿತ್ತೆಂದರೆ, ಐದೇ ಸೆಕೆಂಡುಗಳಲ್ಲಿ ಬೆರಳನ್ನು ಹಿಂತೆಗೆದುಕೊಳ್ಳಬೇಕಾಗಿ ಬಂತು.

ಎಚ್ಚರಿಕೆ ಬೇಕು
ಈ ಆ್ಯಪ್ ಜೀವಚೈತನ್ಯಗಳ ಒಂದು ಅಂದಾಜು ನೋಟವನ್ನಷ್ಟೇ ನೀಡುತ್ತದೆ (ಶೇ.95ರಷ್ಟು ನಿಖರವಾಗಿರುತ್ತದೆ) ಮತ್ತು ಹೆಚ್ಚೇನೂ ಸಮಸ್ಯೆಯಿಲ್ಲದ ರೋಗಿಗಳಷ್ಟೇ ತಪಾಸಣೆಗಾಗಿ ಬಳಸಿಕೊಳ್ಳಬಹುದು. ಆಕ್ಸಿಮೀಟರ್ ರೀಡಿಂಗ್‌ಗೂ ಈ ಆ್ಯಪ್ ಮೂಲಕ ದೊರೆತ ಫಲಿತಾಂಶಕ್ಕೂ ಹೆಚ್ಚೇನೂ ವ್ಯತ್ಯಾಸ ಕಂಡಿಲ್ಲ. ಆದರೆ, ತೀವ್ರತಮ ಕಾಯಿಲೆಯಿದ್ದವರು ಇದನ್ನು ಅವಲಂಬಿಸಬಾರದು. ಯಾವುದಕ್ಕೂ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಬಯೋಮೆಟ್ರಿಕ್ ಮಾಹಿತಿ ದುರುಪಯೋಗದ ಎಚ್ಚರಿಕೆ

ಆಕ್ಸಿಮೀಟರ್ ಆ್ಯಪ್ ಹೆಸರುಗಳಲ್ಲಿಯೂ ಸೈಬರ್ ವಂಚಕರು ತಮ್ಮ ಕೈಚಳಕ ಮೆರೆಯಲಾರಂಭಿಸಿದ್ದಾರೆ. ಇದರಲ್ಲಿ ಕ್ಯಾಮೆರಾ ಹಾಗೂ ಫ್ಲ್ಯಾಶ್ ಮೂಲಕವಾಗಿ ನಮ್ಮ ಬಯೋಮೆಟ್ರಿಕ್ ಮಾಹಿತಿಯೂ ಒಳಗೊಂಡಿರುವುದರಿಂದ, ವಂಚಕರು ನಕಲಿ ಆ್ಯಪ್‌ಗಳ ಮೂಲಕ ಖಾಸಗಿ ಮಾಹಿತಿ ಸಂಗ್ರಹಿಸುವ ಅಪಾಯವಿದೆ. ಹೀಗಾಗಿ, ಬಳಕೆಯಲ್ಲಿ ಎಚ್ಚರಿಕೆ ಅತ್ಯಗತ್ಯ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬಯೋಮೆಟ್ರಿಕ್ ಮಾಹಿತಿಯ ಗೋಪ್ಯತೆ ಬಗ್ಗೆ ಎಚ್ಚರಿಕೆ ವಹಿಸಬೇಕೆಂದಿದ್ದರೆ, ಈ ರೀತಿಯ ಆ್ಯಪ್‌ಗಳನ್ನು ಬಳಸಬಾರದು ಎಂಬುದು ಅವರ ಸಲಹೆ. ಇಷ್ಟಲ್ಲದೆ, ಆ್ಯಪ್ ಸ್ಟೋರ್ ಹೊರತಾಗಿ, ಬೇರೆ ವೆಬ್ ತಾಣಗಳಿಂದ ಈ ರೀತಿಯ ಆ್ಯಪ್‌ಗಳನ್ನು ಅಳವಡಿಸಿಕೊಳ್ಳದಿರುವುದು ನಮ್ಮ ಸುರಕ್ಷತೆ ದೃಷ್ಟಿಯಿಂದ ಸೂಕ್ತ ನಿರ್ಧಾರವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು