ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೈಸಿಕಲ್‌ಗೆ ಸೌರಶಕ್ತಿಎಪಿಎಸ್‌ ಹುಡುಗರ ಅನ್ವೇಷಣೆ

Last Updated 3 ಜುಲೈ 2019, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಎಪಿಎಸ್ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಸೌರಶಕ್ತಿ ಚಾಲಿತ ಮೂರು ಚಕ್ರದ ಸೈಕಲ್ ರೂಪಿಸಿದ್ದಾರೆ. ಅಂಗವಿಕಲರಿಗೆ ನೆರವಾಗುವ ಉದ್ದೇಶದಿಂದ ಇದನ್ನು ವಿನ್ಯಾಸ ಮಾಡಲಾಗಿದೆ.

ಕಾಲು ಊನವಾಗಿದ್ದರೂ, ಕೈನಲ್ಲಿ ಪೆಡಲ್ ಮಾಡುವುದು ಸಾಹಸ. ಇನ್ನು, ಕೈಗಳು ಊನವಾಗಿದ್ದರೆ, ಸೈಕಲ್ ಬ್ಯಾಲೆನ್ಸ್ ಮಾಡುವುದು ಕಷ್ಟ. ತ್ರಿಚಕ್ರ ವಾಹನ ಖರೀದಿ ಎಂದರೆ ತುಂಬಾ ದುಬಾರಿ. ಅಂಗವಿಕಲರ ಇಂಥ ಸಂಕಷ್ಟಗಳನ್ನು ಅರಿತ ವಿದ್ಯಾರ್ಥಿಗಳಾದ ಸುನಿಲ್ ಆರ್., ಶ್ರೀನಿಧಿ ಎಂ.ವಿ., ಇಂದ್ರೇಶ್ ಕುಮಾರ್ ಬಿ.ಎಸ್. ಹಾಗೂ ಸಂತೋಷ್ ಗೌಡ ಪಾಟೀಲ್ ವಿದ್ಯಾರ್ಥಿಗಳು ಸೌರಶಕ್ತಿಯಿಂದ ನಡೆಯುವಂತಹ ಟ್ರೈಸಿಕಲ್ ರೂಪಿಸಲು ಮುಂದಾದರು.

ಇಂಥದ್ದೊಂದು ಮಾದರಿ ಆವಿಷ್ಕರಿಸುವ ಮೊದಲು ವಿದ್ಯಾರ್ಥಿಗಳು ತಮ್ಮ ತಮ್ಮಲ್ಲೇ ಚರ್ಚೆ ನಡೆಸಿದರು. ಟ್ರೈಸಿಕಲ್ ಬಳಸುವ ಅಂಗವಿಕಲರೊಂದಿಗೆ ಕುಳಿತು ಮಾಹಿತಿ ಪಡೆದರು. ಎಲ್ಲ ಅಂಶಗಳನ್ನಿಟ್ಟುಕೊಂಡು ಅಂಗವಿಕಲರ ಸ್ನೇಹಿಯಾಗುವಂತೆ ವಿನ್ಯಾಸ ರೂಪಿಸಿದರು. ಮೊದಲನೆ ಹಂತವಾಗಿ ಸೈಕಲ್‌ಗೆ ಎಂಜಿನ್ ಜೋಡಿಸಿದರು.

ಆರಂಭದಲ್ಲಿ ಎಂಜಿನ್ ಜೋಡಿಸಿದ ಮೇಲೆ, ಇದಕ್ಕೆ ಡೀಸೆಲ್ ಮತ್ತು ಪೆಟ್ರೋಲ್ ಹಾಕಿ ಓಡಿಸಿದರೆ ಹೇಗೆ? ಎಂಬ ಯೋಚನೆ ಬಂತು. ಆದರೆ, ಇದು ಪುನಃ ಖರ್ಚಿನ ವಿಷಯ. ಜತೆಗೆ, ಸ್ಕೂಟರ್‌ಗೂ ಇದಕ್ಕೂ ಏನೂ ವ್ಯತ್ಯಾಸವಾಗಲ್ಲ. ನಮ್ಮ ಉದ್ದೇಶ, ಪರಿಸರಸ್ನೇಹಿ, ಖರ್ಚು ಕಡಿಮೆ ಇರುವ ವಾಹನ ರೂಪಿಸಬೇಕೆಂದು. ಇದು ಸರಿಯಾದ ದಾರಿಯಲ್ಲ ಎಂದು ಅವರವರಲ್ಲೇ ಚರ್ಚಿಸಿದರು.

ಮಾಹಿತಿಗಳ ಮಂಥನದಲ್ಲಿ ಅಂತಿಮವಾಗಿ ಇಂಧನದ ಬದಲಿಗೆ ಪರ್ಯಾಯ ಇಂಧನವಾದ ಸೌರಶಕ್ತಿ ಆಧಾರಿತವಾಗಿ ಎಂಜಿನ್ ಓಡುವಂತಹ ಸೈಕಲ್ ರೂಪಿಸಬೇಕೆಂಬ ಅಂಶ ಹೊರಬಂತು. ಇದು ಪರಿಸರಸ್ನೇಹಿಯೂ. ಖರ್ಚು ಕಡಿಮೆಯಾಗುತ್ತದೆ ಎಂದು ತೀರ್ಮಾನಿಸಿದರು. ಕಾರ್ಯಪ್ರವೃತ್ತರಾದರು. ಮೊದಲು ಸೌರಶಕ್ತಿ ಚಾಲಿತ ಎಂಜಿನ್ ರೂಪಿಸಬೇಕೆಂದು ಹೊರಟ ವಿದ್ಯಾರ್ಥಿಗಳು, ಸೌರಶಕ್ತಿ ಜತೆಗೆ, ವಿದ್ಯುತ್ ನಿಂದಲೂ ಚಾರ್ಜ್ ಮಾಡಿ ಓಡಿಸುವಂತಹ ವ್ಯವಸ್ಥೆಯನ್ನು ರೂಪಿಸಿದರು. ಆ ಎರಡೂ ವಿಧಾನವನ್ನು ಒಂದೇ ಸೈಕಲ್‍ನಲ್ಲಿ ಅಳವಡಿಸಿದರು. ಪ್ರಾಯೋಗಿಕವಾಗಿ ಚಾಲನೆ ಮಾಡಿ ನೋಡಿದರು. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯೂ ಆಯಿತು.

ಸೈಕಲ್ –ತಾಂತ್ರಿಕ ಮಾಹಿತಿ

ಸೈಕಲ್‌ಗೆ ಎಲೆಕ್ಟ್ರಿಕ್ ಚಾರ್ಜರ್ / ಬ್ಯಾಟರಿ ಅಳವಡಿಸಿದೆ. ಬ್ಯಾಟರಿಯನ್ನು ವಿದ್ಯುತ್‍ನಿಂದ 3 ಗಂಟೆ ಚಾರ್ಜ್ ಮಾಡಬೇಕು. ಇದರಿಂದ ಸುಮಾರು 35 ಕಿಲೋಮೀಟರ್‌ವರೆಗೆ ಮೈಲೇಜ್ ಬರುತ್ತದೆ. ಗಂಟೆಗೆ 20 ಕಿಲೋಮೀಟರ್ ವೇಗದಲ್ಲಿ ಓಡಿಸಬಹುದು.

ಸೌರಶಕ್ತಿಯಿಂದ ಚಾಲನೆ ಮಾಡುವುದಾದರೆ, 4 ಗಂಟೆ ಸೂರ್ಯನ ಬೆಳಕಿನಲ್ಲಿ ಚಾರ್ಜ್ ಮಾಡಬೇಕಾಗುತ್ತದೆ. ಇದು 80 ಕೆ.ಜಿ. ತೂಕವನ್ನು ತಡೆದುಕೊಳ್ಳುತ್ತದೆ. ಬ್ರೇಕ್ ಅಬ್ಸರ್ವರ್ಸ್, ವೇಗ ನಿಯಂತ್ರಣ ಬಟನ್‍ಗಳನ್ನೂ ಅಳವಡಿಸಲಾಗಿದ್ದು, ಇದು ‘ಸವಾರ ಸ್ನೇಹಿ’ ಎನಿಸಿದೆ.

ಇನ್ನಷ್ಟು ಅಭಿವೃದ್ಧಿ ಮಾಡಬಹುದು

‘ಅಂಗವಿಕಲರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಇದನ್ನು ರೂಪಿಸಿದ್ದೇವೆ. ಬೇರೆ ಬೇರೆ ಕಂಪನಿಗಳು ಮುಂದೆ ಬಂದು ಇದನ್ನು ಇನ್ನಷ್ಟು ಸುಧಾರಿಸುವುದಾದರೆ, ನಾವು ತಂತ್ರಜ್ಞಾನವನ್ನು ನೀಡಲು ಸಿದ್ಧವಿದ್ದೇವೆ’ ಎನ್ನುತ್ತಾರೆ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮಾರ್ಗದರ್ಶಕ ಸಿ. ಹೊನ್ನಯ್ಯ.

‘ಕೈಯಿಂದ ಪೆಡಲ್ ಮಾಡುವ ಮಾದರಿಯ ಸೈಕಲ್‍ನಿಂದ ಅಂಗವಿಕಲರಿಗೆ ತುಂಬಾ ಕಷ್ಟ ಎನಿಸುತ್ತಿತ್ತು. ಹೆಚ್ಚು ದೂರ ಸಾಗುವುದು ಕಷ್ಟದ ವಿಚಾರ. ಹೀಗಾಗಿ ಅವರೊಂದಿಗೆ ಸಮಾಲೋಚಿಸಿ, ಸಮಸ್ಯೆಗಳನ್ನು ಅರಿತುಕೊಳ್ಳುವ ಯತ್ನ ಮಾಡಲಾಯಿತು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT