ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ವಿರುದ್ಧ ಒಂದಾದ ದೇಶಿ ನವೋದ್ಯಮಗಳು

‘ಪೇಟಿಎಂ’ ನಿರ್ಬಂಧದ ನಂತರ ಹೆಚ್ಚಿದ ಪ್ರತಿರೋಧ
Last Updated 5 ಅಕ್ಟೋಬರ್ 2020, 2:32 IST
ಅಕ್ಷರ ಗಾತ್ರ

ನವದೆಹಲಿ: ಸ್ಮಾರ್ಟ್‌ಫೋನ್‌ ಆ್ಯಪ್‌ಗಳ ವಿಚಾರದಲ್ಲಿ ಗೂಗಲ್‌ ಹೊಂದಿರುವ ಪಾರಮ್ಯವನ್ನು ಪ್ರಶ್ನಿಸುತ್ತಿರುವ ಕೆಲವು ದೇಶಿ ನವೋದ್ಯಮಗಳು, ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸುವ ಅಥವಾ ಕೋರ್ಟ್‌ ಮೆಟ್ಟಿಲೇರುವ ಬಗ್ಗೆ ಪರಿಶೀಲನೆ ನಡೆಸುತ್ತಿವೆ.

ಗೂಗಲ್ ಕಂಪನಿಯು ಭಾರತದ ನವೋದ್ಯಮಗಳ ಜೊತೆ ನಿಂತು ಕೆಲಸ ಮಾಡಿದೆ. ಆದರೆ, ಗೂಗಲ್‌ನ ಇತ್ತೀಚೆಗಿನ ಕೆಲವು ತೀರ್ಮಾನಗಳು ದೇಶದ ಹಲವು ಕಂಪನಿಗಳಲ್ಲಿ ಅಸಮಾಧಾನ ತರಿಸಿದೆ. ಗೂಗಲ್‌ ನಡೆ ‘ನ್ಯಾಯಬದ್ಧವಾಗಿಲ್ಲ’ ಎಂಬುದು ಈ ಕಂಪನಿಗಳ ವಾದ.

ನವೋದ್ಯಮಗಳ ಪ್ರತಿನಿಧಿಗಳು ಹಿಂದಿನ ವಾರದಲ್ಲಿ ಎರಡು ಬಾರಿ ಆನ್‌ಲೈನ್‌ ಮೂಲಕ ಸಭೆ ನಡೆಸಿದ್ದು, ಮುಂದಿನ ಕಾರ್ಯತಂತ್ರ ಏನಿರಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಇದು ಕಠಿಣ ಹೋರಾಟ ಆಗಲಿದೆ ಎಂಬುದು ನಿಜ. ಆದರೆ, ಇದರಲ್ಲಿ ಗೂಗಲ್ ಸೋಲು ಕಾಣಲಿದೆ’ ಎಂದು ಇ–ಕಾಮರ್ಸ್ ತಾಣ ಇಂಡಿಯಾಮಾರ್ಟ್‌ನ ಸಿಇಒ ದಿನೇಶ್ ಅಗರ್ವಾಲ್ ಹೇಳಿದ್ದಾರೆ.

ಭಾರತದ ಸ್ಮಾರ್ಟ್‌ಫೋನ್‌ ಬಳಕೆದಾರರ ಪೈಕಿ ಶೇಕಡ 99ರಷ್ಟು ಜನ ಬಳಸುವುದು ಗೂಗಲ್‌ನ ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಇರುವ ಫೋನ್‌ಗಳನ್ನು. ಇದರ ಪರಿಣಾಮವಾಗಿ, ಸ್ಮಾರ್ಟ್‌ಫೋನ್‌ ಮೂಲಕ ಯಾವ ಆ್ಯಪ್‌ಗಳನ್ನು ನೀಡಬಹುದು, ಯಾವ ಬಗೆಯ ಸೇವೆಗಳನ್ನು ಒದಗಿಸಬಹುದು ಎಂಬ ವಿಚಾರವಾಗಿ ಗೂಗಲ್‌ಗೆ ಅತಿಯಾದ ನಿಯಂತ್ರಣ ದೊರೆತಿದೆ ಎನ್ನುವುದು ಭಾರತದ ಕೆಲವು ನವೋದ್ಯಮಗಳ ಆರೋಪ. ಇದನ್ನು ಗೂಗಲ್‌ ಅಲ್ಲಗಳೆದಿದೆ.

ಗೂಗಲ್‌ ತನ್ನ ಪ್ಲೇಸ್ಟೋರ್‌ನಿಂದ ‘ಪೇಟಿಎಂ’ ಆ್ಯಪ್‌ಅನ್ನು ಈಚೆಗೆ ತೆಗೆದುಹಾಕಿದ ನಂತರ ವಿವಾದ ಸೃಷ್ಟಿಯಾಗಿದೆ. ಗೂಗಲ್‌ನ ಆ್ಯಪ್‌ ಸ್ಟೋರ್‌ಗೆ ಪ್ರತಿಸ್ಪರ್ಧಿಯಾಗಿ ಸ್ಥಳೀಯವಾದ ಇನ್ನೊಂದು ಆ್ಯಪ್‌ ಸ್ಟೋರ್‌ಅನ್ನುಅಭಿವೃದ್ಧಿಪಡಿಸಬೇಕು ಎಂಬ ಸಲಹೆಯು ಸಭೆಯಲ್ಲಿ ವ್ಯಕ್ತವಾಯಿತು ಎನ್ನಲಾಗಿದೆ. ಆದರೆ, ಗೂಗಲ್‌ ಈಗ ಹೊಂದಿರುವ ಪಾರಮ್ಯವನ್ನು ಗಮನಿಸಿದರೆ, ಪರ್ಯಾಯ ಆ್ಯಪ್‌ ಸ್ಟೋರ್‌ ತಕ್ಷಣಕ್ಕೆ ಪರಿಣಾಮಕಾರಿ ಆಗಲಿಕ್ಕಿಲ್ಲ ಎಂದು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮ ಹೇಳಿದರು ಎಂದು ಗೊತ್ತಾಗಿದೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಪೇಟಿಎಂ ಮತ್ತು ಗೂಗಲ್ ನಿರಾಕರಿಸಿವೆ. ಶೇರ್‌ಚ್ಯಾಟ್‌, ಫೋನ್‌ಪೆ ಪ್ರತಿನಿಧಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT