ಸೋಮವಾರ, ಅಕ್ಟೋಬರ್ 26, 2020
28 °C

ವಾಟ್ಸ್‌ಆ್ಯಪ್‌: ಕಳಿಸಿದ ಫೋಟೊ, ವಿಡಿಯೊ ನೋಡಿದ ಮೇಲೆ ತಾನಾಗಿಯೇ ಅಳಿಸಿ ಹೋಗುತ್ತೆ!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಟ್ಸ್‌ಆ್ಯಪ್‌

ಫೇಸ್‌ಬುಕ್‌ ಸ್ವಾಮ್ಯದ 'ವಾಟ್ಸ್‌ಆ್ಯಪ್‌' ಮೆಸೇಜಿಂಗ್‌ ಅಪ್ಲಿಕೇಷನ್‌ ಬಳಕೆದಾರರಿಗಾಗಿ ಹೊಸ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವಲ್ಲಿ ತೊಡಗಿಸಿಕೊಂಡಿದ್ದು, 'ಎಕ್ಸ್‌ಪೈರಿಂಗ್‌ ಮೀಡಿಯಾ' (Expiring Media) ಟೆಕ್‌ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಿಮ್ಮ ಮೊಬೈಲ್‌ನಿಂದ ಸ್ನೇಹಿತರ ವಾಟ್ಸ್‌ಆ್ಯಪ್‌ಗೆ ಫೋಟೊಗಳು, ವಿಡಿಯೊಗಳು ಹಾಗೂ ಜಿಫ್‌ಗಳನ್ನು ರವಾನಿಸುತ್ತೀರಿ. ಅವರು ಸಂದೇಶ ನೋಡಿದ ನಂತರ ಆ ಎಲ್ಲ ಮೀಡಿಯಾ ಫೈಲ್‌ಗಳು ಮಾಯವಾಗುತ್ತವೆ! ಇಂಥದ್ದೇ ವ್ಯವಸ್ಥೆಯನ್ನು ವಾಟ್ಸ್‌ಆ್ಯಪ್‌ ಅಭಿವೃದ್ಧಿ ಪಡಿಸುತ್ತಿದೆ. ಈಗಾಗಲೇ ಪರೀಕ್ಷೆಯ ಹಂತದಲ್ಲಿರುವ 'ಎಕ್ಸ್‌ಪೈರಿಂಗ್‌ ಮೆಸೇಜಸ್‌' ಗುಣಲಕ್ಷಣದ ಮುಂದುವರಿದ ಭಾಗವೇ  'ಎಕ್ಸ್‌ಪೈರಿಂಗ್‌ ಮೀಡಿಯಾ' ಎನ್ನಲಾಗುತ್ತಿದೆ.

ಹೊಸ ವ್ಯವಸ್ಥೆಯಿಂದಾಗಿ ಅಲ್ಪಾವಧಿಯ ಬಳಕೆಗೆ ವಿಡಿಯೊ, ಫೋಟೊಗಳನ್ನು ಕಳುಹಿಸಬಹುದಾಗಿದೆ. ಆದರೆ, ಈ ಆಯ್ಕೆ ಇನ್ನೂ ಅಧಿಕೃತವಾಗಿ ವಾಟ್ಸ್‌ಆ್ಯಪ್‌ ಬೀಟಾದಲ್ಲಿ ಬಳಕೆಗೆ ಬಿಡುಗಡೆಯಾಗಿಲ್ಲ. ಅದರ ಪರೀಕ್ಷೆ ಮತ್ತು ಅಭಿವೃದ್ಧಿ ನಡೆಯುತ್ತಿರುವ ಬಗ್ಗೆ WABetaInfo ವೆಬ್‌ಸೈಟ್‌ ಸ್ಕ್ರೀನ್‌ಶಾಟ್‌ಗಳನ್ನು ಪ್ರಕಟಿಸಿದೆ. ಹೊಸ ಸೌಲಭ್ಯ ಬಳಕೆಗೆ ಪ್ರತ್ಯೇಕ ಟೈಮರ್‌ ಬಟನ್ ಇದ್ದು, ಬಳಕೆದಾರರು ಚಾಟ್‌ಗೆ ಮೀಡಿಯಾ ಆಯ್ಕೆ ಮಾಡಿಕೊಂಡ ನಂತರ ಆ ಬಟನ್‌ ಒತ್ತಬಹುದಾಗಿದೆ. ಆ ಮೂಲಕ ಆಯ್ಕೆ ಮಾಡಲಾದ ಮೀಡಿಯಾ ನಿಗದಿತ ಸಮಯದಲ್ಲಿ ತಾನಾಗಿಯೇ ಅಳಿಸಿ ಹೋಗುತ್ತದೆ.

ಎಕ್ಸ್‌ಪೈರಿಂಗ್‌ ಮೀಡಿಯಾ ಫೈಲ್‌ಗಳು ಚಾಟ್‌ನಲ್ಲಿ ಹೈಲೈಟ್‌ ಆಗಲಿವೆ, ಅದರಿಂದಾಗಿ ಸ್ವೀಕರಿಸಲಾಗಿರುವ ಫೈಲ್‌ಗಳು ಅಳಸಿ ಹೋಗುತ್ತವೆ ಎಂಬುದು ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ತಿಳಿಯಲಿದೆ. ಆರಂಭಿಕ ಹಂತವಾಗಿ ಆ್ಯಂಡ್ರಾಯ್ಡ್‌ ಬಳಕೆದಾರರಿಗೆ ಈ ಸೌಲಭ್ಯ ಅಭಿವೃದ್ಧಿಯಾಗಿರುವುದಾಗಿ ವರದಿಯಾಗಿದೆ.

ಇನ್‌ಸ್ಟಾಗ್ರಾಂ ಸಹ ಅಳಿಸಿ ಹೋಗಬಹುದಾದ ಫೋಟೊ ಅಥವಾ ವಿಡಿಯೊ ಸಂದೇಶಗಳನ್ನು ರವಾನಿಸುವ ಆಯ್ಕೆ ನೀಡಿದೆ. ಇನ್‌ಸ್ಟಾದಲ್ಲಿ ಗ್ರೂಪ್‌ ಮೆಸೇಜ್‌ಗಳಿಗೂ ಮೀಡಿಯಾ ಫೈಲ್‌ ಅಳಿಸಿ ಹೋಗುವ ಆಯ್ಕೆ ಇದೆ. ಅದು ವಾಟ್ಸ್‌ಆ್ಯಪ್‌ಗೂ ಮುಂದುವರಿಯುವುದೇ? ಕಾದು ನೋಡಬೇಕಿದೆ.

ಕಳೆದ ತಿಂಗಳು ಬಿಡುಗಡೆಯಾಗಿರುವ ವಾಟ್ಸ್‌ಆ್ಯಪ್‌ ಬೀಟಾ ವರ್ಶನ್‌ನಲ್ಲಿ ಎಕ್ಸ್‌ಪೈರಿಂಗ್‌ ಮೆಸೇಜಸ್‌ ಸೌಲಭ್ಯದ ಅವಕಾಶಗಳಿರುವುದು ಕಂಡು ಬಂದಿದೆ. ಚಾಟ್‌ ಮಾಡಿದ ಏಳು ದಿನಗಳಲ್ಲಿ ಸಂದೇಶಗಳು ಅಳಿಸುವ ಹೋಗುವಂತೆ ನಿಗದಿ ಪಡಿಸಿಕೊಳ್ಳಬಹುದಾಗಿದೆ. ಆದರೆ, ವಾಟ್ಸ್‌ಆ್ಯಪ್ ಅಧಿಕೃತವಾಗಿ ಈ ಕುರಿತು ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು