ಭಾನುವಾರ, ಸೆಪ್ಟೆಂಬರ್ 26, 2021
24 °C

ಆ್ಯಪ್‌ ಬಳಕೆದಾರನಿಗೆ ಸುರಕ್ಷತೆ ಎಲ್ಲಿ?

ವಿಶ್ವನಾಥ ಶರ್ಮಾ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನಲ್ಲಿ ಬಳಕೆಯಲ್ಲಿರುವ ಫೋನ್‌ಗಳಲ್ಲಿ ಆಂಡ್ರಾಯ್ಡ್‌ ಕಾರ್ಯಾಚರಣಾ ವ್ಯವಸ್ಥೆ (ಒಎಸ್‌) ಹೊಂದಿರುವ ಹ್ಯಾಂಡ್‌ಸೆಟ್‌ಗಳ ಸಂಖ್ಯೆಯೇ ಅಧಿಕ. ಇದಕ್ಕೆ ಕಾರಣ ಹಲವು. ಐಫೋನ್‌ ದುಬಾರಿ ಎನ್ನುವುದೂ ಒಂದು ಕಾರಣ. ಒಟ್ಟಾರೆಯಾಗಿ ಮೊಬೈಲ್‌ ಒಎಸ್‌ ಜಗತ್ತನ್ನು ಆಳುತ್ತಿರುವುದೇ ಆಂಡ್ರಾಯ್ಡ್‌. ಜಾಗತಿಕ ಅಂತರ್ಜಾಲ ಬಳಕೆಯ ವಿಶ್ಲೇಷಣಾ ಸಂಸ್ಥೆಯಾಗಿರುವ ಸ್ಟ್ಯಾಟಿಕ್‌ ಕೌಂಟರ್‌ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ ಸದ್ಯ ಬಳಕೆಯಲ್ಲಿರುವ ಒಎಸ್‌ಗಳಲ್ಲಿ ಆಂಡ್ರಾಯ್ಡ್‌ ಪಾಲು ಶೇ 74.85ರಷ್ಟಿದೆ.

ಇಷ್ಟು ಜನಪ್ರಿಯವಾಗಿರುವ ಆಂಡ್ರಾಯ್ಡ್‌ ಫೋನ್‌ಗಳು ಬಹುಬೇಗ ಸೈಬರ್‌ ದಾಳಿಗೆ ತುತ್ತಾಗುತ್ತಿವೆ ಎನ್ನುವುದೂ ಹೊಸ ವಿಷಯವೇನೂ ಅಲ್ಲ. ಆದರೆ ಗಂಭೀರವಾಗಿ ಪರಿಗಣಿಸುವಂತಹ ವಿದ್ಯಮಾನಗಳು ನಡೆಯುತ್ತಿವೆ. ಅತಿ ಹೆಚ್ಚು ಬಾರಿ ಡೌನ್‌ಲೋಡ್‌ ಆಗುತ್ತಿರುವ ಆ್ಯಪ್‌ಗಳಲ್ಲಿ ಮಾಲ್‌ವೇರ್‌ಗಳು ಇವೆ ಎಂದು ಅಮೆರಿಕದ ಡಿಜಿಟಲ್‌ ಮಾಧ್ಯಮ ಬಝ್‌ಫೀಡ್‌ (Buzz Feed) ವರದಿ ನೀಡಿದೆ. 

ಗೂಗಲ್‌ ಪ್ಲೇ ಸ್ಟೋರ್‌ನಿಂದ 9 ಕೋಟಿಗೂ ಅಧಿಕ ಬಾರಿ ಡೌನ್‌ಲೋಡ್‌ ಆಗಿರುವ ಆರು ಆಂಡ್ರಾಯ್ಡ್‌ ಆ್ಯಪ್‌ಗಳಲ್ಲಿ ‘PreAMo’ ಮಾಲ್‌ವೇರ್‌ ಪತ್ತೆಯಾಗಿದೆ. ಆಂಡ್ರಾಯ್ಡ್‌ ಫೋನ್‌ನ ಕಾರ್ಯಾಚರಣೆ ವೇಗ ಹೆಚ್ಚಿಸುವ ಭರವಸೆ ನೀಡುವ ಮೂಲಕ ಬಳಕೆದಾರರನ್ನು ವಂಚಿಸುತ್ತಿದೆ.

Selfie Camera, Total Cleaner, Smart Cooler, RAM Master ನಂತಹ ಆ್ಯಪ್‌ಗಳಲ್ಲಿ ಈ ಮಾಲ್‌ವೇರ್‌ ಸೇರಿಸಲಾಗಿದೆ.

ಈ ಆ್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡ ಬಳಿಕ ಮೊಬೈಲ್‌ನಲ್ಲಿ ಅಂತರ್ಜಾಲ ಸಂಪರ್ಕ ಸಕ್ರಿಯಗೊಂಡಾಗ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಗಮನಿಸದೇ ಆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದಾಗ ಮಾಹಿತಿ ಚೋರರು ಮೊಬೈಲ್‌ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ. ಅದರಲ್ಲಿಯೂ ಆ್ಯಪ್‌ ಬಳಸದೇ ಇರುವ ಸಂದರ್ಭದಲ್ಲಿಯೂ ಜಾಹೀರಾತಿನ ಮೇಲೆ ಕ್ಲಿಕ್ ಮಾಡುವಂತೆ ಮಾಡಲಾಗಿದೆ ಎನ್ನುವುದು ಅಚ್ಚರಿ ವಿಷಯ. ಹೀಗಾಗಿ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವವರ ವಿಶ್ವಾಸಾರ್ಹತೆ ಮತ್ತು ನಿರ್ದಿಷ್ಟ ಆ್ಯಪ್‌ ಅನ್ನು ಈಗಾಗಲೇ ಬಳಸಿರುವವರ ವಿಶ್ಲೇಷಣೆಯನ್ನು ಗಮನಿಸುವುದರಿಂದ ಒಂದು ಹಂತದ ಸುರಕ್ಷತೆ ಪಡೆಯಬಹುದು.

10 ಕೋಟಿಗೂ ಅಧಿಕ ಬಾರಿ ಡೌನ್‌ಲೋಡ್‌ ಆಗಿರುವಂತಹ ಜನಪ್ರಿಯ ಆ್ಯಪ್‌ಗಳ ಮೂಲಕ ಅನುಮತಿ ಇಲ್ಲದೆ ಬಳಕೆದಾರನ ಡೇಟಾ ಪಡೆಯಲಾಗಿದೆ.

ಆಂಡ್ರಾಯ್ಡ್‌ ಫೋನ್‌ಗಳಿಗೆ ಗೂಗಲ್‌ ಪ್ಲೇ ಸ್ಟೋರ್‌ನಿಂದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೆಚ್ಚು ಸುರಕ್ಷಿತ ಎಂದು ಎಲ್ಲಾ ಬಳಕೆದಾರರು ಬಲವಾಗಿ ನಂಬಿದ್ದಾರೆ. ಏಕೆಂದರೆ ಗೂಗಲ್‌ ಪ್ಲೇ ಸ್ಟೋರ್‌ ಪ್ರತಿಯೊಂದು ಆ್ಯಪ್‌ ಅನ್ನೂ ಸೂಕ್ಷ್ಮವಾಗಿ ಪರಿಶೀಲನೆಗೆ ಒಳಪಡಿಸಿದ ಬಳಿಕವಷ್ಟೇ ಬಳಕೆಗೆ ಲಭ್ಯವಾಗುವಂತೆ ಮಾಡುತ್ತದೆ. ಹೀಗಿದ್ದರೂ ಕೆಲವು ಮಾಹಿತಿ ಚೋರ ಆ್ಯಪ್‌ಗಳು ಹೇಗೋ ನುಸುಳಿಕೊಳ್ಳುತ್ತವೆ ಅಥವಾ ಆ್ಯಪ್‌ನ ಸುರಕ್ಷತಾ ಲೋಪದಿಂದಾಗಿ ಅದರ ಮೂಲಕ ಮಾಹಿತಿ ಕದಿಯುವಂತಾಗುವ ಸಾಧ್ಯತೆಯೂ ಇರುತ್ತದೆ.

ಇಂತಹ ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿವೆ ಎನ್ನುವುದು ಬಹಳ ತಡವಾಗಿ ಕಂಪನಿಯ ಗಮನಕ್ಕೆ ಬರುತ್ತದೆ. ಆಗ ಅವುಗಳನ್ನು ಅಲ್ಲಿಂದ ತೆಗೆದುಹಾಕುವ ಕೆಲಸಕ್ಕೆ ಮುಂದಾಗುತ್ತದೆ.

ಇಂತಹದ್ದೇ ಪ್ರಕ್ರಿಯೆ ಈಚೆಗೆ ನಡೆದಿದೆ. ಆದರೆ ಈ ಬಾರಿಯದ್ದು ತುಸು ಅಚ್ಚರಿ, ಆಘಾತ ನೀಡುವಂತಹ ಬೆಳವಣಿಗೆಯಾಗಿದೆ. ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಚೀನಾದ ಪ್ರಮುಖ ಕಂಪನಿ ‘ಡೂ ಗ್ಲೋಬಲ್‌’ನ (Do Global) 100ಕ್ಕೂ ಅಧಿಕ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.

‘ಈ ಕಂಪನಿಯು ಜಾಹೀರಾತು ವಂಚನೆ ಮತ್ತು ಬಳಕೆದಾರರ ಅನುಮತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ’ ಎಂದು ಬಝ್‌ ಫೀಡ್ (Buzz Feed) ವರದಿ ಮಾಡಿದ ಬಳಿಕ ಡೂ ಗ್ಲೋಬಲ್‌ ಅಭಿವೃದ್ಧಿಪಡಿಸಿರುವ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆಯಲಾಗುತ್ತಿದೆ.

ಆ್ಯಪ್‌ಗಳನ್ನು ತೆಗೆದುಹಾಕುತ್ತಿರುವ ಬಗ್ಗೆ ಗೂಗಲ್‌ ಕಂಪನಿ ನಿರ್ದಿಷ್ಟವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಡೂ ಗ್ಲೋಬಲ್‌ ಕಂಪನಿಯನ್ನು ಪ್ಲೇ ಸ್ಟೋರ್‌ನಿಂದ ಸಂಪೂರ್ಣವಾಗಿ ನಿಷೇಧಿಸಲಿದ್ದು, ಇನ್ನೂ ಹೆಚ್ಚಿನ ಆ್ಯಪ್‌ಗಳನ್ನು ತೆಗೆದುಹಾಕಲಿದೆ ಎನ್ನಲಾಗುತ್ತಿದೆ.

‘ಆ್ಯಪ್‌ಗಳಲ್ಲಿ ಇರುವ ಹಾನಿಕಾರಕ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನಿಯಮ ಉಲ್ಲಂಘನೆಯಾಗಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು. ಪ್ಲೇ ಸ್ಟೋರ್‌ನಿಂದ ತೆಗೆದುಹಾಕುವ ಜತೆಗೆ ಮೊಬೈಲ್‌ನಲ್ಲಿ ಜಾಹೀರಾತು ನೀಡಲು ವೇದಿಕೆಯಾಗಿರುವ ಗೂಗಲ್‌ನ ಅಂಗಸಂಸ್ಥೆಯಾಗಿರುವ AdMobನಲ್ಲಿಯೂ ನಿಷೇಧ ಹೇರಲಾಗುವುದು’ ಎಂದು ಗೂಗಲ್‌ನ ವಕ್ತಾರರೊಬ್ಬರು ಬಜ್‌ಫೀಡ್‌ಗೆ ತಿಳಿಸಿದ್ದಾರೆ.

ಆ್ಯಪ್‌ ಅಭಿವೃದ್ಧಿಪಡಿಸುವ ಕಂಪನಿಗೆ ನಿಷೇಧ ಹೇರುತ್ತಿರುವುದು ಇದೇನೂ ಮೊದಲಲ್ಲ. ಆದರೆ ಇದು ಅತ್ಯಂತ ದೊಡ್ಡ ಮಟ್ಟದ್ದಾಗಿದೆ. ತಿಂಗಳಿಗೆ 25 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಜಾಹೀರಾತಿನ ಮೂಲಕ 80 ಕೋಟಿ ಜನರನ್ನು ತಲುಪುವ ಸಾಮರ್ಥ್ಯ ಹೊಂದಿರುವುದಾಗಿ ಡೂ ಗ್ಲೋಬಲ್‌ ಕಂಪನಿ ಹೇಳಿಕೊಂಡಿದೆ.

ಈ ಆ್ಯಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ ನಿಯಮಗಳನ್ನು ಉಲ್ಲಂಘಿಸಿರುವ ಡೂ ಗ್ಲೋಬಲ್‌ ಕಂಪನಿಗೆ ಸೇರಿದ್ದಾಗಿವೆ ಎನ್ನುವುದೂ ಬಳಕೆದಾರರರಿಗೆ ತಿಳಿದಿಲ್ಲ.

ಹಿಂದಿನ ವರ್ಷ ಚೀತಾ ಮೊಬೈಲ್ ಮತ್ತು ಕಿಕಾ ಟೆಕ್‌ ಆ್ಯಪ್‌ಗಳು ಜಾಹೀರಾತು ವಂಚನೆ ಎಸಗಿದ್ದವು. ಆದರೆ, ಗೂಗಲ್‌ ಕೇವಲ ಆ ಆ್ಯಪ್‌ಗಳನ್ನು ಮಾತ್ರವೇ ತೆಗೆದುಹಾಕಿತ್ತು. ಈ ವರ್ಷ ಮತ್ತೆ ಕಿಕಾ ಟೆಕ್‌ ಅನ್ನು ಪ್ಲೇ ಸ್ಟೋರ್‌ಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.

ಗೂಗಲ್‌ ಪ್ಲೇ ಸ್ಟೋರ್‌ ತನ್ನ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸಿಕೊಳ್ಳಬೇಕಿದೆ. ಬಳಕೆದಾರನ ವೈಯಕ್ತಿಕ ಮಾಹಿತಿಗಳು ಕಳುವಾದ ಮೇಲೆ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕುವುದು ಸರಿಯಲ್ಲ. ಏಕೆಂದರೆ, ಜನಪ್ರಿಯ ಆ್ಯಪ್‌ಗಳ ಮೂಲಕವೇ ಹೆಚ್ಚು ಮಾಹಿತಿ ಸೋರಿಕೆಯಾಗುತ್ತಿದೆ. ಹೀಗಾಗಿ, ಆ್ಯಪ್‌ಗಳ ಮೇಲ್ವಿಚಾರಣಾ ವ್ಯವಸ್ಥೆಗೆ ಕಟ್ಟುನಿಟ್ಟಿನ ವ್ಯವಸ್ಥೆ ರೂಪಿಸಿ ಬಳಕೆದಾರರ ನಂಬಿಕೆ ಉಳಿಸಿಕೊಳ್ಳುವ ಹೊಣೆಗಾರಿಕೆ ಕಂಪನಿಯ ಮೇಲಿದೆ.

ಕ್ಷಮೆ ಕೇಳಿದ ಡೂ ಗ್ಲೋಬಲ್‌!

ಮಾಹಿತಿಗಳು ಸೋರಿಕೆಯಾಗುವಷ್ಟು ಆದ ಮೇಲೆ ಡೂ ಗ್ಲೋಬಲ್‌ ಕಂಪನಿ ಕ್ಷಮೆ ಕೇಳಿದೆ. ಇದೊಂದು ರೀತಿ ‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಎನ್ನುವಂತಾಗಿದೆ.

‌‘ಕೇಳಿಬಂದಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಮ್ಮ ಆ್ಯಪ್‌ಗಳ ಬಗ್ಗೆ ವರದಿಗಳನ್ನು ಓದಿದ ಬಳಿಕ ಆಂತರಿಕ ತನಿಖೆ ನಡೆಸಲಾಗಿದೆ. ನಮ್ಮ ಕೆಲವು ಉತ್ಪನ್ನಗಳ ಮೂಲಕ ವೈಯಕ್ತಿಕ ಮಾಹಿತಿ ಕದಿಯಲಾಗುತ್ತಿದೆ ಎನ್ನುವುದು ವಿಷಾದದ ಸಂಗತಿ. ಈ ಬಗ್ಗೆ ಗೂಗಲ್‌ ನಿರ್ಧಾರವನ್ನು ನಾವು ಒಪ್ಪಿಕೊಳ್ಳುತ್ತೇವೆ. ಈ ರೀತಿ ವಂಚನೆ ಎಸಗುತ್ತಿರುವ ಪ್ರತಿಯೊಂದು ಆ್ಯಪ್‌ ಅನ್ನೂ ಸೂಕ್ಷ್ಮವಾಗಿ ತನಿಖೆಗೆ ಒಳಪಡಿಸುವ ಮೂಲಕ ಗೂಗಲ್‌ನೊಂದಿಗಿನ ಸಹಕಾರ ಮುಂದುವರಿಸಿದ್ದೇವೆ’ ಎಂದು ಕಂಪನಿ ಹೇಳಿಕೊಂಡಿದೆ.

ಬಝ್‌ಫೀಡ್‌ ವರದಿಯ ಬಗ್ಗೆಯೂ ಕಂಪನಿ ಮೆಚ್ಚುಗೆ ಸೂಚಿಸಿದೆ. ನಮ್ಮ ಉತ್ಪನ್ನಗಳನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಲಾಗುವುದು ಮತ್ತು ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು