ಭಾನುವಾರ, ಏಪ್ರಿಲ್ 5, 2020
19 °C

ಮೋದಿ–ಟ್ರಂಪ್‌ಗೆ ಹಿಗ್ಗಾಮುಗ್ಗಾ ಟೀಕೆ: ಆಲಿವರ್‌ ಕಾರ್ಯಕ್ರಮಕ್ಕೆ ಡಿಸ್ನಿ ನಿರ್ಬಂಧ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

'ಲಾಸ್ಟ್‌ ವೀಕ್‌ ಟುನೈಟ್‌' ಕಾರ್ಯಕ್ರಮದಲ್ಲಿ ಜಾನ್‌ ಆಲಿವರ್‌

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಜಾನ್‌ ಆಲಿವರ್‌ ಕಾರ್ಯಕ್ರಮವನ್ನು ಭಾರತದಲ್ಲಿ 'ಹಾಟ್‌ಸ್ಟಾರ್‌' ನಿರ್ಬಂಧಿಸಿದೆ. ವಾಲ್ಟ್‌ ಡಿಸ್ನಿ ಕಂಪನಿ ಹಾಟ್‌ಸ್ಟಾರ್‌ ಒಟಿಟಿ ವೇದಿಕೆಯನ್ನು ನಿರ್ವಹಿಸುತ್ತಿದೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾರತ ಭೇಟಿ ವಿಚಾರವನ್ನೇ ಇಡೀ ಎಪಿಸೋಡ್‌ ವಿಷಯವಾಗಿಸಿ ಜಾನ್‌ ಆಲಿವರ್‌ ಕಾರ್ಯಕ್ರಮ ನಡೆಸಿದ್ದಾರೆ. ಅದರಲ್ಲಿ ನರೇಂದ್ರ ಮೋದಿ, ಭಾರತದ ರಾಜಕೀಯ ವಿಷಯಗಳು ಹಾಗೂ ಇಲ್ಲಿನ ಪ್ರತಿಭಟನೆಗಳ ವಿಚಾರಗಳನ್ನು ವಿಡಂಬನೆಗೆ ಒಳಪಡಿಸಲಾಗಿದೆ. ಎಚ್‌ಬಿಒ ಚಾನೆಲ್‌ನಲ್ಲಿ ಜಾನ್‌ ಆಲಿವರ್‌ ನಡೆಸಿಕೊಡುವ ಕಾರ್ಯಕ್ರಮ 'ಲಾಸ್ಟ್‌ ವೀಕ್‌ ಟುನೈಟ್‌' (Last Week Tonight) ಭಾನುವಾರ ರಾತ್ರಿ 11ಕ್ಕೆ  ಪ್ರಸಾರವಾಗುತ್ತದೆ. 

ಏಷ್ಯಾ ರಾಷ್ಟ್ರಗಳಲ್ಲಿ ಆ ಕಾರ್ಯಕ್ರಮ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಪ್ರಸಾರವಾಗುತ್ತದೆ. ಆದರೆ, ಫೆಬ್ರುವರಿ 25ರಂದು ಹಾಟ್‌ಸ್ಟಾರ್‌ ಬಳಕೆದಾರರಿಗೆ ಹಳೆಯ ಎಪಿಸೋಡ್‌ಗಳು ಮಾತ್ರವೇ ವೀಕ್ಷಣೆಗೆ ಸಿಕ್ಕಿವೆ. ಹಾಟ್‌ಸ್ಟಾರ್‌ ಪ್ರತಿನಿಧಿ ಇಮೇಲ್‌ ಮತ್ತು ಕರೆಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಯೊಬ್ಬರ ಪ್ರಕಾರ, ಸರ್ಕಾರ ಈ ವಿಚಾರದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ. 

ಟ್ರಂಪ್‌ ಭಾರತ ಭೇಟಿ ನೀಡುತ್ತಿರುವ ಸಮಯದಲ್ಲೇ ಪೌರತ್ವ ಕಾಯ್ದೆಗೆ ಸಂಬಂಧಿಸಿದ ಪ್ರತಿಭಟನೆಗಳು ಹಿಂಸಾರೂಪ ಪಡೆದವು. ದೆಹಲಿ ಹಿಂಸಾಚಾರದಲ್ಲಿ ಹತ್ತಾರು ಮಂದಿ ಸಾವಿಗೀಡಾಗಿದ್ದಾರೆ. ಕಾರ್ಯಕ್ರಮ ನಿರ್ಬಂಧಿಸಿರುವುದು ಬಹುರಾಷ್ಟ್ರಗಳಲ್ಲಿ ವ್ಯಾಪಾರ ನಡೆಸುವವರು ಅನುಸರಿಸುವ ಎಚ್ಚರಿಕೆಯ ಮಾರ್ಗವಾಗಿ ತೋರುತ್ತಿದೆ. ಜಾನ್‌ ಆಲಿವರ್‌ ಕಾರ್ಯಕ್ರಮವನ್ನು ಯುಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದ್ದು, ಮೋದಿ ಕುರಿತ ಕಾರ್ಯಕ್ರಮ ಈವರೆಗೂ 51.33 ಲಕ್ಷ ವೀಕ್ಷಣೆ ಕಂಡಿದೆ. ಈ ವಿಡಿಯೊ ಯುಟ್ಯೂಬ್‌ ಟ್ರೆಂಡ್‌ನಲ್ಲೂ ಉಳಿದಿದೆ. 

ಏನಿದೆ ಜಾನ್‌ ಆಲಿವರ್‌ ಕಾರ್ಯಕ್ರಮದಲ್ಲಿ?

ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತ ಮತ್ತು ಅಮೆರಿಕ ಭೇಟಿಯನ್ನು ಕುಟುಂಬದ ಹಿರಿಕರ ಭೇಟಿಗೆ ಹೋಲಿಸಿದ್ದು ಹಾಗೂ ಮೋದಿ ಅವರನ್ನು ದೇಶದ ತಂದೆ (ಫಾದರ್‌ ಆಫ್‌ ದಿ ನೇಷನ್‌!) ಎಂಬಂತಹ ಸೂಚ್ಯ ಮಾತುಗಳನ್ನು ಆಡಿದ್ದರು. ಆ ಮಾತುಗಳನ್ನು ವಿಡಂಬನೆಗೆ ಒಳಪಡಿಸಿದ ಜಾನ್‌ ಆಲಿವರ್‌, ಮೋದಿ ಹೇಗೆ ರಾಷ್ಟ್ರ ಪಿತ ಆಗುತ್ತಾರೆ...ಆ ಟೈಟಲ್‌ ಮಹಾತ್ಮ ಗಾಂಧಿ ಅವರಿಗೆ ಇದೆಯಲ್ಲ ಎಂದಿದ್ದಾರೆ.

'ಜಗತ್ತಿನ ಪ್ರಮುಖ ನಾಯಕರನ್ನು ಬಿಗಿದಪ್ಪುವ ನಾಯಕ ಮೋದಿ. ಈಗ ಭಾರತದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಯ್ದೆಗಳನ್ನು ವಿರೋಧಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮೋದಿ ಸರ್ಕಾರ ಬಡ ಜನರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕೊಟ್ಟಿದೆ, ಶೌಚಗೃಹಗಳನ್ನು ನಿರ್ಮಿಸಿದೆ,...ಆದರೆ, ದಿಢೀರನೆ ಘೋಷಿಸಿದ ನೋಟು ಅಮಾನ್ಯೀಕರಣದಿಂದ ಜನರು ಎದುರಿದ ಕಷ್ಟಗಳು ಹಾಗೂ ಅವರು ಜಾರಿಗೆ ತಂದ ನೀತಿಗಳು ಸಾಕಷ್ಟು ಗೊಂದಲ ಮಯ' ಎಂದು ಕಾರ್ಯಕ್ರಮದಲ್ಲಿ ವಿಡಂಬಿಸಿದ್ದಾರೆ. 

ಗುಜರಾತ್‌ನಲ್ಲಿ ನಡೆದ ಗಲಭೆ ಕುರಿತು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸದೆಯೇ ಎದ್ದು ಹೊರ ನಡೆದರು, ಸಾವಿರಾರು ಜನರ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ಮತ್ತು ಅದನ್ನು ನಿಯಂತ್ರಿಸಿದ್ದರ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಬಿಜೆಪಿಗೆ ಹಿಂದೂ ಸಂಘಟನೆ ಆರ್‌ಎಸ್‌ಎಸ್‌ ಬೆನ್ನೆಲುಬಾಗಿದೆ. ದೇಶದಲ್ಲಿ ಜಾತ್ಯಾತೀತಯ ಬಗ್ಗೆ ಗಾಂಧಿ ಮತ್ತು ನೆಹರು ಒಲವು ತೋರಿದ್ದರು. ಮೋದಿ ಆರ್‌ಎಸ್‌ಎಸ್‌ ಸಂಘಟನೆಯ ಪ್ರಭಾವದಿಂದ ಬಂದವರು,...ಹೀಗೆ ಮೋದಿ ಮತ್ತು ಭಾರತದ ರಾಜಕೀಯದ ವಿಷಯಗಳ ಜೊತೆಗೆ ಸಿಎಎ ಪರ–ವಿರೋಧಗಳ ಹೋರಾಟ, ಅಮಿತ್‌ ಶಾ ನಿರ್ಧಾರಗಳು, ಡೊನಾಲ್ಡ್‌ ಟ್ರಂಪ್‌ ದಂಪತಿ ತಾಜ್‌ಮಹಲ್‌ ಭೇಟಿ, ಮ್ಯಾನ್‌ ವರ್ಸಸ್‌ ವೈಲ್ಡ್‌ ಶೋ ವಿಷಯಗಳು 18.47 ನಿಮಿಷಗಳ ಟಿವಿ ಕಾರ್ಯಕ್ರಮದಲ್ಲಿ ಪ್ರಸ್ತಾಪಗೊಂಡಿವೆ. 

ನಿರ್ಬಂಧಿಸಲಾಗಿರುವ ಕಾರ್ಯಕ್ರಮಗಳು...

ಕಳೆದ ವರ್ಷ ಅಮೇಜಾನ್‌.ಕಾಮ್‌ ಇಂಕ್‌, ಸಿಬಿಎಸ್‌ ಕಾರ್ಯಕ್ರಮ 'ಮೇಡಂ ಸೆಕ್ರೇಟರಿ' ಎಪಿಸೋಡ್‌ ಒಂದನ್ನು ತೆಗೆದು ಹಾಕಿತ್ತು ಎಂದು ದಿ ಕ್ವಿಂಟ್‌ ವರದಿ ಮಾಡಿದೆ. ಕಾಶ್ಮೀರದಲ್ಲಿ ಹಿಂದೂ ರಾಷ್ಟ್ರೀಯತೆ ಮತ್ತು ಹಿಂದೂ ಉಗ್ರವಾದ ವಿಷಯಗಳನ್ನು ಎಪಿಸೋಡ್ ಒಳಗೊಂಡಿತ್ತು ಎನ್ನಲಾಗಿದೆ. 

ಹಾಸ್ಯ ಕಲಾವಿದ ಹಸನ್‌ ಮಿನ್‌ಹಜ್‌ 'ಪೇಟ್ರಿಯಾಟ್‌ ಆಕ್ಟ್‌' ಕಾರ್ಯಕ್ರಮದಲ್ಲಿ ಸೌದಿ ದೊರೆಯ ಬಗ್ಗೆ ಟೀಕಿಸಿದ್ದರು. ಆ ಇಡೀ ಎಪಿಸೋಡ್‌ನ್ನು ನೆಟ್‌ಫ್ಲಿಕ್ಸ್‌ ಇಂಕ್‌. ತೆಗೆದು ಹಾಕಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು