ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲಿಪಾಪ್‌: ಮತ್ತಷ್ಟು ಸಿಹಿಯಾದ ಆಂಡ್ರಾಯ್ಡ್

Last Updated 4 ನವೆಂಬರ್ 2014, 19:30 IST
ಅಕ್ಷರ ಗಾತ್ರ

ತನ್ನ ಎಲ್ಲಾ ಆಪರೇಟಿಂಗ್‌ ಸಿಸ್ಟೆಂಗಳಿಗೂ (ಓಎಸ್‌) ಸಿಹಿ ತಿಂಡಿಗಳ ಹೆಸರುಗಳನ್ನೇ ಇಡುತ್ತಾ ಬಂದಿರುವ ಆಂಡ್ರಾಯ್ಡ್ ಈಗ ‘ಲಾಲಿಪಾಪ್’ ಎನ್ನುವ ಮತ್ತೊಂದು ಸಿಹಿಯಾದ ಹೆಸರನ್ನು ಸೇರಿಸುವ ಮೂಲಕ ತಂತ್ರಾಂಶ ಬಳಕೆದಾರರ ಬಾಯಿ, ಕಣ್ಣು ಮತ್ತು ಮನಸ್ಸಿನಲ್ಲಿ ಆಸೆ ಹುಟ್ಟುವಂತೆ ಮಾಡಿದೆ. ಆ ಮೂಲಕ ತಂತ್ರಾಂಶ ಅಭಿವೃದ್ಧಿ ವಿಚಾರದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಆಂಡ್ರಾಯ್ಡ್‌ನ ಆರಂಭಿಕ ಎರಡು ಓಎಸ್‌ಗಳಾದ ಅಲ್ಫಾ ಮತ್ತು ಬೀಟಾ ಮಾತ್ರ ಇಂಗ್ಲಿಷ್ ವರ್ಣಮಾಲೆಯ ಆಧಾರದ ಮೇಲೆ ಹೆಸರಿಸಿದ್ದನ್ನು ಬಿಟ್ಟರೆ, ತನ್ನ ಎಲ್ಲಾ ಆವೃತ್ತಿಗಳಿಗೂ ಸಿಹಿ ತಿಂಡಿಯ ಹೆಸರನ್ನೇ ಇಟ್ಟಿದೆ. ಈವರೆಗಿನ ಆಂಡ್ರಾಯ್ಡ್‌ನ ವಿಶೇಷ ಹೆಸರುಗಳೆಂದರೆ ಕಪ್ ಕೇಕ್, ಡೋನಟ್, ಎಕ್ಲೇರ್, ಫ್ರೊಯೋ, ಜಿಂಜರ್‌ ಬ್ರೆಡ್, ಹನಿಕೋಂಬ್, ಐಸ್ ಕ್ರೀಂ ಸ್ಯಾಂಡ್ವಿಚ್, ಜೆಲ್ಲಿಬೀನ್, ಕಿಟ್‌ಕ್ಯಾಟ್. ಈ ಸಾಲಿಗೆ ಇದೀಗ ಲಾಲಿಪಾಪ್ ಸೇರಿದೆ. ಸದ್ಯ ಮೊಬೈಲ್ ಫೋನ್‌ಗಳು ಮಾರುಕಟ್ಟೆಯಲ್ಲಿ ಎಲ್ಲರ ಕಣ್ಣು ಆಂಡ್ರಾಯ್ಡ್‌ನ ಓಎಸ್‌ಗಳ ಮೇಲೆಯೇ ನೆಟ್ಟಿವೆ. ತನ್ನ ಪ್ರತಿಯೊಂದು ಆವೃತ್ತಿಯಲ್ಲಿಯೂ ಪ್ರತಿ ಬಾರಿ ಹಲವಾರು ವೈಶಿಷ್ಟ್ಯಗಳನ್ನು ಹೊತ್ತು ತಂದಿರುವ ಆಂಡ್ರಾಯ್ಡ್, ಈ ಬಾರಿಯ ಲಾಲಿಪಾಪ್‌ನಲ್ಲಿ ಮತ್ತಷ್ಟು ಸಿಹಿ ತುಂಬಿದೆ. ಇಲ್ಲಿದೆ ಆಂಡ್ರಾಯ್ಡ್ ಎಲ್‌ನ ಗುಣವಿಶೇಷಗಳ ಒಂದು ನೋಟ. ಇಲ್ಲಿದೆ.

ಬಿಟ್ಟಲ್ಲಿಂದಲೇ ಆರಂಭಿಸಿ
ಈಗ ನಿಮ್ಮ ಡಿವೈಸ್‌ನಲ್ಲಿ ಅರ್ಧಕ್ಕೇ ನಿಲ್ಲಿಸಿದ ಯಾವುದೇ ಪ್ರಕ್ರಿಯೆಗಳನ್ನು ಮತ್ತೊಮ್ಮೆ ಮೊದಲಿನಿಂದಲೇ ಆರಂಭಿಸಬೇಕಾದ ಅಗತ್ಯವಿಲ್ಲ. ಎಲ್ಲಿಗೆ ಪ್ರಕ್ರಿಯೆ ನಿಲುಗಡೆಯಾಗಿತ್ತೋ ಅಲ್ಲಿಂದಲೇ ಅರಂಭಿಸುವ ಒಂದು ವಿಶೇಷ ಆಯ್ಕೆಯನ್ನು ಆಂಡ್ರಾಯ್ಡ್ ಲಾಲಿಪಾಪ್‌ನಲ್ಲಿ ಸೇರಿಸಲಾಗಿದೆ. ಡಿವೈಸ್‌ನಲ್ಲಿ ಪ್ಲೇ ಮಾಡಿದ ಹಾಡುಗಳು, ವೀಕ್ಷಿಸಿದ ಮಾಡಿದ ಚಿತ್ರಗಳು, ಡಿವೈಸ್ ಸರ್ಚ್‌ನಂತಹ  ಪ್ರತಿಯೊಂದು ಪ್ರಕ್ರಿಯೆಯನ್ನೂ ಯಾವ ಹಂತದಲ್ಲಿ ಬಿಟ್ಟಿರುತ್ತೇವೆಯೋ ಅದೇ ಹಂತದಿಂದ ಮತ್ತೆ ಆರಂಭಿಸಬಹುದಾಗಿದೆ.

ಸರಿಯಾದ ಸಮಯ; ಮಾಹಿತಿ
ಇನ್‌ಬಾಕ್ಸ್‌ನಲ್ಲಿ ಯಾವುದೋ ಒಂದು ಸಂದೇಶ ಓದುತ್ತಿರುವಾಗ ಇ ಮೇಲ್ ಅಥವಾ ಸಂದೇಶ ಬಂದರೆ ಅದು ತಕ್ಷಣಕ್ಕೆ ಪಕ್ಕದಲ್ಲಿಯೇ ತೆರೆದು ನೋಡಲು ಅವಕಾಶವಾಗುವಂತಹ ವ್ಯವಸ್ಥೆಯನ್ನು ಆಂಡ್ರಾಯ್ದ್ ಎಲ್‌ನಲ್ಲಿ ಸೇರಿಸಲಾಗಿದೆ. ಒಂದೇ ಸಮಯದಲ್ಲಿ ಇನ್‌ಕಮಿಂಗ್ ನೋಟಿಫಿಕೇಷನ್‌ಗಳನ್ನು ಸಹ ನಿಭಾಯಿಸಲು ಇಲ್ಲಿ ಸಾಧ್ಯವಾಗುತ್ತದೆ.

ಪ್ರಯಾರಿಟಿ ಮೋಡ್
ನೋಟಿಫಿಕೇಷನ್ ನಿರ್ವಹಣೆಯನ್ನು ಆಂಡ್ರಾಯ್ಡ್‌ನಲ್ಲಿ ‘ಪ್ರಯಾರಿಟಿ ಮೋಡ್’ ಎಂದು ಕರೆಯಲಾಗಿದೆ. ಇದು ಆಪಲ್‌ನ ‘ಡು ನಾಟ್ ಡಿಸ್ಟರ್ಬ್’ ಆಯ್ಕೆಯನ್ನು ಹೋಲುತ್ತದೆ.

ನಿಮಗೆ ಡಿಸ್ಟರ್ಬ್ ಮಾಡುವ ಯಾವುದೇ ಆ್ಯಪ್‌ಗಳ ನೋಟಿಫಿಕೇಷನ್ ಗಳನ್ನು ನಿಮಗೆ ಬೇಕಾದ ಸಮಯದವರೆಗೂ ಲಾಲಿಪಾಪ್‌ನಲ್ಲಿ ನಿರ್ವಹಿಸಬಹುದಾಗಿದೆ.

ಇದರಲ್ಲಿರುವ ಇನ್ನೊಂದು ವಿಶೇಷವಾದ ಆಯ್ಕೆ ಎಂದರೆ ‘ಟೋಟಲ್ ಸೈಲನ್ಸ್ ಮೋಡ್’. ಈ ಆಯ್ಕೆಯಿಂದ ನಿಮ್ಮ ಡಿವೈಸ್‌ನ ಎಲ್ಲ ಕಾರ್ಯಗಳು ಆಫ್ ಆಗುತ್ತವೆ. ಮುಂದುವರೆದು ಹೇಳುವುದಾದರೆ ನಿಮಗೆ ಬೇಕಾದ ಮಹತ್ವದ ವ್ಯಕ್ತಿಗಳ ನೋಟಿಫಿಕೇಷನ್, ಸಂದೇಶ ಮತ್ತು ಎಲ್ಲಾ ವ್ಯಕ್ತಿಗತ ಸೆಟ್ಟಿಗ್ಸ್‌ಗಳನ್ನು ಆದ್ಯತೆಯ ಆಧಾರದ ಮೇಲೆ ನಿಭಾಯಿಸಬಹುದು ಮತ್ತು ಅವುಗಳನ್ನು ನಿಮ್ಮ ಲಾಕ್ ಆಗಿರುವ ಸ್ಕ್ರೀನ್‌ನಿಂದಲೂ ನಿರ್ವಹಿಸಬಹುದು.

ಹೆಚ್ಚಿನ ಬ್ಯಾಟರಿ ಲೈಫ್
ಇಲ್ಲಿ ಬ್ಯಾಟರಿ ನಿರ್ವಹಣೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಆ್ಯಪ್‌ ಗಳು ಕಡಿಮೆ ಪ್ರಮಾಣದ ಬ್ಯಾಟರಿ ಬಳಕೆ ಮಾಡಿಕೊಳ್ಳುವುದು ಒಂದೆಡೆಯಾದರೆ, ಇನ್ನೊಂದೆಡೆ ಬ್ಯಾಟರಿ ಬಾಳಿಕೆಯನ್ನು ಸಾಮಾನ್ಯಕ್ಕಿಂತ 90 ನಿಮಿಷಕ್ಕೆ ಹೆಚ್ಚಿಸಲಾಗಿದೆ. ಬ್ಯಾಟರಿ ಅತಿ ಕಡಿಮೆ ಸಮಯದಲ್ಲಿ ಚಾರ್ಜ್ ಆಗಲಿದ್ದು, ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಲು ಎಷ್ಟು ಸಮಯ ಬೇಕಾಗಬಹುದು ಎನ್ನುವುದನ್ನು ಸಹ ಬಳಕೆದಾರನಿಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಆಂಡ್ರಾಯ್ಡ್ ಲಾಲಿಪಾಪ್ ನಲ್ಲಿ ನೀಡಲಾಗಿದೆ.

ಗೆಸ್ಟ್ ಮೋಡ್
ಗೆಸ್ಟ್ ಯೂಸರ್ ಮೋಡ್‌ನಲ್ಲಿ ನಿಮ್ಮ ಡಿವೈಸ್ ಸುರಕ್ಷತೆಗಳನ್ನು ಹಂಚಿಕೊಳ್ಳಬಹುದು(ಶೇರ್) ಅಥವಾ ನಿಮ್ಮ ಗೆಳೆಯರಿಗಾಗಿ ಮಲ್ಟಿಪಲ್ ಯುಸರ್ ಅಕೌಂಟ್ ಮೂಲಕ ನಿಮ್ಮ ಡಿವೈಸ್‌ಗೆ ಲಾಗಿನ್ ಆಗುವ ಎಲ್ಲ ಮಿತವಾದ ಸುರಕ್ಷತಾ ಆಯ್ಕೆಗಳನ್ನು ಸಕ್ರಿಯಗೊಳಿಸಬಹುದು. ಇದರಿಂದಾಗಿ ನಿಮ್ಮ ಯಾವುದೇ ಖಾಸಗಿ ಮಾಹಿತಿಯನ್ನು ಯಾರೂ ಬಳಸಿಕೊಳ್ಳದ ರೀತಿಯಲ್ಲಿ ನಿಮ್ಮ ಮೊಬೈಲನ್ನು ನಿರ್ವಹಣೆ ಮಾಡಬಹುದಾಗಿದೆ.

ಪಿನ್ ಆ್ಯಪ್ಸ್
ಹಲವಾರು ಬಾರಿ ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದಾಗ ಸಹಜವಾಗಿ ಏನಾದರೂ ಟಚ್ ಮಾಡಿಬಿಡುತ್ತಾರೆ ಅಥವಾ ಯಾವುದಾದರೂ ಡಾಟಾ ಡಿಲಿಟ್ ಮಾಡುತ್ತಾರೆ ಎನ್ನುವ ಭಯ ಇದ್ದೇ ಇರುತ್ತದೆ. ಇದಕ್ಕೆ ಪರಿಹಾರವಾಗಿ ‘ಪಿನ್ ಆ್ಯಪ್’ ಎನ್ನುವ ಮತ್ತೊಂದು ಆಯ್ಕೆಯನ್ನು ಇಲ್ಲಿ ಒದಗಿಸಲಾಗಿದೆ.

ಈ ಆಯ್ಕೆಯ ಮೂಲಕ ಮಕ್ಕಳಿಗೆ ಬೇಕಾದ ಯಾವುದೊ ಒಂದು ನಿರ್ದಿಷ್ಟ ಆ್ಯಪ್‌ಗೆ ಮಾತ್ರ ಕೋಡ್ ಸೆಟ್ ಮಾಡಿ ಕೊಡಬಹುದು. ಈ ಆ್ಯಪ್‌ನಲ್ಲಿ ಮಾತ್ರ ಮಕ್ಕಳು ಚಟುವಟಿಕೆಯಲ್ಲಿ ತೊಡಗಬಹುದು. ಅಲ್ಲಿಂದ ಹೊರಬಂದು ಬೇರೆ ಯಾವುದೇ ಏನಾದರೂ ಮಾಡಬೇಕೆಂದರೂ ಅವರಿಗೆ ಅದು ಸಾಧ್ಯವಾಗದು. ಅಲ್ಲಿಂದ ಹೊರಬರಬೇಕೆಂದರೆ ಕೋಡ್ ಕೇಳುತ್ತದೆ. ಅನಾವಶ್ಯಕವಾಗಿ ಬೇರೆ ಯಾವುದೇ ಆ್ಯಪ್‌ ಬಳಕೆ ಆಗುವುದನ್ನು ಇದು ತಪ್ಪಿಸುತ್ತದೆ.

ಟ್ಯಾಪ್ ಆಂಡ್ ಗೋ
ಯಾವುದೇ ಒಂದು ಡಿವೈಸ್‌ನಿಂದ ಇನ್ನೊಂದು ಡಿವೈಸ್‌ಗೆ ಆ್ಯಪ್‌, ಡಾಟಾ ಮತ್ತು ಸೆಟಿಂಗ್ಸ್‌ಗಳನ್ನು ಟ್ರ್ಯಾನ್ಸ್‌ಫರ್ ಮಾಡುವುದು ಯಾವಾಗಲೂ ಕಿರಿಕಿರಿಯ ವಿಷಯವೇ ಸರಿ. ಆದರೆ ಆಂಡ್ರಾಯ್ಡ್ ಲಾಲಿಪಾಪ್ ಈ ನಿಟ್ಟಿನಲ್ಲಿ ಒಂದು ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ. ಯಾವುದೇ ಎರಡು ಆಂಡ್ರಾಯ್ಡ್ ಲಾಲಿಪಾಪ್ ಡಿವೈಸ್‌ಗಳ ಮಧ್ಯೆ ಎನ್.ಎಫ್.ಸಿ  ಆಯ್ಕೆಯ ಮತ್ತು ಬ್ಲೂಟೂತ್‌ ಸಕ್ರಿಯಗೊಳಿಸಿ ಡಿವೈಸ್‌ಗಳನ್ನು ಪೇರ್ ಮಾಡಿದರೆ (ಪರಸ್ಪರ ಸಂಪರ್ಕಗೊಳಿಸಿದರೆ) ನಂತರ ಒಂದು ಡಿವೈಸ್‌ನಲ್ಲಿರುವ ಎಲ್ಲ ಮಾಹಿತಿಗಳು ಇನ್ನೊಂದು ಡಿವೈಸ್‌ನಲ್ಲಿ ಇನ್‌ಸ್ಟಾಲ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಓಕೆ ಗೂಗಲ್
ಆಂಡ್ರಾಯ್ಡ್‌ನಲ್ಲಿರುವ ಬಹುತೇಕ ವಿಶೇಷಗಳು ಮೋಟರೊಲಾದಿಂದ ಸೂರ್ತಿ ಪಡೆದಿವೆ ಎನ್ನುವುದು ತಜ್ಜ಼ರ ಅಭಿಪ್ರಾಯ.

ಅದರಲ್ಲಿ ಓಕೆ ಗೂಗಲ್ ಕೂಡ ಒಂದು. ನಿಮ್ಮ ಮೊಬೈಲ್ ಸ್ಟ್ಯಾಂಡ್ ಬೈ ಮೋಡ್‌ನಲ್ಲಿ ಇದ್ದಾಗ ‘ಓಕೆ ಗೂಗಲ್’ ಎಂದು ಹೇಳಿದ ತಕ್ಷಣ ಡಿವೈಸ್ ಎಚ್ಚೆತ್ತುಕೊಳ್ಳುತ್ತದೆ. ಆಗ ವೈಸ್ ಸರ್ಚ್ ಮೂಲಕ ಟೆಕ್ಸ್ಟ್ ಮತ್ತು ಇತರೆ ಕಾರ್ಯ ನಿರ್ವಹಣೆಗಾಗಿ ನಿಮ್ಮನ್ನು ಕೋರಿಕೊಳ್ಳುತ್ತದೆ. ಆದ್ಯತೆಯ ಆಧಾರದ ಮೇಲೆ ನೀವು ಓಕೆ ಗೂಗಲನ್ನು ಬಳಸಿಕೊಳ್ಳಬಹುದು.

ಫೇಸ್ ಅನ್‌ಲಾಕ್
ಈ ಮುಂಚೆಯ ಅಂಡ್ರಾಯ್ಡ್‌ನಲ್ಲಿದ್ದ ಫೇಸ್ ರಿಕಗ್ನೈಸ್ (ಮುಖಚಹರೆ ಗುರುತಿಸಿ ಕಾರ್ಯಾಚರಣೆ ಆರಂಭಿಸುವುದು) ಇನ್ನಷ್ಟು ಸರಳವಾಗಿದೆ. ಫೇಸ್ ಡಿಟೆಕ್ಟ್ ಮಾಡುವ ಪ್ರಕ್ರಿಯೆಯಲ್ಲಿ ತಗಲುವ ಸಮಯಕ್ಕಿಂತ ಕಡಿಮೆ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ. ಅತಿ ಕಡಿಮೆ ಬೆಳಕಿನ ವಾತಾವರಣದಲ್ಲಿಯೂ ಸಹ ಇದು ಉತ್ತಮವಾಗಿ ಕಾರ್ಯ ನಿರ್ವಹಿಸುಂತೆ ಮಾಡಲಾಗಿದೆ.

ಈಗಾಗಲೇ ಮಾರುಕಟ್ಟೆಯತ್ತ ಧಾವಿಸುತ್ತಿರುವ  ಆಂಡ್ರಾಯ್ಡ್ ಲಾಲಿಪಾಪ್ ಅಪ್ಲಿಕೇಷನ್‌ ಸದ್ಯ ಆಯ್ದ ಕೆಲವೇ ಕೆಲವು ಮೊಬೈಲ್ ಫೋನ್‌ಗಳಿಗೆ ಮಾತ್ರ ತನ್ನ ಸಿಹಿಯನ್ನು ಸವಿಯುವ ಅವಕಾಶ ನೀಡುತ್ತಿದೆ. ಅದರಲ್ಲಿ ಗೂಗಲ್ ನೆಕ್ಸಸ್, ಎಚ್.ಟಿ.ಸಿಯ ಓನ್ ಎಮ್-8 ಮತ್ತು ಎಮ್-7, ಮೋಟರೋಲಾದ ಪ್ರಥಮ ಮತ್ತು ದ್ವಿತೀಯ ಜನರೇಷನ್, ಸ್ಯಾಮ್‌ಸಂಗ್‌ನ ಎಸ್.5 ಡಿವೈಸ್‌ಗಳು ಮಾತ್ರವೇ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT