ಭಾನುವಾರ, ಸೆಪ್ಟೆಂಬರ್ 20, 2020
21 °C
ಮುಜುಗರ ತಪ್ಪಿಸಿಕೊಂಡ ಜಿಲ್ಲಾ ಪಂಚಾಯ್ತಿ ಸದಸ್ಯೆಯರ ಪುತ್ರರು, ಪತಿರಾಯರು

ಬಾಗಿಲಲ್ಲಿ ನಿಲ್ಲುತ್ತಿದ್ದವರು ಗ್ಯಾಲರಿಯಲ್ಲಿ ಕೂತರು..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ಎರಡೂವರೆ ವರ್ಷದಿಂದ ಜಿಲ್ಲಾ ಪಂಚಾಯ್ತಿಯ ಸಾಮಾನ್ಯ ಸಭೆ ಪ್ರವೇಶಿಸಲಾರದೆ; ಸಭಾಂಗಣದ ಬಾಗಿಲಲ್ಲಿ ನಿಲ್ಲುತ್ತಿದ್ದವರು, ಕುರ್ಚಿ ಹಾಕಿಸಿಕೊಂಡು ದ್ವಾರಪಾಲಕರಂತೆ ಕೂರುತ್ತಿದ್ದ ಹಲ ಜಿ.ಪಂ. ಸದಸ್ಯೆಯರ ಪತಿರಾಯರು, ಪುತ್ರರು ಶುಕ್ರವಾರ ಹೆಮ್ಮೆಯಿಂದ ಬೀಗಿದರು.

ಈ ಹಿಂದಿನ ಹತ್ತು ಸಾಮಾನ್ಯ ಸಭೆಯಿಂದ ಹೊರಗುಳಿದು, ಚಡಪಡಿಸುತ್ತಿದ್ದ ಸದಸ್ಯೆಯರ ಪುತ್ರರು, ಪತಿರಾಯರು ಹನ್ನೊಂದನೇ ಸಭೆಯಲ್ಲಿ ವಿರಾಜಮಾನರಾಗಿ ಕೂತು, ಇಡೀ ಕಲಾಪವನ್ನು ತದೇಕಚಿತ್ತದಿಂದ ವೀಕ್ಷಿಸಿದರು. ಚರ್ಚೆಯನ್ನು ಆಲಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿನ ಗ್ಯಾಲರಿಯಲ್ಲಿ ಈ ಬಾರಿ ಸದಸ್ಯೆಯರ ಕುಟುಂಬದವರಿಗೆ ಅವಕಾಶ ಕಲ್ಪಿಸಲಾಗಿತ್ತು. ಸದಸ್ಯೆಯರ ಕುಟುಂಬದವರು ಇದನ್ನು ಸಮರ್ಪಕವಾಗಿ ಬಳಸಿಕೊಂಡಿದ್ದು, ಗೋಚರಿಸಿತು.

ಹಾಲಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು 30 ತಿಂಗಳು ಗತಿಸಿದೆ. ಈ ಅವಧಿಯಲ್ಲಿ 11ನೇ ಸಾಮಾನ್ಯ ಸಭೆ ಶುಕ್ರವಾರ ನಡೆಯಿತು. ಎಂ.ಸುಂದರೇಶ ಬಾಬು ಈ ಹಿಂದೆ ಸಿಇಒ ಇದ್ದರು. ಹೊಸ ಮಂಡಳಿಯ ಆಡಳಿತ ಆರಂಭಗೊಂಡ ಬೆನ್ನಿಗೆ, ಅಧ್ಯಕ್ಷೆ ನೀಲಮ್ಮ ಮೇಟಿ ಪತಿ ಸಿದ್ದಣ್ಣ ಮೇಟಿ ಸೇರಿದಂತೆ, ಸಿಂದಗಿ ತಾಲ್ಲೂಕಿನ ಜಿಲ್ಲಾ ಪಂಚಾಯ್ತಿ ಸದಸ್ಯೆಯರ ಪುತ್ರರು ಸಭಾಂಗಣದ ಗ್ಯಾಲರಿಯಲ್ಲಿ ಕೂರಲು ಅವಕಾಶ ಕೋರಿದ್ದರು.

ಆಗಿನ ಸಿಇಒ ಎಂ.ಸುಂದರೇಶ ಬಾಬು ಇದಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಬೆಳಗಿನ ಅವಧಿ ಮುಗಿದು, ಮಧ್ಯಾಹ್ನ ಊಟದ ವಿರಾಮದ ಬಳಿಕ, ಮಾಧ್ಯಮದವರು ಸಭೆಯಿಂದ ನಿರ್ಗಮಿಸಿದ ನಂತರ ಹಲ ಸದಸ್ಯೆಯರ ಪುತ್ರರು, ಪತಿರಾಯರು ಸಭಾಂಗಣದೊಳಗೆ ಪ್ರವೇಶಿಸಿ ಆಸೀನರಾಗುತ್ತಿದ್ದರು.

ಇದರ ಬಗ್ಗೆ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿದ ಬಳಿಕ, ಯಾರೊಬ್ಬರೂ ಸಭೆಯೊಳಗೆ ಪ್ರವೇಶಿಸುತ್ತಿರಲಿಲ್ಲ. ಬಾಗಿಲಲ್ಲೇ ಕುರ್ಚಿ ಹಾಕಿಕೊಂಡು ದ್ವಾರಪಾಲಕರಂತೆ ಕಾದು ನಿಲ್ಲುತ್ತಿದ್ದ, ಕೂರುತ್ತಿದ್ದ ದೃಶ್ಯಾವಳಿ ಪ್ರತಿ ಸಭೆಯಲ್ಲೂ ಗೋಚರಿಸುತ್ತಿತ್ತು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಸಿಇಒ ಆಗಿದ್ದ ವಿಕಾಸ್‌ ಕಿಶೋರ್‌ ಸುರಳಕರ್‌, ವಿಜಯಪುರ ಜಿಲ್ಲಾ ಪಂಚಾಯ್ತಿ ಸಿಇಒ ಆಗಿ ವರ್ಗಗೊಂಡು, ಅಧಿಕಾರ ನಡೆಸಲಾರಂಭಿಸಿದರು. ಈಗಿನ ಸಿಇಒ ಗ್ಯಾಲರಿಯಲ್ಲಿ ಕೂರಲು ಅವಕಾಶ ಕಲ್ಪಿಸಿರುವುದು ಪರ–ವಿರೋಧ ಚರ್ಚೆಗೆ ಗ್ರಾಸವೊದಗಿಸಿದೆ.

ಸದಸ್ಯೆಯರ ಕುಟುಂಬಕ್ಕೆ ಇದು ಸೀಮಿತ. ಒಳ್ಳೆಯ ಬೆಳವಣಿಗೆಯಲ್ಲ ಎಂದು ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರೆ; ಸದಸ್ಯೆಯರು ಮಾತ್ರ ಪ್ರತಿಕ್ರಿಯೆ ನೀಡದೆ ಹಸನ್ಮುಖಿಗಳಾದರು. ಈ ಬಗ್ಗೆ ಸಿಇಒ ಪ್ರತಿಕ್ರಿಯೆಗೆ ಸಂಪರ್ಕಿಸಿದರೂ; ಮೊಬೈಲ್‌ ಕರೆ ಸ್ವೀಕರಿಸಲಿಲ್ಲ.

‘ಸದಸ್ಯೆಯರ ಕುಟುಂಬದವರು ಗ್ಯಾಲರಿಯಲ್ಲಿ ಕೂರಲು ಸಿಇಒ ಅವಕಾಶ ಕಲ್ಪಿಸಿದ್ದಾರೆ. ಆದರೆ ಚರ್ಚೆಯ ನಡುವೆ ಯಾವುದೇ ಸೂಚನೆ ನೀಡುವಂತಿಲ್ಲ. ಮಾತನಾಡುವಂತಿಲ್ಲ ಎಂಬ ಷರತ್ತು ವಿಧಿಸಿದ್ದಾರೆ’ ಎಂದು ಕನಮಡಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಬಿಜೆಪಿ ಸದಸ್ಯ ಸಾಬು ಮಾಶ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ಯಾಲರಿಯಲ್ಲಿ ಸಂಯುಕ್ತಾ..!

ಸದಸ್ಯೆಯರ ಕುಟುಂಬದವರಿಗೆ ಪ್ರವೇಶ ಕಲ್ಪಿಸಿದ ಮೊದಲ ಸಭೆಯಲ್ಲೇ, ಆರೋಗ್ಯ ಸಚಿವ ಶಿವಾನಂದ ಪಾಟೀಲ ಪುತ್ರಿ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕಿ ಸಂಯುಕ್ತಾ ಪಾಟೀಲ ಹಾಜರಿದ್ದು, ಸಭೆಯ ಕಲಾಪ ವೀಕ್ಷಿಸುವ ಜತೆ, ಕೆಲವೊಂದನ್ನು ನೋಟ್ಸ್‌ ಮಾಡಿಕೊಂಡಿದ್ದು ಗಮನ ಸೆಳೆಯಿತು.

‘ಜಿಲ್ಲಾ ಪಂಚಾಯ್ತಿಯ ಸಾಮಾನ್ಯ ಸಭೆಯ ಕಾರ್ಯ ಕಲಾಪವನ್ನು ಅರ್ಧ ತಾಸಿಗೂ ಹೆಚ್ಚಿನ ಅವಧಿ ವೀಕ್ಷಿಸಿದೆ. ಬಹುತೇಕ ಸದಸ್ಯರು ಉತ್ತಮ ವಿಷಯಗಳನ್ನು ಪ್ರಸ್ತಾಪಿಸಿ, ಜಿಲ್ಲೆಯ ಚಿತ್ರಣ ಬಿಡಿಸಿಟ್ಟರು. ಇದಕ್ಕೆ ಸಿಇಒ ಸಹ ಸಮರ್ಪಕ ಉತ್ತರ ನೀಡಿದರು.

ಇನ್ನಷ್ಟು ಒಳ್ಳೆಯ ವಿಷಯ ಪ್ರಸ್ತಾಪಿಸಲು ಅವಕಾಶವಿತ್ತು. ಮೊದಲಿನಿಂದಲೂ ನನಗೆ ಸಾರ್ವಜನಿಕ ಆಡಳಿತದಲ್ಲಿ ಬಹಳ ಆಸಕ್ತಿ. ಇದೀಗ ಉತ್ತಮ ಅನುಭವ ಸಿಕ್ಕಿತು’ ಎಂದು ಸಂಯುಕ್ತಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು