ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಹುಲಿ ಕಾರ್ಯಾಚರಣೆ; ಮಲ್ಲಯ್ಯನಕಟ್ಟೆ ಬಳಿ ಸೆರೆಗಾಗಿ ಬೋನು

ಹುಲಿ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನ ಚೌಡಹಳ್ಳಿ, ಕೆಬ್ಬೆಪುರ ಮತ್ತು ಹುಂಡಿಪುರ ಗ್ರಾಮಗಳ ಭಾಗಗಳಲ್ಲಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕದಲ್ಲಿ ಬದುಕುವಂತಾಗಿದೆ.

ಕಳೆದ ಒಂದು ವಾರದಿಂದ ಹುಲಿಯೊಂದು ಈ ಭಾಗದಲ್ಲಿ ರೈತರಿಗೆ ಮತ್ತು ದನಗಾಹಿಗಳಿಗೆ ಕಾಣಿಸಿಕೊಂಡಿದೆ. ಬುಧವಾರ ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಅವರ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿತ್ತು. ಮಂಗಳವಾರ ಮೇಲುಕಾಮನಹಳ್ಳಿ ಬಳಿಯ ಜಮೀನೊಂದರಲ್ಲಿ ಗೂಳಿ ಮೇಲೆ ಹುಲಿ ದಾಳಿ ಮಾಡಿತ್ತು. ಜನರ ಕಿರುಚಾಟದಿಂದ ಗೂಳಿಯನ್ನು ಬಿಟ್ಟು ಹುಲಿ ಓಡಿ ಹೋಗಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸ್ಥಳಕ್ಕೆ ತೆರಳಿ ಹುಲಿಗಾಗಿ ಕಾರ್ಯಚರಣೆ ನಡೆಸಿದರೂ ಹುಲಿ ಸುಳಿವು ಸಿಕ್ಕಿಲ್ಲ. ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಆದ್ದರಿಂದ ಇಲಾಖೆ ಸಿಬ್ಬಂದಿ ಹುಲಿ ಸೆರೆಗಾಗಿ ಗ್ರಾಮದ ಮಲ್ಲಯ್ಯನಕಟ್ಟೆ ಬಳಿ ಬೋನು ಇಟ್ಟಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಹಂಗಳ, ಹಂಗಳಪುರ, ಶಿವಪುರ, ಚೌಡಹಳ್ಳಿ ಮತ್ತು ಹುಂಡಿಪುರ ಭಾಗಗಳಲ್ಲಿ ಹುಲಿ ಕಾಣಿಸಿಕೊಂಡು ಜಾನುವಾರು ಮೇಲೆ ದಾಳಿ ಮಾಡಿತ್ತು. ಆಗಲೂ ಕಲ್ಲಿಗೌಡನಹಳ್ಳಿ ಮತ್ತು ಶಿವಪುರದಲ್ಲಿ ಬೋನು ಇಡಲಾಗಿತ್ತು, ಆದರೆ ಸೆರೆಯಾಗಿರಲಿಲ್ಲ. ರಾತ್ರಿ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಕಾಣಿಸಿಕೊಂಡು ರೈತರಲ್ಲಿ ಭಯವುಂಟು ಮಾಡಿತ್ತು.

ಕಳೆದ ಒಂದು ವಾರದಿಂದ ಕುಂದುಕೆರೆ ವಯಲದ ಕಡೆಯಿಂದ ಹುಲಿ ಬರುತ್ತಿರಬಹುದು ಎಂದು ರೈತರು ಶಂಕಿಸಿದ್ದಾರೆ.

ಮಳೆಯಾಗಿರುವುದರಿಂದ ಬೆಳಗಿನ ಜಾವ ಜಮೀನುಗಳಿಗೆ ಹೋಗಿ ಕೃಷಿ ಚಟುಟಿಕೆಯಲ್ಲಿ ತೊಡಗುತ್ತಿದ್ದೇವು. ಹುಲಿ ಕಾಣಿಸಿಕೊಂಡಿರುವುದರಿಂದ ಜಮೀನುಗಳಿಗೆ ಹೋಗಲು ಮತ್ತು ಜಾನುವಾರು ಮೇಯಿಸಲು ಹೋಗುವುದಕ್ಕೂ ರೈತರು ಹೆದರುತ್ತಿದ್ದಾರೆ. ಶೀಘ್ರ ಇಲಾಖೆ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿಯಬೇಕು ಎಂದು ರೈತ ಮುಖಂಡ ಮಹದೇವಪ್ಪ ಒತ್ತಾಯಿಸಿದರು.

ಹುಲಿ ಸೆರೆಗಾಗಿ ಹುಡುಕಾಟ ನಡೆಸಲಾಯಿತು, ಹಜ್ಜೆ ಗುರುತು ಮಾತ್ರ ಪತ್ತೆಯಾಗಿದೆ. ಒಂದು ಹುಲಿ ಒಂದೇ ಜಾಗದಲ್ಲಿ ಇರುವುದಿಲ್ಲ, ಬಂದಿರಬಹುದು, ಆದರೂ ಜನರ ಸುರಕ್ಷತೆಗಾಗಿ ಬೋನು ಇಡಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು