ಶನಿವಾರ, ಆಗಸ್ಟ್ 15, 2020
21 °C
ಅರ್ಬನ್‌ ಲೆನ್ಸ್‌ ಚಿತ್ರೋತ್ಸವ

ನಗರೀಕರಣಕ್ಕೆ ಸಿನಿ ಭಾಷ್ಯ

ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ನಗರ ಮತ್ತು ನಗರೀಕರಣದ ಹತ್ತಾರು ಆಯಾಮಗಳನ್ನು ವಸ್ತುವಾಗುಳ್ಳ ಸಾಕ್ಷ್ಯ ಮತ್ತು ಕಿರುಚಿತ್ರಗಳ ಪ್ರದರ್ಶನ ಇದೇ 20ರಿಂದ 23ರವರೆಗೆ ನಗರದಲ್ಲಿ ನಡೆಯಲಿದೆ. ‘ಅರ್ಬನ್‌ ಲೆನ್ಸ್‌ ಫಿಲ್ಮ್‌ ಫೆಸ್ಟಿವಲ್‌ 2018’ ಎಂಬ ಈ ಚಿತ್ರೋತ್ಸವ ಇಂದಿರಾನಗರದ ಚಿನ್ಮಯ ಮಿಷನ್‌ ಆಸ್ಪತ್ರೆ ರಸ್ತೆಯಲ್ಲಿರುವ ಗೋತೆ/ಮ್ಯಾಕ್ಸ್‌ ಮುಲ್ಲರ್‌ ಭವನದಲ್ಲಿ ಆರಂಭಗೊಳ್ಳಲಿದೆ.

20ರಂದು ಸಂಜೆ 6ಕ್ಕೆ ‘ಆ್ಯಸ್‌ ಟೈಮ್‌ ಗೋಸ್‌ ಬೈ ಇನ್‌ ಶಾಂಘೈ’ (ನಿರ್ದೇಶನ– ಊಲಿ ಗೌಲ್ಕೆ) ಪ್ರದರ್ಶನ‌ದೊಂದಿಗೆ ಚಿತ್ರೋತ್ಸವಕ್ಕೆ ಚಾಲನೆ ಸಿಗಲಿದೆ. ರಾತ್ರಿ 7.30ಕ್ಕೆ ಗೌಲ್ಕೆ ಅವರೊಂದಿಗೆ ಶುಭಾಶ್ರೀ ಕೃಷ್ಣನ್‌ ಸಂವಾದ. ಸೆ. 21, 22 ಮತ್ತು 23ರಂದು ಚಿತ್ರಗಳ ಪ್ರದರ್ಶನ ಮತ್ತು ಸಂವಾದ ಸದಾಶಿವನಗರದ ಅರಮನೆ ನಗರದಲ್ಲಿರುವ ಐಐಎಚ್ಎಸ್‌ ಆವರಣದಲ್ಲಿ ನಡೆಯಲಿವೆ. ಈ ಮೂರೂ ದಿನಗಳಲ್ಲಿ ಬೆಳಿಗ್ಗೆ 9.30ರಿಂದ ರಾತ್ರಿ 8.20ರವರೆಗೂ ನಿರಂತರ ಚಿತ್ರ ಪ್ರದರ್ಶನ ಮತ್ತು ಸಂವಾದಗಳು ಇರುತ್ತವೆ.

ಭಾರತ, ಬ್ರೆಜಿಲ್‌, ಚೀನಾ, ಇರಾನ್‌, ಮೊಜಾಂಬಿಕ್‌, ಪೋರ್ಚುಗಲ್‌ ಮತ್ತು ಉಕ್ರೇನ್‌ ಸೇರಿದಂತೆ 11 ರಾಷ್ಟ್ರಗಳ ನಗರೀಕರಣದ ಕತೆಗಳನ್ನು ಹೇಳುವ 28 ಸಿನಿಮಾಗಳನ್ನು ಈ ಸಿನಿಮೋತ್ಸವದಲ್ಲಿ ಕಾಣಬಹುದು. ನಗರೀಕರಣದ ಹತ್ತಾರು ಸಾಧಕ ಬಾಧಕಗಳನ್ನು ಕಂಡುಂಡಿರುವ ಈ ರಾಷ್ಟ್ರಗಳು ಸಿನಿಮಾಗಳ ಮೂಲಕ ಪರಸ್ಪರ ಸಂವಾದಿಯಾಗಲಿವೆ ಎಂಬುದು ಆಯೋಜಕರ ಟಿಪ್ಪಣಿ.

‘ಜಗತ್ತಿನ ಉತ್ತರ ಭಾಗದ ದೇಶಗಳಿಗಿಂತ ದಕ್ಷಿಣದ ದೇಶಗಳ ನಗರೀಕರಣದ ಕತೆಗಳು ಹೆಚ್ಚು ದಾರುಣವಾಗಿವೆ. 60 ವರ್ಷಗಳಿಂದೀಚೆ ನಿರ್ಮಾಣವಾದ, ನಗರೀಕರಣದ ವಸ್ತುವನ್ನು ಒಳಗೊಂಡ ಫಿಕ್ಷನ್‌, ನಾನ್‌ ಫಿಕ್ಷನ್‌, ಅನಿಮೇಷನ್‌ ಮತ್ತು ಪ್ರಾಯೋಗಿಕ ಸಿನಿಮಾಗಳನ್ನು ನೋಡುವ ವಿಶಿಷ್ಟ ಅನುಭವ ಬೆಂಗಳೂರಿಗರಿಗೆ ಸಿಗಲಿದೆ. ಪ್ರತಿ ಸಿನಿಮಾ ಪ್ರದರ್ಶನದ ಕೊನೆಯಲ್ಲಿ ನಿರ್ದೇಶಕರೊಂದಿಗೆ ಮುಕ್ತ ಸಂವಾದ ಇರುತ್ತದೆ.

ಫಿಕ್ಷನ್‌ ಮತ್ತು ನಾನ್‌ಫಿಕ್ಷನ್‌ ವಿಭಾಗಗಳಲ್ಲಿ ಪ್ರತಿ ವರ್ಷ ಪ್ರಶಸ್ತಿ ಬಾಚಿಕೊಳ್ಳುವ ನಿರ್ದೇಶಕ ಜಬೀನ್‌ ಮರ್ಚಂಟ್‌ ಅವರು ಕಾರ್ಯಾಗಾರ ನಡೆಸಿಕೊಡಲಿರುವುದು ಈ ಬಾರಿಯ ಸಿನಿಮೋತ್ಸವದ ವಿಶೇಷ ಆಕರ್ಷಣೆ. 22ರಂದು ಇತಿಹಾಸತಜ್ಞೆ ಮತ್ತು ಚಿತ್ರ ನಿರ್ಮಾಪಕಿ ಉಮಾ ಚಕ್ರವರ್ತಿ ಅವರ ‘ಏಕ್‌ ಇಂಕ್ವಿಲಾಬ್‌ ಆಯಾ’ ಪ್ರದರ್ಶನವಿರುತ್ತದೆ. ಉಮಾ ಅವರೊಂದಿಗೆ, ಬೆಂಗಳೂರಿನ ಚಿತ್ರ ನಿರ್ಮಾಪಕಿ ದೀಪಾ ನಟರಾಜ್‌ ಸಂವಾದ ನಡೆಸಲಿದ್ದಾರೆ. 23ರಂದು ಕಮಲ್‌ ಸ್ವರೂಪ್‌ ಅವರ ‘ಪುಷ್ಕರ್‌ ಪುರಾಣ್‌’ ಮತ್ತು ಅನಿರ್ಬನ್‌ ದತ್ತ ಅವರ ‘ಕಾಳಿಕ್ಷೇತ್ರ’ ಮತ್ತು ‘ಪಿಂಕ್‌ ಟ್ಯಾಕ್ಸಿ’ ಪ್ರದರ್ಶನಗೊಳ್ಳುವ ಪ್ರಮುಖ ಚಿತ್ರಗಳು. 

ಈ ಬಾರಿಯೂ ವಿದ್ಯಾರ್ಥಿಗಳೇ ನಿರ್ಮಿಸಿದ ಸಾಕ್ಷ್ಯ/ಕಿರು ಚಿತ್ರಗಳ ಪ್ರದರ್ಶನವಿರುತ್ತದೆ. ಪ್ರಶಸ್ತಿ ಪುರಸ್ಕೃತ ಸಾಕ್ಷ್ಯಚಿತ್ರ ‘ಜಮ್ನಾಪಾರ್‌’ (ಅಭಿನವ ಭಟ್ಟಾಚಾರ್ಯ) ಮತ್ತು ಶ್ರೇಯಸ್‌ ದಶರಥೆ ಅವರ ‘ಬಿಸ್ಮಾರ್‌ ಘರ್‌’ ಅವುಗಳಲ್ಲಿ ಪ್ರಮುಖವಾಗಿವೆ. 

ಮಲಯಾಳಂ ಸಿನಿಮಾದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕೊಚ್ಚಿ ನಗರ, ಮುಂಬೈ ಮತ್ತು ಬೆಂಗಳೂರಿನೊಂದಿಗೆ ಅದಕ್ಕಿರುವ ನಂಟುಗಳ ಬಗ್ಗೆ ರತೀಶ್‌ ರಾಧಾಕೃಷ್ಣನ್‌ ಭಾಷಣ ಮಾಡಲಿದ್ದಾರೆ. ಸಂವಾದಗಳು ಯೂಟ್ಯೂಬ್‌ನಲ್ಲಿ ಲೈವ್‌  (http://bit.ly/UrbanLensLiveStream) ಪ್ರಸಾರವಾಗಲಿರುವುದು ಈ ಬಾರಿಯ ವಿಶೇಷ. 

ಚಿಂದಿ ಆಯುವ ಜಾಕೀರ್‌, ಬೆಂಗಳೂರಿನ ಬೀದಿ ಬದುಕು
ಸೆಪ್ಟೆಂಬರ್‌ 21ರಂದು ಐಐಎಚ್‌ಎಸ್‌ನಲ್ಲಿ ಮಧ್ಯಾಹ್ನ 2.50ರಿಂದ ಪ್ರದರ್ಶನಗೊಳ್ಳಲಿರುವುದು ‘ಗುಡ್‌ ಗಯ್‌, ಬ್ಯಾಡ್‌ ಗಯ್‌’ ಸಾಕ್ಷ್ಯಚಿತ್ರ. ತಮ್ಮ ಸಾಕ್ಷ್ಯಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇಂದು ಕೃಷ್ಣನ್‌ ನಿರ್ಮಿಸಿ ನಿರ್ದೇಶಿಸಿರುವ ಸಾಕ್ಷ್ಯಚಿತ್ರವಿದು.

78 ನಿಮಿಷಗಳ ಈ ಸಾಕ್ಷ್ಯಚಿತ್ರದಲ್ಲಿ ಚಿಂದಿ ಆಯುವ ಯುವಕ ಜಾಕೀರ್‌ ಮತ್ತು ಅವನು ಕ್ರಮಿಸುವ ಬೀದಿಗಳೇ ರೂಪಕಗಳಾಗಿವೆ. ಬೆಂಗಳೂರಿನ ಬೀದಿಗಳು, ಜಾಕೀರ್‌ನಂತಹ ಹುಡುಗರ ಬದುಕು, ಬವಣೆ, ಅವರ ಬದುಕಿನ ಬಣ್ಣಗಳು, ಬೆಂಗಳೂರಿನ ಬೀದಿಗಳ ವಿವಿಧ ಮುಖಗಳು, ಆಯ್ದ ಚಿಂದಿಗಳನ್ನು ಮರುಬಳಕೆ ಮಾಡಲು ಜಾಕೀರ್‌ ಕಂಡುಕೊಂಡ ಜಾಣ್ಮೆ, ಕಬ್ಬನ್‌ ಪಾರ್ಕ್‌ನಲ್ಲಿ ಅವನು ಮಂಗಗಳಿಗೆ ಆಹಾರ ನೀಡುವ ಸನ್ನಿವೇಶ ಮತ್ತು ಅದರ ಮೂಲಕ ‘ಚಿಂದಿ ಆಯುವ ಹುಡುಗ’ನೊಳಗಿನ ಜೀವಪರ ನಿಲುವು... ಹೀಗೆ ಹತ್ತಾರು ಸೂಕ್ಷ್ಮ ಸಂಗತಿಗಳನ್ನು ಇಂದು ಕೃಷ್ಣನ್‌ ‘ಗುಡ್‌ ಗಯ್‌, ಬ್ಯಾಡ್‌ ಗಯ್‌’ನ ಹೂರಣವಾಗಿಸಿದ್ದಾರೆ.

ಇಂಗ್ಲಿಷ್‌, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಸಬ್‌ಟೈಟಲ್‌ಗಳೂ ಇರುವ ಕಾರಣ ಸಾಕ್ಷ್ಯಚಿತ್ರವನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು.

ಸಾಕ್ಷ್ಯಚಿತ್ರ ಪ್ರದರ್ಶನದ ಕೊನೆಯಲ್ಲಿ ಇಂದು ಅವರೊಂದಿಗೆ ನೇಹಾ ಸಾಮಿ ಸಂವಾದ ನಡೆಸಲಿದ್ದಾರೆ.

ಸಿನಿಮೋತ್ಸವದ ಟ್ರೇಲರ್‌ಗಾಗಿ ಕೊಂಡಿ: www.bit.ly/UrbanLens-2018-Trailer

ವೆಬ್‌ಸೈಟ್‌: www.iihs.co.in/urbanlens

ಬೆಂಗಳೂರಿನ ಸಿನಿಮೋತ್ಸವದ ಸಮಗ್ರ ವಿವರಕ್ಕೆ: www.bit.ly/UrbanLens-2018-Bengaluru

*

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.